

ರಾಜ್ಯದಲ್ಲಿ ಕರೊನಾ ಹಾವಳಿಯಿಂದ ವಿಶ್ವವಿದ್ಯಾಲಯಗಳ ತರಗತಿಗಳು ಆರು ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದವು. ಸರ್ಕಾರದ ಆದೇಶದ ಮೇರೆಗೆ ಇತ್ತೀಚೆಗೆ ವಿಶ್ವವಿದ್ಯಾಲಯದ ತರಗತಿಗಳು ಮರು ಆರಂಭವಾಗಿವೆ ಎಂಬುದು ಸಮಾಧಾನಕರ ಸಂಗತಿ. ಆದರೆ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರಿಗೆ ಜೂನ್ ತಿಂಗಳಿಂದ ಇಲ್ಲಿಯವರೆಗೆ ಸಂಬಳ ನೀಡಿಲ್ಲ. ಇದರಿಂದ ಅದೆಷ್ಟೋ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ದೈನಂದಿನ ಖರ್ಚಿಗೆ ಪರದಾಡುವ ಸ್ಥಿತಿ ಬಂದೊದಗಿದೆ.
ಸರ್ಕಾರ ಈಗಾಗಲೇ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 5 ತಿಂಗಳ ವೇತನವನ್ನು ಬಿಡುಗಡೆಗೊಳಿಸಿದೆ. ಆದರೆ ವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಪ್ರಾಧ್ಯಾಪಕರಷ್ಟೇ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ದನಿ ಎತ್ತುತ್ತಿಲ್ಲ. ಈ ನಿರ್ಲಕ್ಷ್ಯ ಧೋರಣೆ ಏಕೆ? ತಾರತಮ್ಯ ಏಕೆ? ಪದವಿ ಕಾಲೇಜು ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡಿದಂತೆ ವಿಶ್ವವಿದ್ಯಾಲಯಗಳ ಅತಿಥಿ ಉಪನ್ಯಾಸಕರ ವೇತನವನ್ನೂ ಶೀಘ್ರದಲ್ಲೇ ಬಿಡುಗಡೆ ಮಾಡಬೇಕು. ಉನ್ನತ ಶಿಕ್ಷಣ ಸಚಿವರು ಈ ಬಗ್ಗೆ ಗಮನ ಹರಿಸಬೇಕು.
| ಡಾ.ರಾಜಕುಮಾರ್ ಎಂ. ದಣ್ಣೂರ ಕಲಬುರಗಿ