

|ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಸಾವಿರಾರು ವರ್ಷಗಳ ಹಿಂದೆ ಭೂಲೋಕದಲ್ಲಿ ಬಾಣಾಸುರ ಮತ್ತು ತಾರಕಾಸುರ ಎಂಬ ರಾಕ್ಷಸರು ಜನರಿಗೆ ಅತಿಯಾದ ತೊಂದರೆ ನೀಡುತ್ತಿದ್ದರು. ಅವರಿಬ್ಬರೂ ಮಹಾವಿಷ್ಣುವಿನ ಭಕ್ತರಾಗಿದ್ದರು. ಸಾವಿರಾರು ವರ್ಷ ತಪಸ್ಸು ಮಾಡಿ ಯಾರಿಂದಲೂ ಮರಣ ಬರಬಾರದೆಂಬ ವರ ಪಡೆದಿದ್ದರು. ಆದರೆ, ಚಿಕ್ಕ ಬಾಲಕನಿಂದ ಹತರಾಗುವ ವಿಷಯವನ್ನು ನಾರದರಿಂದ ಈ ಅಸುರರು ತಿಳಿದಿದ್ದರು ಹಾಗೂ ಆ ಬಾಲಕ ಶಿವನ ಪುತ್ರನೇ ಆಗಿರಬೇಕು ಎಂದು ನಿಯಮವಿತ್ತು. ಆ ಸಂದರ್ಭ ರಾಕ್ಷಸರಿಗೆ ಅನುಕೂಲವಾಗಿತ್ತು. ಹೇಗೆಂದರೆ ಶಿವ ದಕ್ಷ ಮಹಾರಾಜನಿಂದ ಅವಮಾನಿತನಾಗಿದ್ದ. ದಾಕ್ಷಾಯಣಿ ತನ್ನ ಪತಿಗೆ ಆದ ಅಪಮಾನದಿಂದ ಆಗ ನಡೆಯುತ್ತಿದ್ದ ಯಜ್ಞಕುಂಡಕ್ಕೆ ಧುಮುಕಿದಳು. ಶಿವನು ಹಿಮಾಲಯಕ್ಕೆ ಹೋಗಿ ಅಲ್ಲಿ ವೈರಾಗ್ಯದಿಂದ ತಪಸ್ಸು ಪ್ರಾರಂಭಿಸಿದನು. ದಾಕ್ಷಾಯಣಿಯು ಮರುಜನ್ಮ ಪಡೆದು ಪರ್ವತರಾಜನ ಪುತ್ರಿ ಪಾರ್ವತಿಯಾಗಿ ಬೆಳೆಯುತ್ತಿದ್ದಳು. ಇಂತಹ ಸಂದರ್ಭದಲ್ಲಿ ಇಬ್ಬರು ರಾಕ್ಷಸರ ಉಪಟಳ ಹೆಚ್ಚಾಗಿತ್ತು. ಆಗ ಜನರೆಲ್ಲ ಮಹಾವಿಷ್ಣುವಿನ ಮೊರೆ ಹೋದರು. ದೇವಾನುದೇವತೆಗಳೆಲ್ಲ ಸೇರಿ ಸಮಾಲೋಚನೆ ನಡೆಸಿ ಈಶ್ವರ ಮತ್ತು ಪಾರ್ವತಿಯರನ್ನು ಹೇಗಾದರೂ ಒಂದುಗೂಡಿಸಿ ಕುಮಾರಸಂಭವವಾಗುವಂತೆ ಮಾಡಲು ರತಿ ಮನ್ಮಥರ ನೆರವನ್ನು ಪಡೆದರು. ಇದರಿಂದಾಗಿ ಸುಬ್ರಹ್ಮಣ್ಯ ಸ್ವಾಮಿಯ ಜನನವಾಯಿತು. ನಂತರ, ಸುಬ್ರಹ್ಮಣ್ಯನು ಆ ರಾಕ್ಷಸರನ್ನು ಸಂಹಾರ ಮಾಡಿದನು.
ಸುಬ್ರಹ್ಮಣ್ಯ ಸ್ವಾಮಿಗೆ ಇನ್ನೊಂದು ಮುಖ್ಯವಾದ ಹೆಸರು ಶರವಣ ಭವ ಎಂದು. ಶ ಎಂದರೆ- ಲಕ್ಷ್ಮೀ ಬೀಜಂ, ರ ಎಂದರೆ- ಅಗ್ನಿಬೀಜ, ವ ಎಂದರೆ ಅಮೃತ ಬೀಜ, ಣ ಎಂದರೆ- ಯಕ್ಷ ಬೀಜ, ಭ ಎಂದರೆ- ಅರುಣ ಬೀಜ, ವ ಎಂದರೆ- ಅಮೃತ ಬೀಜ. ಸುಬ್ರಹ್ಮಣ್ಯನು ಆರು ಮುಖ ಹೊಂದಿರುವುದರಿಂದ ಈತನನ್ನು ಷಣ್ಮುಖ ಎನ್ನುತ್ತಾರೆ. ವಜ್ರ ಖಡ್ಗ, ತ್ರಿಶೂಲ, ಧನುಸ್ಸು, ಚಕ್ರ, ಪಾಶ, ಅಂಕುಶ, ಬಾಣಗಳನ್ನು ಆಯುಧಗಳನ್ನಾಗಿ ಹೊಂದಿ ಅಭಯಹಸ್ತ ತೋರುತ್ತಾ ದರ್ಶನ ಕೊಡುವುದು ವಾಡಿಕೆ. ಆದರೆ, ಷಷ್ಠಿ ದಿನ ಮಾತ್ರ ಸರ್ಪದ ರೂಪದಲ್ಲಿ ದರ್ಶನ ಕೊಡುತ್ತಾನೆ. ಯೋಗ ಸಾಧನೆ ಸಂದರ್ಭದಲ್ಲಿ ಜಾಗೃತಗೊಂಡು ಕುಂಡಲಿನೀ ಶಕ್ತಿ ಸಹಸ್ರಾರವನ್ನು ನೀಡುವವರೆಗೂ ಮಧ್ಯದಲ್ಲಿರುವ ಚಕ್ರಗಳನ್ನು ಸುರುಳಿಯಂತೆ ಸರ್ಪಗಳ ರೂಪದಲ್ಲಿ ಸುತ್ತುತ್ತಾ ವ್ಯಾಪಿಸಿಕೊಂಡಿರುತ್ತದೆ. ಆದ್ದರಿಂದ ಆ ದಿನ ಸುಬ್ರಹ್ಮಣ್ಯನನ್ನು ಸರ್ಪದ ರೂಪದಲ್ಲಿ ಆರಾಧಿಸಲಾಗುತ್ತದೆ. ಸರ್ಪದೋಷ ಮತ್ತು ಕುಜದೋಷ ಇದ್ದವರು ಕಠಿಣವಾದ ಉಪವಾಸ ಇದ್ದು ಪೂಜಿಸುವುದು ಒಳ್ಳೆಯದು. ನೇತ್ರ ತೊಂದರೆ, ಚರ್ಮವ್ಯಾಧಿ, ಸಂತಾನಭಾಗ್ಯ ಇಲ್ಲದೆ ಇರುವುದು, ವಿವಾಹಕ್ಕೆ ಅಡೆತಡೆ ಇರುವವರು ಸುಬ್ರಹ್ಮಣ್ಯನನ್ನು ಪೂಜಿಸಿ ತೊಂದರೆ ನಿವಾರಿಸಿಕೊಳ್ಳಬಹುದು. ಸುಬ್ರಹ್ಮಣ್ಯಸ್ವಾಮಿಗೆ ಬಹಳ ಇಷ್ಟವಾದ ದಿನ ಎಂದರೆ ಪ್ರತಿ ತಿಂಗಳು ಶುಕ್ಲ ಪಕ್ಷದ ಷಷ್ಠಿ ದಿನ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ಮತ್ತು ಪಕ್ಷ ಮಾಸದ ಶುಕ್ಲ ಪಕ್ಷದ ಷಷ್ಠಿ ಅತಿ ಮಹತ್ವವಾದದ್ದು. ಸುಬ್ರಹ್ಮಣ್ಯನಿಗೆ ಅನೇಕ ಹೆಸರುಗಳಿವೆ. ಅವು ಯಾವುವು ಎಂದರೆ- ಷಣ್ಮುಖ, ಷಡಾನನ, ಸ್ಕಂದ, ಶರವಣ ಭವ, ಕುಮಾರಸ್ವಾಮಿ ಹಾಗೂ ಕಾರ್ತಿಕೇಯ.
ದಕ್ಷಿಣ ಕನ್ನಡ ಜಿಲ್ಲೆಯ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಮತ್ತು ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನಗಳಲ್ಲಿ ಡಿ. 9ರಂದು ಷಷ್ಠಿ ಮಹೋತ್ಸವ ನೆರವೇರಲಿದೆ. ಕುಡುಪು ಕ್ಷೇತ್ರದಲ್ಲಿ ಡಿ. 5ರಿಂದ ಶುರುವಾಗಿರುವ ಧಾರ್ವಿುಕ ವಿಧಿವಿಧಾನಗಳು ಜನವರಿ 8ರತನಕ ನಡೆಯಲಿದ್ದು, 9ರಂದು ಷಷ್ಠಿ, ನವಕ ಕಲಶಾಭಿಷೇಕ, ರಥಕಲಶ, ಮಹಾಪೂಜೆ, ಬ್ರಹ್ಮರಥೋತ್ಸವ ಜರುಗಲಿವೆ. ಮಂಜೇಶ್ವರ ಕ್ಷೇತ್ರದಲ್ಲಿ ಡಿ. 4ರಿಂದ ಕಾರ್ಯಕ್ರಮಗಳು ಆರಂಭವಾಗಿದ್ದು 10ರತನಕ ನಡೆಯಲಿವೆ. 9ರಂದು ಷಷ್ಠಿ ಉತ್ಸವ, ಸ್ವರ್ಣಲಾಲ್ಕಿಯಲ್ಲಿ ಬಲಿ ಉತ್ಸವ, ರಥಾರೋಹಣ ನಡೆಯಲಿವೆ.
ಕುಕ್ಕೆಯಲ್ಲಿ ಮಹಾರಥೋತ್ಸವ: ಮಾರ್ಗಶಿರ ಮಾಸದ ಶುದ್ಧ ಷಷ್ಠಿ ಪವಿತ್ರ ದಿನ. ಈ ದಿನ ಕುಕ್ಕೆ ಷಷ್ಠಿಯೆಂದೇ ಜನಜನಿತ. ಈ ದಿನ ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಸಂಭ್ರಮ. ಮಹಾರಥೋತ್ಸವ ಜರುಗುತ್ತದೆ. ಕ್ಷೇತ್ರ ದರ್ಶನದಿಂದ ರೋಗ, ಕಷ್ಟ ನಿವಾರಣೆಯಾದ ನಿದರ್ಶನಗಳಿವೆ. ಸುಬ್ರಹ್ಮಣ್ಯನು ವಾಸುಕಿಯೊಂದಿಗೆ ನೆಲೆನಿಂತು ಭಕ್ತರ ಅಭೀಷ್ಠೆ ಈಡೇರಿಸುವ ದೇವನ ಮಹಾರಥೋತ್ಸವ ಇದು.
ಪುರಾಣದಲ್ಲಿ ಉಲ್ಲೇಖ: ಶ್ರೀ ಸ್ಕಂದ ಪುರಾಣದ ಕೌಮಾರಿಕಾ ಖಂಡ ಹಾಗೂ ಸಹ್ಯಾದ್ರಿ ಖಂಡಗಳಲ್ಲಿ ಕುಕ್ಕೆ ಕ್ಷೇತ್ರದ ಮಹಾತ್ಮೆ ಉಕ್ತವಾಗಿದೆ. ಕೃತಯುಗದಲ್ಲಿ ಮಹಾಮಹಿಮರಾದ ಮುನಿಜನರು ಈ ತೀರ್ಥಸ್ಥಾನದಲ್ಲಿ ತಪಸ್ಸಿದ್ಧಿ ಹೊಂದಿದ್ದರು. ತ್ರೇತಾಯುಗದಲ್ಲಿ ಪರಶುರಾಮ ಇಲ್ಲಿಯ ತೀರ್ಥಸ್ನಾನದಿಂದ ಮಾತೃ ಹತ್ಯಾ ಪಾಪ ಕಳೆದುಕೊಂಡಿದ್ದರು. ದ್ವಾಪರದಲ್ಲಿ ಕೃಷ್ಣ ಕುಮಾರ ಸಾಂಬ ವ್ರಣಪೀಡಿತನಾದಾಗ ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ, ದೇವರನ್ನು ಪೂಜಿಸಿ ರೋಗಮುಕ್ತನಾದ. ಕಲಿಯುಗದಲ್ಲಿ ಕನಕವರ್ಷನೆಂಬ ರಾಜ ಸಂತತಿಗಾಗಿ ಸ್ವಾಮಿಯನ್ನು ಆರಾಧಿಸಿದಾಗ ಚಕ್ರವರ್ತಿಯಾದ ಪುತ್ರನನ್ನು ಪಡೆದನೆಂಬ ಐತಿಹ್ಯವಿದೆ.
ಪ್ರಸಿದ್ಧ ಕ್ಷೇತ್ರಗಳು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಬೆಂಗಳೂರಿನ ಸಮೀಪ ಇರುವ ಘಾಟಿ ಸುಬ್ರಹ್ಮಣ್ಯ, ಕಳಸದ ಸಮೀಪವಿರುವ ಹಳುವಳ್ಳಿ, ತರೀಕೆರೆಯ ಸುಬ್ರಹ್ಮಣ್ಯ ದೇವಾಲಯ, ಬೆಂಗಳೂರಿನ ವಿ.ವಿ. ಪುರಂನ ಸುಬ್ರಹ್ಮಣ್ಯ ದೇವಾಲಯ, ನರಸಿಂಹರಾಜಪುರದ ಸುಬ್ರಹ್ಮಣ್ಯ ದೇವಾಲಯ, ತಮಿಳುನಾಡಿನ ಪಳನಿ... ಈ ಎಲ್ಲ ಕ್ಷೇತ್ರಗಳಲ್ಲಿ ಸುಬ್ರಹ್ಮಣ್ಯ ಷಷ್ಠಿ ದಿನ ಸುಬ್ರಹ್ಮಣ್ಯನ ರಥೋತ್ಸವ ನಡೆಯುತ್ತದೆ.
ಸುಬ್ರಹ್ಮಣ್ಯನಿಗೆ ಪ್ರಿಯವಾದ ದಿನ: ಚಂಪಾಷಷ್ಠಿ ದಿನ ಕುಕ್ಕೆ ಕ್ಷೇತ್ರದಲ್ಲಿ ಸ್ವಾಮಿ ಬ್ರಹ್ಮರಥಾರೋಹಣನಾಗುತ್ತಾನೆ. ಇದಕ್ಕಿಂತ ಮೊದಲು ಉಮಾಮಹೇಶ್ವರ ದೇವರು ಮತ್ತು ಸುಬ್ರಹ್ಮಣ್ಯ ದೇವರು ಒಂದೇ ಪಲ್ಲಕ್ಕಿಯಲ್ಲಿ ಬಂದು, ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರು ಬ್ರಹ್ಮರಥದಲ್ಲಿ ವಿರಾಜಮಾನರಾಗುತ್ತಾರೆ. ದೇವರ ಬ್ರಹ್ಮರಥಾರೋಹಣ ನಂತರ ಸುವರ್ಣವೃಷ್ಟಿ. ಈ ಸಂದರ್ಭ ಗರುಡ ಬಂದು ಮೂರು ಪ್ರದಕ್ಷಿಣೆ ಹಾಕುತ್ತಾನೆ ಎಂಬ ನಂಬಿಕೆ ಇದೆ. ಮೊದಲಿಗೆ ಪಂಚಮಿ ರಥವನ್ನು ಎಳೆದರೆ ನಂತರ ಸ್ವಾಮಿಯ ಚಂಪಾಷಷ್ಠಿ ಬ್ರಹ್ಮರಥೋತ್ಸವ. ಭಕ್ತಾದಿಗಳು ತಮ್ಮ ಹರಕೆಯಂತೆ, ಕಾಳುಮೆಣಸು, ಹಣ, ಏಲಕ್ಕಿ ಇತ್ಯಾದಿ ಧವಸ ಧಾನ್ಯಗಳನ್ನು ರಥಕ್ಕೆ ಎಳೆಯಲಾಗುತ್ತದೆ. ಅನೇಕರು ರಥವನ್ನು ಎಳೆದು ಕೃತಾರ್ಥರಾಗುತ್ತಾರೆ.