ಕರ್ನಾಟಕ ವಿಧಾನಸಭೆ ಚುನಾವಣೆ; ಬಿಜೆಪಿ ಪರ ಸ್ಟಾರ್​ ನಟ ಪ್ರಚಾರ?

BJP
Published on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ದಕ್ಷಿಣ ಭಾರತದಲ್ಲಿ ತನ್ನ ಅಧಿಪತ್ಯ ಸಾಧಿಸಲು ಮುಂದಾಗಿರುವ ಬಿಜೆಪಿ ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ದಕ್ಷಿಣ ಭಾರತದ ಸ್ಟಾರ್​ ನಟರೊಬ್ಬರು ಬರಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕವೆಂಬಂತೆ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್ ಕೇಂದ್ರ ಗೃಹ ಸಚಿವ ಅಮಿತ್​ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈಗಾಗಲೇ ಮಿಷನ್​-150 ಎಂಬ ಧ್ಯೇಯದೊಂದಿಗೆ ರಾಜ್ಯ-ಕೇಂದ್ರ ನಾಯಕರು ರಣತಂತ್ರ ಹೆಣೆಯುವುದರಲ್ಲಿ ನಿರತರಾಗಿದ್ದು ಚುನಾವಣೆಯಲ್ಲಿ ಗೆಲುವಿಗೆ ಬೇಕಾಗಿರುವ ಎಲ್ಲಾ ಅಂಶಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಪವನ್​ ಕಲ್ಯಾಣ್​ ಕರ್ನಾಟಕದಲ್ಲಿ ಬಿಜೆಪಿ ಪರ ಮತಯಾಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ಆಂಧ್ರಪ್ರದೇಶದಲ್ಲಿ ಬಿಜೆಪಿ-ಜನಸೇನಾ ಮೈತ್ರಿ ಮಾಡಿಕೊಂಡಿದ್ದು ಇದರ ಭಾಗವಾಗಿ ಬಿಜೆಪಿ ಹೈಕಮಾಂಡ್​ ಪವನ್​ ಅವರನ್ನು ದೆಹಲಿಗೆ ಕರೆಸಿ ಪ್ರಚಾರದಲ್ಲಿ ಭಾಗಿಯಾಗುವ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಪವನ್​ ಆಗಮನದಿಂದ ಬಳ್ಳಾರಿ, ರಾಯಚೂರು, ಕಲಬುರಗಿ,, ಬೀದರ್, ಕೋಲಾರ, ಚಿಕ್ಕಬಳ್ಳಾಪುರ​ ಜಿಲ್ಲೆಗಳಲ್ಲಿ ತೆಲುಗು ಮಾತನಾಡುವವರು ಹೆಚ್ಚಿದ್ದು ಇದರಿಂದಾಗಿ ಬಿಜೆಪಿಗೆ ಮತ ಕ್ರೋಢಿಕರಣವಾಗಲಿದೆ ಎಂದು ನಾಯಕರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

ಇದರ ಭಾಗವಾಗಿ ತೆಲುಗಿನ ಸ್ಟಾರ್​ ನಟ ಪವನ್​ ಕಲ್ಯಾಣ್​ ಅವರನ್ನು ಬಿಜೆಪಿಯ ಸ್ಟಾರ್​​ ಪ್ರಚಾರಕರಲ್ಲಿ ಒಬ್ಬರನ್ನಾಗಿಸಿ ಬಿಜೆಪಿ ಮತ ಸೆಳೆಯಲು ಯೋಜನೆ ರೂಪಿಸಿಕೊಂಡಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net