ಆದ್ಯ ಸೂತ್ರಗಳ ಆಚಾರ್ಯರು; ಶ್ರೀಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ

God
Published on
ಶಿವನ ಪಂಚಮುಖಗಳಿಂದ ಏಕಕಾಲದಲ್ಲಿ ಅವತರಿಸಿದ ಜಗದ್ಗುರು ಪಂಚಾಚಾರ್ಯರು ಭೂಮಂಡಲದಲ್ಲಿ ಪ್ರಕಟಗೊಂಡ ಮುಹೂರ್ತಗಳು ಭಿನ್ನವಾಗಿದ್ದರೂ ಪ್ರತಿ ವರ್ಷ ಚೈತ್ರ ಶುದ್ಧ ಪಂಚಮಿಯಂದು ಸಂಯುಕ್ತವಾಗಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವವನ್ನು ಆಚರಿಸಲಾಗುತ್ತದೆ. ಇಂದಿನಿಂದ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮವು ಮಾ. 26ರಂದು ಮಂಗಲಗೊಳ್ಳಲಿದೆ.

ಶಿವನ ಸೃಷ್ಟಿಯಲ್ಲಿ ಪ್ರಪ್ರಥಮವಾಗಿ ಶಿವನ ಪಂಚಮುಖಗಳಿಂದ ಏಕಕಾಲಕ್ಕೆ ಆವಿರ್ಭವಿಸಿದ ಶ್ರೀ ಜಗದ್ಗುರು ಪಂಚಾಚಾರ್ಯರು ಶಿವನಿಂದಲೇ ದೀಕ್ಷಾ ಸಂಸ್ಕಾರವನ್ನು ಹೊಂದಿ, ಶಿವನಿಂದಲೇ ಜಗದ್ಗುರುತ್ವಾಧಿಕಾರವನ್ನು ಪಡೆದುಕೊಂಡವರು. ಅಂತೆಯೇ ಶ್ರೀ ಜಗದ್ಗುರು ಪಂಚಾಚಾರ್ಯರಿಗೆ ಶಿವನೇ ತಂದೆ ಹಾಗೂ ಶಿವನೇ ಗುರುವು. ಜಗತ್ತಿನ ಎಲ್ಲ ಗುರು ಪರಂಪರೆಗೆ ಶಿವನೇ ಮೂಲ. ಅಂತೆಯೇ ಶಿವನು ಪ್ರಪಂಚದ ಆದಿ ಜಗದ್ಗುರು. ಆದ್ದರಿಂದಲೇ ಪತಂಜಲಿ ಮಹರ್ಷಿಗಳು ‘ಸಃ ಪೂರ್ವೆಷಾಮಪಿ ಗುರುಃ ಕಾಲೇನಾನವಚ್ಛೇದಾತ್’ ಎಂಬ ತಮ್ಮ ಯೋಗ ಸೂತ್ರದಲ್ಲಿ ಶಿವನನ್ನು ಆದಿ ಗುರುವೆಂದು ಬೋಧಿಸಿದ್ದಾರೆ.

ಜಗದ್ಗುರು ಪಂಚಾಚಾರ್ಯರು ಕೃತ ಯುಗದಲ್ಲಿ ಏಕಾಕ್ಷರ, ದ್ವ್ಯಕ್ಷರ, ತ್ರ್ಯಕ್ಷರ, ಚತುರಕ್ಷರ ಮತ್ತು ಪಂಚಾಕ್ಷರ ಎಂಬ ನಾಮಗಳಿಂದ, ತ್ರೇತಾಯುಗದಲ್ಲಿ ಏಕವಕ್ತ್ರ, ದ್ವಿವಕ್ತ್ರ, ತ್ರಿವಕ್ತ್ರ, ಚತುರ್ವಕ್ತ್ರ ಮತ್ತು ಪಂಚವಕ್ತ್ರರೆಂಬ ನಾಮಗಳಿಂದ, ದ್ವಾಪರ ಯುಗದಲ್ಲಿ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣರೆಂಬ ನಾಮಗಳಿಂದ, ಅದರಂತೆ ಕಲಿಯುಗದಲ್ಲಿ ರೇವಣಾರಾಧ್ಯ, ಮರುಳಾರಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ ಮತ್ತು ವಿಶ್ವಾರಾಧ್ಯರೆಂಬ ನಾಮಗಳಿಂದ ಆವಿರ್ಭವಿಸಿದ್ದಾರೆ. ಕೃತಯುಗದ ಪಂಚಾಚಾರ್ಯರು ಬ್ರಹ್ಮ ವಿಷ್ಣು ಮೊದಲಾದ ಸಕಲ ದೇವತೆಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ಕೊಟ್ಟು ವೀರಶೈವ ಧರ್ಮದ ಶಿವಾದ್ವೈತ ಸಿದ್ದಾಂತವನ್ನು ಬೋಧಿಸಿದ್ದಾರೆ. ತ್ರೇತಾಯುಗದ ಪಂಚಾಚಾರ್ಯರು ಯಕ್ಷ, ರಾಕ್ಷಸ, ಕಿನ್ನರ, ಕಿಂಪುರುಷರಿಗೆಲ್ಲ ಲಿಂಗ ದೀಕ್ಷೆಯನ್ನು ಕೊಟ್ಟು ವೀರಶೈವ ಸಿದ್ದಾಂತವನ್ನು ಬೋಧಿಸಿದ್ದಾರೆ.

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ದೇವಋಣ, ಪಿತೃಋಣ ಇರುವಂತೆ ಗುರುವಿನ ಋಣವೂ ಸಹ ಇರುತ್ತದೆ. ಈ ಮೂರು ಋಣಗಳಿಂದ ಮುಕ್ತರಾಗುವವರೆಗೆ ಯಾವ ಮನುಷ್ಯನಿಗೂ ಮುಕ್ತಿ ಸಿಗುವುದಿಲ್ಲ. ನಿತ್ಯಪೂಜೆ, ಜಪಾದಿಗಳನ್ನು ಮಾಡಿ ದೇವಋಣದಿಂದ ಮತ್ತು ತಂದೆ ತಾಯಿಗಳ ಸೇವೆಯನ್ನು ಮಾಡಿ ಪಿತೃ ಋಣದಿಂದ ಮನುಷ್ಯನು ಮುಕ್ತನಾಗುವಂತೆ ಗುರುವಿನ ಜಯಂತಿ, ಗುರುಸೇವೆಗಳನ್ನು ಮಾಡಿ ಗುರುವಿನ ಋಣದಿಂದಲೂ ಮುಕ್ತರಾಗಬೇಕಾಗುತ್ತದೆ. ನಮ್ಮೆಲ್ಲರ ಗುರು ಪರಂಪರೆಗೆ ಮೂಲ ಗುರುಗಳಾಗಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಸಂಯುಕ್ತವಾಗಿ ಆಚರಿಸುವ ಮೂಲಕ ಶ್ರೀ ಜಗದ್ಗುರು ಪಂಚಾಚಾರ್ಯರ ಗುರುಋಣದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ.

ಶ್ರೀ ಜಗದ್ಗುರು ಪಂಚಾಚಾರ್ಯರು ಪಂಚ ಮಹಾಭೂತಗಳ ಮತ್ತು ಪಂಚಾಕ್ಷರಗಳ ಹಾಗೂ ಪಂಚ ಕಲಶಗಳ ಅಧಿಪತಿಗಳು. ಆದ್ದರಿಂದ ಪಾಂಚ ಭೌತಿಕ ದೇಹವನ್ನು ಧರಿಸಿದ ಮತ್ತು ಪಂಚಾಕ್ಷರ ಮಹಾಮಂತ್ರವನ್ನು ಜಪಿಸುವ ಹಾಗೂ ಪಂಚಕಲಶಗಳ ಸಾಕ್ಷಿಯಲ್ಲಿ ಮಂಗಳ ಕಾರ್ಯಗಳನ್ನು ಮಾಡುತ್ತಿರುವ ಪ್ರತಿಯೊಬ್ಬರೂ ಶ್ರೀ ಜಗದ್ಗುರು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಎಲ್ಲೆಡೆ ಸಂಯುಕ್ತವಾಗಿ ಆಚರಿಸುವ ಪದ್ಧತಿಯನ್ನು ರೂಢಿಯಲ್ಲಿ ತರಬೇಕು.

ಪಂಚಸೂತ್ರಗಳ ಪರಮಾಚಾರ್ಯರು: ಶಿವನು ಆದಿಯಲ್ಲಿ ಮನುಕುಲದ ಹಿತಕ್ಕಾಗಿ ಪಂಚ ಶಿವಗಣರನ್ನು ಏಕಕಾಲಕ್ಕೆ ಸೃಷ್ಟಿಸಿ ವೀರಶೈವ ಧರ್ಮವನ್ನು ಸ್ಥಾಪಿಸಲು ಭೂಲೋಕಕ್ಕೆ ಕಳಿಸಿ ಅವರಿಂದಲೇ ಈ ಧರ್ಮವನ್ನು ಸ್ಥಾಪಿಸಿದ್ದಾನೆ. ಗಣ ಎಂದರೆ ಗುಂಪು ಎಂದರ್ಥ. ಅಂತೆಯೇ ವಿವಾಹ, ದೀಕ್ಷಾ ಮೊದಲಾದ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಪಂಚ ಕಲಶಗಳನ್ನು ಸ್ಥಾಪಿಸಿ, ಪಂಚಾಚಾರ್ಯರ ಸಾಕ್ಷಿಯಾಗಿ ಎಲ್ಲ ವಿಧಿಗಳನ್ನು ಮಾಡುವ ಪದ್ಧತಿ ಅನಾದಿ ಕಾಲದಿಂದಲೂ ರೂಢಿಯಲ್ಲಿ ಬಂದಿದೆ.

ಸಂಯುಕ್ತ ಆಚರಣೆ ಹೆಚ್ಚು ಅರ್ಥಪೂರ್ಣ

ಭೂಲೋಕದಲ್ಲಿ ಜಗದ್ಗುರು ಪಂಚಾಚಾರ್ಯರು ಪ್ರಾಕಟ್ಯಗೊಂಡ ಮುಹೂರ್ತಗಳು ಭಿನ್ನ ಭಿನ್ನವಾಗಿದ್ದರೂ, ಮೂಲತಃ ಶಿವನ ಪಂಚಮುಖಗಳಿಂದ ಏಕಕಾಲದಲ್ಲಿ ಪ್ರಾದುರ್ಭವಿಸಿರುವುದರಿಂದ, ಸಮಾನ ಪೀಠಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಸಂಯುಕ್ತವಾಗಿ ಮಾಡುವುದು ಹೆಚ್ಚು ಅರ್ಥಪೂರ್ಣ. ಅಂತೆಯೇ ನಮ್ಮ ಪೂರ್ವಾಚಾರ್ಯರು ಶ್ರೀ ಜಗದ್ಗುರು ಪಂಚಾಚಾರ್ಯ ಜಯಂತಿ ಯುಗಮಾನೋತ್ಸವದ ಪದ್ಧತಿಯನ್ನು ಮೊದಲಿಂದಲೂ ರೂಢಿಯಲ್ಲಿ ತಂದಿದ್ದಾರೆ. ಅದರಂತೆ ಪ್ರಸ್ತುತ ಪೀಠಾಚಾರ್ಯರು, ಶಿವಾಚಾರ್ಯರು ಮತ್ತು ಭಕ್ತಾದಿಗಳು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವವನ್ನು ಆಚರಿಸುವ ಪದ್ಧತಿ ರೂಢಿಸಿಕೊಂಡು ಬಂದಿದ್ದಾರೆ.

ಕಲಕೇರಿಯಲ್ಲಿ 10 ದಿನದ ಕಾರ್ಯಕ್ರಮ

ಇದೇ ಮಾರ್ಚ್ 26ರ ಚೈತ್ರ ಶುದ್ಧ ಪಂಚಮಿಯಂದು ವಿಜಯಪುರ ಜಿಲ್ಲೆಯ ಸುಕ್ಷೇತ್ರ ಕಲಕೇರಿಯಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವವನ್ನು ಜಾಲಹಳ್ಳಿಯ ಶ್ರೀ ಷ.ಬ್ರ. ಜಯಶಾಂತಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ. ಆ ಭಾಗವಾಗಿ ಇಂದಿನಿಂದ 10 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರಸ್ತುತ ಪೀಠಾಚಾರ್ಯರು, ನಾಡಿನ ಶಿವಾಚಾರ್ಯರು, ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕರೊನಾ ಮಹಾಮಾರಿಯಿಂದ ನಿಂತು ಹೋಗಿದ್ದ ಈ ಯುಗಮಾನೋತ್ಸವವನ್ನು ಸಿಂಧಗಿ ಸಾರಂಗಮಠದ ಷ.ಬ್ರ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಕಳೆದ ವರ್ಷ ಮರು ಆರಂಭಿಸುವ ಮೂಲಕ ಹೊಸ ಆಯಾಮವನ್ನು ನೀಡಿದ್ದು, ಇತರರಿಗೆ ಸ್ಪೂರ್ತಿಯಾಗಿದೆ.

ದ್ವಾಪರಯುಗದ ಪಂಚಾಚಾರ್ಯರು ಕ್ರಮವಾಗಿ ರಂಭಾಪುರಿ ಪೀಠದ ಶ್ರೀ ರೇಣುಕರು ಅಗಸ್ತಯ ಮಹರ್ಷಿಗೆ ಪಡ್ವಿಡಿ ಸೂತ್ರವನ್ನು, ಉಜ್ಜಯಿನಿ ಪೀಠದ ದಾರುಕರು ದಧೀಚಿ ಮಹರ್ಷಿಗೆ ವೃಷ್ಟಿಸೂತ್ರವನ್ನು, ಕೇದಾರ ಪೀಠದ ಘಂಟಾಕರ್ಣರು ವ್ಯಾಸ ಮಹರ್ಷಿಗೆ ಲಂಬನ ಸೂತ್ರವನ್ನು, ಶ್ರೀಶೈಲ ಪೀಠದ ಧೇನುಕರ್ಣರು ಸಾನಂದ ಮಹರ್ಷಿಗೆ ಮುಕ್ತಾಗುಚ್ಛ ಸೂತ್ರವನ್ನು ಮತ್ತು ಕಾಶೀ ಪೀಠದ ವಿಶ್ವಕರ್ಣರು ದೂರ್ವಾಸ ಮಹರ್ಷಿಗೆ ಪಂಚವರ್ಣ ಮಹಾ ಸೂತ್ರವನ್ನು ಬೋಧಿಸುವುದರ ಮೂಲಕ ಎಲ್ಲರೂ ಕೂಡಿಕೊಂಡೇ ವೀರಶೈವ ಧರ್ಮವನ್ನು ಸಂಸ್ಥಾಪಿಸಿದ್ದಾರೆ.

ಈ ಪಂಚ ಸೂತ್ರಗಳಲ್ಲಿ ಶಿವ, ಜೀವ, ಜಗತ್ತು, ಬಂಧ ಮತ್ತು ಮೋಕ್ಷಗಳೆಂಬ ಪಂಚ ಪ್ರಮುಖ ದಾರ್ಶನಿಕ ವಿಷಯಗಳು ಸೂಕ್ಷ್ಮವಾಗಿ ಪ್ರತಿಪಾದಿಸಲ್ಪಟ್ಟಿವೆ. ಜಗತ್ತಿನ ಎಲ್ಲ ದಾರ್ಶನಿಕರು ಮೇಲಿನ ಐದು ವಿಷಯಗಳ ಬಗ್ಗೆ ತಮ್ಮ ತಮ್ಮ ಸಿದ್ಧಾಂತದ ಪ್ರಕಾರ ಚಿಂತನೆ ನಡೆಸಿರುವುದನ್ನು ನಾವು ಕಾಣುತ್ತೇವೆ. ಶ್ರೀ ಜಗದ್ಗುರು ಪಂಚಾಚಾರ್ಯರು ಸಹ ಶಿವನು ಬೋಧಿಸಿದ ಶಿವಾದ್ವೈತ ಸಿದ್ಧಾಂತವನ್ನು ಈ ಪಂಚ ಸೂತ್ರಗಳ ಮುಖಾಂತರ ಜಗತ್ತಿಗೆ ಬೋಧಿಸಿದ್ದಾರೆ. ಅಂತೆಯೇ ಪಂಚಾಚಾರ್ಯರು ಆದ್ಯ ಸೂತ್ರಕಾರರು.

ಸರ್ಕಾರ ಆಚರಿಸಲಿ: ವೀರಶೈವ ಧರ್ಮವು ಜಗದ್ಗುರು ಪಂಚಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟ ಸನಾತನ ಧರ್ಮವಾಗಿದ್ದು, ಪ್ರತಿ ವರ್ಷ ಚೈತ್ರಶುದ್ಧ ಪಂಚಮಿಯಂದು ಸರ್ಕಾರ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಿಸಬೇಕು.

(ಲೇಖಕರು ವಿದ್ಯಾ ವಾಚಸ್ಪತಿಗಳು, ಕಾಶೀ ಪೀಠದ ಜಗದ್ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net