

ರಾಜಕೀಯ ಅಸ್ಥಿರತೆ, ತೈಲೋತ್ಪನ್ನಗಳಿಗೆ ಹಾಹಾಕಾರ, ಹಣದುಬ್ಬರ ಸನ್ನಿವೇಶ, ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಅಲಭ್ಯತೆ ಸನ್ನಿವೇಶಗಳಿಂದ ತೀವ್ರ ತಲ್ಲಣಗೊಂಡಿದ್ದ ದ್ವೀಪರಾಷ್ಟ್ರ ಶ್ರೀಲಂಕಾ ಸಹಜ ಸ್ಥಿತಿಗೆ ಮರಳುತ್ತಿದ್ದು, ನಿಧಾನವಾಗಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ...!
ಹೌದು, ಆರು ತಿಂಗಳಿಂದಷ್ಟೇ ಅನೇಕ ಸಮಸ್ಯೆಗಳಿಂದ ಸೃಷ್ಟಿಯಾಗಿದ್ದ ಅರಾಜಕತೆ ಶ್ರೀಲಂಕಾದ ಪ್ರಜೆಗಳು ರೊಚ್ಚಿಗೇಳುವಂತೆ ಮಾಡಿತ್ತು. ಅರ್ಥಿಕ ಪರಿಸ್ಥಿತಿ ನಿಭಾಯಿಸಲು ಅಸಮರ್ಪಕವಾಗಿದ್ದ ಅಂದಿನ ರಾಜಕೀಯ ನಾಯಕತ್ವ ಇನ್ನಷ್ಟು ಅರಾಜಕತೆಗೆ ದಾರಿ ಮಾಡಿಕೊಟ್ಟಿತು. ಪರಿಣಾಮ, ಶ್ರೀಲಂಕಾ ಜನ ದಂಗೆ ಎದ್ದಿದ್ದರು. ಬೀದಿಗೆ ಬಂದು ಹೋರಾಡಿದ್ದರು. ದ್ವೀಪರಾಷ್ಟ್ರದ ವಾಣಿಜ್ಯ ರಾಜಧಾನಿ ಪ್ರಕ್ಷುಬ್ಧವಾಗಿತ್ತು ಹಾಗೂ ಬಳಿಕ ಸರ್ಕಾರ ತುರ್ತು ಪರಿಸ್ಥಿತಿ ಘೊಷಣೆ ಮಾಡಿದ್ದು ಈಗ ಇತಿಹಾಸ. ಈಗ ಕ್ರಮೇಣ ಶ್ರೀಲಂಕಾ ದೇಶ ಹಾಗೂ ಅಲ್ಲಿನ ಜನ ಸಹಜ ಸ್ಥಿತಿಗೆ ಮರಳುತ್ತಿದ್ದು, ನಿಧಾನವಾಗಿ ಸಹಜತೆಗೆ ಮುಖಮಾಡಿದೆ.
ಶ್ರೀಲಂಕಾ ಸರ್ಕಾರ ರಾಜಕೀಯ ಪಲ್ಲಟದಿಂದ ಮುಕ್ತವಾಗಿದೆ. ಸದ್ಯ ದಿನೇಶ್ ಗುಣವರ್ಧನೆ ಪ್ರಧಾನಿಯಾಗಿ ಆಯ್ಕೆಯಾಗಿ, ಸರ್ಕಾರವನ್ನು ಸುಸೂತ್ರವಾಗಿ ನಡೆಸುವಂತಹ ತೀರ್ವನಗಳನ್ನು ಕೈಗೊಳ್ಳುತ್ತಿದ್ದಾರೆ. ಮುಖ್ಯವಾಗಿ ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಹಾಹಾಕಾರ ತಪ್ಪಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಶ್ರೀಲಂಕಾದಲ್ಲಿ ಟೀ, ತೆಂಗು, ಭತ್ತ ಮತ್ತು ತರಕಾರಿ ಪ್ರಮುಖ ವಾಣಿಜ್ಯ ಬೆಳೆಯಾಗಿವೆ. ಇವುಗಳ ಜತೆಗೆ ಇಲ್ಲಿನ ಜನ ಮತ್ಸ್ಯ ಕೃಷಿಯನ್ನು ಜೀವನಾಧಾರಿತ ಹಾಗೂ ವಾಣಿಜ್ಯ ಚಟುವಟಿಕೆಗೆ ಅವಲಂಬಿಸಿದ್ದಾರೆ. ಇವುಗಳಿಗೆ ಪ್ರೋತ್ಸಾಹ ನೀಡುವ ಜತೆಗೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ.
ಆರ್ಥಿಕ ದುಸ್ಥಿತಿಯನ್ನು ಸರಿಪಡಿಸಲು ಶ್ರೀಲಂಕಾ ಸರ್ಕಾರ ದೊಡ್ಡ ಮಟ್ಟದಲ್ಲಿ ಪ್ರಯತ್ನಿಸುತ್ತಿದೆ. ಶ್ರೀಲಂಕಾ ಪ್ರವಾಸೋದ್ಯಮ ಆಧಾರಿತ ದೇಶವಾಗಿದೆ. ಇಲ್ಲಿನ ಪ್ರೇಕ್ಷಣೀಯ ಹಾಗೂ ಧಾರ್ವಿುಕ ಸ್ಥಳಗಳನ್ನು ಹಾಗೂ ಬಹಳ ವಿಶೇಷವಾಗಿ ಇಲ್ಲಿನ ನೈಸರ್ಗಿಕ ಸುಂದರ ತಾಣಗಳನ್ನು ನೋಡಲು, ಸಮುದ್ರ ತೀರಗಳ ಸುಂದರ ವಾತಾವರಣ ಆಹ್ಲಾದಿಸಲು ವಿದೇಶಗಳಿಂದ ಜನ ಇಲ್ಲಿಗೆ ಹರಿದುಬರುತ್ತಾರೆ. ಪ್ರವಾಸಿಗರಿಂದ ಉತ್ಪತ್ತಿಯಾಗುವ ಆರ್ಥಿಕ ಚಟುವಟಿಕೆಗಳೇ ಶ್ರೀಲಂಕಾಗೆ ಬಹುಮುಖ್ಯ ಆರ್ಥಿಕ ಆಧಾರಿತ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರಧಾನಿ ಮುಂದಾಗಿದ್ದಾರೆ. ಈಗ ಶ್ರೀಲಂಕಾದಲ್ಲಿನ ಅಸ್ಥಿರತೆ ವಾತಾವರಣ ತಿಳಿಯಾಗಿದ್ದು, ಮತ್ತೆ ವಿಶ್ವ ಮಟ್ಟಕ್ಕೆ ತೆರೆದುಕೊಳ್ಳಲು ಮುಂದಾಗಿದೆ. ವಿವಿಧ ಆರ್ಥಿಕ ನೀತಿ ನೀಡುವ ಜತೆಗೆ, ಪ್ರವಾಸೋದ್ಯಮ ಅಭಿವೃದ್ಧಿಗೆ ನಾನಾ ಕಾರ್ಯಕ್ರಮ ರೂಪಿಸಿದೆ. ಮುಖ್ಯವಾಗಿ ವಿದೇಶಿಗರಿಗೆ ಶ್ರೀಲಂಕಾದ ಮೇಲಿನ ಅಭದ್ರತೆ ದೂರ ಮಾಡಲು ಶಕ್ತಿಮೀರಿ ದುಡಿಯಲಾಗುತ್ತಿದೆ. ಪ್ರವಾಸೋದ್ಯಮ ಸ್ನೇಹಿ ವಾತಾವರಣ ನಿರ್ವಿುಸಲು ಎಲ್ಲ ರೀತಿ ಪ್ರಯತ್ನಿಸುತ್ತಿದೆ. ಪ್ರವಾಸಿ ತಾಣಗಳನ್ನು ಆಹ್ಲಾದಿಸಲು ಬರುವ ಪ್ರವಾಸಿಗರಿಗೆ ಶ್ರೀಲಂಕಾ ಮುಕ್ತವಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ದ್ವೀಪರಾಷ್ಟ್ರ ಕೈ ಬೀಸಿ ತನ್ನತ್ತ ಕರೆಯುತ್ತಿದೆ.
‘ತುರ್ತ ಪರಿಸ್ಥಿತಿ ಸೇರಿದಂತೆ ಜನರು ದಂಗೆ ಎದ್ದಂತಹ ಪರಿಣಾಮಗಳು ಶ್ರೀಲಂಕಾದ ವಾಣಿಜ್ಯ ನಗರಿಗಳಲ್ಲಿ ಒಂದಾದ ಕೊಲಂಬೊ ಮತ್ತು ಸುತ್ತಮುತ್ತಲ ನಗರಗಳಿಗೆ ಮಾತ್ರ ಸೀಮಿತವಾಗಿತ್ತೇ ವಿನಾ, ಪ್ರತಿಭಟನೆ ಇಡೀ ರಾಷ್ಟ್ರವನ್ನು ಆವರಿಸಿರಲಿಲ್ಲ. ಆದರೆ, ಕೊಲಂಬೊ ಕೇಂದ್ರಿತ ಪ್ರತಿಭಟನೆಗಳು, ಜನರ ದಂಗೆಯ ದೃಶ್ಯಾವಳಿಗಳು ಮತ್ತು ಬೀದಿಗೆ ಇಳಿದು ಹೋರಾಡಿದ ಸನ್ನಿವೇಶಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಅತಿರಂಜಿತವಾಗಿ ವರ್ಣನೆಗೆ ಒಳಗಾಗಿದ್ದವು’ ಎನ್ನುವ ಅಭಿಪ್ರಾಯ ಇಲ್ಲಿನ ಆಡಳಿತ ವ್ಯವಸ್ಥೆಯದು ಹಾಗೂ ಪ್ರಮುಖ ಜನಪ್ರತಿನಿಧಿಗಳದ್ದಾಗಿದೆ.
ತೈಲೋತ್ಪನ್ನಕ್ಕೆ ಬಾರ್ಕೋಡ್!: ವಿದೇಶಿಗರ, ಅದರಲ್ಲೂ ಪ್ರವಾಸಿಗರಿಗೆ ಅನುಕೂಲಕ್ಕಾಗಿ ತೈಲೋತ್ಪನ್ನಗಳ ಬಳಕೆಗೆ ವಿಶೇಷ ಕಾನೂನು ಜಾರಿ ಮಾಡಲಾಗಿದೆ. ಪ್ರವಾಸಿಗರಿಗೆ ಮತ್ತು ಶ್ರೀಲಂಕಾ ಪ್ರಜೆಗಳಿಗೆ ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳನ್ನು ಬಳಸಬೇಕೆಂದರೆ ಬಾರ್ಕೋಡ್ ಬಳಸಿ ಪಡೆಯುವುದು ಅನಿವಾರ್ಯವಾಗಿದೆ. ಪ್ರತಿಯೊಬ್ಬ ನಾಗರಿಕರಿಗೆ ತೈಲೋತ್ಪನ್ನ ಸಿಗಬೇಕು ಎಂದು ಶ್ರೀಲಂಕಾ ಸರ್ಕಾರ ನಮ್ಮ ಆಧಾರ್ ಕಾರ್ಡ್ ಸ್ವರೂಪದ ಒಂದು ಪಾಸ್ ನೀಡುತ್ತಿದೆ. ಅದರಲ್ಲಿ ಸ್ಕ್ಯಾನ್ ಮಾಡಲು ಬಾರ್ಕೋಡ್ ಇರುತ್ತದೆ. ಪ್ರತಿಯೊಬ್ಬರೂ ತೈಲೋತ್ಪನ್ನಗಳನ್ನು ಪಡೆಯುವಾಗ ಪೆಟ್ರೋಲ್ ಬಂಕ್ನಲ್ಲಿ ಬಾರ್ಕೋಡ್ ಸ್ಕ್ಯಾನ್ ಮಾಡಲಾಗುತ್ತದೆ. ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೆ ವಾರಕ್ಕೆ ನಾಲ್ಕು ಲೀಟರ್ ಪೆಟ್ರೋಲ್ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ವಾರಕ್ಕೆ 20 ಲೀಟರ್ ಡೀಸೆಲ್ ನೀಡುತ್ತಿದ್ದಾರೆ. ವಿಶೇಷವಾಗಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಉದ್ಯಮಕ್ಕೆ ಮತ್ತು ವಾಹನಗಳಿಗೆ ಅನಿಯಮಿತವಾಗಿ ತೈಲೋತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಆ ಮೂಲಕ ಶ್ರೀಲಂಕಾದಲ್ಲಿ ಈ ಹಿಂದೆ ಎದ್ದಿದ್ದ ತೈಲೋತ್ಪನ್ನಗಳ ಹಾಹಾಕಾರಕ್ಕೆ ಅಂತ್ಯ ಹಾಡಲಾಗಿದೆ.
(ಲೇಖಕರು ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥರು)
ತುರ್ತು ಪರಿಸ್ಥಿತಿ ವಾಪಸ ಪಡೆದ ಬಳಿಕ ಸೃಷ್ಟಿಯಾದ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡಿರುವ ಶ್ರೀಲಂಕಾ ಸರ್ಕಾರ ಸ್ಥಳೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತಿದೆ. ಇಷ್ಟು ವರ್ಷ ಇಲ್ಲಿನ ಜನ ದುಬಾರಿ ಕಾರು ಸೇರಿದಂತೆ ವಸ್ತುಗಳನ್ನು ಖರೀದಿಸಲು ಇಲ್ಲಿನ ಸಂಪತ್ತನ್ನು ಬೇರೆ ದೇಶಗಳ ವಸ್ತುಗಳ ಮೇಲೆ ಹೂಡಿಕೆ ಮಾಡುತ್ತಿದ್ದರು. ಆದರೆ, ಜನರು ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಕಾರಣ, ಇವತ್ತಿನ ಸನ್ನಿವೇಶದಲ್ಲಿ ಅದು ತಪ್ಪಿದೆ. ಬದಲಿಗೆ ಸ್ಥಳೀಯ ಮಾರುಕಟ್ಟೆ ಬಲಪಡಿಸುವ ದೃಷ್ಟಿಯಿಂದ ಇಲ್ಲಿನ ಜನರ ಬೇಡಿಕೆಗೆ ತಕ್ಕಂತೆ ಶ್ರೀಲಂಕಾದಲ್ಲೇ ಉತ್ಪನ್ನಗಳನ್ನು ಉತ್ಪಾದಿಸಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಆ ಮೂಲಕ ವಿದೇಶಗಳ ಮೇಲೆ ಅವಲಂಬನೆ ತಪ್ಪಿ, ದೇಶದ ಒಳಗೆ ಉತ್ಪನ್ನ ಚಟುವಟಿಕೆ ಹೆಚ್ಚಾಗುತ್ತಿದೆ. ಈ ಸಂಬಂಧ ವಿಶೇಷ ರಾಷ್ಟ್ರೀಯ ಆರ್ಥಿಕ ನೀತಿ ರೂಪಿಸಲು ಶ್ರೀಲಂಕಾ ಸರ್ಕಾರ ಮುಂದಾಗಿದೆ.
ಶ್ರೀಲಂಕಾದಲ್ಲಿ ಕೈಗಾರಿಕೆ ಸ್ಥಾಪನೆ, ಬಂಡವಾಳ ಹೂಡಿಕೆಗೆ ಮೊದಲ ಪ್ರಾಶಸ್ಱ ನೀಡಲು ಶ್ರೀಲಂಕಾ ಸರ್ಕಾರ ನಾಲ್ಕು ಪ್ರಮುಖ ಕೈಗಾರಿಕಾ ವಲಯಗಳನ್ನು ಹೊಂದಿದೆ. ಅದರಲ್ಲಿ ಕ್ಯಾಂಡಿ ಇಂಡಸ್ಟ್ರಿಯಲ್ ಪಾರ್ಕ್ ಪ್ರಮುಖವಾದುದು. ಈ ಕೈಗಾರಿಕಾ ಪ್ರದೇಶವು ಸುಮಾರು 200 ಎಕರೆ ವಿಸ್ತಾರವಾದ ಭೂಮಿಯನ್ನು ಹೊಂದಿದ್ದು, ಪ್ರಸ್ತುತ 114 ಎಕರೆಗಳಲ್ಲಿ ವಿವಿಧ ಕೈಗಾರಿಕೆಗಳು ಸ್ಥಾಪನೆಯಾಗಿವೆ. 9 ಎಕರೆ ಜಾಗ ಖಾಲಿ ಇದೆ. 24 ವಾಣಿಜ್ಯ ಕೈಗಾರಿಕಾ ಚಟುವಟಿಕೆಗಳು ನಡೆಯುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ 2 ಕಾರ್ಖಾನೆಗಳು ಮುಚ್ಚಿವೆ. ಈ ಪಾರ್ಕ್ನಲ್ಲಿ 10,410 ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಇನ್ನೂ 128 ಹುದ್ದೆಗಳು ಖಾಲಿ ಇವೆ. ಬಂಡವಾಳ ಹೂಡಿಕೆ, ಕೈಗಾರಿಕೆ ಸ್ಥಾಪನೆಗಾಗಿ ಭೂಮಿ ನೀಡುವಿಕೆ, ನೀರು, ವಿದ್ಯುತ್ ಮತ್ತು ಇತರ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತದೆ. ಇನ್ನು ವಾಣಿಜ್ಯ ನೀತಿಗೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ವಿನಾಯಿತಿಯೊಂದಿಗೆ ವ್ಯಾಪಾರ ಸ್ನೇಹಿ ಉದ್ಯಮ ನಿರ್ವಹಣೆ ಕಾಣಬಹುದು. ಹೀಗಾಗಿ ಬಂಡವಾಳ ಹೂಡಿಕೆದಾರರಿಗೆ ರತ್ನಗಂಬಳಿ ಹಾಸಲು ಶ್ರೀಲಂಕಾ ಸರ್ಕಾರ ಎದುರು ನೋಡುತ್ತಿದೆ.
| ಆರ್ಎಂಜೆಬಿ ಭಂಡಾರ ನಿರ್ದೇಶಕ
| ರುವಿನಿ ಮಾಧ್ಯಮ ಸಂಯೋಜಕಿ ಶ್ರೀಲಂಕಾ ಹೂಡಿಕೆದಾರ ಮಂಡಳಿ, ಕ್ಯಾಂಡಿ
ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಭಾರತ ನಮ್ಮ ನೆರವಿಗೆ ನಿಂತಿದೆ. ಆದ್ದರಿಂದ ನಾವು ಭಾರತಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಿರಋಣಿಯಾಗಿದ್ದೇವೆ. ರಾಜಕೀಯ ಅಸ್ಥಿರತೆಯಿಂದ ಶ್ರೀಲಂಕಾ ಮುಳುಗಿ ಹೋಯಿತೆಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಯಿತು. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಪಿತೂರಿ ಇರಬಹುದು. ವಾಸ್ತವವಾಗಿ ಶ್ರೀಲಂಕಾ ಆ ರೀತಿ ಇಲ್ಲ. ಭಾರತ ನಮ್ಮ ಬಹುದೊಡ್ಡ ಮಿತ್ರ ರಾಷ್ಟ್ರವಾಗಿದೆ. ನಮ್ಮ ಆರ್ಥಿಕ ಸ್ಥಿತಿಯನ್ನು ಮನಗಂಡು ಭಾರತದ ಪ್ರಧಾನಿ ನರೇಂದ್ರ ಮೋದಿ ವಿಶೇಷವಾದ ಆರ್ಥಿಕ ಸವಲತ್ತು ನೀಡುವ ಮೂಲಕ ಬೆಂಬಲಕ್ಕೆ ನಿಂತರು. ಸಾಮಾನ್ಯವಾಗಿ ಐರೋಪ್ಯ ರಾಷ್ಟ್ರಗಳು ಅಥವಾ ಅರಬ್ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕಿದಾಗ ಸುತ್ತಮುತ್ತಲ ರಾಷ್ಟ್ರಗಳು ನೆರವಿಗೆ ಬರುವುದು ಸಹಜ. ಅದೇ ಮಾದರಿಯಲ್ಲಿ ಭಾರತ ನಮ್ಮ ನೆರವಿಗೆ ನಿಂತಿದೆ. ಆದರೆ, ಶ್ರೀಲಂಕಾದಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ಬೆಳವಣಿಗೆಗಳನ್ನು ಗುರಿಯಾಗಿಸಿಕೊಂಡು ಇಡೀ ರಾಷ್ಟ್ರ ಮುಳುಗಿ ಹೋಯ್ತೆಂದು ಬಿಂಬಿಸಿದ್ದು ನಿಜಕ್ಕೂ ಬೇಸರ ತರಿಸಿತು. ರಾಜಕೀಯ ಅಸ್ಥಿರತೆಗಳು ಪ್ರಜಾಪ್ರಭುತ್ವದ ಸೌಂದರ್ಯ ಎನ್ನಬಹುದು.
| ದಿನೇಶ ಗುಣವರ್ಧನೆ ಶ್ರೀಲಂಕಾ ಪ್ರಧಾನಿ