ಗರ್ಭಪಾತ ದೈಹಿಕ ಸ್ವಾಯತ್ತೆಗೆ ಸುಪ್ರೀಂ ಬಲ; ಸುಪ್ರೀಂ ತೀರ್ಪು ಸ್ವಾಗತಾರ್ಹ

Laltiha
Published on
ಮಹಿಳೆಯೊಬ್ಬಳ ಗರ್ಭಾವಸ್ಥೆ 20-24 ವಾರಗಳ ನಡುವಲ್ಲಿದ್ದು, ಅನಿವಾರ್ಯ ಕಾರಣಗಳಿಗಾಗಿ ಗರ್ಭಪಾತ ಮಾಡಿಸಿಕೊಳ್ಳಬೇಕಾದಾಗ ಅದನ್ನು ವಿವಾಹಿತ ಮಹಿಳೆಗೆ ಮಾತ್ರ ಅನುಮತಿಸುವುದು ಸಮಾನ ಕಾನೂನಿನ ನ್ಯಾಯಕ್ಕೆ ವಿರುದ್ಧವಾಗುತ್ತದೆ. ಇಲ್ಲಿ ವಿವಾಹಿತೆ ಮತ್ತು ಅವಿವಾಹಿತೆ ಎನ್ನುವ ತಾರತಮ್ಯವಿರಬಾರದು. ಹಾಗಿದ್ದಲ್ಲಿ, ಅದು ಅಸಾಂವಿಧಾನಿಕ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿಗೆ ಪ್ರಗತಿಶೀಲ ಮಹಿಳಾ ವರ್ಗದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

| ರಾಘವ ಶರ್ಮ ನಿಡ್ಲೆ ನವದೆಹಲಿ

ಸುಪ್ರೀಂಕೋರ್ಟ್​ನ ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಸೂರ್ಯಕಾಂತ್, ನ್ಯಾ.ಎ.ಎಸ್. ಬೋಪಣ್ಣ ಒಳಗೊಂಡ ತ್ರಿಸದಸ್ಯ ಪೀಠವು 25 ವರ್ಷದ ಯುವತಿಯೊಬ್ಬಳಿಗೆ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿ ನೀಡುವ ಮೂಲಕ ಐತಿಹಾಸಿಕ ತೀರ್ಪೆಂದನ್ನು ಪ್ರಕಟಿಸಿ, ಸ್ತ್ರೀ ಸ್ವಾಯತ್ತತೆಯನ್ನು ಎತ್ತಿಹಿಡಿದಿದೆ.

ಈ ಪ್ರಕರಣದಲ್ಲಿ- ಯುವತಿಯು ಪುರುಷನೊಬ್ಬನ ಜತೆ ಸಹಮತದ ಸಂಬಂಧ ಹೊಂದಿದ್ದಳು ಮತ್ತು ಗರ್ಭವತಿಯಾಗಿ 22 ವಾರಗಳಾಗಿದ್ದವು. ಆದರೆ, ಕೊನೇ ಗಳಿಗೆಯಲ್ಲಿ ಸಂಗಾತಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣದಿಂದಾಗಿ ಆಕೆ ತನ್ನ ಗರ್ಭಾವಸ್ಥೆ ಮುಂದುವರಿಸಲು ಬಯಸಲಿಲ್ಲ. ಮೇಲಾಗಿ, ವಿವಾಹವಿಲ್ಲದೆ ಮಗುವನ್ನು ಹೊಂದಿದರೆ ಸಮಾಜದ ಮುಂದೆ ಕಳಂಕಿತೆ ಎಂದು ಗುರುತಿಸಿಕೊಳ್ಳಬೇಕು ಎಂಬ ಬೇಸರ ಹಾಗೂ ವಿನಾಕಾರಣ ಕಿರುಕುಳ ಎದುರಿಸಬೇಕಾಗಬಹುದು ಎಂಬ ಕಾರಣಕ್ಕಾಗಿ ಗರ್ಭ ಅಂತ್ಯಗೊಳಿಸಲು ಮುಂದಾಗಿ, ಇದಕ್ಕೆ ಅನುಮತಿ ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ಇಂಥ ಅಸಹನೀಯ ಪರಿಸ್ಥಿತಿಗಳಿಂದಾಗಿ ಮಗುವನ್ನು ಬೆಳೆಸಲು ತನಗೆ ಸಾಧ್ಯವಿಲ್ಲ. ಅಲ್ಲದೆ, ಮಗುವನ್ನು ಬೆಳೆಸಲು ಮಾನಸಿಕವಾಗಿಯೂ ಸಿದ್ಧಳಾಗಿಲ್ಲ ಎಂದೂ ಅರ್ಜಿಯಲ್ಲಿ ವಿವರಿಸಿದ್ದಳು.

ಜುಲೈ 15ರಂದು, ದೆಹಲಿ ಹೈಕೋರ್ಟ್ ಆಕೆಗೆ ಗರ್ಭಪಾತಕ್ಕೆ ನಿರಾಕರಿಸಿತು. ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ 20-24 ವಾರ ಗರ್ಭವತಿಯಾಗಿರುವ ಅವಿವಾಹಿತ ಯುವತಿಯ ಗರ್ಭಪಾತಕ್ಕೆ ಅನುಮತಿಯಿಲ್ಲದ ಕಾರಣ ಕೋರ್ಟ್ ಆಕೆಯ ಮನವಿಯನ್ನು ಒಪ್ಪಲಿಲ್ಲ. ಆದರೆ, ಇದೇ ಪ್ರಕರಣವನ್ನು ಮತ್ತೊಂದು ಆಯಾಮದಲ್ಲಿ ನೋಡಿದ ಸುಪ್ರೀಂಕೋರ್ಟ್, ಜುಲೈ 21 ಗರ್ಭಪಾತಕ್ಕೆ ಅನುಮತಿ ನೀಡಿತು. ಮಹಿಳೆಯ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ, ಎಲ್ಲ ಮಹಿಳೆಯರು ಗರ್ಭಧಾರಣೆಯ 24 ವಾರಗಳವರೆಗೆ ಗರ್ಭಪಾತ ಹೊಂದುವ ಹಕ್ಕು ಹೊಂದಿದ್ದಾರೆ. ಗರ್ಭಾವಸ್ಥೆ ಮುಂದುವರಿಸುವ/ಬಿಡುವ ನಿರ್ಧಾರವು ಮಹಿಳೆಯ ಸ್ವಾಯತ್ತತೆಯ ಹಕ್ಕಿನಲ್ಲಿ ಬೇರೂರಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.

ಗರ್ಭಪಾತದ ಸೇವೆಗಳ ಅಗತ್ಯವಿರುವ ಒಂಟಿ ಮಹಿಳೆಯರಿಗೆ ಗರ್ಭಪಾತ ಸೇವೆಗಳನ್ನು ಒದಗಿಸುವ ವೇಳೆ ವೈದ್ಯಕೀಯ ವೃತ್ತಿಯಲ್ಲಿರುವವರಿಂದಲೇ ಅನೇಕ ಬಾರಿ ಅವಮಾನಗಳಾದ ಘಟನೆಗಳಿವೆ. ಕಿರುಕುಳ ಮತ್ತು ಮಹಿಳೆಯ ಗೌಪ್ಯತೆಯ ಉಲ್ಲಂಘನೆಯಾಗಿ ಸಮಾಜದಿಂದ ಅಗೌರವಕ್ಕೂ ತುತ್ತಾಗಿದ್ದಾರೆ.

ಒಂಟಿ, ಅವಿವಾಹಿತೆ, ವಿಚ್ಛೇದಿತ, ವಿಧವೆ ಎಂಬ ಕಾರಣಕ್ಕಾಗಿ ಭಾರತೀಯ ಸಮಾಜದಲ್ಲಿ ಇಂದಿಗೂ ಮಹಿಳೆಯರು ಎದುರಿಸುತ್ತಿರುವ ಈ ಕಳಂಕಗಳೇ ಸಾಕಷ್ಟಿವೆ. ಮದುವೆಯಾಗಿ, ಮಕ್ಕಳನ್ನು ಹೆತ್ತರಷ್ಟೇ ಆಕೆ ಪರಿಪೂರ್ಣ ಮಹಿಳೆ ಎಂದು ಕುಟುಂಬಸ್ಥರೇ ವ್ಯಾಖ್ಯಾನಿಸುವುದುಂಟು. ಆದರೆ, ಅವೆಲ್ಲವನ್ನೂ ಮೀರಿ ಯೋಚಿಸಬೇಕೆಂಬ ಸಂದೇಶ ಸಾರಿರುವ ಸುಪ್ರೀಂಕೋರ್ಟ್, ಗರ್ಭಪಾತಕ್ಕೆ ಅನುಮತಿಸುವ ನಿಯಮಕ್ಕೆ ವಿಶಾಲ ವ್ಯಾಖ್ಯಾನ ನೀಡಿ, ಗರ್ಭಪಾತದ ಹಕ್ಕು ವಿವಾಹಿತ ಮಹಿಳೆಯರಿಗೆ ಸೀಮಿತವಾಗಿರಬಾರದು, ಗರ್ಭಾವಸ್ಥೆಯ 20-24 ವಾರಗಳ ಅವಧಿಯಲ್ಲಿ ಗರ್ಭಪಾತ ನಿರಾಕರಿಸುವುದರಿಂದ ಅವಿವಾಹಿತ ಮಹಿಳೆಯರಿಗೆ ತಾರತಮ್ಯ ಉಂಟುಮಾಡುತ್ತದೆ. ಕಾನೂನಿನ ಸಮಾನತೆ ಮತ್ತು ಕಾನೂನುಗಳ ಸಮಾನ ರಕ್ಷಣೆಯನ್ನು ಖಾತರಿಪಡಿಸುವ ಸಂವಿಧಾನದ 14ನೇ ವಿಧಿಯನ್ನೂ ಉಲ್ಲಂಘಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಪ್ರತಿ ಮಹಿಳೆಗೂ ತನ್ನ ಗರ್ಭಾವಸ್ಥೆ ಅಂತ್ಯಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಒಳಗೊಂಡಂತೆ ಸಂತಾನೋತ್ಪತ್ತಿ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರವನ್ನು ನೆಲದ ಕಾನೂನು ಗುರುತಿಸಬೇಕು ಎಂಬ ಒತ್ತಾಯ ಹಲವಾರು ವರ್ಷಗಳಿಂದ ಕೇಳಿಬರುತ್ತಿತ್ತು. ಇದಕ್ಕೆ ಪೂರಕವಾದ ತೀರ್ಪಗಳು ಸುಪ್ರೀಂಕೋರ್ಟ್​ನಿಂದ ಆಗಾಗ್ಗೆ ಹೊರಬಿದ್ದಿವೆ. ಈ ತೀರ್ಪು ಅದರ ಮುಂದುವರಿದ ಭಾಗ ಎನ್ನಬಹುದು. ಯಾವುದೇ ಸರ್ಕಾರಿ ನಿಯಮಗಳ ಅನಗತ್ಯ ಹಸ್ತಕ್ಷೇಪವಿಲ್ಲದೆ, ಎಲ್ಲ ಮಹಿಳೆಯರು, ಯುವತಿಯರ ಸಂತಾನೋತ್ಪತ್ತಿ ಆಯ್ಕೆಗಳನ್ನು ಎತ್ತಿಹಿಡಿದಿರುವ ಸುಪ್ರೀಂಕೋರ್ಟ್, ಸಂತಾನೋತ್ಪತ್ತಿ ಅಥವಾ ಗರ್ಭಪಾತಕ್ಕೆ ಸಂಬಂಧಿಸಿದಂತೆ ಆರೋಗ್ಯ ಸೇವೆಗಳನ್ನು ನಿರಾಕರಿಸಿದಲ್ಲಿ ಅದು ಮಹಿಳೆಯರ ಘನತೆಗೂ ಹಾನಿ ಮಾಡಿದಂತೆ ಎಂಬ ಎಚ್ಚರಿಕೆ ಸಂದೇಶವನ್ನೂ ಕೊಟ್ಟಿದೆ.

ಕಾನೂನು ಏನಿತ್ತು?: ಮೆಡಿಕಲ್ ಟರ್ವಿುನೇಷನ್ ಆಫ್ ಪ್ರಗ್ನೆನ್ಸಿ ಕಾಯ್ದೆಯು (ಎಂಟಿಪಿ) ಎರಡು ಹಂತಗಳಲ್ಲಿ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿಸುತ್ತದೆ. 2021ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದ ನಂತರ, 20 ವಾರ ತುಂಬಿದ ಗರ್ಭಿಣಿ ಗರ್ಭಪಾತ ಮಾಡಿಸಿಕೊಳ್ಳಬೇಕೆಂದರೆ, ಒಬ್ಬ ನೋಂದಾಯಿತ ವೈದ್ಯಾಧಿಕಾರಿಯ ಶಿಫಾರಸು ಪಡೆದುಕೊಂಡ ಬಳಿಕ ಆಕೆಗೆ ಗರ್ಭಪಾತಕ್ಕೆ ಅನುಮತಿಸಬಹುದು ಎಂದು ತಿಳಿಸಲಾಗಿದೆ. 20-24 ವಾರಗಳ ನಡುವಿನ ಗರ್ಭಿಣಿಯರಲ್ಲಿ ಯಾರಿಗೆ ಗರ್ಭಪಾತಕ್ಕೆ ಅನುಮತಿಸಬಹುದು ಎಂಬುದಕ್ಕೆ ಕೆಲವು ಮಾನದಂಡ ರೂಪಿಸಲಾಗಿದೆ. ಇಲ್ಲಿ ಇಬ್ಬರು ನೋಂದಾಯಿತ ವೈದ್ಯಾಧಿಕಾರಿಗಳ ಅಭಿಪ್ರಾಯ/ಶಿಫಾರಸಿನ ಅಗತ್ಯವಿದೆ. 20-24 ವಾರಗಳ ನಡುವಿನ ಗರ್ಭಧಾರಣೆ ಅಂತ್ಯಕ್ಕಾಗಿ ಎಂಟಿಪಿ ಕಾಯ್ದೆಯ ನಿಯಮ 3ಬಿ ಅಡಿಯಲ್ಲಿ ಏಳು ವರ್ಗಗಳ ಮಹಿಳೆಯರಿಗೆ ಮಾತ್ರ ಅನುಮತಿಸಬಹುದು ಎಂದು ಹೇಳಲಾಗಿದೆ. ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಅಥವಾ ಸಂಭೋಗದಿಂದ ಬದುಕುಳಿದವರು, ಅಪ್ರಾಪ್ತ ವಯಸ್ಸಿನವರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿಯ ಬದಲಾವಣೆ (ವಿಧವೆ ಮತ್ತು ವಿಚ್ಛೇದನ), ದೈಹಿಕ ವಿಕಲಾಂಗತೆ ಹೊಂದಿರುವ ಮಹಿಳೆಯರು, ಬುದ್ಧಿಮಾಂದ್ಯ ಸೇರಿದಂತೆ ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣದ ವಿರೂಪದಿಂದ ಜೀವಕ್ಕೆ ಹಾನಿ ಅಥವಾ ಮಗು ಜನಿಸಿದರೆ ಅಂಗವಿಕಲಗೊಳ್ಳುವ ಅಥವಾ ಅಂತಹ ದೈಹಿಕ ಅಥವಾ ಮಾನಸಿಕ ಅಸಹಜತೆಗಳಿಂದ ಬಳಲುವ ಅಪಾಯವಿದ್ದಾಗ ಹಾಗೂ ಕೊನೆಯದಾಗಿ ಸರ್ಕಾರ ಘೊಷಿಸಿದ ತುರ್ತು ಪರಿಸ್ಥಿತಿಗಳಲ್ಲಿ 20-24 ವಾರಗಳ ನಡುವಿನ ಗರ್ಭಧಾರಣೆ ಅಂತ್ಯಕ್ಕಾಗಿ ಅವಕಾಶವಿದೆ.

ಕೋರ್ಟ್ ಹೇಳಿದ್ದೇನು?: ಎಂಟಿಪಿ ಕಾಯ್ದೆಯ ನಿಯಮ 3ಬಿ(ಸಿ) ಪ್ರತ್ಯೇಕ ಎಂದು ಪರಿಗಣಿಸಲಾಗುವುದಿಲ್ಲ. ಅದನ್ನು 3ಬಿ ಅಡಿಯಲ್ಲಿ ಇತರ ಉಪ-ಕಲಂಗಳೊಂದಿಗೆ ಸೇರಿಸಿಕೊಳ್ಳಬೇಕು. ವಿವಾಹಿತ ಅಥವಾ ಅವಿವಾಹಿತ ಮಹಿಳೆಯರ ನಡುವೆ ವ್ಯತ್ಯಾಸವಿರಬಾರದು. ಉದಾಹರಣೆಗೆ ಲೈಂಗಿಕ ದೌರ್ಜನ್ಯದಿಂದ ಬದುಕುಳಿದವರು, ಅಪ್ರಾಪ್ತ ವಯಸ್ಕರು.. ಹೀಗೆ ಈ ಕಾನೂನಿನಡಿ ಅವಿವಾಹಿತ ಮಹಿಳೆಯರನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ವಿವಾಹದೊಳಗೆ ದೌರ್ಜನ್ಯದ ಅಸ್ತಿತ್ವ ಒಪ್ಪಿಕೊಂಡಿರುವ ಪೀಠ, ‘ವಿವಾಹಿತ ಮಹಿಳೆಯ ಬಲವಂತದ ಗರ್ಭಾವಸ್ಥೆಯನ್ನು ಗರ್ಭಧಾರಣೆಯ ಉದ್ದೇಶಕ್ಕಾಗಿ ನಡೆದ ವೈವಾಹಿಕ ಅತ್ಯಾಚಾರ’ ಎಂದು ಪರಿಗಣಿಸಬಹುದು. ಗರ್ಭಪಾತ ನಿಯಂತ್ರಿಸುವ ಕಾನೂನುಗಳ ವ್ಯಾಪ್ತಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಸಹ ತರಬಹುದು ಎಂದು ಹೇಳಿದೆ. ಈ ತೀರ್ಪು ಅವಿವಾಹಿತ ಮಹಿಳೆಯರ ಹಕ್ಕನ್ನು ಕೂಡ ಗುರುತಿಸಿದರೂ, ಈ ಹಕ್ಕಿನ ಅನುಸರಣೆ ಅಥವಾ ಜಾರಿ ಆಯಾ ಪ್ರಕರಣಗಳ ಮೇಲೆ ಆಧರಿಸಿದೆ ಎಂದೂ ಹೇಳಿರುವುದು ಗಮನಾರ್ಹ.

ಎತ್ತರದಲ್ಲಿದ್ದಾಳೆ ಮಹಿಳೆ

ಮಹಿಳೆಯರ ಗರ್ಭಪಾತದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಶ್ಲಾಘನೀಯ. ಆದರೆ ಇಂತಹ ಕಾನೂನುಗಳ ಬಗ್ಗೆ ಮಹಿಳೆಯರು ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದಾರೆ ಎನ್ನುವುದು ಮುಖ್ಯ. ಆಧುನಿಕ ಯುಗದಲ್ಲಿ ಮಹಿಳೆ ನಿಶ್ಚಿತವಾದ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಜಾಣಳಾಗಿದ್ದಾಳೆ. ಸೋಲನ್ನು ಅನುಭವಿಸಿ ಪುಟಿದೇಳುವ ಶಕ್ತಿಯನ್ನು ಗಂಡಿಗಿಂತ ಹೆಣ್ಣು ಹೆಚ್ಚಾಗಿಯೇ ಹೊಂದಿದ್ದಾಳೆ. ಇಂದು ಉದ್ಯೋಗದಲ್ಲಿರುವ ಮಹಿಳೆಯರು ಮನೆ ಕೆಲಸದ ಪರದೆಯನ್ನು ದಾಟಿ ಸ್ಥಾನಪಲ್ಲಟವಾಗಿದ್ದಾರೆ. ಬದಲಾವಣೆ ಗಂಡಿಗೆ ಮಾತ್ರವಲ್ಲ ಹೆಣ್ಣಿಗೂ ಎಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುವ ಮುಖೇನ ತೋರಿಸಿಕೊಡುತ್ತಿದ್ದಾರೆ. ಹಳೆಯ ಮೌಲ್ಯವನ್ನು ಬಿಟ್ಟು ಹೊಸ ಸಾಮಾಜಿಕ ಮೌಲ್ಯದ ಜತೆ ಹೆಣ್ಣು ಇಂದು ಗುರುತಿಸಿಕೊಳ್ಳಬೇಕಾಗಿದೆ. ಸುಲಭ ಸುಖದ ಬೆನ್ನ ಹಿಂದೆ ಹೋಗದೆ ಶ್ರಮವಹಿಸಿ ಜೀವನ ನಡೆಸಬೇಕಾಗಿದೆ. ಹೆಣ್ಣು ಇಂದಿನ ಎಲ್ಲ ವಿದ್ಯುನ್ಮಾನಗಳನ್ನು ಬಳಸಿಕೊಂಡು ಎತ್ತರದ ಮಟ್ಟ ಏರುತ್ತಿದ್ದಾಳೆ ಎನ್ನುತ್ತಾರೆ ಆಪ್ತ ಸಲಹೆಗಾರ್ತಿ ಡಾ.ಶಾಂತಾ ನಾಗರಾಜ್.

ವೈಯಕ್ತಿಕ ನಿರ್ಧಾರ ಗೌರವಿಸೋಣ

| ಎಸ್.ಸುಶೀಲಾ ಚಿಂತಾಮಣಿ

ಮಗುವಿನ ಸೃಷ್ಟಿಗೆ ತಂದೆ-ತಾಯಿ ಇಬ್ಬರೂ ಕಾರಣಸ್ಥರೇ ಆದರೂ, ಮಗು ಹೊರಜಗತ್ತಿಗೆ ಬರುವುದರಲ್ಲಿ ತಾಯಿಯ ಪಾತ್ರ ಹೆಚ್ಚಾಗಿರುತ್ತದೆ. ಒಂಬತ್ತು ತಿಂಗಳು ಮಗುವಿಗೆ ತನ್ನ ಗರ್ಭದಲ್ಲಿ ನೆಲೆಕೊಡುವುದು, ನಂತರ ತನ್ನನ್ನು ಸೀಳಿಕೊಂಡು ಮಗು ಹೊರಬರಲು ಸ್ವ-ಇಚ್ಛೆಯಿಂದ ಸಂತೋಷದಿಂದ ಅನುವು ಮಾಡಿಕೊಡುವುದು, ಇವೆಲ್ಲಾ ತಾಯಿಯಾದವಳ ಪ್ರತ್ಯೇಕತೆ. ಗರ್ಭಿಣಿಯಾದಾಗ ಹಾಗೂ ಆಕೆಯ ಗರ್ಭದಲ್ಲಿರುವ ಮಗುವಿನ ಮಾನಸಿಕ ಹಾಗೂ ದೈಹಿಕ ಆರೋಗ್ಯ ತಾಯಿ ಮೇಲೆ ಬಹಳಷ್ಟು ಆಧಾರಪಟ್ಟಿರುತ್ತದೆ. ತಾನು ಮಗುವಿನ ತಾಯಿಯಾಗುವುದೆಂದರೆ ಮಗುವನ್ನು ಹೆತ್ತು ಹಾಕುವುದಷ್ಟೇ ಎನ್ನುವುದು ಒಬ್ಬ ಹೆಣ್ಣಿನ ಯೋಚನೆಯಾಗಿರುವುದಿಲ್ಲ. ಬದಲಿಗೆ, ಆ ಮಗು ಬೆಳೆದಮೇಲೂ, ಮಗು ವಯಸ್ಕನೋ ವಯಸ್ಕಳೋ ಆದ ಮೇಲೂ, ತನ್ನ ಮಗುವಿನ ಬಗ್ಗೆ ಚಿಂತಿಸುವ ಸ್ವಭಾವ ತಾಯಿಯದು. ಮಗುವಿನ ಸೃಷ್ಟಿಗಷ್ಟೇ, ಆ ಕೆಲವು ನಿಮಿಷಗಳ/ಗಂಟೆಗಳ ದೈಹಿಕ ಸಂಬಂಧಕ್ಕಷ್ಟೇ ಮಗುವಿನ ಸೃಷ್ಟಿಯನ್ನು ಸೀಮಿತಗೊಳಿಸುವ ಮಹಿಳೆಯರು ಬಹುಶ ಇರಲಾರರು. ಹೀಗಾಗಿ ಯಾವ ಸಂದರ್ಭದಲ್ಲಿ ತನ್ನ ಮಗು ಗರ್ಭದಿಂದ ಮಗುವಾಗಿ ಹೊರಬರಬೇಕು, ಅಥವಾ ಆ ಮಗು ತನ್ನ ಮೂಲಕ ಈ ಪ್ರಪಂಚಕ್ಕೆ ಬರುವ ಅವಶ್ಯಕತೆ ಇಲ್ಲ. ಮಗು ಈ ಪ್ರಪಂಚಕ್ಕೆ ಬರುವ ಸಮಯದಲ್ಲಿ ಹಾಗೂ ಬಂದ ನಂತರ ಮಗುವಿಗೆ ಸಿಗಬೇಕಾದ ಮಾನಸಿಕ ಹಾಗೂ ದೈಹಿಕವಾದ ಆರೋಗ್ಯಕರ ವಾತಾವರಣವನ್ನು ನಾನು ಕೊಡಲು ಸಾಧ್ಯವಿಲ್ಲ ಎನ್ನುವುದನ್ನೆಲ್ಲಾ ಸರಿಯಾಗಿ ಯೋಚಿಸಿ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾದರೆ ಅದು ಆಕೆಯ ವೈಯಕ್ತಿಕ ನಿರ್ಧಾರ, ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯ. ದೈಹಿಕ ಕ್ರಿಯೆಗಷ್ಟೇ ನಾನು ಪಾಲುಗಾರ ಮುಂದಾಗುವುದಕ್ಕೆಲ್ಲಾ ಯಾವ ಸಂಬಂಧವೂ ಇಲ್ಲ ಎಂದು ತಂದೆಯ ಸ್ಥಾನದಲ್ಲಿ ನಿಲ್ಲಬೇಕಾದ ವ್ಯಕ್ತಿ ಜಾರಿಕೊಂಡಾಗ ಅಸಹಾಯಕ ಮಹಿಳೆ ಏನು ಮಾಡಲು ಸಾಧ್ಯ? ಈ ನಿಟ್ಟಿನಲ್ಲಿ ನೋಡಿದಾಗ ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರಿಗೆ ಗರ್ಭಪಾತದ ಬಗ್ಗೆ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದಾದ ಹಕ್ಕಿನ ಬಗ್ಗೆ ನಮ್ಮ ಸವೋಚ್ಛ ನ್ಯಾಯಾಲಯದ ತ್ರಿ ಸದಸ್ಯ ನ್ಯಾಯಮೂರ್ತಿಗಳ ಅತ್ಯುತ್ತಮ ತೀರ್ಪು ಅತ್ಯಂತ ಸ್ವಾಗತಾರ್ಹ. ವಿವಾಹಿತ ಪತ್ನಿಯೇ ಆದರೂ ಅವಳೊಂದಿಗೆ ಬಲಾತ್ಕಾರದಿಂದ ಸೇರಿ, ಅವಳಿಗಿಷ್ಟವಿಲ್ಲದ ಗರ್ಭಿಣಿಯ ಸ್ಥಿತಿಗೆ ಅವಳನ್ನು ತಂದು, ಅವಳು ತನ್ನ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಕೊಳ್ಳುವಂತಿಲ್ಲ ಎನ್ನುವ ಧೋರಣೆಯಲ್ಲಿರುವವರಿಗೆ ವಿವಾಹಿತ ಪತಿಯ ಇತಿಮಿತಿಗಳ ಬಗ್ಗೆಯೂ ಉತ್ತಮ ಸಂದೇಶ ಈ ತೀರ್ಪಿನಲ್ಲಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಉಪಯೋಗಿಸಿಕೊಳ್ಳುವುದಲ್ಲದೆ, ತನ್ನ ಶಕ್ತಿಗೂ ಮೀರಿದ ಜವಾಬ್ದಾರಿಗಳ ಸಂಕೋಲೆಯಲ್ಲಿ ಆಕೆಯನ್ನು ಕಟ್ಟಿಹಾಕುವ ಹೊರ ಪ್ರಪಂಚದ ಪ್ರವೃತ್ತಿ ಇನ್ನಾದರೂ ಕಡಿಮೆಯಾಗಲಿ ಎನ್ನುವುದಷ್ಟೇ ಎಲ್ಲರ ಆಶಯ.

(ಹಿರಿಯ ವಕೀಲರು, ಹಿರಿಯ ಮಧ್ಯಸ್ಥಿಕೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net