

| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಭಾರತೀಯ ಸಂಸ್ಕೃತಿಯಲ್ಲಿ ‘ವಿದ್ಯಾಧಿದೇವತೆ’ ಎಂದೇ ಪರಿಗಣಿಸಲಾಗಿರುವ ಶಾರದಾ ದೇವಿಯ ವಾಸಸ್ಥಾನ ‘ಕಾಶ್ಮೀರ’ ಎಂದು ಅತಿ ಪುರಾತನ ಕಾಲದಿಂದ ಪ್ರಸಿದ್ಧವಾಗಿದೆ. ಈ ವಿಷಯವನ್ನು ದೃಢೀಕರಿಸುವ ಮತ್ತು ನಾವು ಪ್ರತಿನಿತ್ಯ ಪಠಿಸುವಂತೆ ಒಂದು ಸಂಸ್ಕೃತ ಶ್ಲೋಕ ಹೀಗಿದೆ.
ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿ ಮೇ ||
ಭಾರತದ ಮುಕುಟ ಕಾಶ್ಮೀರ. ಅದಿಲ್ಲದ ಭಾರತ ಊಹೆಗೂ ನಿಲುಕದ್ದು. ಕಾಶ್ಮೀರ ಭಾರತೀಯ ಪರಂಪರೆಯ ಪ್ರತಿನಿಧಿ. ಕಾಶ್ಮೀರದಲ್ಲಿ ಭಾರತದ ಐತಿಹ್ಯ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಶಾರದಾಪೀಠ (ಸರ್ವಜ್ಞಪೀಠ) ಕೂಡ ಒಂದು. ಶಾರದಾ ಪೀಠವಿರುವ ಸ್ಥಳವು ಹಿಂದೆ ಕೇವಲ ಒಂದು ದೇವಸ್ಥಾನ ಅಥವಾ ಪೀಠವಷ್ಟೇ ಆಗಿರದೆ ಅನೇಕ ವಿದ್ಯಾಕೇಂದ್ರಗಳ ತಾಣವಾಗಿತ್ತು. ದೇಶ ವಿದೇಶಗಳಿಂದ ಅನೇಕರು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಅದ್ವೈತ ಪ್ರತಿಪಾದಕರಾಗಿದ್ದ ಶ್ರೀ ಶಂಕರ ಭಗವತ್ಪಾದರು ಈ ಕ್ಷೇತ್ರವನ್ನು ಪ್ರವೇಶಿಸಿ ಅಲ್ಲಿನ ಪಂಡಿತರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಸರ್ವಜ್ಞಪೀಠವನ್ನು ಅಲಂಕರಿಸಿದ್ದರು ಎಂಬ ಅಂಶ ಶ್ರೀ ವಿದ್ಯಾರಣ್ಯರು ಬರೆದಿರುವ ‘ಶಂಕರ ದಿಗ್ವಿಜಯ’ ಗ್ರಂಥದಲ್ಲಿ ಉಲ್ಲೇಖವಾಗಿದೆ. ಜಗತ್ತಿನ ಹಲವು ಜ್ಞಾನಿಗಳು, ಗುರುಗಳು, ವಿದ್ವಾಂಸರು ಮತ್ತು ಸಾಧಕರು ಉನ್ನತ ಶಿಕ್ಷಣಕ್ಕಾಗಿ ಈ ಜ್ಞಾನ ಕ್ಷೇತ್ರದಲ್ಲಿ ನೆಲೆಸಿದ್ದರು ಎಂಬ ಪ್ರತೀತಿ ಇದೆ.
ಈಗ ಶಾರದಾ ಸರ್ವಜ್ಞಪೀಠ ಏನಾಗಿದೆ?: ಶ್ರೀ ಶಂಕರಾಚಾರ್ಯರು ದಿಗ್ವಿಜಯ ಸಾಧಿಸಿದ ಶಾರದಾ ಸರ್ವಜ್ಞಪೀಠವು ಇಂದು ಪಾಕ್ ಆಕ್ರಮಿತ ಕಾಶ್ಮೀರ (ಪಿ.ಒ.ಕೆ) ಪ್ರದೇಶದಲ್ಲಿದೆ. ಹಾಗಾಗಿ ಅದರ ಪರಿಸ್ಥಿತಿ ಉತ್ತಮವಾಗಿಲ್ಲ. ದೇವಾಲಯದ ಕಾವಲಿಗೆ ಬೆಟ್ಟದ ಮೇಲೆ ಸೇನೆಯ ಕ್ಯಾಂಪ್ ಇದೆ. ಅಲ್ಲಿ ಸರಿಯಾದ ಗುಡಿಗೋಪುರವೂ ಇಲ್ಲ, ಶ್ರೀ ಶಾರದಾಂಬೆಯ ವಿಗ್ರಹವೂ ಇಲ್ಲ. ಸುಮ್ಮನೆ ತೋರುವ ನಾಲ್ಕು ಗೋಡೆಗಳ ರೀತಿ ಆ ದೇವಾಲಯ ಇದೆ.
ಕಾಶ್ಮೀರ-ಶೃಂಗೇರಿ ಸಂಬಂಧ: ಶೃಂಗೇರಿಗೂ ಮತ್ತು ಕಾಶ್ಮೀರಕ್ಕೂ ಸುಮಾರು 1200 ವರ್ಷಗಳಿಂದಲೂ ಸಂಬಂಧವಿದೆ. ಕಾರಣ ಏನೆಂದರೆ ಅದ್ವೈತ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರು ಕಾಶ್ಮೀರದಲ್ಲಿದ್ದ ಶಾರದಾ ಸರ್ವಜ್ಞಪೀಠವನ್ನು ಆರೋಹಣ ಮಾಡಿದ ನಂತರ ಶ್ರೀ ಶಾರದಾಂಬೆಯನ್ನು ಶೃಂಗೇರಿಗೆ ಕರೆತಂದು ಶ್ರೀಚಕ್ರದ ಮೇಲೆ ಪ್ರತಿಷ್ಠಾಪಿಸಿದರು. ಆ ವಿಗ್ರಹವು ಶ್ರೀಗಂಧದ ಮರದಿಂದ ಕೆತ್ತಲ್ಪಟ್ಟ ವಿಗ್ರಹವಾಗಿತ್ತು.
ಶೃಂಗೇರಿಮಠದಿಂದ ಶಾರದಾಂಬೆ ವಿಗ್ರಹ: ಇತ್ತೀಚೆಗೆ ಕಾಶ್ಮೀರದ ಶಾರದಾ ಸೇವಾ ಟ್ರಸ್ಟ್ನ ಅಧ್ಯಕ್ಷ ರವೀಂದ್ರ ಪಂಡಿತ್, ಕಾರ್ಯದರ್ಶಿ ಮೊಂಕಾಶಿ ಹಾಗೂ ಕಮಿಟಿಯ ಸದಸ್ಯರು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ ಭಾರತೀತೀರ್ಥರನ್ನು ಹಾಗೂ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರನ್ನು ಭೇಟಿಯಾಗಿ ನೂತನ ದೇವಾಲಯದ ವಿಷಯವನ್ನು ಸವಿಸ್ತಾರವಾಗಿ ತಿಳಿಸಿದರು. ಇದನ್ನು ಕೇಳಿ ಸಂತೋಷಪಟ್ಟ ಶ್ರೀಗಳು, ಶೃಂಗೇರಿ ಮಠದಿಂದಲೇ ಶಾರದಾಂಬೆಯ ವಿಗ್ರಹವನ್ನು ನೂತನ ದೇವಾಲಯಕ್ಕೆ ಕಳುಹಿಸುವುದಾಗಿ ತಿಳಿಸಿದರು. ಮಾರ್ಚ್ 27ರಂದು ಟೀಟ್ವಾಲ್ನಲ್ಲಿ ಶಾರದಾಂಬೆ ದೇವಾಲಯದ ಗರ್ಭಗುಡಿ ಕಾರ್ಯ ಆರಂಭವಾಗಿದೆ. ಇದೇ ವರ್ಷದ ಅಕ್ಟೋಬರ್ನಲ್ಲಿ ಶಾರದಾಂಬೆ ಪ್ರತಿಷ್ಠಾಪನೆ ನಡೆಯಲಿದೆ.
ಶಾರದಾ ದೇವಾಲಯ ಸ್ವರೂಪ: ಪಿ.ಒ.ಕೆ.ಯಲ್ಲಿದ್ದ ಪುರಾತನ ಶಾರದಾ ಸರ್ವಜ್ಞಪೀಠದ ದೇವಾಲಯದ ವಾಸ್ತುಶಿಲ್ಪದ ವೈಭವವನ್ನು ಹೋಲುವಂತೆ ಈ ನೂತನ ದೇಗುಲ ಇರುತ್ತದೆ. ಮುಖ್ಯ ಗೋಡೆಗಳನ್ನು ಸ್ಥಳೀಯವಾಗಿ ಲಭ್ಯವಿರುವ ಕಲ್ಲುಗಳಿಂದಲೇ ನಿರ್ವಿುಸಲಾಗುತ್ತದೆ. ಶಾರದಾಂಬೆಯ ವಿಗ್ರಹವು ಶೃಂಗೇರಿ ಶಾರದಾಪೀಠದಲ್ಲಿರುವ ಶಾರದಾಂಬೆಯ ವಿಗ್ರಹದ ಹಾಗೆ ಇರುತ್ತದೆ. ದೇವಾಲಯ ನಾಲ್ಕು ಬಾಗಿಲುಗಳನ್ನು ಹೊಂದಿರುತ್ತದೆ. ಶಂಕರಾಚಾರ್ಯರು ನಾಲ್ಕು ಮಠಗಳನ್ನು ಸ್ಥಾಪಿಸಿ ನಾಲ್ಕು ಜನ ನೇರಶಿಷ್ಯರನ್ನು ಒಂದೊಂದು ಪೀಠಕ್ಕೆ ಮೊದಲನೆ ಜಗದ್ಗುರುಗಳನ್ನಾಗಿ ನೇಮಿಸಿದರು ಹಾಗೂ ಮೂಲ ಸರ್ವಜ್ಞಪೀಠದ ದೇವಾಲಯವೂ ನಾಲ್ಕು ಬಾಗಿಲುಗಳನ್ನು ಹೊಂದಿತ್ತು. ಆ ಮಾದರಿಯಲ್ಲಿಯೇ ಈ ದೇವಾಲಯ ನಿರ್ಮಾಣವಾಗುತ್ತದೆ.
ಟೀಟ್ವಾಲ್: ಒಂದು ಕಾಲದಲ್ಲಿ ಹಿಂದುಗಳಿಗೂ ಬೌದ್ಧರಿಗೂ ಅಧ್ಯಯನದ ಸ್ಥಳವಾಗಿದ್ದ ಕಾಶ್ಮೀರದ ಶಾರದಾಪೀಠ ಜ್ಞಾನದ ರಾಜಧಾನಿಯಾಗಿ ಪ್ರಾಚೀನ ನಾಗರಿಕತೆಯ ಜೀವಂತ ಸಂಕೇತವಾಗಿತ್ತು. ಶಾರದಾಪೀಠದ ಮೇಲೆ ಶತಮಾನಗಳ ಕಾಲ ಬೌದ್ಧತತ್ತ್ವವು ಪ್ರಾಬಲ್ಯವನ್ನು ಹೊಂದಿತ್ತು. ಅಶೋಕ ಚಕ್ರವರ್ತಿಯ ಆಳ್ವಿಕೆಯಿಂದ ರಾಜ ಲಲಿತಾದಿತ್ಯನವರೆಗೆ. ಪಿಒಕೆಯಲ್ಲಿರುವ ಶಾರದಾಪೀಠಕ್ಕೆ ತೀರ್ಥಯಾತ್ರೆ ಪುನರಾರಂಭಿಸುವ ಸಲುವಾಗಿ ಶಾರದಾ ಸೇವಾ ಕಮಿಟಿಯವರು ಸುಮಾರು ಒಂದೂವರೆ ದಶಕಗಳಿಂದ ಹೋರಾಡುತ್ತಿದ್ದಾರೆ. ಅವರ ಗುರುಗಳು ಮತ್ತು ಕಾಶ್ಮೀರ ಆಧ್ಯಾತ್ಮ ಶಾರದಾಪೀಠದ ನಿವಾಸಿ ಸ್ವಾಮಿ ನಂದಜಲಾಲ್ ಅವರು 1948ರಲ್ಲಿ ಕೊನೆಯ ತೀರ್ಥಯಾತ್ರೆಯನ್ನು ಇಲ್ಲಿಂದಲೇ ಮಾಡಿದ್ದರು. ಪ್ರತಿ ವರ್ಷ ಆಚರಿಸುವ ‘ಶಾರದಾ ದಿನ’ವನ್ನು ಕಳೆದ ವರ್ಷ ಆ. 14ರಂದು ಆಚರಿಸಲಾಯಿತು. ಶಾರದಾ ದಿನದ ಮುನ್ನಾದಿನದಂದು ಅಥವಾ ವಾರ್ಷಿಕ ಯಾತ್ರೆಯ ಕೊನೆಯ ದಿನದಂದು ನಡೆಸಲಾಯಿತು. ಆ ಸಮಯದಲ್ಲಿ ಭಾರತೀಯ ಸೇನೆ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯಿತು. ಈ ಪ್ರದೇಶದಲ್ಲಿ ಶಾರದಾ ದೇವಾಲಯ ಮತ್ತು ಕೇಂದ್ರವನ್ನು ಸ್ಥಾಪಿಸುವ ಅಗತ್ಯವನ್ನು ಮನವರಿಕೆ ಮಾಡಿಕೊಡಲಾಯಿತು. ನಂತರ ಸಮಿತಿ ವೇಗವಾಗಿ ಕೆಲಸ ಪ್ರಾರಂಭಿಸಿತು. ಅದೇ ಸಮಯದಲ್ಲಿ ಮದರ್ ಟ್ರಸ್ಟ್ ಸೇವ್ ಶಾರದಾ ಸಮಿತಿಯೂ ಕಾರ್ಯಾರಂಭ ಮಾಡಿತು. ಈ ಟ್ರಸ್ಟ್ ಈಗ ಇದೇ ಸ್ಥಳದಲ್ಲಿ ಶ್ರೀ ಶಾರದಾ ದೇವಾಲಯ ಹಾಗೂ ಗುರುದ್ವಾರವನ್ನು ಸ್ಥಾಪಿಸುತ್ತಿದೆ. ಮುಖ್ಯವಾಗಿ ಇಲ್ಲಿಗೆ ಯಾತ್ರೆ ಕೈಗೊಳ್ಳಲು ಋತುಮಾನಕ್ಕೆ ಅನುಗುಣವಾಗಿ ವ್ಯವಸ್ಥೆಗಳನ್ನು ಸಮಿತಿ ಮಾಡುತ್ತದೆ.
(ಲೇಖಕರು ಅಧ್ಯಾತ್ಮ ಚಿಂತಕರು, ಹವ್ಯಾಸಿ ಬರಹಗಾರರು)