ಕೃಷಿಕನ ಯಶೋಗಾಥೆ|ಅಜವಾನ ಬೆಳೆದು ಯಜಮಾನನಾದ!

VJP-31-Krushi1
Published on

ನೀರಾವರಿ ಕೃಷಿ ಪದ್ಧತಿಯಲ್ಲಿ ಪ್ರಯೋಗ ಮಾಡಿ ಯಶಸ್ವಿಯಾದ ರೈತರು ಅಸಂಖ್ಯಾತರು. ಒಣಬೇಸಾಯ ಪದ್ಧತಿಯಲ್ಲೂ ಸಾವಯವ, ನೈಸರ್ಗಿಕ ಕೃಷಿ ಕೈಗೊಂಡು ಲಾಭ ಗಳಿಸಿದವರಿದ್ದಾರೆ. ಆದರೆ, ಪ್ರತಿ ಬಾರಿಯೂ ವಿಭಿನ್ನ ಬೆಳೆಗಳ ಪ್ರಯೋಗ ಮಾಡುವ ರೈತರು ಅಪರೂಪ. ಇಂತಹ ಸಾಹಸ ಮಾಡಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಪ್ರಗತಿಪರ ರೈತ, ನಿವೃತ್ತ ಶಿಕ್ಷಕ ಸಂಗನಗೌಡ ಬಿರಾದಾರ ಯಶಸ್ವಿಯಾಗಿದ್ದಾರೆ.

ಕಳೆದ ಬಾರಿ ಮಹಾರಾಷ್ಟ್ರದ ಕೃಷಿ ವಿಶ್ವವಿದ್ಯಾಲಯದಿಂದ ಸುಧಾರಿತ ನೂತನ ತಳಿಯ ತೊಗರಿ ಬೆಳೆದು ಬೆರಗು ಮೂಡಿಸಿದ್ದರು. ಈ ವರ್ಷ ಬರದ ಜಿಲ್ಲೆ ವಿಜಯಪುರಕ್ಕೆ ಅಪರೂಪವಾದ ಅಜವಾನ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ. ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಅಜವಾನ ಒಣಬೇಸಾಯಕ್ಕೆ ಸೂಕ್ತವಾಗಿದೆ. ಈಗಾಗಲೇ ಕಲಬುರಗಿ, ತಾಳಿಕೋಟೆ, ಬಸವನಬಾಗೇವಾಡಿ ತಾಲೂಕಿನ ಕೆಲವು ರೈತರು ಅಜವಾನ ಬೆಳೆಯುತ್ತಿದ್ದಾರೆ. ಸದ್ಯ ಸಂಗನಗೌಡರು ತಮ್ಮ ಐದು ಎಕರೆಯಲ್ಲಿ ಅಜವಾನ ಬೆಳೆದಿದ್ದು, ಹೊಲದ ತುಂಬೆಲ್ಲ ನಳನಳಿಸುತ್ತಿದ್ದು, ಕಣ್ಮನ ಸೆಳೆಯುತ್ತಿದೆ.

ನಾಲ್ಕು ತಿಂಗಳ ಬೆಳೆ: ಅಜವಾನ ನಾಲ್ಕು ತಿಂಗಳ ಬೆಳೆಯಾಗಿದ್ದು, ಔಷಧ, ಸುಗಂಧ ದ್ರವ್ಯ ಮತ್ತು ಮಸಾಲೆ ಪದಾರ್ಥಕ್ಕೆ ಬಳಕೆಯಾಗುತ್ತದೆ. ಕರ್ನಲಿನಿಂದ ಬೀಜ ತಂದು ಬಿತ್ತನೆ ಮಾಡಿದ್ದು, ಎಕರೆಗೆ ಒಂದು ಕೆಜಿ ಬೀಜ ಬೇಕಾಗುತ್ತದೆ. ಆಗಸ್ಟ್ ತಿಂಗಳು ಬಿತ್ತನೆಗೆ ಸೂಕ್ತವಾದ ಸಮಯ. ಡಿಸೆಂಬರ್, ಜನವರಿ ವೇಳೆ ಬೆಳೆ ಕಟಾವಿಗೆ ಬರುತ್ತದೆ. ಕೂರಿಗೆ ದಿಂಡಿಗೆ ಸಿಂಬಿಕಟ್ಟಿ ಬೀಜ ಬಿತ್ತಬೇಕು. ಎಕರೆಗೆ 10ರಿಂದ 15 ಸಾವಿರ ರೂ. ಖರ್ಚು ಮಾಡಿದ್ದು ಈ ಬೆಳೆಗೆ ರೋಗ ಬಾಧೆ ತಗಲುವುದು ಕಡಿಮೆ. ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ನಿರೀಕ್ಷೆಗಿಂತ ಚೆನ್ನಾಗಿ ಬೆಳೆ ಬಂದಿದೆ ಎನ್ನುತ್ತಾರೆ ರೈತ ಸಂಗನಗೌಡ.

ಜೇಬು ತುಂಬುವ ನಿರೀಕ್ಷೆ: ಎಕರೆಗೆ ನಾಲ್ಕೈದು ಕ್ವಿಂಟಾಲ್ ಬೆಳೆ ಬರಬಹುದೆಂಬ ನಿರೀಕ್ಷೆ ಸಂಗನಗೌಡರದು. ಕ್ವಿಂಟಾಲ್​ಗೆ 15ರಿಂದ 25 ಸಾವಿರ ರೂ.ವರೆಗೂ ಮಾರಾಟವಾಗಲಿದೆ. ಐದು ಎಕರೆಯಿಂದ 25 ಕ್ವಿಂಟಾಲ್ ಬೆಳೆ ಆಗುವ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಅಂದರೆ 4 ರಿಂದ 5 ಲಕ್ಷ ರೂ. ಸುಲಭವಾಗಿ ಲಾಭ ಬರಲಿದೆ ಎಂದು ಅಂದಾಜಿಸಿದ್ದಾರೆ.

ಕರ್ನಲ್ ಮಾರುಕಟ್ಟೆ: ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಅಜವಾನ ಬೆಳೆಯುವುದು ಆಂಧ್ರಪ್ರದೇಶದಲ್ಲಿ. ಅಲ್ಲಿನ ಕರ್ನಲ್ ನಗರದಲ್ಲಿ ಅಜವಾನದ್ದೇ ಮಾರುಕಟ್ಟೆ ಇದೆ. ಮೊದಲ ಬಾರಿ ಅಜವಾನ ಬೆಳೆದಿದ್ದು, ತಾಳಿಕೋಟೆ ರೈತರ ಜತೆಗೆ ಸೇರಿಕೊಂಡು ಕರ್ನಲ್ ಮಾರುಕಟ್ಟೆಗೆ ಒಯ್ಯುವೆ. ಅಲ್ಲಿಗೆ ಕೊಂಡೊಯ್ಯುವುದನ್ನು ಹೊರತು ಪಡಿಸಿದರೆ ಉಳಿದ ರೀತಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವಂತಹ ಬೆಳೆ ಇದಾಗಿದೆ ಎನ್ನುತ್ತಾರೆ ಸಂಗನಗೌಡರು.

ಬೀಜ ಕೂಡ ಉತ್ಪಾದನೆ: ಅಜವಾನ ಬೀಜಕ್ಕಾಗಿ ರೈತರು ಊರೂರು ಅಲೆದಾಡುವುದನ್ನು ಮನಗಂಡು ಸಂಗನಗೌಡರು ಬೀಜ ಕೂಡ ಬೆಳೆದಿದ್ದಾರೆ. ಬೀಜವನ್ನು ಸಂಸ್ಕರಣೆ ಮಾಡಿ ಶುದ್ಧೀಕರಿಸಿ ಸಿದ್ಧಗೊಳಿಸಿದ್ದಾರೆ. ಅಜವಾನ ಬೆಳೆ ಬೆಳೆಯಲು ಬಯಸುವ ರೈತರು ಕಡಿಮೆ ದರದಲ್ಲಿ ಬೀಜ ಖರೀದಿಸಿ ಬಿತ್ತನೆ ಮಾಡಬಹುದು.

ಹೊಟ್ಟಿಗೂ ಬೇಡಿಕೆ: ಅಜವಾನ ಬೆಳೆ ರಾಶಿ ಮಾಡಿದ ನಂತರ ಉಳಿಯುವ ಹೊಟ್ಟಿಗೂ ಬೇಡಿಕೆ ಇದೆ. ಅಜವಾನದ ಜತೆಗೆ ಹೊಟ್ಟನ್ನು ಕೂಡ ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ. ಹೊಟ್ಟಿನಲ್ಲಿ ಸಣ್ಣ ಸಣ್ಣ ಕಾಳುಗಳು ಉಳಿದುಕೊಳ್ಳುವುದರಿಂದ ವ್ಯಾಪಾರಸ್ಥರು ಖರೀದಿಸುತ್ತಾರೆ. ಹೆಚ್ಚಿನ ಮಾಹಿತಿಗೆ ಸಂರ್ಪಸಿ 99018 79459.

ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವುದು ನನ್ನ ಹವ್ಯಾಸ. ಕಳೆದ ವರ್ಷ ನೂತನ ತಳಿಯ ತೊಗರಿ ಬಿತ್ತನೆ ಮಾಡಿ ಲಾಭ ಗಳಿಸಿದ್ದೆ. ಈ ಬಾರಿ ನಮ್ಮ ಭಾಗದಲ್ಲಿ ಅಪರೂಪವಾದ ಅಜವಾನ ಬೆಳೆದಿದ್ದೇನೆ.

| ಸಂಗನಗೌಡ ಬಿರಾದಾರ, ನಿವೃತ್ತ ಶಿಕ್ಷಕರು ಚಾಂದಕವಟೆ ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net