

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ರಾಯಬರೇಲಿ ಕ್ಷೇತ್ರವನ್ನು ರಾಹುಲ್ ಗಾಂಧಿ ಆಯ್ಕೆ ಮಾಡಿರುವ ಬಗ್ಗೆ ಪಕ್ಷದ ಬಹಿಷ್ಕೃತ ನಾಯಕ ಆಚಾರ್ಯ ಪರಮೋದ್ ಕೃಷ್ಣಂ ಅವರು ಸಂಚಲನ ಮೂಡಿಸುವಂತಹ ಕಾಮೆಂಟ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಶೀಘ್ರದಲ್ಲೇ ರಾಹುಲ್ ಗಾಂಧಿ ಬಣ ಮತ್ತು ಪ್ರಿಯಾಂಕಾ ಬಣವಾಗಿ ವಿಭಜನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಪಕ್ಷದಲ್ಲಿ ನಡೆಯುತ್ತಿರುವ ಷಡ್ಯಂತ್ರಕ್ಕೆ ಪ್ರಿಯಾಂಕಾ ಬಲಿಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರು ಅಮೇಠಿ ಕ್ಷೇತ್ರವನ್ನು ತೊರೆದಿದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿದಿದೆ ಎಂದು ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸದಿರುವುದು ಅವರ ಬೆಂಬಲಿಗರಲ್ಲಿ ಕೋಪಕ್ಕೆ ಕಾರಣವಾಗಿದೆ. ಜೂನ್ 4 ರ ನಂತರ ಅದು ಸ್ಫೋಟಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ರಾಹುಲ್ ಜನಪ್ರಿಯತೆ ಹೆಚ್ಚುತ್ತಿರುವ ಕಾರಣ ಅವರು ರಾಯಬರೇಲಿ ಬದಲಿಗೆ ರಾವಲ್ಪಿಂಡಿ ಕ್ಷೇತ್ರವನ್ನು ಆಯ್ಕೆ ಮಾಡಬೇಕಿತ್ತು ಎಂದು ಅವರು ವಾಗ್ದಾಳಿ ನಡೆಸಿದರು.
ರಾಹುಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಪಕ್ಷ ಮತ್ತು ಕುಟುಂಬದಲ್ಲಿ ಪ್ರಿಯಾಂಕಾ ಗಾಂಧಿ ವಿರುದ್ಧ ದೊಡ್ಡ ಷಡ್ಯಂತ್ರವಿದೆ ಎಂದು ನಾನು ಒಮ್ಮೆ ಪ್ರಿಯಾಂಕಾ ಗಾಂಧಿಗೆ ಹೇಳಿದ್ದೆ ಎಂದು ಅವರು ಆರೋಪಿಸಿದರು. ಪ್ರಿಯಾಂಕಾ ಕುಟುಂಬ ಮತ್ತು ಪಕ್ಷದ ಪಿತೂರಿಗೆ ಬಲಿಯಾಗಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.