ಕಾಯಕಲ್ಪಕ್ಕೆ ಕಾದಿವೆ ಕಿತ್ತೂರಿನ ಸ್ಮಾರಕಗಳು

KITTURU
Published on

‘ಕ್ರಾಂತಿಯ ನೆಲ’ದಲ್ಲಿ ಬ್ರಿಟಿಷರನ್ನು ಸದೆಬಡಿದು ವಿಜಯಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ನಮ್ಮನಾಡಿನ ಸ್ವಾಭಿಮಾನದ ದ್ಯೋತಕ. ದೇಶದ ಸ್ವಾತಂತ್ರ್ಯ ಮತ್ತು ನೆಲದ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಹಿರಿಮೆ ಅವಳದು. ಆದರೆ, ಚೆನ್ನಮ್ಮಳ ಇತಿಹಾಸ ಸಾರಬೇಕಿದ್ದ ಸ್ಮಾರಕಗಳು ಇಂದು ದುಸ್ಥಿತಿಗೆ ತಲುಪಿವೆ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು, ಇತಿಹಾಸಪ್ರಿಯರು ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಅರಿಯಲಾಗದೆ ನಿರಾಸೆಯಿಂದ ಮರಳುವ ಸ್ಥಿತಿ ಇದೆ.

‘ಬಾವಿ’ಯೋ ಕಸದ ತೊಟ್ಟಿಯೋ?

1824ರಲ್ಲಿ ಸಣ್ಣ ಸೈನ್ಯವನ್ನೇ ಕಟ್ಟಿಕೊಂಡು, ಬಲಾಢ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಗೆಲುವಿನ ನಗೆ ಬೀರಿದ ಧೀರಮಹಿಳೆ ಚನ್ನಮ್ಮ. ಆದರೆ, ನಂತರದ ದಿನಗಳಲ್ಲಿ ಕಿತ್ತೂರು ಸಂಸ್ಥಾನದಲ್ಲೇ ಇದ್ದ ಕೆಲವರ ಕುತಂತ್ರದಿಂದ ಬ್ರಿಟಿಷರಿಗೆ ಶರಣಾದಳು. 1824ರ ಡಿಸೆಂಬರ್ ತಿಂಗಳಲ್ಲಿ ಬ್ರಿಟಿಷರು ಬೈಲಹೊಂಗಲಕ್ಕೆ ಕರೆತಂದು ಬಂಧನದಲ್ಲಿಟ್ಟಿದ್ದರು.

1829ರ ಫೆ. 2ರಂದು ಇದೇ ಪವಿತ್ರ ಭೂಮಿಯಲ್ಲಿ ಆಕೆ ದೇಹತ್ಯಾಗ ಮಾಡಿದಳು. ಗೃಹಬಂಧನದಲ್ಲಿದ್ದಾಗ ಚನ್ನಮ್ಮಪೂಜೆ ಮತ್ತು ಸ್ನಾನಕ್ಕಾಗಿ ನೀರು ಬಳಸುತ್ತಿದ್ದ ಬಾವಿ ಇಂದು ಕಲುಷಿತವಾಗಿದೆ. ಜನರು ತ್ಯಾಜ್ಯ ಪದಾರ್ಥಗಳನ್ನು ಬೇಕಾಬಿಟ್ಟಿಯಾಗಿ ಎಸೆದ ಪರಿಣಾಮ ಅದು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ದುರ್ನಾತ ಬೀರುತ್ತಿರುವ ಕಾರಣ ಯಾರೂ ಅತ್ತ ಸುಳಿಯುತ್ತಿಲ್ಲ. ಈ ಸ್ಮಾರಕಕ್ಕೆ ಹೋಗಲು ಉತ್ತಮ ರಸ್ತೆಯೂ ಇಲ್ಲ ಎನ್ನುತ್ತಾರೆ ಕಿತ್ತೂರು ರಾಣಿ ಚನ್ನಮ್ಮ ಸ್ಮರಣೋತ್ಸವ ಸಮಿತಿ ಮಾಜಿ ಅಧ್ಯಕ್ಷ ಜಿ.ಬಿ.ತುರಮರಿ.

ಕೋಟೆಯ ಅವಸಾನ: ಕಿತ್ತೂರಿನಲ್ಲಿ 23 ಎಕರೆ ವಿಶಾಲವಾದ ಪ್ರದೇಶದಲ್ಲಿ ಕಟ್ಟಲಾಗಿದ್ದ ಕೋಟೆ ಇಂದು ಇದ್ದೂ ಇಲ್ಲದಂತಿದೆ. ದರ್ಬಾರ್ ಹಾಲ್, ಮದ್ದುಗುಂಡುಗಳ ಸಂಗ್ರಹಾಗಾರ, ಅರಮನೆ ಮುಖ್ಯದ್ವಾರ, ಅತಿಥಿ ಕೋಣೆಗಳು, ಭೋಜನಾಲಯ, ಸ್ನಾನಗೃಹಗಳು ಅಂದಗೆಟ್ಟಿವೆ. ಕೋಟೆಯ ಅವಶೇಷಗಳು ಕಳಚಿ ಬೀಳುತ್ತ ಸಾಗಿವೆ. ಕನಿಷ್ಠ ಮೂಲಸೌಕರ್ಯಗಳೂ ಇಲ್ಲದ ಕಾರಣ ಪ್ರವಾಸಿಗರ ಪರದಾಟ ಹೇಳತೀರದಾಗಿದೆ.

ಕೋಟೆ ಸುತ್ತಲಿನ ಕಂದಕವೂ ಮುಚ್ಚಿ ಹೋಗಿದೆ. ಅದರಲ್ಲಿನ ಹೂಳೆತ್ತಿ ಆಕರ್ಷಕವಾಗಿಸಬೇಕು. ಹಾಳಾಗಿರುವ ಪರಿಕರಗಳನ್ನು ದುರಸ್ತಿಗೊಳಿಸಿ ನಿರಂತರವಾಗಿ ಧ್ವನಿ ಮತ್ತು ಬೆಳಕು ಪ್ರದರ್ಶನ ಆಯೋಜಿಸಬೇಕು. ಕಿತ್ತೂರು ಸಂಸ್ಥಾನಕ್ಕೆ ಸೇರಿದ ಸ್ಥಳಗಳ ಅಭಿವೃದ್ಧಿಗೆ ಸರ್ಕಾರ ರಚಿಸಿದ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂಬುದು ಸಾಹಿತಿ ಯ.ರು.ಪಾಟೀಲ ಅವರ ಅಭಿಮತ. ಇದೇ ಕೋಟೆ ಆವರಣದಲ್ಲೊಂದು ವಸ್ತು ಸಂಗ್ರಹಾಲಯವಿದೆ. ಶಾಸನಗಳು, ವೀರಗಲ್ಲುಗಳು, ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಸೈನಿಕರು ಬಳಸಿದ್ದ ಸಾಮಗ್ರಿಗಳು ಮತ್ತು ಧರಿಸಿದ್ದ ಸಮವಸ್ತ್ರಗಳು ಅಲ್ಲಿವೆ.

ತವರೂರಿನ ಕಡೆಗಣನೆ: ಬೆಳಗಾವಿ ತಾಲೂಕಿನ ಕಾಕತಿ ಚೆನ್ನಮ್ಮಳ ತವರೂರು. ಅಲ್ಲಿ ಚೆನ್ನಮ್ಮ ವಾಸಿಸುತ್ತಿದ್ದ ಮನೆ ಕುಸಿದು ಬಿದ್ದಿದೆ. ಆ ಜಾಗದಲ್ಲೇ ವಸ್ತು ಸಂಗ್ರಹಾಲಯ ನಿರ್ವಿುಸಿ, ಚನ್ನಮ್ಮ ಬಳಸುತ್ತಿದ್ದ ಖಡ್ಗ, ಕತ್ತಿ ಹಾಗೂ ಯುದ್ಧ ಸಾಮಗ್ರಿಗಳನ್ನು ಪ್ರದರ್ಶಿಸಬೇಕು. ಗುಡ್ಡದಲ್ಲಿರುವ ಕೋಟೆ ಸಂರಕ್ಷಿಸಿ ಅಲ್ಲಿ ತೋಟ ನಿರ್ವಿುಸಬೇಕು ಎಂದು ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಸಮಿತಿ ಅಧ್ಯಕ್ಷ ಡಾ. ಎಸ್.ಡಿ. ಪಾಟೀಲ ಅಳಲು ತೋಡಿಕೊಳ್ಳುತ್ತಾರೆ.

ಸಮಾಧಿ ಸ್ಥಳದ ಅಭಿವೃದ್ಧಿ: ಬೈಲಹೊಂಗಲದಲ್ಲಿ ಚನ್ನಮ್ಮಳ ಸಮಾಧಿ ಇದೆ. ಅದನ್ನು ರಾಷ್ಟ್ರೀಯ ಸ್ಮಾರಕವಾಗಿ ಸರ್ಕಾರ ಘೊಷಿಸಬೇಕೆಂದು ಜನರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದಾರೆ. ಹೋರಾಟಗಾರರ ಒತ್ತಡಕ್ಕೆ ಮಣಿದ ಸರ್ಕಾರವೀಗ, 2 ಕೋಟಿ ರೂ. ವೆಚ್ಚದಲ್ಲಿ ಚನ್ನಮ್ಮಳ ಸಮಾಧಿ ಸ್ಥಳದ ಅಭಿವೃದ್ಧಿಗೆ ಮುಂದಾಗಿದೆ. ಆವರಣ ಗೋಡೆ, ಉದ್ಯಾನ ನಿರ್ಮಾಣ ಮೊದಲಾದ ಕಾಮಗಾರಿಗಳು ಭರದಿಂದ ಸಾಗಿವೆ. ಆದರೆ, ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದ ಕೆಲಸಗಳಾಗದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಕಿತ್ತೂರು ಸಂಸ್ಥಾನ ಹಾಗೂ ಬೆಳಗಾವಿಯ ಪರಂಪರೆ ಕುರಿತು ಸಂಶೋಧನೆ ಕೈಗೊಳ್ಳಬೇಕು. ಚನ್ನಮ್ಮನ ಇತಿಹಾಸ ಸಮಗ್ರ ಸಾರುವ ಸಾಹಿತ್ಯ ಪ್ರಕಟಿಸಬೇಕು. ಸಂಸ್ಥಾನಕ್ಕೆ ಸೇರಿದ ಎಲ್ಲ ಸ್ಮಾರಕಗಳನ್ನು ರಕ್ಷಿಸಬೇಕು. ಇದೇ ನಾವು ವೀರರಾಣಿಗೆ ನೀಡುವ ನಿಜವಾದ ಗೌರವ. | ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಲ್ಮಠ, ಚನ್ನಮ್ಮನ ಕಿತ್ತೂರು

| ಇಮಾಮಹುಸೇನ್ ಗೂಡುನವರ ಬೆಳಗಾವಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net