

ಹಿಂದೊಮ್ಮೆ ಪಿಂಚಣಿದಾರರ ಸ್ವರ್ಗ ಎಂಬ ಹೆಸರು ಪಡೆದಿದ್ದ ಬೆಂಗಳೂರೀಗ ಸಂಚಾರ ದಟ್ಟಣೆ, ಕಸ ಸಮಸ್ಯೆ, ಧೂಳಿನ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಹೊರತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಗಾರ್ಬೆಜ್ ಸಿಟಿ, ಟ್ರಾಫಿಕ್ ಸಿಟಿ ಎಂಬ ಕಳಂಕದಿಂದ ಬೆಂಗಳೂರನ್ನು ಮುಕ್ತಗೊಳಿಸಿ ಬ್ರಾ್ಯಂಡ್ ಬೆಂಗಳೂರು ವೃದ್ಧಿಗೆ ಬಜೆಟ್ನಲ್ಲಿ ಸುಮಾರು 10 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದು ಹೊಸ ಆಶಾಭಾವನೆ ಮೂಡಿಸಿದೆ.
ಕಸದ ಸಮಸ್ಯೆಯನ್ನು ನೀಗಿಸಲು ‘ಶುಭ್ರ ಬೆಂಗಳೂರು’ ಯೋಜನೆ ರೂಪಿಸಿ 999 ಕೋಟಿ ರೂ. ಮೀಸಲಿಟ್ಟಿದ್ದು, ಇದೆಲ್ಲ ಯೋಜನೆಗಳು ಜಾರಿಯಾದರೆ ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಉತ್ತೇಜನ ಸಿಗುವ ಮುನ್ಸೂಚನೆ ನೀಡಿದೆ. ಬಜೆಟ್ನಲ್ಲಿ ಶುಭ್ರ ಬೆಂಗಳೂರು ಕುರಿತು ಘೋಷಿಸಿದ ಮುಖ್ಯಮಂತ್ರಿಗಳು, ‘ಈ ವರ್ಷವೇ ಶುಭ್ರ ಬೆಂಗಳೂರು ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಘನತ್ಯಾಜ್ಯ ನಿರ್ವಹಣೆಯಲ್ಲಿ ಬೆಂಗಳೂರು ನಂಬರ್ ಒನ್ ನಗರವಾಗಲಿದೆ’ ಎಂದಿದ್ದಾರೆ. ರಾಜ್ಯದಲ್ಲಿ ಆಗಿಂದಾಗ್ಗೆ ಬಂದ ಸರ್ಕಾರಗಳು, ಬಿಬಿಎಂಪಿಯಲ್ಲಿ ಚುಕ್ಕಾಣಿ ಹಿಡಿದ ಮೇಯರ್ಗಳು ಕಸದ ಸಮಸ್ಯೆ ನಿವಾರಿಸಲು ತಂತಮ್ಮ ಹಂತದಲ್ಲಿ ಪ್ರಯತ್ನ ನಡೆಸಿದ್ದಾರೆ. ಆದರೆ ಕಸ ಉತ್ಪಾದನೆ ಮೂಲದಿಂದ ಆರಂಭಿಸಿ ಅಂತಿಮವಾಗಿ ವಿಲೇವಾರಿ ಆಗುವವರೆಗೂ ಸಮಗ್ರ ಯೋಜನೆ ರೂಪಿಸಲಾಗಿಲ್ಲ. ಮೂಲದಲ್ಲೇ ಕಸ ವಿಂಗಡಣೆಗೆ ಅನೇಕ ವರ್ಷದಿಂದ ಪ್ರಯತ್ನಿಸಿ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಅದು ಜನರ ಮನಸ್ಸಿನಲ್ಲಿ ಇಳಿಯಲು ಸಾಧ್ಯವಾಗಿರಲಿಲ್ಲ.
ಜನರಲ್ಲಿ ಜಾಗೃತಿ ಕೊರತೆ ಒಂದೆಡೆಯಾದರೆ, ಮೂಲದಲ್ಲಿ ವಿಂಗಡಿಸಿ ನೀಡಿದ ಕಸವನ್ನು ಬಿಬಿಎಂಪಿ ಸಿಬ್ಬಂದಿ ಮತ್ತೆ ಒಂದುಗೂಡಿಸುವಂತಹ ಕೃತ್ಯಗಳಿಂದ ಸಾಕಷ್ಟು ಜನರು ಬೇಸರಗೊಂಡಿದ್ದರು. ಇದೀಗ ಮಧ್ಯಪ್ರದೇಶದ ಇಂದೋರ್ ಮಾದರಿಯನ್ನು ಅಳವಡಿಸಲು ಸರ್ಕಾರ ಆಸಕ್ತಿ ತೋರಿದೆ. ಸತತ ಮೂರು ವರ್ಷಗಳಿಂದ ದೇಶದ ನಂಬರ್ ಒನ್ ಸ್ವಚ್ಛ ನಗರವಾಗಿರುವ ಇಂದೋರ್ ರೀತಿಯಲ್ಲಿ ಕಸ ನಿರ್ವಹಣೆಗೆ ನಾಲ್ಕು ವಾರ್ಡ್ಗಳನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕ ಜಾರಿ ಮಾಡಲಾಗುತ್ತಿದೆ. ಈ ಯೋಜನೆ ಸಫಲವಾಗುವ ಮುನ್ಸೂಚನೆ ಲಭಿಸಿದ್ದು, ಬ್ರಾ್ಯಂಡ್ ಬೆಂಗಳೂರನ್ನು ಉತ್ತಮಗೊಳಿಸಲು ಸಾಕಷ್ಟು ಸಹಕಾರಿಯಾಗುತ್ತದೆ. ಈ ಹಿಂದಿನ ಸರ್ಕಾರ, ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಲ್ಲಿ ಮಂಜೂರು ಮಾಡಿದ್ದ 80,15.37 ಕೋಟಿ ರೂ.ನಲ್ಲಿ 584.35 ಕೋಟಿ ರೂ. ಕಸ ನಿರ್ವಹಣೆಗೆ ಮೀಸಲಿಡಲಾಗಿತ್ತು. ಇದರಲ್ಲೂ 55 ಕೋಟಿ ರೂ. ಹೊರತುಪಡಿಸಿ ಉಳಿದೆಲ್ಲ ಹಣ, ಕಸ ವಿಲೇವಾರಿ ಘಟಕಗಳ ಸುತ್ತಲಿನ ಗ್ರಾಮಗಳ ಅಭಿವೃದ್ಧಿಗಿತ್ತು. ಈ ಬಾರಿ 999 ಕೋಟಿ ರೂ. ಕಸ ನಿರ್ವಹಣೆಗೇ ಲಭಿಸಿರುವುದು ಆಶಾದಾಯಕವಾಗಿದೆ.
ಕೆರೆಗೆ ಪ್ರತ್ಯೇಕ ಕಾಯ್ದೆ
ಬೆಂಗಳೂರಿನ ಮುಕುಟಮಣಿಯಂತಿದ್ದ ಕೆರೆಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಿದೆ. ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಹೆಚ್ಚಿನ ಕೆರೆಗಳಿದ್ದು, ರಿಯಲ್ ಎಸ್ಟೇಟ್ ಚಟುವಟಿಕೆ ಈ ಸುತ್ತಲೇ ನಡೆಯುತ್ತಿರುತ್ತದೆ. ಕೆರೆಗಳು ಸೌಂದರ್ಯ ಹೆಚ್ಚಿಸುವುದರ ಜತೆಗೆ ಶಾಂತ ವಾತಾವರಣ ನಿರ್ವಿುಸುತ್ತವೆ.
ವಾಕಿಂಗ್ ಪಥ, ಪಾರ್ಕ್ ನಿರ್ವಿುಸುವುದರಿಂದ ಆ ಪ್ರದೇಶದ ಆಸ್ತಿ ಮೌಲ್ಯ ಸಹಜವಾಗಿಯೇ ಹೆಚ್ಚಳವಾಗುತ್ತದೆ. ಮೂಲಸೌಕರ್ಯ, ಕೆರೆ ನಿರ್ವಹಣೆ, ಕಸ ವಿಲೇವಾರಿ ಸೇರಿದಂತೆ ಬಿಬಿಎಂಪಿ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆಯ ಪ್ರಸ್ತಾವವೂ ಇದ್ದು, ಇದು ಬೆಂಗಳೂರಿಗೆ ಅಗತ್ಯವಾದ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಸಹಕಾರಿಯಾಗಿದೆ.
110 ಹಳ್ಳಿಗಳಲ್ಲೂ ಈಗಾಗಲೇ ಜಲಮಂಡಳಿ ವತಿಯಿಂದ ಕಾವೇರಿ ಮತ್ತು ಒಳಚರಂಡಿ ಪೈಪ್ಲೈನ್ ಅಳವಡಿಸಲು ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಗೆ ಅಗೆದಿರುವ ರಸ್ತೆಗಳ ರಿಪೇರಿಗೆ ಒಂದು ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಹೊಸ ಲೇಔಟ್ಗಳು, ಖಾಲಿ ನಿವೇಶನಗಳು, ಮಾರಾಟಕ್ಕೆ ಸಿದ್ಧವಾಗಿರುವ ಮನೆಗಳು, ವಿಲ್ಲಾಗಳು ಈ ಪ್ರದೇಶಗಳಲ್ಲಿಯೇ ಹೆಚ್ಚಿರುವ ಕಾರಣ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡಲಿದೆ.
ಸಾರಿಗೆ ಸುಧಾರಣೆ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಿವಾರಣೆಗೂ ಬಜೆಟ್ನಲ್ಲಿ ಗಮನ ನೀಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನದಲ್ಲಿ 18, 621 ಕೋಟಿ ರೂ.ನಲ್ಲಿ ಜಾರಿಯಾಗಬೇಕಿರುವ ಉಪನಗರ ರೈಲು ಯೋಜನೆಗೆ ಈ ವರ್ಷ 500 ಕೋಟಿ ರೂ. ಮೀಸಲಿಡಲಾಗಿದೆ. ಉಪನಗರ ರೈಲು ಯೋಜನೆ ಜಾರಿಯಾದರೆ ಬೆಂಗಳೂರಿನ ಸುತ್ತಲಿನ ಊರುಗಳಿಂದ ಉದ್ಯೋಗಕ್ಕೆ ಆಗಮಿಸುವವರು ಸ್ವಂತ ವಾಹನ ಬಳಕೆ ಕಡಿಮೆ ಮಾಡುತ್ತಾರೆ. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇರುವ 12 ಕಾರಿಡಾರ್ಗಳಲ್ಲಿ ಬಸ್ ಆದ್ಯತಾ ಪಥ ನಿರ್ವಿುಸಲು ಪ್ರಸ್ತಾಪಿಸಲಾಗಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಶೇ.73 ಸಾರ್ವಜನಿಕ ವಾಹನ ಬಳಸುವಂತಾಗಬೇಕು ಎಂಬುದು ಸರ್ಕಾರದ ಗುರಿ.
| ರಮೇಶ ದೊಡ್ಡಪುರ