

ಇಲ್ಲೆಲ್ಲಾ ಬ್ರಹ್ಮಲೀನ ಶ್ರೀಮತ್ ಸ್ವಾಮಿ ರಂಗನಾಥಾನಂದಜಿ ಅವರ ವ್ಯಕ್ತಿತ್ವ ಮತ್ತು ಉಪನ್ಯಾಸಗಳ ಪ್ರಭಾವ ಅಷ್ಟಿಷ್ಟಲ್ಲ ಎನ್ನುವುದು ಬೇರೆಯೇ ಮಾತು. ಅನಂತರ ವಿವೇಕಾನಂದರು ಕೈಗೊಂಡ ಬಹಳಷ್ಟು ರಾಷ್ಟ್ರ ಜಾಗೃತಿ ಕಾರ್ಯಕ್ರಮಗಳಲ್ಲಿ ಒಂದು- ಸುಮಾರು ಐವತ್ತಕ್ಕೂ ಹೆಚ್ಚು ಬ್ರಾಹ್ಮಣರಲ್ಲದ ಹುಡುಗರಿಗೆ ಯಜ್ಞೋಪವೀತ ಧಾರಣೆ ಮಾಡಿಸಿದ್ದು. ಆ ಕಾಲದಲ್ಲಿ ಅದೊಂದು ಕ್ರಾಂತಿಕಾರಿ ಹೆಜ್ಜೆ. ಆದರೆ ವಿವೇಕಾನಂದರನ್ನು ವಿರೋಧಿಸುವ ಧೈರ್ಯವಾದರೂ ಯಾರಿಗಿತ್ತು? ಕೆಲವೇ ದಿನಗಳ ಹಿಂದೆ ಶಾಸ್ತ್ರ, ವೇದ, ಪುರಾಣಗಳ ಆಧಾರದ ಮೇಲೆ ಅವರನ್ನು ವಾದದಲ್ಲಿ ಪರೀಕ್ಷಿಸಿದ ಮದ್ರಾಸ್ ಹಾಗೂ ಕಾಶಿಯ ಪಂಡಿತ ವರ್ಗಗಳಿಗೆ ತಾವಾರೆಂಬುದನ್ನು ಸ್ಪಷ್ಟವಾಗಿ ತೋರಿಸಿದ್ದವರು ಅವರು.
ವೇದಗಳೇ ಮೂರ್ತಿವೆತ್ತಂತಿದ್ದ ಅವರನ್ನು ಕುರಿತು ಪ್ರಖ್ಯಾತ ಬಂಗಾಳಿ ಕವಿ, ಶರತ್ ಚಂದ್ರ ಗುಪ್ತ ವರ್ಣಿಸಿದ್ದು- ‘ವಂದೇ ವೇದತನುಂ ಉಜ್ಝಿತ ಗರ್ಹಿತ ಕಾಮಕಾಂಚನ ಬಂಧಂ’ ಎಂದು. ಆದರೆ ಆರ್ಯ ಸಮಾಜ ಮಾತ್ರ ತನ್ನ ಕಾರ್ಯೋದ್ದೇಶಗಳಲ್ಲಿ ಸ್ತ್ರೀಯರಿಗೂ ಉಪನಯನವನ್ನು ಪುನರ್ಸ್ಥಾಪಿಸುವತ್ತ ಗಮನಹರಿಸಿತ್ತು ಮತ್ತು ಇಂದಿಗೂ ಅದನ್ನು ಮುಂದುವರಿಸಿಕೊಂಡು ಬಂದಿದೆ.
ಈ ಹಿಂದುಳಿದ ವರ್ಗಗಳಿಗೆ ಉಪನಯನ ಸಂಸ್ಕಾರದ ಬಾಗಿಲನ್ನು ತೆರೆಯುವ ಕಾರ್ಯಕ್ರಮ ವಿವೇಕಾನಂದರ ಹೃದಯಕ್ಕೆ ಬಹಳ ಆಪ್ಯಾಯಮಾನವಾಗಿದ್ದುದಾಗಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಭಾರತದಲ್ಲಿ ಪರಿವ್ರಾಜಕರಾಗಿ ಇದ್ದಾಗಲೇ ರಾಜಸ್ಥಾನದ ಬ್ರಾಹ್ಮಣ ಹುಡುಗನೊಬ್ಬನಿಗೆ ಉಪನಯನದ ವಯಸ್ಸಾದರೂ ಇನ್ನೂ ಆ ಸಂಸ್ಕಾರಕ್ಕೆ ಒಳಪಡದಿದ್ದುದನ್ನು ಕಂಡು ಸ್ಥಳೀಯ ಬ್ರಾಹ್ಮಣ ವರ್ಗಗಳ ಮೇಲೆ ಅಸಮಾಧಾನಗೊಂಡು ಅದರ ಬಗ್ಗೆ ಎಚ್ಚರಿಸಿದ್ದರು ಕೂಡ. ಅಷ್ಟೇ ಅಲ್ಲ, ರಾಜಸ್ಥಾನವನ್ನು ಬಿಟ್ಟು ಹೊರಟ ನಂತರವೂ ತಾವು ಬರೆದ ಪತ್ರಗಳಲ್ಲಿ ಆ ಹುಡುಗನ ಉಪನಯನವಾಯಿತೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಯತ್ನಿಸುತ್ತಿದ್ದರು.
ಇದು ಅವರ ಪ್ರಕಾರ ಪ್ರತಿಯೊಬ್ಬ ಭಾರತೀಯನೂ ಗಂಭೀರವಾಗಿ ಗಮನಿಸಬೇಕಾದ ವಿಷಯ. ಪ್ರತಿ ಭಾರತೀಯನೂ ಆರ್ಯನೇ ಎಂಬುದನ್ನು ಹಾಗಲ್ಲದೆ ಅವರು ಹೊರಗಿನಿಂದ ಬಂದವರು ಎಂದು ನಿರೂಪಿಸುತ್ತಿದ್ದ ವಿದ್ವಾಂಸರಿಗೆ ರ್ತಾಕ ಆಧಾರಗಳ ಮೇಲೆಯೇ ಛಡಿಯೇಟು ಕೊಟ್ಟು ಸಾಬೀತುಪಡಿಸುತ್ತಿದ್ದವರು ಅವರು. ಇಂತಹ ಪೊಳ್ಳುಗಳ ಮೇಲೆ ಭಾರತೀಯ ಇತಿಹಾಸವನ್ನು ಕಟ್ಟುತ್ತಿದ್ದವರ ಮೂರ್ಖತನವನ್ನು ಖಂಡಿಸಿದ್ದು ಅದೆಷ್ಟು ಸಲವೋ?! ಅಷ್ಟೇ ಅಲ್ಲ, ಅವರ ಪ್ರಕಾರ ಕೃತಯುಗದಲ್ಲಿ ಇದ್ದುದು ಕೇವಲ ಬ್ರಾಹ್ಮಣರು ಮಾತ್ರ. ಕ್ರಮೇಣ ಅವರೆಲ್ಲ ಬ್ರಾಹ್ಮಣರ ಅನುಷ್ಠಾನ, ವ್ರತಾದಿಗಳನ್ನು ಬಿಟ್ಟು ಅಧಿಕಾರ, ಸಂಪತ್ತು ಇವುಗಳ ಆಕರ್ಷಣೆಗೆ ಮಾರು ಹೋಗಿ ಬೇರೆಬೇರೆ ವರ್ಣಗಳಾದವು.
ಆದರೆ ಮೂಲತಃ ಭಾರತೀಯ ಜನಾಂಗಗಳೆಲ್ಲವೂ ಬ್ರಾಹ್ಮಣರೇ. ಆದ್ದರಿಂದ ಭಾರತೀಯ ಹುಡುಗರೆಲ್ಲರಿಗೂ ಉಪನಯನ, ಬ್ರಹ್ಮೋಪದೇಶ ಮತ್ತು ವೇದಾಧ್ಯಯನದ ಹಕ್ಕಿದೆ. ಅದಕ್ಕೆ ಆಧಾರವಾಗಿ ಅವರು ಉಲ್ಲೇಖಿಸುವುದು ಮಹಾಭಾರತವನ್ನು. ಹೇಗೆ ಇದ್ದ ಒಂದೇ ವೇದ ಹಲವು ಭಾಗಗಳಾಯಿತೋ ಅದೇ ರೀತಿ ಇದ್ದ ಒಂದೇ ವರ್ಣವೂ ಹಲವು ಭಾಗಗಳಾದವು. ಮತ್ತೆ ಸತ್ಯಯುಗ ಪ್ರಾರಂಭವಾಗಿ ಒಂದು ವೇದ ಮತ್ತು ಒಂದು ವರ್ಣವಾಗುವುದರಲ್ಲಿ ಸಂದೇಹವೇ ಇಲ್ಲ. ಆ ಕಾರಣಕ್ಕಾಗಿಯೇ ಶ್ರೀರಾಮಕೃಷ್ಣರು ಅವತರಿಸಿರುವುದು ಎಂದು ಅಧಿಕಾರವಾಣಿಯಿಂದ ಹೇಳುತ್ತಿದ್ದವರು ಅವರು. ಅಕ್ಷರಶಃ ಅವರ ಮಾತುಗಳೆಲ್ಲವೂ ನಿಜವಾಗುತ್ತಿವೆ. ಇಂದು ಪಾಶ್ಚಾತ್ಯ ಪ್ರಪಂಚ ರಾಮಕೃಷ್ಣ ಆಶ್ರಮಗಳನ್ನು ತಮ್ಮಲ್ಲೂ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಅದಾವ ಪ್ರಮಾಣದಲ್ಲಿ ಒಡ್ಡುತ್ತಿದೆ ಎಂದರೆ ಅದನ್ನು ಈಡೇರಿಸ ಹೊರಟರೆ ನೂರಾರು ಸನ್ಯಾಸಿಗಳನ್ನು ಸೃಷ್ಟಿಸಬೇಕಾದೀತು!!
ಇದೇನು ಈ ಉಪನಯನ, ಈ ಯಜ್ಞೋಪವೀತ, ಈ ಜನಿವಾರ ಇತ್ಯಾದಿ? ಇದನ್ನು ಏಕೆ ಧರಿಸಬೇಕು? ಯಾರೆಲ್ಲಾ ಧರಿಸಬಹುದು? ಧರಿಸುವುದರಿಂದಾಗುವ ಪ್ರಯೋಜನವೇನು? ಧರಿಸದಿದ್ದಲ್ಲಿ ಆಗುವ ನಷ್ಟವೇನು? ಈ ಪ್ರಶ್ನೆಗಳು ಕೆಲವರ ಮನಸ್ಸಿನಲ್ಲಾದರೂ ಇತ್ತೀಚಿನ ದಿನಗಳಲ್ಲಿ ನುಸುಳಿದ್ದರೆ ಆಶ್ಚರ್ಯವಿಲ್ಲ. ಈ ಉಪನಯನ ಅಥವಾ ಯಜ್ಞೋಪವೀತ ಸನಾತನ ಸಂಸ್ಕೃತಿ ವಿಧಿಸಿರುವ ಹದಿನಾರು ಸಂಸ್ಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಇದನ್ನು ಯಾರೂ ಧರಿಸಬಹುದೆಂಬುದನ್ನು ವಿವೇಕಾನಂದರೇ ಸ್ಪಷ್ಟಪಡಿಸಿದ್ದಾರೆ. ಈ ಸಂಸ್ಕಾರ ಒಂದು ದೀಕ್ಷೆಯೂ ಹೌದು. ಅದೇ ಬ್ರಹ್ಮಚರ್ಯ ದೀಕ್ಷೆ. ಇಲ್ಲಿಂದಲೇ ಹಿಂದುವೊಬ್ಬನ ವಿದ್ಯಾಭ್ಯಾಸ ಪ್ರಾರಂಭವಾಗುವುದು.
ಇಲ್ಲಿಂದಾಚೆಗೆ ವಿವಾಹವಾಗುವವರೆಗೂ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ ಕಟ್ಟುನಿಟ್ಟಿನ ಬ್ರಹ್ಮಚರ್ಯವನ್ನು ಪಾಲಿಸಬೇಕು. ಈ ಸಂದರ್ಭದಲ್ಲೇ ಬಾಲಕರಿಗೆ ಗಾಯತ್ರಿ ಮಂತ್ರವನ್ನು, ಬಾಲಕಿಯರಿಗೆ ಸಾವಿತ್ರಿ ಮಂತ್ರವನ್ನು ಉಪದೇಶ ಮಾಡುತ್ತಾರೆ. ಇದರ ಜೊತೆಗೆ ಸೂರ್ಯನ ಆರಾಧನೆ, ಅರ್ಘ್ಯವನ್ನು ಅರ್ಪಿಸುವುದು ಇತ್ಯಾದಿಗಳೂ ಇರುತ್ತವೆ. ರಾಮಕೃಷ್ಣ ಆಶ್ರಮದ ಸನ್ಯಾಸಿಗಳು ವಿವಾಹ ಕಾರ್ಯಕ್ರಮ ಅಥವಾ ಶ್ರಾದ್ಧಾದಿಗಳಿಗೆ ಹೋಗದಿದ್ದರೂ ಈ ಕಾರ್ಯಕ್ರಮಕ್ಕೆ ಸ್ವಲ್ಪ ಹೆಚ್ಚಿನ ಉತ್ಸಾಹದಿಂದಲೇ ಹೋಗುತ್ತಾರೆ. ಅಷ್ಟೇ ಅಲ್ಲ, ಆಶ್ರಮಕ್ಕೆ ಸನ್ಯಾಸಿಯಾಗುವ ಉದ್ದೇಶದಿಂದ ಒಬ್ಬ ಯುವಕ ಸೇರಬಯಸಲು ಇಚ್ಛಿಸಿದರೆ ಅವನಿಗೆ ಈಗಾಗಲೇ ಉಪನಯನವಾಗಿರದಿದ್ದಲ್ಲಿ ಅವನಾವ ಜಾತಿ ಅಥವಾ ಧರ್ಮಕ್ಕೇ ಸೇರಿರಲಿ ಅದನ್ನು ಮಾಡಿಸಿ ಗಾಯತ್ರಿ ಮಂತ್ರೋಪದೇಶದ ನಂತರವೇ ಅವನಿಗೆ ಸನ್ಯಾಸವನ್ನು ಕೊಡುವುದೂ ಸಹ.
ಈ ಉಪನಯನ ಸಂಸ್ಕಾರ ಕೇವಲ ಬ್ರಾಹ್ಮಣರಲ್ಲಿದೆ ಎಂದರೆ ತಪ್ಪು. ಸಾಂಪ್ರದಾಯಿಕವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಲ್ಲಿದೆ ಅರ್ಥಾತ್ ಎಲ್ಲಾ ಬ್ರಾಹ್ಮಣ ಉಪಪಂಗಡಗಳಲ್ಲೂ ಕ್ಷತ್ರಿಯ ಉಪಪಂಗಡಗಳಾದ ಸೋಮವಂಶ, ಭಾವಸಾರ, ಶಿಂಧೆ, ಘೊರ್ಪಡೆ, ಎಸ್ಎಸ್ಕೆ ಇತ್ಯಾದಿ ಮಹಾರಾಷ್ಟ್ರದ ಬೃಹತ್ ಮರಾಠಿ ಜನಾಂಗ, ಯಾದವರು ಇತ್ಯಾದಿ ಮತ್ತು ಇಡೀ ಆರ್ಯವೈಶ್ಯ, ಗಾಣಿಗ, ಬನಿಯಾ ಇತ್ಯಾದಿ ವೈಶ್ಯ ಜನಾಂಗ, ಆಂಧ್ರದ ರೆಡ್ಡಿ ಜನಾಂಗ ಇವರೆಲ್ಲರಲ್ಲೂ ಈ ಉಪನಯನ ಸಂಸ್ಕಾರ ಇದೆ ಅಥವಾ ಇತ್ತು. ಯಾವ ಆಧಾರದ ಮೇಲೆ ನಾನು ಇದನ್ನು ಹೇಳುತ್ತಿದ್ದೇನೆ ಎಂದರೆ ಇವರೆಲ್ಲ ಒಂದು ಕಾಲದಲ್ಲಿ ಭಾರತ ದೇಶದ ಯಾವುದೋ ಒಂದು ಭಾಗವನ್ನು ಆಳಿದವರು ಅಥವಾ ಬೃಹತ್ ಪ್ರಮಾಣದಲ್ಲಿ ವಾಣಿಜ್ಯೋದ್ಯಮದಲ್ಲಿ ತೊಡಗಿಸಿಕೊಂಡವರು. ಆದರೆ ಸ್ವಾಮಿ ವಿವೇಕಾನಂದರು ಪ್ರತಿ ಆರ್ಯನ ಅರ್ಥಾತ್ ಪ್ರತಿ ಭಾರತೀಯನ ಹಕ್ಕು ಉಪನಯನ ಮತ್ತು ವೇದಾಧ್ಯಯನ ಎಂದು ಹೇಳಿದ್ದುದರ ಉಲ್ಲೇಖ ಈಗಾಗಲೇ ಮಾಡಿದ್ದೇನೆ.
ಈ ಉಪನಯನ ಬಾಲಕನೊಬ್ಬನಿಗೆ ಎರಡನೇ ಜನ್ಮ ಅಥವಾ ದ್ವಿಜತ್ವವನ್ನು ಕೊಡುತ್ತದೆ. ಸಂಸ್ಕಾರಗಳಿಂದ ದ್ವಿಜತ್ವ ಎಂದು ಹೇಳಿದ್ದರೂ ಎಲ್ಲಾ ಸಂಸ್ಕಾರಗಳ ಬುನಾದಿ ಪಾವಿತ್ರ್ಯ ಮತ್ತು ಜನಿವಾರ ಅಥವಾ ಯಜ್ಞೋಪವೀತದಲ್ಲಿರುವ ಮೂರು ಎಳೆಗಳು- ಕಾಯ, ವಾಚ, ಮನಸಾ ಪಾವಿತ್ರ್ಯವನ್ನು ಪಾಲಿಸಬೇಕಾದ ಸೂತ್ರಗಳು ಅಥವಾ ವಿಧಿಗಳು. ಇದೊಂದು ಗಂಭೀರವಾದ ದೀಕ್ಷೆ. ಪೂರ್ಣ ಪ್ರಮಾಣದ ಬ್ರಹ್ಮಚರ್ಯ ಹೇಗೆ ಎನ್ನುವ ವಿವರಣೆಯೇ ಇದೆ.
ಉಪನಯನ ಎಂದರೇನೇ ಹೊಸ ಕಣ್ಣು, ಉಪ + ನಯನ; ಅರ್ಥಾತ್ ಹೊಸ ದೃಷ್ಟಿಕೋನ. ಅದರಲ್ಲೂ ಸ್ತ್ರೀಯರೆಡೆಗೆ. ಮನುಷ್ಯನ ಬುದ್ಧಿಮತ್ತೆ, ಮಾನಸಿಕ ಏಕಾಗ್ರತೆ ಮತ್ತು ಬ್ರಹ್ಮಚರ್ಯ ಒಂದೇ ವಸ್ತುವಿನ ಮೂರು ಮುಖಗಳು. ಕ್ಯಾಥೋಲಿಕ್ ಸಂಪ್ರದಾಯ ಸಾಧಿಸಿದ ಮಟ್ಟದಲ್ಲಿ ಪ್ರಾಟೆಸ್ಟೆಂಟ್ ಸಂಪ್ರದಾಯ ಸನ್ಯಾಸಿಗಳ ಗುಣಾತ್ಮಕತೆಯನ್ನು ಸಾಧಿಸಲಿಲ್ಲ. ಏಕೆಂದರೆ ಪ್ರಾಟೆಸ್ಟೆಂಟರು ಬ್ರಹ್ಮಚರ್ಯಕ್ಕೆ ಒತ್ತು ಕೊಡದಿದ್ದುದೇ ಕಾರಣ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಇವೆಲ್ಲಾ ಸನಾತನ ಧರ್ಮ ಸಹಸ್ರಾರು ವರ್ಷಗಳ ಕಾಲ ಪ್ರಯೋಗಗಳನ್ನು ನಡೆಸಿ ಕಂಡುಕೊಂಡಿದ್ದು. ಶ್ರೀ ಶಂಕರ, ವಿವೇಕಾನಂದ, ಅಲ್ಲಮಪ್ರಭು, ಬುದ್ಧ, ರಾಮಾನುಜ, ಮಧ್ವ ಇತ್ಯಾದಿಗಳೆಲ್ಲರೂ ಈ ತತ್ವಗಳಿಗೆ ಜೀವಂತ ಉದಾಹರಣೆ.
ಸಂತಾನೋತ್ಪತ್ತಿಗೆ ಕಾರಣವಾಗುವ ವೀರ್ಯ ಶಕ್ತಿಯನ್ನು ಮೃಗದಂತೆ ವ್ಯರ್ಥ ಮಾಡದೆ ಬ್ರಹ್ಮಚರ್ಯ, ಧ್ಯಾನ, ಪ್ರಾರ್ಥನೆ ಇವುಗಳಿಂದ ಓಜಸ್ಸಾಗಿ ಪರಿವರ್ತಿಸಿ ಮಹಾಮಾನವ, ದೇವಮಾನವನಂತೆ ಬದುಕು ಎನ್ನುವುದೇ ಗಾಯತ್ರಿ ಮಂತ್ರದ ಸಂದೇಶ. ಸೂರ್ಯೋದಯ ಮತ್ತು ಸೂರ್ಯಾಸ್ತಗಳಲ್ಲಿ (ಸಂಧ್ಯಾಕಾಲ) ಗಾಯತ್ರಿ ಪುರಶ್ಚರಣವನ್ನು ಮಾಡಬೇಕು ಮತ್ತು ಇದನ್ನು ಇಪ್ಪತ್ನಾಲ್ಕು ಲಕ್ಷ (ಅಕ್ಷರ ಲಕ್ಷ) ಮಾಡಿದ ನಂತರವೇ ‘ದ್ವಿಜ’ರು ವಿವಾಹವಾಗಬೇಕು. ಅದಕ್ಕಿಂತ ಮುಂಚೆ ಅಲ್ಲ. ಯಜ್ಞೋಪವೀತ ಅಥವಾ ಜನಿವಾರವನ್ನು ಎಡ ಭುಜದಿಂದ ಬಲ ಕಂಕುಳ ಕೆಳಗೆ ಬರುವ ಹಾಗೆ ಧರಿಸಿ ಗಾಯತ್ರಿ ಮಂತ್ರದ ಕಾಲದಲ್ಲಿ ಬಲ ಬೆರಳುಗಳ ನಡುವೆ ಸಿಕ್ಕಿಸಿಕೊಂಡು ಮಂತ್ರವನ್ನು ಜಪಿಸಬೇಕು. ಸರಿ, ಇದರ ಪ್ರಯೋಜನ? ಈ ಪ್ರಶ್ನೆಗೆ ಸನಾತನರು ಉತ್ತರಿಸುವುದು- ‘ಪ್ರಯೋಜನವೇ? ನೀನು ಸೃಷ್ಟಿಕರ್ತನೇ ಆಗಬಲ್ಲೆ!’ ಎಂದು. ಪರಮ ಕ್ರೂರಿ, ಕಟುಕ ರಾಜಾ ಕೌಶಿಕ ಕಠಿಣ ತಪಸ್ಸಿನಿಂದ ವಿಶ್ವಾಮಿತ್ರನಾಗಿ (ಎರಡನೇ ಸೃಷ್ಟಿಕರ್ತನೇ ಆಗಿ) ಗಾಯತ್ರಿ ಮಂತ್ರವನ್ನು ಕಂಡುಹಿಡಿದಿದ್ದೇ ತನ್ನಂತೆಯೇ ಪ್ರತಿಯೊಬ್ಬನಿಗೂ ಈ ಯೋಗ್ಯತೆ ಬರಲೆಂದು. ತನ್ನ ಶಿಷ್ಯ ತ್ರಿಶಂಕುವಿನ ಗೌರವಾರ್ಥ ಹೊಸ ಸೃಷ್ಟಿಯನ್ನೇ ಮಾಡಹೊರಟವನು ಅವನು.
ಕಳೆದ ಲೇಖನದಲ್ಲಿ ‘ಚಿಂತಕರೆಂಬ ಹೆಸರಿನ ಚಿಂತಾಕ್ರಾಂತರ ಗುಂಪೊಂದು ನಿರ್ವಣವಾಗಿದೆ, ಇವರ ಉದ್ದೇಶವೇ ಎಲ್ಲವನ್ನು ನಿರ್ನಾಮಗೊಳಿಸುವುದು’ ಎಂದು ಹೇಳಿದ್ದೆ. ಯಾರೋ ಒಬ್ಬ ಹೋಂ ಗಾಡೋ ಮತ್ತೊಬ್ಬ ಬ್ಲಾಗಡೋ ಬ್ರಾಹ್ಮಣ ಹುಡುಗರು ಧರಿಸಿರುವ ಜನಿವಾರವನ್ನು ತೆಗೆಸಿರಬಹುದು, ಈ ಹಿಂದೆ ಎಂದೂ ಘಟಿಸದ ಈ ಘಟನೆ ಇಂದೇಕೆ ಘಟಿಸಿದೆ? ಸೊಳ್ಳೆಗಳ ಕಾಟಕ್ಕೆ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು ಪ್ರಬುದ್ಧತೆಯ ಲಕ್ಷಣವಲ್ಲ, ಸೊಳ್ಳೆಗಳ ಮೊಟ್ಟೆಗಳು ಎಲ್ಲಿ ಬೆಳೆಯುತ್ತವೆಯೋ ಅಂಥ ಸ್ಥಗಿತ ನೀರಿನಲ್ಲಿ ಔಷಧ ಸಿಂಪಡಿಸಿ ಅದನ್ನು ಕೊಲ್ಲುವುದು ಬುದ್ಧಿವಂತಿಕೆ.
ಈ ಹೋಂ ಗಾರ್ಡ್ ಅಥವಾ ಒಬ್ಬ ಪ್ರಿನ್ಸಿಪಾಲ್ ಇನ್ನಾರೋ ದೊಡ್ಡವರು ಕೂಗಿದ್ದನ್ನೇ ಪ್ರತಿಧ್ವನಿಸಿದ ಮರಿಗಳು ಮಾತ್ರ. ಈ ದೊಡ್ಡವರು ಯಾರು? ಇದನ್ನು ಬೆಳೆಸುತ್ತಿರುವವರಾರು? ಇವರನ್ನು ಬೆಳೆಸುತ್ತಿರುವ ಉದ್ದೇಶವೇನು ಎಂದು ತಿಳಿಯುವುದು ಮುಖ್ಯ. ಒಂದು ರೀತಿಯಲ್ಲಿ ಸನಾತನತೆಯನ್ನು ಛೇಡಿಸುವುದೇ ಈ ಅವಿವೇಕಿಗಳ ಲಕ್ಷಣ. ಪ್ರಜಾಪ್ರಭುತ್ವದಲ್ಲಿ ಜನಿವಾರವನ್ನು ತೆಗೆ ಎಂದು ಹೇಳುವ ಧೈರ್ಯ ಮಾಡಿದರು ಹೇಗೆ? ಒಂದು ದೇಶದ ದೌರ್ಬಲ್ಯ ಮತ್ತು ಪ್ರಾಬಲ್ಯಗಳು ಎಲ್ಲಿ ಅಡಗಿವೆ ಎಂಬುದನ್ನು ಅತ್ಯಂತ ಕರಾರುವಾಕ್ಕಾಗಿ ನಿರ್ಧರಿಸುವ ಸಾಮರ್ಥ್ಯವನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರು ಯಾವ ಕಾರ್ಯಕ್ರಮಕ್ಕೆ ಆದ್ಯತೆಯನ್ನು ಕೊಟ್ಟರೋ ಅದನ್ನು ಅವಮಾನಿಸಿದವರನ್ನು ಯಾವ ಭಾಷೆಯಲ್ಲಿ ಕರೆಯಲಿ? ಜನಿವಾರದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಜ್ಞಾನೋದಯ ಇವರಿಗೇ ಆಯಿತೋ, ಮತ್ತಾರೋ ಕೊಟ್ಟರೋ? ಜನಿವಾರದಿಂದ ಆತ್ಮಹತ್ಯೆಯಾಗುವುದಾದರೆ ಪ್ಯಾಂಟ್ ಬೆಲ್ಟ್ನಿಂದ ಆಗಲ್ಲವೇನು? ಅಷ್ಟೇಕೆ ಕೈಯಲ್ಲಿರುವ ಬೆರಳುಗಳೇ ಸಾಕು ಈ ಕಾರ್ಯಕ್ಕೆ! ಎಂತಹ ಮೂರ್ಖರಿವರು! ಶಿಕ್ಷಣ ವ್ಯವಸ್ಥೆಗೆ ಇಂಥಾ ದುರವಸ್ಥೆಯೇ?
ಜನಿವಾರದ ಪ್ರಸ್ತುತತೆಯ ಹಿನ್ನೆಲೆ ಬುದ್ಧಿಯ ಜಾಗದಲ್ಲಿ ಮತ್ತೇನೋ ಇರುವ ಮನುಷ್ಯನಿಗೆ ಅರ್ಥವಾದೀತೆ?! ಈ ಅವಿವೇಕದ ಮೂಲವನ್ನು ಯಾರೂ ಸುಲಭವಾಗಿ ಗ್ರಹಿಸಬಲ್ಲರು! ಸತ್ತ ಸೈನಿಕರಲ್ಲಿ ಯಾವ ಯಾವ ಜಾತಿಯವರಿದ್ದಾರೆ ಎಂದು ಕೇಳುವ, ತುಪ್ಪ ತಿಂದವರು ಯಾರು? ಉಪ್ಪು ಹಾಕಿದವರು ಯಾರು? ಅಡಿಗೆಯವರಾರು? ತಿಂದವರಾರು? ಎನ್ನುವುದರ ಬಗ್ಗೆ ಥೀಸಿಸ್ ಬರೆಯುವ ಈ ಪ್ರಭೃತಿಗಳನ್ನು ನೋಡಿದಾಗ ಐನ್ಸ್ಟೈನರ ಮಾತೊಂದು ಕಿವಿಯಲ್ಲಿ ಗುನುಗುತ್ತದೆ. There are two infinities in the creation. One is the universe and the other is human stupidity and I am not confident of the infinite universe.
ಇಂಥ ಮೆದುಳಿನವರಿಗೆ ಜವಾಬ್ದಾರಿಗಳನ್ನು, ಪ್ರಶಸ್ತಿಗಳನ್ನು ಕೊಟ್ಟು ಪೋ›ತ್ಸಾಹಿಸುತ್ತಿರುವುದೇ ಈ ಎಲ್ಲ ರಾದ್ಧಾಂತಗಳ ಮೂಲ. ಒಂದು ದೇಶ ಹೇಗೆ ಹಾಳಾಗುತ್ತದೆ ಎಂಬುದಕ್ಕೆ ಮಹಾತ್ಮನೊಬ್ಬ ಹೇಳಿರುವ ಮಾತುಗಳಲ್ಲೊಂದು ‘ನೀಚ ಮಹತ್ವಂಗತಾಃ’ ನೀಚರು ಮಹತ್ವದ ಸ್ಥಾನಗಳಲ್ಲಿ ಕುಳಿತು ಬಿಡುತ್ತಾರೆ ಎಂಬುದು. ಇಲ್ಲಿ ನೀಚ ಎಂದರೆ ಅನರ್ಹ ಎಂದು! ಮತ್ತಾವ ಅರ್ಥವೂ ಅಲ್ಲ! (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)