

ನವದೆಹಲಿ: ರಾಷ್ಟ್ರ ರಾಜಧಾನಿ 'ತೀವ್ರ ವಾಯು ಮಾಲಿನ್ಯ' ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಮ್ ಆದ್ಮಿ ಪಕ್ಷ ನೇತೃತ್ವದ ಪಂಜಾಬ್ ಸರ್ಕಾರವನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿತು. ಗಾಳಿ ಕಲುಷಿತಗೊಳ್ಳಲು ಕಾರಣವಾಗಿರುವ ಭತ್ತದ ಗದ್ದೆಗಳಲ್ಲಿ ಹುಲ್ಲು ಸುಡುವುದನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಿತು.
'ಗದ್ದೆಗಳಲ್ಲಿ ಬೆಂಕಿ ಹಚ್ಚಿ ಪರಿಸರ ಹಾಳು ಮಾಡುತ್ತಿದ್ದರೂ. ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ಏಕೆ. ನೀವೇನು ರಾಜಕೀಯ ಮಾಡುತ್ತ ಜನರ ಜತೆ ಆಟವಾಡುತ್ತಿದ್ದೀರಾ? ಬೆಂಕಿ ಹಚ್ಚುವ ಪ್ರಕ್ರಿಹಯೆಯನ್ನು ಹೇಗೆ ತಡೆಯುತ್ತೀರಿ ಎಂದು ನಮಗೆ ತಿಳಿದಿಲ್ಲ. ಇದು ನಿಮ್ಮ ಕೆಲಸ. ಅದು ಕೂಡಲೇ ನಿಲ್ಲಬೇಕು. ತಕ್ಷಣ ಏನಾದರು ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯದ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳಲ್ಲಿ ಪಂಜಾಬ್‌ನಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದೂ ಒಂದಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಹಲವರು ಮನವಿಗಳನ್ನು ಸಲ್ಲಿಸಿದ್ದರು. ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಹರಿಯಾಣ ಸರ್ಕಾರವೇ ಕಾರಣ. ಪಂಜಾಬ್ ರಾಷ್ಟ್ರ ರಾಜಧಾನಿಯಿಂದ 500 ಕಿಮೀ ದೂರದಲ್ಲಿದ್ದು, ಕೇವಲ 100ಕಿಮೀ ದೂರದಲ್ಲಿರುವ ಹರಿಯಾಣದಲ್ಲಿ ಒಣಹುಲ್ಲು ಸುಡುವುದು ಹೆಚ್ಚಾಗಿದ್ದು, ಇದೇ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣ ಎಂದು ಇತ್ತೀಚೆಗೆ ಎಎಪಿ ಆರೋಪಿಸಿತ್ತು.
ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಶೇ. 31ರಷ್ಟಿದೆ. ಸಿಎಕ್ಯೂಎಂ ವರದಿ ಪ್ರಕಾರ ಬೆಳೆ ತ್ಯಾಜ್ಯ ಸುಡುವುದರಿಂದ ಶೇ.50-67 ಮಾಲಿನ್ಯ ಹದಗೆಡಲು ಪ್ರಮುಖ ಕಾರಣವಾಗಿದೆ.
ನ.6 ರಂದು ಪಂಜಾಬ್‌ನಲ್ಲಿ 2,060 ಕೃಷಿ ತ್ಯಾಜ್ಯಕ್ಕೆ ಅಗ್ನಿಸ್ಪರ್ಶ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ಋತುವಿನಲ್ಲಿ ಪಂಜಾಬ್‌ನಲ್ಲಿ 19,000 463 ಬೆಂಕಿ ಪ್ರಕರಣಗಳು ಪತ್ತೆಯಾಗಿವೆ. ಕಳೆದ 9 ದಿನಗಳಲ್ಲಿ, ಪಂಜಾಬ್‌ನಲ್ಲಿ 15,000 ಕ್ಕೂ ಹೆಚ್ಚು ಬೆಳೆ ಸುಡುವ ಪ್ರಕರಣಗಳು ವರದಿಯಾಗಿವೆ.
ಸೋಮವಾರ ಸಂಗ್ರೂರ್‌ನಲ್ಲಿ 509, ಬಟಿಂಡಾದಲ್ಲಿ 210, ಮಾನ್ಸಾದಲ್ಲಿ 195, ಫಿರೋಜ್‌ಪುರದಲ್ಲಿ 146, ಬರ್ನಾಲಾದಲ್ಲಿ 189 ಮತ್ತು ಮೊಗಾದಲ್ಲಿ 110 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.