

ನಾವು ಸಮಾನತೆಯ ಬಗ್ಗೆ ಮಾತನಾಡುವಾಗ ಚರ್ಚೆ ಹೆಣ್ಣು ಮಕ್ಕಳು ಹಾಕುವ ಬಟ್ಟೆ ಬರೆ, ನಡವಳಿಕೆಗಳ ಬಗ್ಗೆ ಅಲ್ಲವೇ ಅಲ್ಲ. ಅದು ವಾದವೇ ಅಲ್ಲ. ಸಮಾನತೆ ಶತಶತಮಾನಗಳಿಂದ ಹೆಣ್ಣನ್ನು ಎರಡನೇ ದರ್ಜೆ ನಾಗರೀಕಳಂತೆ ಕಾಣುವ ಧೋರಣೆಯ ಬಗ್ಗೆ. ಯಾವದನ್ನಾದರೂ ತಪ್ಪು ಎನ್ನುವುದಾದರೆ, ವಿರೋಧಿಸುವುದಾದರೆ ಅದು ತಪ್ಪು ಎನ್ನುವ ಕಾರಣಕ್ಕೆ ವಿರೋಧಿಸಬೇಕೇ ಹೊರತು ಆ ತಪ್ಪನ್ನು ಮಾಡುತ್ತಿರುವುದು ಹೆಣ್ಣೇ ಗಂಡೇ ಎಂಬ ಆಧಾರದ ಮೇಲಲ್ಲ. ಧೂಮಪಾನ ಮದ್ಯಪಾನ ಅಥವಾ ಉಡುಗೆ, ತೊಡುಗೆ, ಕೆಟ್ಟ ನಡವಳಿಕೆ ಹೆಂಗಸು ಮಾಡಲೀ ಅಥವಾ ಗಂಡಸು ಮಾಡಲಿ ಅದು ಕೆಟ್ಟದ್ದು. ಹಾಗೆಯೇ ಪ್ರತಿಯೊಂದೂ.
ದುರದೃಷ್ಟವಶಾತ್ ನಮ್ಮ ದೃಷ್ಟಿಕೋನವೇ ತಲತಲಾಂತರಗಳಿಂದ ತಿರುಚಿಕೊಂಡು ಹತ್ತು ಹಲವು ಸ್ಟೀರಿಯೋಟೈಪುಗಳಿಗೆ ಸಿಲುಕಿ ಏರಬೇಕಾದ ಮಾನಸಿಕ ಎತ್ತರವನ್ನು ಏರಲಾರದೇ ಹೋಗುತ್ತಿದ್ದೇವೆ. ಯಾವುದು ಹೆಣ್ಣು ಮಕ್ಕಳ ಸಮಸ್ಯೆ? ಯಾವುದು ಸಾಮಾಜಿಕವಾದದ್ದು? ಇವುಗಳ ವಿಂಗಡಣೆಯನ್ನು ಸರಿಯಾಗಿ ಮಾಡಲಾಗದೇ ಎಮ್ ಜಿ ರೋಡಿನಲ್ಲಿ ಹೆಣ್ಣು ಮಕ್ಕಳು ಹೇಗಿರುತ್ತಾರೆ ಎಂಬಂಥ ಮಾತುಗಳಿಗೆ ಸ್ತ್ರೀ ವಾದವನ್ನು ಸೀಮಿತಗೊಳಿಸಿಬಿಡುತ್ತಿದ್ದೇವೆ.
‘ಐ ಆಮ್ ಜನರೇಷನ್ ಈಕ್ವಾಲಿಟಿ’ ಎಂಬ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ವರ್ಷದ ವಿಷಯವನ್ನು ಚಿಂತನೆಗೆ ಒಳಪಡಿಸಬೇಕಾದ್ದು ಇಂಥ ಕಡೆಗಳಲ್ಲಿಯೇ. ನಮ್ಮ ಸಮಾಜ ಈ ಇಪ್ಪತ್ತೊಂದನೆಯ ಶತಮಾನದಲ್ಲೂ ಇವೇ ಸ್ಟೀರಿಯೋಟೈಪುಗಳಲ್ಲಿ ನರಳುತ್ತಿವೆಯಲ್ಲಾ ಎಂದು ಯೋಚಿಸಿದರೆ ಖೇದವಾಗುತ್ತದೆ. ನಾವು ಧರಿಸುವ ಉಡುಪಿನ ಮೇಲೆ, ನೋಡಲು ನಾವು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ನಮ್ಮ ಒಳ್ಳೆಯತನ/ಕೆಟ್ಟತನ ಜನ ಗುರುತಿಸುವಂತೆ, ಜಡ್ಜ್ಮೆಂಟಲ್ ಆಗುವಂತೆ ಮಾಡಲು ಧಾರಾವಾಹಿ ಜಗತ್ತು ಕೂಡಾ ಅಂತರ್ಗಾಮಿಯಾಗಿ ಸಹಕರಿಸುತ್ತಿದೆ ಎನ್ನುವುದು ವಿಚಿತ್ರವೆನಿಸಿದರೂ ಸತ್ಯ.
ಗಮನಿಸಿ. ಪ್ರತೀ ಕಥೆಯಲ್ಲೂ ಒಬ್ಬ ನಾಯಕಿ ಮತ್ತು ಒಬ್ಬ ಖಳನಾಯಕಿಯಂತೂ ಇದ್ದೇ ಇರುತ್ತಾರೆ. ನಾಯಕಿ ಸರಳವಾದ ಉಡುಗೆ ತೊಡುಗೆಗಳನ್ನು ಧರಿಸುತ್ತಾಳೆ. ಸೀರೆಯನ್ನೋ, ಚೂಡಿದಾರ್ ಅನ್ನೂ ಒಪ್ಪವಾಗಿ ಧರಿಸುತ್ತಾಳೆ. ಆದರೆ ಗಮನಿಸಿ. ಖಳ ನಾಯಕಿ ಎಲ್ಲಾ ಬಗೆಯ ಆಧುನಿಕ ವಿನ್ಯಾಸಗಳ ವಸ್ತ್ರಗಳನ್ನು ಧರಿಸುತ್ತಾಳೆ. ನಾಯಕಿಗಿಂತ ಹೆಚ್ಚು ಮೇಕಪ್ ಮಾಡಿಕೊಂಡಿರುತ್ತಾಳೆ. ಒಂದಲ್ಲಾ, ಎರಡಲ್ಲಾ ಕಳೆದ ಕೆಲವು ವರ್ಷಗಳಿಂದ ಪ್ರಸಾರವಾಗುತ್ತಿರುವ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ಇದು ಹೀಗೆಯೇ.
ಮತ್ತೆ ಕೆಲವು ಧಾರಾವಾಹಿಗಳಲ್ಲಿ ಎರಡನೆಯ ನಾಯಕಿ ಇರುತ್ತಾಳೆ. ಅವಳು ಒಳ್ಳೆಯವಳು. ಆದರೂ ಆಧುನಿಕವಾಗಿ ಉಡುಗೆ ತೊಡುಗೆಗಳನ್ನು ಧರಿಸುತ್ತಾಳೆ. ಆದರೆ ಆಕೆ ನಾಯಕಿಯಂತೆ ಮನೆಯ ಸಕಲ ಸಮಸ್ಯೆಗಳಿಗೂ ಪರಿಹಾರ ಹುಡುಕುವುದಿಲ್ಲ. ಬದಲಿಗೆ ಆಕೆ ಬಹಳಷ್ಟು ವಿಷಯಗಳಿಗೆ ನಾಯಕಿಯ ಮೇಲೆ ಅವಲಂಬಿತಳಾಗಿರುತ್ತಾಳೆ. ಅವಳು ತಪ್ಪು ಮಾಡುತ್ತಾಳೆ. ಆದರೆ ಅವಳಿಗೆ ಅದು ತಪ್ಪು ಎಂದು ಗೊತ್ತಿರುವುದಿಲ್ಲ ಎಂಬ ಸಮಜಾಯಿಷಿ ಕೊಡುತ್ತದೆ ಧಾರಾವಾಹಿ. ಅವಳು ಅನ್ಯಾಯವನ್ನು ಪ್ರತಿಭಟಿಸುತ್ತಾಳೆ. ಆದರೆ ಅದನ್ನು ಹೇಗೆ ಮಾಡಬೇಕೆಂದು ಹೇಳಿಕೊಡುವವಳು ನಾಯಕಿ.
ಅಂದರೆ ಒಬ್ಬ ಹೆಣ್ಣು ಒಳ್ಳೆಯವಳಾಗಿದ್ದರೆ ಅಂದರೆ, ತನಗಾಗಿ ಏನನ್ನೂ ಬಯಸದೇ ಸದಾ ಇನ್ನೊಬ್ಬರಿಗಾಗಿ ತ್ಯಾಗ ಮಾಡುತ್ತಾ, ಮತ್ತೊಬ್ಬರಿಗಾಗಿ ತನ್ನ ಸುಖ ಸಂತೋಷಗಳನ್ನು ನಿರ್ಲಕ್ಷಿಸುತ್ತಾ ಇರುವವಳಾದರೆ (ಒಳ್ಳೆಯತನದ ಈ ವ್ಯಾಖ್ಯಾನವೇ ದೋಷಪೂರ್ಣ) ಅವಳು ಸರಳವಾದ ಬಟ್ಟೆಗಳನ್ನು ತೊಟ್ಟು, ಮುಖಕ್ಕೆ ಏನೂ ಮೇಕಪ್ ಮಾಡಿಕೊಳ್ಳದೇ ಇರುತ್ತಾಳೆ. ಅವಳು ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಧರಿಸಿದ್ದರೆ, ಮೇಕಪ್ ಮಾಡಿಕೊಂಡಿದ್ದರೆ, ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದರೆ, ಅವಳು ಕೆಟ್ಟವಳಾಗಿರುತ್ತಾಳೆ. ಅಥವಾ ಮನೆ, ಸಂಸಾರ, ಅಡುಗೆ ಇತ್ಯಾದಿಗಳ ಬಗ್ಗೆ ಏನೂ ಗೊತ್ತಿಲ್ಲದವಳಾಗಿರುತ್ತಾಳೆ. ದಿನಕ್ಕೆ ಐವತ್ತು ಬಾರಿ, ಐದಾರು ಗಂಟೆಗಳ ಕಾಲ ಸತತವಾಗಿ ಇದನ್ನೇ ತೋರಿಸಲಾಗುತ್ತದೆ. ಇದನ್ನೇ ಪ್ರತೀ ಮನೆಯೊಳಗೂ ಊಡಲಾಗುತ್ತದೆ.
ಹೀಗೆ ಟ್ರೆಂಡೀಯಾಗಿ ಬಟ್ಟೆಗಳನ್ನು ಹಾಕಿಕೊಳ್ಳುವವರು ಒಳ್ಳೆಯ ಸೊಸೆಯಾಗಲಾರಳು ಎಂಬ ಸಂದೇಶವನ್ನು ಕಿರುತೆರೆ ನಮಗರಿವಿಲ್ಲದೆಯೇ ಕೊಡುತ್ತಾ ಬರುತ್ತಿದೆ. ಆದರೆ ಒಂದು ವಾರ ಧಾರಾವಾಹಿಗಳನ್ನೆಲ್ಲಾ ಮರೆತು ಹೊರಗಿನ ಜಗತ್ತನ್ನು ನೋಡಿದರೆ ಏನನ್ನಿಸುತ್ತದೆ? ಹೊರಗೂ ದುಡಿದು, ಒಳಗೂ ದುಡಿದು ಸಂಸಾರವನ್ನು ನಿಭಾಯಿಸುತ್ತಿರುವ ಲಕ್ಷ ಲಕ್ಷ ಹೆಣ್ಣು ಮಕ್ಕಳು ಆಫೀಸಿಗೆ ವೆಸ್ಟರ್ನ್ ಫಾರ್ಮಲ್ಸ್ ಮಾತ್ರ ಹಾಕಿಕೊಂಡು ಹೋಗುತ್ತಾರೆ. ಸದಾ ಮಮತಾಮಯೀ ತಾಯಿಯ ಪಾತ್ರ ಮಾಡುವ ಅನೇಕರು ನಮ್ಮ ನಿಜ ಜೀವನಗಳಲ್ಲಿ ಜೀನ್ಸ್ ಮತ್ತು ಮೆಲೊಂದು ಟಿ ಶರ್ಟ್ ಹಾಕಿಕೊಂಡು ಅರ್ಧ ಜೀವಮಾನ ಕಳೆಯುತ್ತೇವೆ. ನನ್ನ ಮಕ್ಕಳ ಬೇಸಿಗೆ ಶಿಬಿರಗಳಿಗೆ ಹೋಗಿ ನೋಡಿದರೆ ಹನ್ನೆರೆಡು ಹದಿಮೂರು ವರ್ಷದ ಮಕ್ಕಳು ಚಿಕ್ಕ ಚಿಕ್ಕ ಲಂಗ, ಶಾರ್ಟ್ಸ್ ಹಾಕಿಕೊಂಡು ಬಂದಿರುತ್ತಾರೆ. ಅವರೆಲ್ಲಾ ಹೆಚ್ಚೂ ಕಡಿಮೆ ಎಲ್ಲರೂ ತಮ್ಮನ್ನು ತಾವು ಬಹಳ ಸಭ್ಯವಾಗಿ ಸಮಾಜದಲ್ಲಿ ಗುರುತಿಸಿಕೊಂಡವರು. ಎಲ್ಲರೂ ತಂತಮ್ಮ ಜವಾಬ್ದಾರಿಗಳನ್ನು ಅರಿತು ಮನೆ, ಮಕ್ಕಳನ್ನು ನಿಭಾಯಿಸಿ ಹಾಗೆಯೇ ಹೊರ ಪ್ರಪಂಚದ ಜೊತೆಗೂ ನಮ್ಮ ಸಾಂಗತ್ಯವನ್ನು ರೂಢಿಸಿಕೊಂಡವರು. ನಮ್ಮೆಲ್ಲಾ ಕುಟುಂಬ ವರ್ಗ ಅಂದರೆ ಹೀಗೆ ಮನೆಯಿಂದ ಹೊರಗೆ ದುಡಿಯುವ, ಆಧುನಿಕ ವಸ್ತ್ರಗಳನ್ನು ಧರಿಸುವವರ ಗಂಡಂದಿರು, ತಂದೆ ತಾಯಂದಿರು, ಅತ್ತೆ ಮಾವಂದಿರು, ಅಣ್ಣ ತಮ್ಮಂದಿರು ಎಲ್ಲರೂ ತಂತಮ್ಮ ಮನೆಯ ಹೆಣ್ಣು ಮಕ್ಕಳ ಕಾಳಜಿ ಮಾಡುವವರೇ. ಅವರೆಲ್ಲಾ ತಮ್ಮ ಮನೆಯ ಹೆಣ್ಣು ಮಕ್ಕಳು ಹಾಕಿಕೊಳ್ಳುವ ಬಟ್ಟೆಗಳ ದೆಸೆಯಿಂದ ಅವರ ಸಂಸ್ಕಾರವನ್ನು ಅಳೆಯುವುದಿಲ್ಲ. ಅಂದಮೇಲೆ ಹೊರಗಿನಿಂದ ಸುಮ್ಮನೆ ‘ನೋಡುವ’ ನಮಗೇಕೆ ಆ ಉಸಾಬರಿ?
ಮಹಿಳಾ ದಿನಾಚರಣೆ ಆಚರಿಸಿಕೊಂಡ ಈ ಮಾಸದಲ್ಲಿ, ‘ನಾನು ಪೀಳಿಗೆಗಳ ಸಮಾನತೆಯ ಪ್ರತಿನಿಧಿ’ ಎಂಬ ಧ್ಯೇಯ ವಾಕ್ಯವನ್ನು ನಿಜವಾಗಿಸೋಣ. ಅದು ಗಂಡಾಗಲೀ ಅಥವಾ ಹೆಣ್ಣಾಗಲಿ. ಸಮಾನರಾಗೋಣ. ಕಿರುತೆರೆ ನಮ್ಮ ಕೈ ಜೋಡಿಸಲಿ ಎಂಬ ಆಶಾವಾದ ಇಟ್ಟುಕೊಳ್ಳೋಣ. ಆದರೆ ಹಾಗಾಗದಿದ್ದಲ್ಲಿ ನಮ್ಮ ಭಾವನೆಗಳನ್ನು ಬದಲಿಸಿಕೊಳ್ಳುವ ಮೂಲಕ ಕಿರುತೆರೆಯನ್ನು ಬದಲಿಸುವ ಹಾದಿ ಹುಡುಕೋಣ.