ರಾಜ್ಯದ ಜಾತಿ ಸಮೀಕ್ಷೆ ವ್ಯರ್ಥ ಪ್ರಯೋಗ

Untitled design (3)
Published on
ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಪಕ್ಷದ್ದು ಯಾವಾಗಲೂ ಮೊಸಳೆ ಕಣ್ಣೀರು. ಸ್ವಾತಂತ್ರ್ಯ ಬಂದ ಮೇಲೆ ಮೊದಲನೇ ಹಿಂದುಳಿದ ವರ್ಗಗಳ ಆಯೋಗಕ್ಕೆ ಸರಿಯಾಗಿ ಕೆಲಸ ಮಾಡಲು ಬಿಡದೆ ಅದು ಕೊಟ್ಟಿರುವ ವರದಿಯನ್ನೂ ಧೂಳು ತಿನ್ನಲು ಬಿಟ್ಟು ನಂತರ ಮಂಡಲ್ ಕಮಿಷನ್ ನೇಮಿಸಿದರು. ಅದು ವರದಿ ಕೊಟ್ಟು 20 ವರ್ಷವಾದರೂ ಕಾಂಗ್ರೆಸ್ ಆಡಳಿತದಲ್ಲಿ ಇಡೀ ದೇಶದ ಮುಂದೆ ಬರಲಿಲ್ಲ. ಕೊನೆಗೆ ಬಿಜೆಪಿ ಬೆಂಬಲಿತ ಪ್ರಧಾನಿ ವಿ.ಪಿ. ಸಿಂಗ್ ಅದನ್ನು ಜಾರಿಗೊಳಿಸಿದರು. ಹಿಂದುಳಿದ ವರ್ಗಕ್ಕೆ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅವಕಾಶ ಕಲ್ಪಿಸಿ ಮುಂದೆ ತರುವ ಯಾವ ಕೆಲಸವನ್ನೂ 50 ವರ್ಷಗಳಲ್ಲಿ ಮಾಡದೇ ಈಗ ಹಿಂದುಳಿದ ವರ್ಗಗಳ ಚಾಂಪಿಯನ್ ಆಗಲು ಹೊರಟಿದ್ದಾರೆ.

ಹಿಂದುಳಿದ ವರ್ಗಕ್ಕೆ ಬೇಕಾಗಿರುವ ಕಾರ್ಯಕ್ರಮ ಅನುಷ್ಠಾನಕ್ಕೆ ಪ್ರಾಮಾಣಿಕತೆಯಿಂದ ಶಕ್ತಿ ತುಂಬುವ ಕೆಲಸ ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಹಿಂದುಳಿದ ವರ್ಗಗಳ ಕಮಿಷನ್​ಗೆ ಸಂವಿಧಾನಿಕ ಮಾನ್ಯತೆ ನೀಡಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಡಿದರು. ಇದರ ಕೆಲಸ ಹಿಂದುಳಿದವರ ಮೀಸಲಾತಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಅವಲೋಕನ ಮಾಡುವುದು ಮತ್ತು ಜಾತಿಗಳನ್ನು ಗುರುತಿಸುವುದು. ಯಾವುದೇ ಜಾತಿಯನ್ನು ಸೇರಿಸಬೇಕಾದರೆ ಸಂಪೂರ್ಣ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕಾಗುತ್ತದೆ.

ಇನ್ನೊಂದೆಡೆ ಕಾಂಗ್ರೆಸ್ಸಿಗರು ಎಸ್ಸಿ ಎಸ್ಟಿ ಸಮುದಾಯಕ್ಕೆ ಬೇರೆ ಬೇರೆ ರಾಜ್ಯಗಳಲ್ಲಿ ಜಾತಿಗಳನ್ನು ಸೇರಿಸುತ್ತ ಹೋದರು. ಅದಕ್ಕೆ ತಕ್ಕ ಹಾಗೆ ಮೀಸಲಾತಿ ಹೆಚ್ಚಿಸಲಿಲ್ಲ. ಹೀಗಾಗಿ ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಜಾತಿ ಮತ್ತು ಜನಸಂಖ್ಯೆ ಎಸ್ಸಿ ಎಸ್ಟಿ ಸಮುದಾಯಗಳ ಜೊತೆ ಸೇರಿದವು. ಇದರಿಂದ ಇರುವ ಮೀಸಲಾತಿಯಲ್ಲೇ ಇನ್ನಷ್ಟು ಪೈಪೋಟಿ ಹುಟ್ಟು ಹಾಕಿದರು.

ಎಸ್ಸಿ ಎಸ್ಟಿ ಸಮುದಾಯಗಳು ಆಂತರಿಕ ಮೀಸಲಾತಿಗಾಗಿ 3 ದಶಕಗಳಿಂದ ಹೋರಾಡುತ್ತಿವೆ. ಅದರ ಬಗ್ಗೆಯೂ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತ ಬಂದಿದೆ. ಪ್ರಧಾನಿ ಮೋದಿ ಒಳಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡ ಮೇಲೆ ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಹೀಗೆ ಕಾಂಗ್ರೆಸ್ ತನ್ನನ್ನು ನಂಬಿ ಬೆಂಬಲ ಕೊಡುತ್ತಿರುವ ಜನರಿಗೆ ಅನ್ಯಾಯ ಮಾಡಿರುವುದು ದೇಶದ ಇತಿಹಾಸದಲ್ಲಿ ದಾಖಲಾಗಿದೆ.

ಮೈಸೂರು ಮಹಾರಾಜರು ಶೇಕಡ 80ರಷ್ಟು ಹಿಂದುಳಿದವರಿಗೆ ಮೀಸಲಾತಿ ಜಾರಿ ಮಾಡಿದ್ದರು. ದೇವರಾಜ ಅರಸು ಅಧಿಕಾರಕ್ಕೆ ಬಂದು ಹಾವನೂರು ಕಮಿಷನ್ ರಚಿಸಿ ಪ್ರಥಮವಾಗಿ ಮೀಸಲಾತಿ ಒದಗಿಸಿದರು. ಪಂಚಾಯತ್​ರಾಜ್ ವ್ಯವಸ್ಥೆ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಸುಪ್ರೀಂಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಪ್ರಕರಣದಲ್ಲಿ ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆ ಖಾತರಿಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವರ್ಗಿಕರಿಸಿ ಚುನಾವಣೆ ನಡೆಸಬೇಕೆಂದು ಆದೇಶಿಸಿತ್ತು. ಅದರಂತೆ ರಾಜ್ಯದಲ್ಲಿ ನ್ಯಾ. ಭಕ್ತವತ್ಸಲ ಆಯೋಗ ರಚಿಸಲಾಗಿತ್ತು. ಆ ಆಯೋಗ ರಾಜಕೀಯ ಪ್ರಾತಿನಿಧ್ಯ ಇಲ್ಲದ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವಂತೆ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅದನ್ನು ಜಾರಿ ಮಾಡದೆ ಅನ್ಯಾಯ ಮಾಡಿದರು.

ಹಿಂದುಳಿದ ಸಮುದಾಯಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡದೇ ಇದ್ದರೂ ಸಿಎಂ ಸಿದ್ದರಾಮಯ್ಯ ಅಧಿಕಾರದ ಕೊನೆಯ ಗಳಿಗೆಯಲ್ಲಿ ಜಾತಿ ಗಣತಿ ಎಂಬ ನಾಟಕ ಪ್ರಾರಂಭಿಸಿದ್ದು ಅದರಿಂದ ಹಿಂದುಳಿದ ವರ್ಗಗಳಿಗೆ ಏನು ಲಾಭ ಎಂದು ಸ್ಪಷ್ಟಡಿಸಪಡಿಸಬೇಕು.

  1. ಹಿಂದುಳಿದ ವರ್ಗಗಳ ಆಯೋಗದಿಂದ ಈಗ ಮೀಸಲಾತಿಯ ಲಾಭ ಪಡೆಯುತ್ತಿರುವ ಜಾತಿಗಳ ಪಟ್ಟಿಯನ್ನು ಪರಿಷ್ಕರಿಸುತ್ತಾರೆಯೇ?
  2.  ಈಗಾಗಲೇ ಹಿಂದುಳಿದ ವರ್ಗದಡಿ ಅತಿ ಹೆಚ್ಚು ಮೀಸಲಾತಿ ಪಡ ೆದವರಿಂದ ಮೀಸಲಾತಿ ಪಡೆಯದ ಜಾತಿಯವರಿಗೆ ಮೀಸಲಾತಿ ವರ್ಗಾಯಿಸುತ್ತಾರೆಯೇ ?
  3. ಹಿಂದುಳಿದ ವರ್ಗದ ಒಟ್ಟಾರೆ ಮೀಸಲಾತಿಯನ್ನು ಹೆಚ್ಚಿಸುವ ಅಧಿಕಾರ ಇದೆಯೇ?

ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ 60 ವರ್ಷದಲ್ಲಿ ಏನೂ ಮಾಡಿಲ್ಲ ಎಂಬ ಅಪರಾಧ ಮನೋಭಾವ ಕಾಡುತ್ತಿದೆ. ಅದಕ್ಕಾಗಿ ಹಿಂದುಳಿದ ಜಾತಿ ಗಣತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಇದೇ ನೆಪದಲ್ಲಿ ಅಧಿಕಾರ ಉಳಿಸಿಕೊಳ್ಳಲು ಜಾತಿ ಗಣತಿ ಆರಂಭಿಸಿದ್ದಾರೆ. ಕಳೆದ 2 ವರ್ಷ ಎಸ್ಸಿಪಿ, ಟಿಎಸ್ಪಿಗೆ ಹಾಗೂ ಹಿಂದುಳಿದ ವರ್ಗಕ್ಕೆ ಮೀಸಲಿಟ್ಟ ಹಣ ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡದಿರುವುದು ಇವರ ಬದ್ಧತೆಗೆ ಸಾಕ್ಷಿ. ಈ ವರ್ಷ ಹಿಂದುಳಿದ ವರ್ಗಗಳ ನಿಗಮಗಳಿಗೆ ನೀಡಿದ್ದ 348 ಕೋಟಿ ರೂ. ವಾಪಸ್ ಪಡೆದು ಸಮೀಕ್ಷೆ ಹೆಸರಲ್ಲಿ ಬಳಸುತ್ತಿರುವುದು ಹಿಂದುಳಿದವರಿಗೆ ಮಾಡುತ್ತಿರುವ ಅನ್ಯಾಯ

ಹೊಸ ಜಾತಿ ಸೇರಿಸುವ ಅಧಿಕಾರ ಹಿಂದುಳಿದ ವರ್ಗದ ಆಯೋಗಕ್ಕೆ ಇಲ್ಲ. ಅದಕ್ಕೆ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ಅದನ್ನು ಮಾಡದೆ ಸುಮಾರು 336 ಜಾತಿ ಹುಟ್ಟು ಹಾಕಿರುವುದು ಸಂವಿಧಾನಬಾಹಿರ. ಈ ಸರ್ಕಾರದ ಪಕ್ಕಾ ಜಾತಿವಾದಿ ನಿಲುವು ಬಹಿರಂಗಗೊಂಡಿದೆ. ಅರ್ಜಿ ಕೊಟ್ಟಿರುವ ಎಲ್ಲ ಜಾತಿಗಳನ್ನು ನಮೂದಿಸುವುದು ಎಷ್ಟು ಸರಿ? ಎಲ್ಲ ಜಾತಿಗೂ ಕ್ರಿಶ್ಚಿಯನ್ ಮತಾಂತರ ಸೇರಿಸಿರುವುದು, ಸಮಿಕ್ಷೆಯಲ್ಲಿ ಕೆಲವು ಮಾಹಿತಿಗಳನ್ನು ತನಿಖಾ ರೀತಿ ಪ್ರಶ್ನೆ ಕೇಳಿರುವುದು, ಅಪ್ರಸ್ತುತ ಪ್ರಶ್ನಾವಳಿ ಸರಿಯೇ? ಆದ್ದರಿಂದ ಜನರು ಸಮೀಕ್ಷೆಗೆ ಸಹಕಾರ ಕೊಡುತ್ತಿಲ್ಲ. ಕಾಂತರಾಜ ಸಮಿತಿ ಇದೇ ಮಾದರಿಯಲ್ಲಿ ಸಮೀಕ್ಷೆ ನಡೆಸಿ ಇದೇ ಸರ್ಕಾರ ಅದಕ್ಕೆ ಒಪ್ಪಿಗೆ ಕೊಡದಿರುವುದು ಇನ್ನೂ ಹೆಚ್ಚು ಗೊಂದಲ ಸೃಷ್ಟಿಸಿದೆ. ಈಗಾಗಲೇ 150 ಕೋಟಿ ರೂ. ವ್ಯರ್ಥ ಮಾಡಿರುವಾಗ ಈಗ ಮತ್ತೆ 400 ಕೋಟಿ ರೂ. ತೆರಿಗೆದಾತರ ಹಣ ಖರ್ಚು ಮಾಡುತ್ತಿದ್ದು ಇನ್ನೊಂದು ವ್ಯರ್ಥ ಪ್ರಯೋಗವಾಗಲಿದೆ.

(ಲೇಖಕರು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net