ಸಾಲದ ಸುಳಿಯಲ್ಲಿ ಬಲಾಢ್ಯ ರಾಷ್ಟ್ರಗಳು: ಆದಾಯಕ್ಕಿಂತ ಖರ್ಚು ಅಧಿಕ

ವಿಜಯವಾಣಿ (6)
Published on

ಜಗತ್ತಿನ ಕಣ್ಣಿಗೆ ಇವು ವಿಶ್ವದ ಬಲಾಢ್ಯ ರಾಷ್ಟ್ರಗಳು. ಅವುಗಳ ಅಭಿವೃದ್ಧಿ ಕಣ್ಣು ಕೊರೈಸುವಂತಿದೆ. ಆದರೆ, ಒಳಹೊಕ್ಕು ನೋಡಿದಾಗ ನೈಜ ಪರಿಸ್ಥಿತಿ ಅರಿವಿಗೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ರಾಷ್ಟ್ರಗಳು ಸಾಲದ ಮೇಲೆ ಸಾಲ ಮಾಡುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಪರಿಯ ಸಾಲ ಮುಂದೆ ಸಂಕಷ್ಟಕ್ಕೆ ದೂಡಲಿದೆ, ಆರ್ಥಿಕವಾಗಿ ಬಿಕ್ಕಟ್ಟಿನ ಸ್ಥಿತಿ ಸೃಷ್ಟಿಸಲಿದೆ ಎಂಬ ತಜ್ಞರ ಎಚ್ಚರಿಕೆಯನ್ನು ಆಳುಗರು ಕಡೆಗಣಿಸುತ್ತ, ‘ಸಾಲ ಮಾಡಿಯಾದರೂ, ತುಪ್ಪ ತಿನ್ನು’ ಎಂಬ ನೀತಿ ಮುಂದುವರಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಭವಿಷ್ಯದ ದಿನಗಳು ಸವಾಲಿನಿಂದ ಕೂಡಿರಲಿವೆ ಎಂಬುದರಲ್ಲಿ ಅನುಮಾನವಿಲ್ಲ.

ಜಾಗತಿಕವಾಗಿ ಕಳೆದ ಎರಡು ದಶಕಗಳಿಂದ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ. ಸರ್ಕಾರ, ಕಾಪೋರೇಟ್ ಮತ್ತು ಗೃಹಸಾಲಗಳನ್ನು ಒಳಗೊಂಡಂತೆ ವಿವಿಧ ವಲಯಗಳ ಸಾಲ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯ ಪ್ರಕಾರ 2024ರಲ್ಲಿ 315 ಟ್ರಿಲಿಯನ್ ಡಾಲರ್​ನಷ್ಟಿದ್ದ ಜಾಗತಿಕ ಸಾಲ 2025ರಲ್ಲಿ 338 ಟ್ರಿಲಿಯನ್ ಡಾಲರ್​ಗೆ ಏರಿಕೆಯಾಗಿದೆ. ಸಾಲ ಎಂದಾಕ್ಷರ ‘ಹೊರೆ’ ಅಂತಲೇ ಭಾವಿಸಬೇಕಿಲ್ಲ. ಉತ್ಪಾದಕತೆ, ಸಂಪತ್ತು ಸೃಷ್ಟಿಗೆ ವಿನಿಯೋಗವಾದರೆ ಅದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಆದರೆ, ವೇಗವಾಗಿ ಹೆಚ್ಚುತ್ತಿರುವ ಸಾಲ ಕಳವಳ ಸೃಷ್ಟಿಸಿರುವುದಂತೂ ಹೌದು.

ಸಾಲದಲ್ಲೂ ದೊಡ್ಡಣ್ಣ: ಡಾಲರ್ ಧೀಮಾಕಿನಿಂದ ಬೀಗುವ ಅಮೆರಿಕ ಸಾಲ ಮಾಡುವುದರಲ್ಲಿಯೂ ಮುಂಚೂಣಿಯಲ್ಲಿದೆ. ಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಆರ್ಥಿಕ ಒತ್ತಡದ (ಫೈನಾನ್ಶಿಯಲ್ ಸ್ಟ್ರೇಸ್) 100ಕ್ಕೆ 100 ಅಂಕಗಳನ್ನು ಅಮೆರಿಕ ಹೊಂದಿದೆ. ಅಮೆರಿಕದ ಒಟ್ಟು ಜಿಡಿಪಿ 26ರಿಂದ 27 ಟ್ರಿಲಿಯನ್ ಡಾಲರ್. ಆದರೆ, ಯುಎಸ್​ಎ 2025ರ ಮೊದಲ ತ್ರೖೆಮಾಸಿಕದವರಗೆ ಒಟ್ಟು 37 ಟ್ರಿಲಿಯನ್ ಡಾಲರ್​ಗಳ ಸಾಲವನ್ನು ಹೊಂದಿದ್ದು, ಇದು ಜಗತ್ತಿನ ಬಾಹ್ಯ ಸಾಲದ ಶೇ.40ಕ್ಕಿಂತಲೂ ಅಧಿಕವಾಗಿದೆ. ಆದರೆ, ಸದ್ಯಕ್ಕೆ ಹಣದುಬ್ಬರ ನಿಯಂತ್ರಣದಲ್ಲಿರುವುದು ಸಮಾಧಾನಕರ. ತನ್ನ ಜಿಡಿಪಿಯ ಶೇಕಡ 118ರಷ್ಟು ಸಾಲವನ್ನು ಪಡೆದಿರುವ ಯುಎಸ್​ಎ ಆರ್ಥಿಕ ನೀತಿಯನ್ನು ಪರಾಮಶಿಸಬೇಕಿದೆ.

ಅಮೆರಿಕ ಪ್ರಜೆಗಳ ತಲಾದಾಯ 60.50 ಲಕ್ಷ ರೂ. ಇದ್ದರೆ, ಸಾಲದ ಪ್ರಮಾಣ 88.51 ಲಕ್ಷ ರೂ.ಗಳಷ್ಟಿದೆ. ಬ್ರಿಟನ್ ವಿರುದ್ಧ ಹೋರಾಡಲು ಅಮೆರಿಕ ಮೊದಲ ಬಾರಿಗೆ 1776ರಲ್ಲಿ ಸರ್ಕಾರಿ ಸಾಲ ಮಾಡಿತು. 1860ರಲ್ಲಿ ಆಂತರಿಕ ಯುದ್ಧದ ಸಮಯದಲ್ಲಿ ಸಾಲದ ಮೊತ್ತ 2.65 ಬಿಲಿಯನ್ ಡಾಲರ್​ಗೆ ತಲುಪಿತು. 1930ರಲ್ಲಿ ಆರ್ಥಿಕ ಕುಸಿತದಿಂದ ಹೊರಬರಲು, 1940ರಲ್ಲಿ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, 1970ರ ಬಳಿಕ ಶಿಕ್ಷಣ, ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ, 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತವನ್ನು ಎದುರಿಸಲು ಸಾಲ ಮಾಡುತ್ತಲೇ ಹೋಯಿತು. 2020ರಲ್ಲಿ ಕೋವಿಡ್ ಸಂಕಷ್ಟ, ನಿರುದ್ಯೋಗ ಭತ್ಯೆಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಕಾರಣಗಳಿಂದ ಸಾಲದ ಮೊತ್ತ 28 ಟ್ರಿಲಿಯನ್ ಡಾಲರ್​ಗೆ ಏರಿಕೆ ಕಂಡಿತು.

ಈಗ ಅಮೆರಿಕ ಪ್ರತಿ ವರ್ಷ ಬಡ್ಡಿ ಪಾವತಿಸಲು ಒಂದು ಟ್ರಿಲಿಯನ್ ಡಾಲರ್ (83 ಲಕ್ಷ ಕೋಟಿ ರೂ.) ವೆಚ್ಚ ಮಾಡುತ್ತಿದೆ. 2030ರ ಒಳಗೆ ಜಿಡಿಪಿಯ ಶೇ.130ರಿಂದ ಶೇ.140ರಷ್ಟು ಸಾಲ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅಮೆರಿಕವು ಸದ್ಯ ಪ್ರತಿ ಐದು ತಿಂಗಳಿಗೊಮ್ಮೆ ಸುಮಾರು 1 ಟ್ರಿಲಿಯನ್ ಡಾಲರ್​ನಷ್ಟು ಸಾಲವನ್ನು ಮಾಡುತ್ತಿದೆ. ಇದು ಕಳೆದ ಕಾಲು ಶತಮಾನದ ಸರಾಸರಿ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. 1981ರಲ್ಲಿ ದೇಶವು ತನ್ನ ಮೊದಲ 1 ಟ್ರಿಲಿಯನ್ ಸಾಲವನ್ನು ತಲುಪಲು 200ಕ್ಕೂ ಹೆಚ್ಚು ವರ್ಷಗಳನ್ನು ತೆಗೆದುಕೊಂಡಿತ್ತು. ಆ ನಂತರ ಸಾಲದ ಮೊತ್ತ ಒಂದೇ ಸಮನೆ ಏರಿಕೆ ಆಗುತ್ತಿದೆ.

ಋಣಭಾರಕ್ಕೆ ಏನು ಕಾರಣ?

ಆಂತರಿಕ ಉತ್ಪಾದನೆ ಪ್ರಮಾಣ (ಜಿಡಿಪಿ)ಕ್ಕಿಂತ ಅಧಿಕ ಸಾಲ ಮಾಡುತ್ತಿರುವ ರಾಷ್ಟ್ರಗಳ ಸಂಖ್ಯೆ ಹೆಚ್ಚಿದ್ದು, ಇದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ. ಹೆಚ್ಚಿರುವ ಸಾಮಾಜಿಕ ಯೋಜನೆಗಳು ಅಂದರೆ ಆರೋಗ್ಯ ಯೋಜನೆಗಳು, ಪಿಂಚಣಿ ಸೇರಿದಂತೆ ಹಲವು ಸರ್ಕಾರಿ ಕಾರ್ಯಕ್ರಮಗಳಿಗಾಗಿ ಸರ್ಕಾರಿ ವೆಚ್ಚ ಗಣನೀಯವಾಗಿ ಏರಿಕೆ ಆಗಿದ್ದು, ಸಾಲ ಹೆಚ್ಚಲು ಪ್ರಮುಖ ಕಾರಣ. ಅದಲ್ಲದೆ, ಕೋವಿಡ್ ಅವಧಿಯಲ್ಲಿ ಪ್ರಕಟಿಸಿದ ಪ್ರೋತ್ಸಾಹಕ ನೀತಿಗಳು, ನಿರುದ್ಯೋಗಿಗಳಿಗೆ ನೀಡುತ್ತಿರುವ ಭತ್ಯೆ ಸರ್ಕಾರಿ ಬೊಕ್ಕಸದ ಹೊರೆಯನ್ನು ಹೆಚ್ಚಿಸಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅರ್ಥಿಕ ನೀತಿಯನ್ನು ಆಮೂಲಾಗ್ರವಾಗಿ ಪರಾಮಶಿಸಬೇಕಿದೆ. ಅಲ್ಲದೆ, ವೆಚ್ಚ ನಿಯಂತ್ರಣಕ್ಕೆ ಸೂಕ್ತ ಮತ್ತು ಕಠಿಣ ನಿಯಮಗಳನ್ನು ಅಳವಡಿಸದಿದ್ದಲ್ಲಿ, ವರ್ಷದಿಂದ ವರ್ಷಕ್ಕೆ ಸಾಲದ ಪ್ರಮಾಣ ಹೆಚ್ಚುತ್ತ ಸಾಗಲಿದ್ದು, ಇದು ಕೆಲವೇ ವರ್ಷಗಳಲ್ಲಿ ಆರ್ಥಿಕ ಅಮತೋಲನಕ್ಕೆ ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು. ದೊಡ್ಡ ರಾಷ್ಟ್ರಗಳು ಮಾತ್ರವಲ್ಲ, ಸಣ್ಣಪುಟ್ಟ ದೇಶಗಳೂ ಸಾಲ ಮಾಡುವಲ್ಲಿ ಪೈಪೋಟಿಗೆ ಬಿದ್ದಿವೆ.

ಡ್ರ್ಯಾಗನ್ ಪರಿಸ್ಥಿತಿ

ಚೀನಾ ವಿಶ್ವದಲ್ಲೇ ಎರಡನೇ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ. ಉತ್ಪಾದನೆಯಲ್ಲೂ ಮುಂದಿದೆ. ಆದರೂ, ಸಾಲದ ಪ್ರಮಾಣ ಗಾಬರಿ ಹುಟ್ಟಿಸುವಂತಿದೆ. ಡ್ರಾ್ಯಗನ್ ರಾಷ್ಟ್ರ ಚೀನಾ 15 ಟ್ರಿಲಿಯನ್ ಡಾಲರ್ (12,450 ಲಕ್ಷ ಕೋಟಿ ರೂ.) ಸಾಲವನ್ನು ಹೊಂದಿದೆ. ಅಮೆರಿಕದೊಂದಿಗಿನ ಸುಂಕ ಸಮರ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಆದರೆ, ಸಣ್ಣಪುಟ್ಟ ರಾಷ್ಟ್ರಗಳಿಗೆ ಸಾಲ ನೀಡಿರುವ ಚೀನಾ ಬೇರೆ ದೇಶಗಳಿಂದ ಸಾಲ ವಸೂಲಿಯಲ್ಲಿ ಮುಂಚೂಣಿಯಲ್ಲಿದೆ.

ಜಪಾನ್ ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್ ಸಾಲದ ವಿಷಯದಲ್ಲೂ ಮುಂದಿದೆ. ಜಪಾನ್ ಹೊಂದಿರುವ ಒಟ್ಟು ಸಾಲ 11.1 ಟ್ರಿಲಿಯನ್ ಡಾಲರ್ (9863.35 ಲಕ್ಷ ಕೋಟಿ ರೂ.). ಸಾಮಾಜಿಕ ಭದ್ರತಾ ವೆಚ್ಚಕ್ಕೆ ಬಜೆಟ್​ನ ಹೆಚ್ಚಿನ ಭಾಗ ಹೋಗುತ್ತಿದ್ದು, ಬಡ್ಡಿ ಪಾವತಿಯ ಹೊರೆಯೂ ಹೆಚ್ಚಿದೆ.

ಫ್ರಾನ್ಸ್​ ಯುರೋಪಿಯನ್ ಒಕ್ಕೂಟದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಫ್ರಾನ್ಸ್​ನ ಒಟ್ಟು ಸಾಲ 6.5 ಟ್ರಿಲಿಯನ್ ಡಾಲರ್ (-ಠಿ;5771.05 ಲಕ್ಷ ಕೋಟಿ) ಆಗಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಪ್ರಕಾರ, ಫ್ರಾನ್ಸ್​ನ ಸಾಲ ಅದರ ಜಿಡಿಪಿಯ ಶೇ.113.11ರಷ್ಟಿದೆ. ಇತ್ತೀಚೆಗೆ ರಾಜಕೀಯ ಅಸ್ಥಿರತೆಯಲ್ಲಿ ಸಿಲುಕಿರುವ ಫ್ರಾನ್ಸ್ ಆರ್ಥಿಕವಾಗಿಯೂ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕಳೆದ ವರ್ಷ ಫ್ರಾನ್ಸ್​ನ ವಿತ್ತೀಯ ಕೊರತೆಯು 196 ಬಿಲಿಯನ್ ಡಾಲರ್ (-ಠಿ;173.97 ಲಕ್ಷ ಕೋಟಿ) ಆಗಿತ್ತು.

ಭಾರತವೇನೂ ಹೊರತಲ್ಲ...

ಸಾಲದ ವಿಷಯದಲ್ಲಿ ಭಾರತದ ಸ್ಥಿತಿಯೂ ಭಿನ್ನವೇನಿಲ್ಲ. ವಿಶ್ವ ಸಾಲಗಾರ ರಾಷ್ಟ್ರಗಳ ಪೈಕಿ ಭಾರತ 7ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರವು ದೇಶದ ಜಿಡಿಪಿಗಿರುವ ಶೇಕಡ 83ರಷ್ಟು ಸಾಲದ ಅನುಪಾತವನ್ನು 2031ರೊಳಗೆ ಶೇ.50ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ಭಾರತದ ಒಟ್ಟು ಸಾಲ 183.67 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇದರಲ್ಲಿ ಆಂತರಿಕ ಸಾಲ 177.92 ಲಕ್ಷ ಕೋಟಿ ರೂ. ಮತ್ತು ಬಾಹ್ಯ ಸಾಲ 5.75 ಲಕ್ಷ ಕೋಟಿ ರೂ.ಗಳಷ್ಟಿದೆ. 2026ರ ವೇಳೆಗೆ -ಠಿ;196.79 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ರಾಜ್ಯಗಳು ಹೊಂದಿರುವ ಒಟ್ಟು ಸಾಲ 94.4 ಲಕ್ಷ ಕೋಟಿ ರೂ.. ಪಂಜಾಬ್ ಅಂತೂ ತನ್ನ ಜಿಡಿಪಿಯ ಶೇಕಡ 46ರಷ್ಟು ಸಾಲ ಹೊಂದಿದೆ.

ಅತ್ಯಧಿಕ ಸಾಲ ಹೊಂದಿರುವ ಟಾಪ್ 10 ರಾಷ್ಟ್ರಗಳು

ರಾಷ್ಟ್ರ ಸಾಲದ ಪ್ರಮಾಣ (ಟ್ರಿಲಿಯನ್ ಡಾಲರ್​ಗಳಲ್ಲಿ) ಜಿಡಿಪಿಯ ಅನುಪಾತದಲ್ಲಿ ಸಾಲ

  • ಅಮೆರಿಕ 37 ಶೇ.118.8
  • ಚೀನಾ 15 ಶೇ.84.4
  • ಜಪಾನ್ 11.1 ಶೇ.256.3
  • ಬ್ರಿಟನ್ 3.4 ಶೇ.100
  • ಫ್ರಾನ್ಸ್ 3.4 ಶೇ.109.9
  • ಇಟಲಿ 3.1 ಶೇ.134.8%
  • ಭಾರತ 3.0 ಶೇ.83
  • ಜರ್ಮನಿ 2.8 ಶೇ.62.9
  • ಕೆನಡಾ 2.3 ಶೇ.107.5

ಪ್ರಮುಖ ಅಂಶಗಳು

80 ಟ್ರಿಲಿಯನ್ ಡಾಲರ್ 1999ರಲ್ಲಿ ಜಾಗತಿಕ ಸಾಲದ ಪ್ರಮಾಣ. 338 ಟ್ರಿಲಿಯನ್ ಡಾಲರ್ 2025ರಲ್ಲಿ ಜಗತ್ತು ಹೊಂದಿರುವ ಒಟ್ಟು ಸಾಲ. 37 ಟ್ರಿಲಿಯನ್ ಡಾಲರ್ ಅಮೆರಿಕದ ಒಟ್ಟು ಸಾಲದ ಪ್ರಮಾಣ. 183 ಲಕ್ಷ ಕೋಟಿ ರೂ. ಭಾರತದ ಒಟ್ಟು ಸಾಲದ ಗಾತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net