

ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುವ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಈ ಬಾರಿ ದೇಶದ 49 ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಮೂವರು ಕರ್ನಾಟಕದ ಪ್ರತಿಭೆಗಳು. ಇವರು ಹೇಗೆ ಸಾಧನೆ ಮಾಡಿದರು? ರಾಷ್ಟ್ರಪತಿ, ಪ್ರಧಾನಿಯನ್ನು ಭೇಟಿಯಾದ ಅವರ ಅನುಭವ ಹೇಗಿದೆ? ಮಕ್ಕಳ ಮಾತಲ್ಲೇ ಕೇಳಿ...
ನನಗೆ ಮೊದಲಿನಿಂದಲೂ ವಿಜ್ಞಾನ- ಸಂಶೋಧನೆಯಲ್ಲಿ ಆಸಕ್ತಿ ಇತ್ತು. ಹೈಸ್ಕೂಲ್ಗೆ ಬರುತ್ತಿದ್ದಂತೆಯೇ ಆಸಕ್ತಿ ಹೆಚ್ಚಾಯಿತು. 8ನೇ ಕ್ಲಾಸ್ನಲ್ಲಿ ಓದುತ್ತಿದ್ದಾಗ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ನ್ಯಾಷನಲ್ ಚಿಲನ್ ಸೈನ್ಸ್ ಕಾಂಗ್ರೆಸ್ನಲ್ಲಿ ಭಾಗವಹಿಸಲು ನನ್ನ ಶಾಲೆ ಅವಕಾಶ ಮಾಡಿಕೊಟ್ಟಿತು. ಅಲ್ಲಿ ನಾನು ನ್ಯಾಷನಲ್ ಲೆವೆಲ್ಗೆ ಸೆಲೆಕ್ಟ್ ಆದೆ. ಅಲ್ಲಿ ಅನೇಕ ಪ್ರತಿಭಾನ್ವಿತರ ಪರಿಚಯವಾಯ್ತು. ವಿಜ್ಞಾನದ ವಿಷಯದಲ್ಲಿ ಮಹತ್ತರ ಸಾಧನೆ ಮಾಡಲೇಬೇಕು ಎಂದು ಅನಿಸಿದ್ದು ಆಗಲೇ ನನಗೆ. ಇದೇ ಗುರಿಯೊಂದು ಅಧ್ಯಯನ ನಡೆಸಿದ ಫಲವಾಗಿ 9ನೇ ಕ್ಲಾಸ್ನಲ್ಲಿ ರಿಮೋಟ್ ಕಂಟ್ರೋಲ್ಡ್ ರಬ್ಬರ್ ಟ್ಯಾಪಿಂಗ್ ಯಂತ್ರದ ಅನ್ವೇಷಣೆ ಮಾಡಿದೆ. ಈ ಯಂತ್ರ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆಯಿತು. ಅಲ್ಲಿ ಸಿಕ್ಕ ಪ್ರೋತ್ಸಾಹದಿಂದಾಗಿ ಇನ್ನಷ್ಟು ದೊಡ್ಡ ಪ್ರಾಜೆಕ್ಟ್ ಮಾಡಬೇಕು ಎಂಬ ಛಲ ಮೂಡಿತು. 10ನೇ ತರಗತಿಯಲ್ಲಿದ್ದಾಗ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ಆಲೋಚನೆಗಳ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದೆ. ಸೊಳ್ಳೆಗಳಿಂದಾಗಿ ಸಾಯುತ್ತಿರುವವರ ಬಗ್ಗೆ ಸುದ್ದಿಗಳನ್ನು ಓದಿದೆ. ಕರ್ನಾಟಕದಲ್ಲಿಯೂ ಡೆಂಘ ಜ್ವರದಿಂದ ಉಂಟಾದ ಸಾವುನೋವಿನ ಬಗ್ಗೆ ತಿಳಿಯಿತು. ಏಕೆ ಹೀಗೆ ಎಂಬ ಪ್ರಶ್ನೆ ಕೊರೆಯಿತು. ಸೊಳ್ಳೆ ನಿಯಂತ್ರಣಕ್ಕೆ ಸರ್ಕಾರಗಳು ತೆಗೆದುಕೊಂಡಿರುವ ಕ್ರಮಗಳು, ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆನಾಶಕಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿದೆ. ಆದರೂ ಸೊಳ್ಳೆ ನಿಯಂತ್ರಣಕ್ಕೆ ಕಾಯಂ ಪರಿಹಾರ ಕಂಡುಹಿಡಿಯಬೇಕಲ್ಲ ಎಂದು ಯೋಚನೆ ಮಾಡಿದ ಪರಿಣಾಮವೇ ಸೊಳ್ಳೆ ನಿರೋಧಕ ಬಟ್ಟೆ ಅನ್ವೇಷಣೆ. ಪುಣೆಯ ಶ್ರೀನಿವಾಸ ಹೋತ ಹಾಗೂ ಸಂಜೀವ್ ಸರ್ ನನಗೆ ಇದರ ಬಗ್ಗೆ ಮಾರ್ಗದರ್ಶನ ನೀಡಿದರು. ಅಲ್ಲಿಯ ಲ್ಯಾಬ್ ಒಂದರಲ್ಲಿ ನಾನು ಅನ್ವೇಷಣೆ ಮಾಡಿದ ಬಟ್ಟೆಯನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು. ಅಲ್ಲಿ ನನ್ನ ಬಟ್ಟೆ ಪಾಸ್ ಆಯಿತು. ಕಳೆದ ವರ್ಷ ಅಮೆರಿಕದ ಫಿನಿಕ್ಸ್ನಲ್ಲಿ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಇದೇ ಅನ್ವೇಷಣೆೆಗೆ ಪ್ರಶಸ್ತಿ ಸಿಕ್ಕಿದೆ. ಅಲ್ಲಿ 180 ದೇಶಗಳಿಂದ ಸ್ಪರ್ಧಿಗಳು ಬಂದಿದ್ದರು. ಅಲ್ಲಿ ಪ್ರಶಸ್ತಿ ಸಿಕ್ಕಿದ್ದು ನಾನು ಇನ್ನಷ್ಟು ಪ್ರಯೋಗ ಮಾಡಲು ಪ್ರೇರೇಪಿಸಿದೆ.
ಸುನೀತಾ ಪ್ರಭು (ವಿಜ್ಞಾನ ಕ್ಷೇತ್ರದಲ್ಲಿ ಬಹುಮಾನ) 11ನೇ ತರಗತಿ, ಎಎಫ್ಎಲ್ ವಿದ್ಯಾ ಸಂಸ್ಥೆ, ಮಂಗಳೂರು
ಅನ್ವೇಷಣೆ ಏನು?: ಸುನೀತಾ ಅನ್ವೇಷಿಸಿರುವ ಸೊಳ್ಳೆ ನಿರೋಧಕ ಬಟ್ಟೆಯನ್ನು 40 ಬಾರಿ ನೀರಿನಲ್ಲಿ ತೊಳೆದರೂ ಅದರಲ್ಲಿರುವ ಸೊಳ್ಳೆ ನಿರೋಧಕ ಶಕ್ತಿ ಕಡಿಮೆಯಾಗುವುದಿಲ್ಲ. ಇದಕ್ಕೆ ತಗಲುವ ವೆಚ್ಚ ಕೂಡ ಕಡಿಮೆ.