ನಾವು ನಾವಾಗಿ ಬದುಕುವುದೇ ಆಧ್ಯಾತ್ಮಿಕತೆ

Hombelaku
Published on

ಜಗತ್ತಿನ ಮೂಲವನ್ನು ತಿಳಿಯುವುದೇ ಆಧ್ಯಾತ್ಮಿಕತೆ ಹಾಗೂ ವಿಜ್ಞಾನದ ಗುರಿಯೂ ಅದೇ ಆಗಿದೆ. ಅದು ಪ್ರಾರಂಭವಾಗಬೇಕಾದ್ದು ಮನುಷ್ಯ ತಾನಾರೆಂದು ಅರಿಯುವುದರ ಮೂಲಕವೇ. ಇದನ್ನು ಭಾರತ ಬಹುಹಿಂದೆಯೇ ತಿಳಿಯಿತಾದರೂ ವಿಜ್ಞಾನ ಇತ್ತೀಚೆಗಷ್ಟೇ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ. ಆದ್ದರಿಂದ ವಿಜ್ಞಾನ ಕೂಡ ನಿಲ್ಲಬೇಕಾದ್ದು ಆಧ್ಯಾತ್ಮಿಕ ಜ್ಞಾನದ ಮೇಲೆಯೇ.

ನಾಗರಿಕತೆಗಳು ಪ್ರಾರಂಭವಾಗಿ ಇಷ್ಟು ವರ್ಷಗಳು ಕಳೆದರೂ ತಿಳಿಯಲೇಬೇಕಾದ್ದನ್ನು ತಿಳಿಯದ, ಕೆಲವೊಮ್ಮೆ ತಿಳಿಯುವ ಮನಸ್ಸೂ ಇಲ್ಲದ ಅಸಹಾಯಕಸ್ಥಿತಿ ಮನುಷ್ಯನದ್ದು ಎಂದು ಅರಿತಾಗ ಆಶ್ಚರ್ಯವಾಗುತ್ತದೆ. ಯಾವುದು ಲಾಭದಾಯಕವೋ, ಶ್ರೇಯಸ್ಕರವೋ ಅದರಲ್ಲಿ ಅವನಿಗೆ ಆಸಕ್ತಿಯೇ ಇಲ್ಲ. ತತ್ಕಾಲಕ್ಕೆ ಯಾವುದು ಉಪಶಮನಕಾರಿಯೋ ಅಷ್ಟೇ ಸಾಕು ಅವನಿಗೆ! ಯಾವ ವಿಷಯವನ್ನೂ ಮೂಲದಲ್ಲಿ ಅರಿಯುವ ವ್ಯವಧಾನವಿಲ್ಲ. ಹಾಗೆ ಮಾಡದಿದ್ದಲ್ಲಿ ಯಾವುದೂ ಪೂರ್ತಿಯಾಗಿ ಅರ್ಥವಾಗುವಂತೆಯೇ ಇಲ್ಲ. ಆಧುನಿಕ ವಿಜ್ಞಾನದ ಯಾವ ಸಂಶೋಧನೆಯೂ ತನ್ನೆಲ್ಲ ಆರ್ಭಟಗಳೊಂದಿಗೆ ಇದು ‘ದೋಷರಹಿತ’ ಎಂಬ ಹೆಗ್ಗಳಿಕೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. "It is wrong to think that the task of physics is to find out how nature is; Physics concerns what we can say about nature' ಎಂದು ವಿಜ್ಞಾನಿಗಳು ಹುಲುಬಿದ್ದೇನೂ ಸುಳ್ಳಲ್ಲ.

Qq ಇದು ಅನಿವಾರ್ಯವೇ? ನಿಃಸ್ಸಂಶಯವಾಗಿಯೂ ಅಲ್ಲ! ತಿಳಿಯಬೇಕಾದ್ದನ್ನು ತಿಳಿಯದೇ ಇರುವುದೇ ಇದಕ್ಕೆ ಕಾರಣ. ವಿಜ್ಞಾನ ‘ವಸ್ತು’ವನ್ನು ತಿಳಿಯುತ್ತಿಲ್ಲ. ಯಾವುದು ನಿಜಕ್ಕೂ ಇದೆಯೋ, ವಾಸ್ತವತೆಯನ್ನು ಹೊಂದಿದೆಯೋ ಅದೇ ‘ವಸ್ತು’ ಅದೇ ಸತ್ಯ. ಈ ಜಗತ್ತು ವಸ್ತುವಿನ ವ್ಯಕ್ತತೆ ಮಾತ್ರ. ವಸ್ತು ಬೇರೆ ವ್ಯಕ್ತತೆ ಬೇರೆ. ನಮಗೆ ಕಾಣುವುದು ವ್ಯಕ್ತತೆ ಮಾತ್ರ ವಸ್ತುವಲ್ಲ. ಜಗತ್ತು ದ್ರವ್ಯಗಳಿಂದ ಕೂಡಿದೆ, ಈ ದ್ರವ್ಯಗಳು ಒಂದೊಂದೂ ರೂಪ ಮತ್ತು ಹೆಸರನ್ನು ಪಡೆದಿರುವುದರಿಂದ ಜಗತ್ತನ್ನು ‘ನಾಮರೂಪಗಳು’ ಎಂದೂ ಕರೆಯುತ್ತೇವೆ. ವಿಜ್ಞಾನ ಈ ನಾಮರೂಪಗಳನ್ನು ಅಧ್ಯಯಿನಿಸಿಯೇ ತನ್ನ ಬೆನ್ನುಚಪ್ಪರಿಸಿಕೊಳ್ಳುತ್ತಿದೆ. ಆದರೆ ವಸ್ತುವನ್ನು ತಿಳಿಯುವುದೇ ಆಧ್ಯಾತ್ಮಿಕತೆ. ಈ ಜ್ಞಾನ ಮಾತ್ರ ಬದಲಾವಣೆಯಾಗಲಾರದು. ಇದು ಶಾಶ್ವತ ಜ್ಞಾನ, ಬೇರೆಲ್ಲ ಜ್ಞಾನಗಳೂ ಇದರ ಪ್ರತಿಫಲನ ಮಾತ್ರ ಹೆಚ್ಚೆಂದರೆ ಪೂರಕ ಮಾತ್ರ. ಆದರೆ ಆಧುನಿಕ ಯುಗದಲ್ಲಿ ಹಾಗೆ ಹೇಳುವ ಸೌಜನ್ಯವಿಲ್ಲದೆ ‘ಇದಮಿತ್ತಂ’ ಎಂಬ ಧೋರಣೆಯನ್ನು ತಳೆದಿರುವುದರಿಂದ ಕಳೆದ 70 ವರ್ಷಗಳಿಂದ ವೈಜ್ಞಾನಿಕ ಪ್ರಪಂಚ ಬೆಟ್ಟ ಅಗೆದು ಇಲಿಯನ್ನು ಹಿಡಿಯುತ್ತಿದೆ. ಇತ್ತೀಚಿನ God Particle ಅದರ ಒಂದು ಉದಾಹರಣೆ ಮಾತ್ರ. ಆಧ್ಯಾತ್ಮಿಕತೆ ಬಗ್ಗೆ ಹೇಳಹೊರಟು ವಿಜ್ಞಾನದ ವಿಷಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ‘ವಿಜ್ಞಾನ ಆಧ್ಯಾತ್ಮಿಕತೆಯ ಪ್ರಾರಂಭ ಮತ್ತು ಆಧ್ಯಾತ್ಮಿಕತೆಯೇ ವಿಜ್ಞಾನದ ಅಂತಿಮ ಗುರಿ ; ಅಷ್ಟೇಕೆ, ಯಾವುದೇ ಜ್ಞಾನದ ಅಂತಿಮಗುರಿ’. ಜಗತ್ತಿನ ಮೂಲವನ್ನು ತಿಳಿಯುವುದೇ ಆಧ್ಯಾತ್ಮಿಕತೆ ಹಾಗೂ ವಿಜ್ಞಾನದ ಗುರಿಯಾದರೂ ಅದೇ. ಅದು ಪ್ರಾರಂಭವಾಗಬೇಕಾದ್ದು ಮನುಷ್ಯ ತಾನಾರೆಂದು ಅರಿಯುವುದರ ಮೂಲಕವೇ. ಇದನ್ನು ಭಾರತ ಬಹುಹಿಂದೆಯೇ ತಿಳಿಯಿತಾದರೂ ವಿಜ್ಞಾನ ಇತ್ತೀಚೆಗಷ್ಟೇ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದೆ. ಆದ್ದರಿಂದ ವಿಜ್ಞಾನ ಕೂಡ ನಿಲ್ಲಬೇಕಾದ್ದು ಆಧ್ಯಾತ್ಮಿಕ ಜ್ಞಾನದ ಮೇಲೆಯೇ. ಬಹು ಹಿಂದೆಯೇ ಮುಂಡಕೋಪನಿಷತ್ ಸ್ಪಷ್ಟವಾಗಿ ಸಾರಿದೆ ‘ಸ ಬ್ರಹ್ಮವಿದ್ಯಾಂ ಸರ್ವ ವಿದ್ಯಾ ಪ್ರತಿಷ್ಠಂ’ ಅರ್ಥಾತ್ ಎಲ್ಲ ವಿದ್ಯೆಗಳ ಆಧಾರ ಬ್ರಹ್ಮವಿದ್ಯೆ ಅಥವಾ ಆತ್ಮಜ್ಞಾನ ಎಂದು. ಈ ಆತ್ಮಜ್ಞಾನವನ್ನು ಪಡೆಯುವ ಮಾರ್ಗವೇ ಆಧ್ಯಾತ್ಮಿಕತೆ. ಆದರೆ ಆತ್ಮಜ್ಞಾನವನ್ನು ಪಡೆಯುವ ಬಗೆ ಹೇಗೆ?

ಒಂದು ಕಥೆ ಮೂಲಕ ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ಕಾಡಿನಲ್ಲಿದ್ದ ದೊಡ್ಡ ಬಂಡೆಯ ಮೇಲೆ ಸಿಂಹಿಣಿಯೊಂದು ಕುಳಿತಿತ್ತು, ತುಂಬು ಗರ್ಭಿಣಿ. ಇಂದೋ ನಾಳೆಯೋ ಮರಿ ಹಾಕುವ ಸ್ಥಿತಿ. ಕುರಿಯ ಮಂದೆಯೊಂದು ಇತ್ತ ಕಡೆಗೇ ಬರುತ್ತಿದ್ದುದನ್ನು ಗಮನಿಸಿದ ಅದು ಕೊಬ್ಬಿದ ಕುರಿಯೊಂದರ ಮೇಲೆ ಹಾರಲೆತ್ನಿಸಿ ಗುರಿ ತಪ್ಪಿ ತಲೆ ನೆಲಕ್ಕೆ ಬಡಿದು ಸಾವನ್ನಪ್ಪಿತು. ಈ ಪ್ರಕ್ರಿಯೆಯಲ್ಲಿ ಹೊಟ್ಟೆಯಲ್ಲಿದ್ದ ಮರಿ ಹೊರಬಂದಿತು. ಇದನ್ನೆಲ್ಲ ಗಮನಿಸುತ್ತಿದ್ದ ಕುರಿಗಾಹಿ ಮರಿಯ ಮೇಲೆ ಕನಿಕರಗೊಂಡು ಅದನ್ನು ತಂದು ಕುರಿದೊಡ್ಡಿಯಲ್ಲೇ ಸಾಕಲಾರಂಭಿಸಿದ. ದಿನಗಳೆದಂತೆ ‘ಮರಿಸಿಂಹ’ ಹುಲ್ಲು ತಿನ್ನುವುದನ್ನು ಕಲಿತು ಎಲ್ಲ ಕುರಿಗಳಂತೆ ‘ಬ್ಯಾ’ ಎಂದು ಕೂಗುವುದನ್ನೂ ಕಲಿಯಿತು. ಚಹರೆಯೆಲ್ಲ ಕುರಿಗಳಂತೆ ಶರೀರ ಮಾತ್ರ ಸಿಂಹದ್ದು.

ಪಕ್ಕದ ಕಾಡಿನಲ್ಲಿದ್ದ ಸಿಂಹವೊಂದು ಒಂದು ದಿನ ಮರಿಸಿಂಹವನ್ನು ಗಮನಿಸಿ ಅವಾಕ್ಕಾಯಿತು. ಅದಕ್ಕೆ ಬುದ್ಧಿ ಕಲಿಸಬೇಕೆಂಬ ನಿಶ್ಚಯದಿಂದ ‘ನಿನ್ನ ಜೀವನ ಹಾಳಾಗುತ್ತಿದೆ, ನಿನಗೇಕೆ ಈ ದುರವಸ್ಥೆ! ನೀನು ಯಾರೆಂದು ಬಲ್ಲೆಯಾ, ನನ್ನನ್ನು ನೋಡಿ ಏಕೆ ಹೆದರಿ ಓಡಿದೆ? ನೀನೂ ನನ್ನಂತೆಯೇ ಕಾಡಿನ ರಾಜ?’ ಎನ್ನಲು ಮರಿಸಿಂಹದ ಬಾಯಿಂದ ಬಂದ ನುಡಿಗಳು ಅದನ್ನು ಮತ್ತೂ ಅವಾಕ್ಕಾಗಿಸಿದವು. ‘ಅದ್ಹೇಗೆ ನಾನು ಕಾಡಿನ ರಾಜ! ಎಲ್ಲರಂತೆ ನಾನೂ ಕುರಿ. ಈ ಕಷ್ಟಗಳು ಎಲ್ಲರಿಗೂ ಇದ್ದದ್ದೆ ಜೀವನವೇ ಅಷ್ಟು! ಇದರಲ್ಲಿ ನನ್ನದೇನು ವಿಶೇಷ?’ ಎಂದು ಸಮರ್ಥಿಸಿಕೊಳ್ಳುತ್ತಿದ್ದುದನ್ನು ಅರ್ಧದಲ್ಲೇ ತಡೆದ ಸಿಂಹ ಕುರಿಸಿಂಹ(ಮರಿಸಿಂಹ)ವನ್ನು ಎಳೆದುಕೊಂಡು ಬಂದು ಅಲ್ಲೇ ಬಾವಿಯಲ್ಲಿದ್ದ ನೀರಿನಲ್ಲಿ ತಮ್ಮೀರ್ವರ ಛಾಯೆಗಳನ್ನು ತೋರಿಸಿ ಹೇಗೆ ಅದೂ ತನ್ನಂತೆಯೇ ಸಿಂಹ ಎಂಬುದನ್ನು ಸಾಬೀತುಪಡಿಸಿತು. ಕುರಿಸಿಂಹದಲ್ಲಿದ್ದ ತಾನು ಕುರಿ ಎಂಬ ಭಾವನೆ ಅಲುಗಾಡಿ ತಾನೂ ಸಿಂಹವಿರಬಹುದೇ ಎಂಬ ಸಂಶಯ ಮೆಲ್ಲನೆ ಏಳಲಾರಂಭಿಸಿತು, ಅಷ್ಟಕ್ಕೇ ಬಿಡದ ಸಿಂಹ ತನ್ನ ಗುಹೆಯಲ್ಲಿದ್ದ ಮಾಂಸವನ್ನು ತಿನ್ನಿಸಿ ಗರ್ಜಿಸುವುದನ್ನೂ ಕಲಿಸಿತು. ಎಷ್ಟೇ ಆಗಲಿ ಜನ್ಮತಃ ಸಿಂಹವೇ ಆಗಿದ್ದ ಕುರಿಸಿಂಹ ಪ್ರಾರಂಭದಲ್ಲಿ ವಿರೋಧದ ಅಪಸ್ವರವನ್ನು ಎತ್ತಿದರೂ ಕ್ರಮೇಣ ಉತ್ಸಾಹದಿಂದಲೇ ಎಲ್ಲವನ್ನೂ ಮಾಡತೊಡಗಿತು. ತಾನೂ ಸಿಂಹವೇ ಎಂದು ಖಾತ್ರಿಯಾಗುತ್ತಿದ್ದಂತೆ ಅದರ ನಡುಗೆಯೇ ಬದಲಾಯಿಸಿತು. ಕಾಡೇ ನಡುಗುವಂತೆ ಗರ್ಜಿಸಲಾರಂಭಿಸಿತು. ಜೀವನದ ಪ್ರತಿ ಕ್ಷಣವೂ ಸ್ವರ್ಗಸದೃಶವಾಯಿತು. ಈ ಪರಿವರ್ತನೆಯೇ ಆಧ್ಯಾತ್ಮಿಕತೆ!

ಕುರಿಸಿಂಹಕ್ಕೆ ತೊಂದರೆಯಿದ್ದದ್ದು ತೋಳ, ಚಿರತೆಯಿಂದ ತಾನೇ. ತೋಳವೋ ಚಿರತೆಯೋ ಆಗಿ ಸಮಸ್ಯೆಯಿಂದ ಪಾರಾಗಬಹುದಿತ್ತೇನೋ. ಆದರೆ ಅದು ಪರಿಹಾರವಲ್ಲ ಮುಂದೆ ಹುಲಿಯಿಂದ ಸಮಸ್ಯೆ ಬರುವುದಿಲ್ಲ ಎನ್ನುವ ಖಾತ್ರಿ ಏನು? ಇದು ಸಮಸ್ಯೆಯ ಒಂದು ಮುಖವಾದರೆ ಯಾವ ತೋಳನೂ, ಚಿರತೆಯೂ ಇದನ್ನು ಕಾಡಿರಲಿಕ್ಕಿಲ್ಲ. ಏಕೆಂದರೆ ಅವೆಲ್ಲ ಇದನ್ನು ನೋಡಿ ಅಂದುಕೊಂಡಿದ್ದು ‘ಇದೊಂದು ಸಿಂಹ’ ಎಂದು. ಆದರೆ ಯಾವಾಗ ಇದೇ ಅವುಗಳನ್ನು ನೋಡಿ ಬೇರೆಲ್ಲ ಕುರಿಗಳಂತೆ ಓಡಲಾರಂಭಿಸಿತೋ ಆಗ ಮಾತ್ರ ಅವು ಇದನ್ನು ಪೀಡಿಸಲಾರಂಭಿಸಿದವು. ಇನ್ನು ಸಮಸ್ಯೆಯ ಮೂಲಕ್ಕೆ ಬಂದರೆ ತಾನು ಕುರಿಶರೀರಕ್ಕಿಂತ ಬೇರೆ ಶರೀರ ಹೊಂದಿದ್ದರೂ, ಪ್ರತಿನಿತ್ಯ ಈ ಭಿನ್ನತೆ ಕಣ್ಣಿಗೆ ರಾಚುವಂತಿದ್ದರೂ ‘ತಾನು ಯಾರು’ ಎಂಬ ಪ್ರಶ್ನೆಯೇ ಏಳಲಿಲ್ಲವಲ್ಲ ಕುರಿಸಿಂಹದಲ್ಲಿ. ಆ ಪ್ರಶ್ನೆಯ ಉತ್ತರದಲ್ಲೇ ನಮ್ಮ ನರಕಗಳೂ ಸ್ವರ್ಗಗಳೂ ಎರಡೂ ಅಡಗಿವೆ ಎಂಬುವುದು ಎಷ್ಟು ಜನರಿಗೆ ಅರಿವಾಗಿದೆ ಇಂದು. ತಮ್ಮ ಹತ್ತಿರ ಬಂದು ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದ ಪ್ರತಿಯೊಬ್ಬರಿಗೂ ರಮಣ ಮಹರ್ಷಿಗಳು ಕೊಡುತ್ತಿದ್ದ ಏಕಮೇವ ಪರಿಹಾರ- ‘ಇವೆಲ್ಲ ಯಾರನ್ನು ಕಾಡುತ್ತಿವೆ ಎಂಬುದನ್ನು ಹುಡುಕಿಕೊಳ್ಳಿ’ ಎಂದು. ನಾವು ನಾವಾಗಿ ಬದುಕುವುದೇ ಆಧ್ಯಾತ್ಮಿಕತೆ. ಇಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಏಕೆಂದರೆ ಜೀವನವೆಂಬ ಕಾಡಿನಲ್ಲಿ ಸಿಂಹವಾಗುವುದೇ ಏಕಮೇವ ಪರಿಹಾರ. ಆದರೆ ನಾವೇನು ಹೊಸದಾಗಿ ಸಿಂಹವಾಗಬೇಕಿಲ್ಲ, ಹುಟ್ಟಿನಿಂದಲೇ ನಾವು ಸಿಂಹ, ಆದರೆ ಆತ್ಮಜ್ಞಾನ ವಿಹೀನರಾಗಿ ನಾವು ನಿಜಕ್ಕೂ ಏನು ಎಂದು ಅರಿಯದೇ ಸುಖಾಸುಮ್ಮನೆ ಕಷ್ಟಕ್ಕೊಳಗಾದತ್ತಿದ್ದೇವೆ. ಕಷ್ಟವಿರುವುದು ಕುರಿಗೆ ಮಾತ್ರ. ನಾವು ಎಂದು ಕುರಿಯಾಗಿದ್ದೆವು? ಒಂದೇ ಒಂದು ಕ್ಷಣವಾದರೂ ಆ ಮರಿಸಿಂಹ (ಕುರಿಸಿಂಹ) ಕುರಿಯಾಗಿತ್ತೇ? ಕುರಿಯಾಗಿ ಹುಟ್ಟಿದ್ದರೆ ಕಷ್ಟಗಳನ್ನು ಅನುಭವಿಸೋಣ. ಸಿಂಹವಾಗಿ ಹುಟ್ಟಿ ಕುರಿಯಂತೆ ಕ್ಷುದ್ರಜೀವನ ನಡೆಸುವುದರಲ್ಲಿ ಯಾವ ಪುರುಷಾರ್ಥವಿದೆ? ಇದರರ್ಥ ಇಲ್ಲದಿರುವ ಕಷ್ಟಗಳನ್ನು ನಾವೇ ನಮ್ಮ ಮೇಲೆ ಹೇರಿಕೊಂಡು ಒದ್ದಾಡಿ ತದನಂತರ ಯಾರೋ ಮಹಾತ್ಮರಿಂದ (ಅವರೇ ಗುರು) ತಿದ್ದಲ್ಪಟ್ಟು, ಸರಿದಾರಿಗೆ ಎಳಸಲ್ಪಟ್ಟು ದುಮ್ಮಾನಗಳಿಂದ ಬಿಡುಗಡೆ ಆಗುತ್ತಿದ್ದೇವೆಯೇ? ಹೌದು!

ಪ್ರತಿ ಮನುಷ್ಯನೂ ಸ್ಪಷ್ಟವಾಗಿ ತಿಳಿಯಬೇಕಾದ ಆದರೆ ತಿಳಿಯಲೆತ್ನಿಸದ ಸರಳ ತತ್ತ್ವ ಇದು. ಮೇಲಿನ ಕಥೆಯನ್ನು ಶ್ರೀರಾಮಕೃಷ್ಣರ ಗುರುವಾದ ಪರಮಹಂಸ ತೋತಾಪುರಿ ಶ್ರೀರಾಮಕೃಷ್ಣರಿಗೂ, ಅವರು ತಮ್ಮ ಪ್ರಿಯ ಶಿಷ್ಯ ನರೇಂದ್ರರಿಗೂ ಮತ್ತು ಸ್ವಾಮಿ ವೇಕಾನಂದರು ಇಡೀ ಜಗತ್ತಿಗೂ ಆಧ್ಯಾತ್ಮಿಕತೆಯೇ ಅಥವಾ ಆತ್ಮಜ್ಞಾನವೇ ಸಾರ್ವಕಾಲಿಕ ಸಂಜೀವಿನಿ ಎಂದು ಸಾರಿ ಹೇಳಿದ್ದಾರೆ. ಸ್ವಭಾವತಃ, ಹುಟ್ಟಿನಿಂದಲೇ ಸರ್ವಜ್ಞಃ, ಸರ್ವವ್ಯಾಪಿಃ, ಸರ್ವಶಕ್ತಿಮಾನ್ ಆದ ನಾವು ಭ್ರಮಾಧೀನರಾಗಿ ಬದುಕುತ್ತಿದ್ದೇವೆ, ಕಾರಣ ಕ್ಷುಲ್ಲಕ ವಸ್ತುಗಳ ಆಕರ್ಷಣೆ, ಆ ಹುಲ್ಲಿಗೆ ಆಕರ್ಷಿತರಾದ ವ್ಯಕ್ತಿಗಳ ಒಡನಾಟ, ಎಲ್ಲದರಲ್ಲೂ ಅಸಹಾಯಕತೆಯ ವ್ಯಕ್ತತೆ (ಬ್ಯಾ). ಇಲ್ಲಿ ಹುಲ್ಲು ಎಂದರೆ ಪಂಚ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು ಇತ್ಯಾದಿ) ಹಾಗೂ ಮನಸ್ಸುಗಳಿಂದ ನಾವು ಒಳಕ್ಕೆ ತೆಗೆದುಕೊಂಡ ವಿಚಾರಗಳು ; ಇಚ್ಛಿಸಿದ ವಿಷಯಗಳು ; ಆಸ್ವಾದಿಸಿದ ಆನಂದಗಳು. ಇವೆಲ್ಲವೂ ಆತ್ಮನಿಗೆ (ಸಿಂಹಕ್ಕೆ) ತಕ್ಕನಾಗಿ ಇರಬೇಕೇ ಹೊರತು, ಜ್ಞಾನಿಗಳ ಅನುಮೋದನೆಯಂತಿರಬೇಕೇ ಹೊರತು ಸುತ್ತಲಿನವರನ್ನು ಅನುಕರಿಸುವುದಲ್ಲ. ಕೆಲವೊಂದರ ನಿಷೇಧ ಕೆಲವೊಂದರ ಸ್ವೀಕೃತಿ ಎನ್ನುವ ಶಿಸ್ತೇ ಧಾರ್ವಿುಕ ಜೀವನದ ಪ್ರಥಮ ಹಂತ. ಇದರ ಪ್ರಯೋಜನವೇ ಸಿಂಹ ಶಕ್ತಿಗಳ ಜಾಗೃತಿ ; ಭ್ರಮೆ ಮತ್ತು ಅದರದೇ ಪರಿಣಾಮವಾದ ದುರವಸ್ಥೆಗಳಿಂದ ಬಿಡುಗಡೆ. ಸ್ವಾಮಿ ವಿವೇಕಾನಂದರ ಈ ಸಿಂಹಘರ್ಜನೆ ಎಷ್ಟು ಪ್ರಸ್ತುತ! "Teach  yourself, teach everyone his true nature, come out of this hypnotism of  weakness! Power will come, purity will come! Glory will come! Goodness will come everything that is excellent will come once the sleeping soul is roused to self- concious activity'.

ಇದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಆದ್ದರಿಂದ ಇದೊಂದು ವಿಜ್ಞಾನ ಏಕಕಾಲದಲ್ಲಿ ಮನುಷ್ಯಜನ್ಮದ ಸಾರ್ಥಕತೆಗೆ ಬೇಕಾದ ಎಲ್ಲವನ್ನೂ ಒದಗಿಸುವ ಶ್ರೇಷ್ಠ ವಿಜ್ಞಾನ. ಅಷ್ಟೇ ಏಕೆ ಆಧುನಿಕ ವಿಜ್ಞಾನದ ವಿಜ್ಞಾನಿಗಳಿಗೇ ಎಟುಕದ ಎಷ್ಟೋ ಒಗಟುಗಳಿಗೆ ಪರಿಹಾರ ಕೊಟ್ಟ ವಿಜ್ಞಾನ. ಏಕೆಂದರೆ ಮನುಷ್ಯನ ನಿಜ ರೂಪವಾದ ಆತ್ಮ ಮತ್ತು ಜಗತ್ತಿನ ನಿಜರೂಪವಾದ ಬ್ರಹ್ಮ ಎರಡೂ ಒಂದೇ ಆದ್ದರಿಂದಲೇ ಸನಾತನ ಸಂಸ್ಕೃತಿ ಇದನ್ನೇ ಭಾರತೀಯರ ಉಸಿರನ್ನಾಗಿಸಿತು. ಅವರ ಬತ್ತಳಿಕೆಯಲ್ಲಿನ ಬ್ರಹ್ಮಾಸ್ತ್ರವನ್ನಾಗಿಸಿತು. ಈ ಆಧ್ಯಾತ್ಮಿಕತೆಯ ತೀವ್ರತಮ ಅನುಷ್ಠಾನ ಭಾರತವನ್ನು ಸ್ವರ್ಗಸದೃಶವನ್ನಾಗಿಸಿತು.

ಜರ್ಮನಿಯ ಸುಪ್ರಸಿದ್ಧ ಚಿಂತಕ, ಭಾಷಾಶಾಸ್ತ್ರಜ್ಞ, ಪ್ರತಿಷ್ಠಿತ ಜರ್ಮನ್ ರೊಮ್ಯಾಂಟಿಸಂನ ಸ್ಥಾಪಕನೆಂದೇ ಪರಿಗಣಿಸಲ್ಪಟ್ಟ ಫ್ರೆಡ್ರಿಕ್ ಶ್ಲೆಗಲ್ ಹೇಳುತ್ತಾರೆ- "This great India is not only at the origin of  everything  she is superior  in everything- intellectually, religiously or politically & even the Greek heritage seems pale in Comparision'.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net