ಸ್ಪೈಡರ್​ಮ್ಯಾನ್​ ಕಳ್ಳ; ಆ ಕ್ಷಣ ಅಂಕಣ...

Spiderman
Published on
ಆರು ಬ್ಲಾಕ್​ಗಳಿದ್ದ ಬಹುಮಹಡಿ ಕಟ್ಟಡಗಳ ಸಮುಚ್ಚಯವೇ ಲೇಕ್​ವ್ಯೂ. ಇಲ್ಲಿ 240 ಫ್ಲ್ಯಾಟ್​ಗಳಿದ್ದು ಒಂದು ಸಾವಿರಕ್ಕಿಂತ ಹೆಚ್ಚು ಜನರು ವಾಸಿಸುತ್ತಿದ್ದರು. ಸಂಕೀರ್ಣದ ನಿವಾಸಿಗಳ ವೆಲ್​ಫೇರ್ ಅಸೋಸಿಯೇಷನ್ ಕರೆಂಟು, ನೀರು ಸೇರಿದಂತೆ ಎಲ್ಲ ಮನೆಗಳ ಒಳ ಹಾಗೂ ಹೊರಗಿನ ಮೆಂಟೆನೆನ್ಸ್ ನೋಡಿಕೊಳ್ಳುತ್ತಿತ್ತು. ನಿವಾಸಿಗಳ ಭದ್ರತೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಲ್ಲದೆ ಸೆಕ್ಯೂರಿಟಿ ಏಜೆನ್ಸಿಯೊಂದನ್ನು ಗೊತ್ತುಪಡಿಸಲಾಗಿತ್ತು.

ಲೇಕ್​ವ್ಯೂನ ಮೂರನೆಯ ಮಹಡಿಯ ಫ್ಲ್ಯಾಟ್​ವೊಂದರಲ್ಲಿ ಅತ್ಯಾಚಾರವಾಗಿದೆ ಎಂಬ ಮಾಹಿತಿ ಬಂದಾಗ ಪೊಲೀಸರು ಸ್ಥಳಕ್ಕೆ ಹೋದರು. ಅಲ್ಲಿದ್ದ ವಿದೇಶಿ ಮಹಿಳೆಯೊಬ್ಬಳು ತಾನೇ ಸಂತ್ರಸ್ತೆಯೆಂದು ಪರಿಚಯಿಸಿಕೊಂಡು ಹೀಗೆಂದಳು: ‘ನಾನು ಸ್ಪೇನ್ ದೇಶದವಳಾಗಿದ್ದು ಸಮಾಜಸೇವಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ 27 ವರ್ಷ ವಯಸ್ಸು. ಒಬ್ಬಂಟಿಯಾಗಿದ್ದೇನೆ. ನಿನ್ನೆ ರಾತ್ರಿ ಗಾಢನಿದ್ರೆಯಲ್ಲಿದ್ದಾಗ ಯಾರೋ ನನ್ನನ್ನು ಮುಟ್ಟಿದಂತೆ ಭಾಸವಾಯಿತು. ಗಾಬರಿಯಾಗಿ ಎಚ್ಚೆತ್ತೆ. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದ ವ್ಯಕ್ತಿ ಪಕ್ಕದಲ್ಲಿ ನಿಂತಿದ್ದ. ನಾನು ಹೆದರಿ ಚೀರಿದೆ. ಆತ ನನ್ನನ್ನು ಥಳಿಸಿ ನನ್ನ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಮಾಡತೊಡಗಿದ. ನಾನು ಅವನಿಂದ ಬಿಡಿಸಿಕೊಂಡು ಬಾತ್​ರೂಮಿಗೆ ಓಡಿಹೋಗಿ ಬಾಗಿಲನ್ನು ಭದ್ರಪಡಿಸಿದೆ. ನನ್ನ ಬಾಯಿಗೆ ತುರುಕಿದ್ದ ಬಟ್ಟೆಯನ್ನು ಬಿಚ್ಚಿ ಜೋರಾಗಿ ಅರಚತೊಡಗಿದೆ. ಕೆಲ ಸಮಯದ ನಂತರ ಹೊರಗಡೆಗೆ ಯಾರೋ ಹೋದ ಸಪ್ಪಳವಾಯಿತು. ನಾನು ಹೆದರುತ್ತಲೇ ಬಾತ್​ರೂಂನಿಂದ ಹೊರಬಂದಾಗ ಅತ್ಯಾಚಾರಿ ಹೊರಟುಹೋಗಿದ್ದ. ಆಗ ರಾತ್ರಿ 3 ಗಂಟೆಯಾಗಿತ್ತು.’ ನಿಮ್ಮ ಮನೆಯೊಳಗೆ ಅತ್ಯಾಚಾರಿ ಹೇಗೆ ಬಂದ? ಎಂದು ಕೇಳಿದಾಗ ಆಕೆ ತನಗೆ ಗೊತ್ತಿಲ್ಲ ಎಂದಳು. ಯಾವುದಾದರೂ ವಸ್ತು ಕಳುವಾಗಿದೆಯೇ ಎಂದು ಕೇಳಿದಾಗ ಇಲ್ಲವೆಂದಳು. ಅವಳ ಮನೆಯ ಮುಂಬಾಗಿಲನ್ನು ಒಡೆದ ಅಥವಾ ನಕಲಿ ಕೀಲಿಕೈ ಬಳಸಿ ಬಾಗಿಲನ್ನು ತೆಗೆದ ಯಾವ ಕುರುಹೂ ಕಾಣಲಿಲ್ಲ. ತಾನೇ ಮನೆಯೊಳಗಿನ ಚಿಲಕವನ್ನು ಭದ್ರಪಡಿಸಿಕೊಂಡಿದ್ದಾಗಿ ಸಂತ್ರಸ್ತೆ ತಿಳಿಸಿದಳು. ಪಕ್ಕದ ಮನೆಯವರನ್ನು ವಿಚಾರಿಸಿದರೆ ಅವರು ತಮಗೇನೂ ಗೊತ್ತಿಲ್ಲ ಎಂದರು. ಅಪಾರ್ಟ್ ಮೆಂಟಿನ ಕಾವಲುಗಾರರು ರಾತ್ರಿ ಯಾವ ಅಪರಿಚಿತರೂ ಸಂಕೀರ್ಣದೊಳಗೆ ಬಂದಿಲ್ಲ ಎಂದರು. ಸಿಸಿಟಿವಿ ದೃಶ್ಯಗಳಲ್ಲಿಯೂ ಯಾವ ಕುರುಹೂ ಸಿಗಲಿಲ್ಲ.

ಅತ್ಯಾಚಾರವಾದ ಸ್ಥಳವೆಲ್ಲಿ ಎಂದು ಪೊಲೀಸರು ಕೇಳಿದಾಗ ಆಕೆ ತನ್ನ ಬೆಡ್​ರೂಂಗೆ ಅವರನ್ನು ಕರೆದೊಯ್ದಳು. ಹಾಸಿಗೆ ಅಸ್ತವ್ಯಸ್ತವಾಗಿದ್ದನ್ನು ಬಿಟ್ಟರೆ ಹೋರಾಟದ ಕುರುಹುಗಳು ಅಲ್ಲಿರಲಿಲ್ಲ. ಹಾಸಿಗೆಯ ಮೇಲಿದ್ದ ಬೆಡ್​ಷೀಟನ್ನು ಅಲ್ಟ್ರಾ ವಯೊಲೆಟ್ ಟಾರ್ಚಿನ ಮೂಲಕ ಪರೀಕ್ಷಿಸಿದಾಗ ಅದರ ಮೇಲೆ ವೀರ್ಯದ ಕಲೆಗಳು ಕಂಡವು. ಬೆಡ್​ಷೀಟನ್ನು ಲ್ಯಾಬ್ ಪರೀಕ್ಷೆಗೆಂದು ವಶಪಡಿಸಿಕೊಳ್ಳಲಾಯಿತು. ಬಾತ್​ರೂಂನಲ್ಲಿ ಬಿದ್ದಿದ್ದ ಬಟ್ಟೆಯೊಂದನ್ನು ತೋರಿಸಿದ ಸಂತ್ರಸ್ತೆ ಅದನ್ನೇ ಅತ್ಯಾಚಾರಿ ತನ್ನ ಬಾಯಿಗೆ ಬಿಗಿದಿದ್ದನೆಂದಳು. ಅತ್ಯಾಚಾರಿ ಮನೆಯೊಳಗೆ ನುಗ್ಗಲು ಸಾಧ್ಯತೆಗಳೇ ಇಲ್ಲದಿರುವಾಗ ಈ ಘಟನೆಯಾದರೂ ಹೇಗೆ ಜರುಗಿತು ಎನ್ನುವುದು ಯಕ್ಷಪ್ರಶ್ನೆಯಾಯಿತು. ಮನೆಯಲ್ಲಿ ಸಿಕ್ಕ ಬೆರಳಚ್ಚು ಗುರುತುಗಳನ್ನು ತನಿಖೆಗೆ ಕಳಿಸಿದ ಪೊಲೀಸರು ಸಂತ್ರಸ್ತೆಯನ್ನು ಮೆಡಿಕಲ್ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳಿಸಿದರು. ಸ್ಪಾನಿಷ್ ಸ್ತ್ರೀ ಮೇಲೆ ಇತ್ತೀಚೆಗಷ್ಟೇ ಅತ್ಯಾಚಾರವಾಗಿದೆ ಎಂದು ವೈದ್ಯರು ದೃಢೀಕರಿಸಿದ ನಂತರವಂತೂ ಪೊಲೀಸರಿಗೆ ಈ ಪ್ರಕರಣ ದೊಡ್ಡ ಸವಾಲಾಯಿತು. ಹೀಗಾಗಿ ಸಂತ್ರಸ್ತೆ ವಾಸಿಸುತ್ತಿದ್ದ ಬ್ಲಾಕಿನಲ್ಲಿದ್ದ ಎಲ್ಲ ಫ್ಲ್ಯಾಟ್​ಗಳ ನಿವಾಸಿಗಳನ್ನು ಕೂಲಂಕಷವಾಗಿ ಪ್ರಶ್ನಿಸಲಾಯಿತು. ಮಹಡಿಯ ಫ್ಲ್ಯಾಟ್​ನ ನಿವಾಸಿಯೊಬ್ಬರು ನಡುರಾತ್ರಿ 3ನೆಯ ಮಹಡಿಯಿಂದ ಹೆಣ್ಣುಮಗಳ ಚೀರಾಟದ ಶಬ್ದ ಕೇಳಿ ತಾನು ಬಾಲ್ಕನಿಗೆ ಬಂದು ನೋಡಿದಾಗ ಒಬ್ಬ ವ್ಯಕ್ತಿ ಕಟ್ಟಡದ ಹೊರಗಿದ್ದ ಪೈಪುಗಳ ಮೂಲಕ ಸರಸರನೆ ಕೆಳಗಿಳಿದು ಓಡಿಹೋದನೆಂದು ತಿಳಿಸಿದರು. ಎರಡು ತಿಂಗಳ ತನಿಖೆಯ ನಂತರವೂ ಯಾವುದೇ ಕುರುಹು ಸಿಗದಿದ್ದಾಗ ಪ್ರಕರಣವನ್ನು ನಾಪತ್ತೆ ಎಂದು ಪರಿಗಣಿಸಲಾಯಿತು. ಏತನ್ಮಧ್ಯೆ ಸಂತ್ರಸ್ತೆ ತನ್ನ ದೇಶಕ್ಕೆ ವಾಪಸಾದಳು.

ಒಂದು ವಾರದ ನಂತರ ಅದೇ ಲೇಕ್​ವ್ಯೂ ಸಮುಚ್ಚಯದಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಮತ್ತವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದಾಗ ಯಾರೋ ಅವರ 5ನೆಯ ಮಹಡಿಯ ಫ್ಲ್ಯಾಟ್​ಗೆ ನುಗ್ಗಿ ಮನೆಯಲ್ಲಿದ್ದ ನಾಲ್ಕು ಲಕ್ಷ ರೂ ಮೌಲ್ಯದ ಆಭರಣಗಳನ್ನು ದೋಚಿದ್ದರು. ಆಶ್ಚರ್ಯವೆಂದರೆ ಅವರ ಮನೆಯ ಬಾಗಿಲು ಮುರಿದಿರಲಿಲ್ಲ. ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗ ಕೂಡಾ ಯಥಾಸ್ಥಿತಿಯಲ್ಲಿಯೇ ಇತ್ತು. ನಕಲಿ ಕೀಲಿಕೈ ಬಳಸಿ ಕಳ್ಳರು ಪ್ರವೇಶಿಸಿರಬಹುದೆಂದು ತನಿಖೆ ಮಾಡಿದಾಗ ಮ್ಯಾನೇಜರ್ ತನ್ನ ಫ್ಲ್ಯಾಟ್ ಮುಂದೆ ಹಾಕಿಸಿಕೊಂಡಿದ್ದ ವಿಶೇಷ ಸಿಸಿಟಿವಿ ಕ್ಯಾಮರಾದಲ್ಲಿ ಯಾವುದೇ ಅಪರಿಚಿತರು ಮನೆಯೊಳಗೆ ಹೋದ ದೃಶ್ಯ ದಾಖಲಾಗಿರಲಿಲ್ಲ. ಇದಾದ ಸುಮಾರು 10 ದಿನಗಳ ನಂತರ ಅದೇ ಅಪಾರ್ಟ್​ವೆುಂಟ್ ಸಮುಚ್ಚಯದ ನಾಲ್ಕನೆಯ ಮಹಡಿಯಲ್ಲಿ ಇನ್ನೊಂದು ಮನೆ ಕಳ್ಳತನವಾಯಿತು. ಪೊಲೀಸರು ಅಲ್ಲಿಗೆ ಹೋಗಿ ನೋಡಿದಾಗ ಕಳ್ಳ ಅಪಾರ್ಟ್​ವೆುಂಟ್​ನ ಕಿಟಕಿಯಿಂದ ಪ್ರವೇಶಿಸಿದ್ದು ತಿಳಿಯಿತು. ಕಳ್ಳತನ ಮಾಡುತ್ತಿರುವವನು ಕಟ್ಟಡಗಳ ಹೊರಗಿನ ಪೈಪುಗಳ ಮೂಲಕ ಮೇಲೇರಿ ಫ್ಲ್ಯಾಟ್​ನ ಅಡುಗೆ ಕೋಣೆಯ ಕಿಟಕಿಯ ಮೂಲಕ ಮನೆಯೊಳಗೆ ನುಸುಳುತ್ತಿದ್ದ ಎನ್ನುವುದು ಖಾತ್ರಿಯಾಯಿತು. ಪೊಲೀಸರು ಆತನಿಗೆ ‘ಸ್ಪೈಡರ್​ವ್ಯಾನ್’ ಎಂದು ಹೆಸರಿಟ್ಟರು.

ಪೈಪುಗಳ ಮೂಲಕ ಮೇಲಕ್ಕೇರಿ ಮನೆಯೊಳಗೆ ನುಸುಳುವ ಕಳ್ಳರ ಬಗ್ಗೆ ಇಡೀ ರಾಜ್ಯ ಹಾಗೂ ನೆರೆಹೊರೆ ರಾಜ್ಯದ ದಾಖಲೆಗಳನ್ನು ತನಿಖಾಧಿಕಾರಿ ಪರಿಶೀಲಿಸಿದರು. ಸುಮಾರು ನಾಲ್ಕು ಜನ ಇಂತಹವರು ಸಿಕ್ಕರು. ಆದರೆ ಅವರು ಯಾರೂ ಲೇಕ್​ವ್ಯೂ ಅಪಾರ್ಟ್​ವೆುಂಟಿನಲ್ಲಿ ಅಪರಾಧ ಮಾಡಿದವರಾಗಿರಲಿಲ್ಲ. ಲೇಕ್​ವ್ಯೂದ ಕಟ್ಟಡ ಏರುವ ಕಳ್ಳನಿಗೆ ಸಿಸಿಟಿವಿ ಕ್ಯಾಮರಾಗಳು, ಕಾವಲುಗಾರರ ಚಲನವಲನಗಳ ಬಗ್ಗೆ ಹಾಗೂ ಯಾವ ಮನೆಗೆ ಕನ್ನ ಹಾಕಿದರೆ ಹೆಚ್ಚಿನ ಹಣ ಸಿಗುತ್ತದೆಂಬ ವಿಷಯ ತಿಳಿದಿರಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ರ್ತಸಿದರು. ಸಂಕೀರ್ಣದಲ್ಲಿರುವ ಇಲ್ಲವೇ ಅಲ್ಲಿ ಕೆಲಸ ಮಾಡುವ ವ್ಯಕ್ತಿಯೇ ಆಗಿರಬೇಕೆಂದು ಅಂದಾಜಿಸಿದರು. ಕಾವಲುಗಾರರಿಂದ ಹಿಡಿದು ಫ್ಲ್ಯಾಟ್​ಗಳಲ್ಲಿ ಕೆಲಸಮಾಡುತ್ತಿದ್ದ ಪ್ರತಿಯೊಬ್ಬರನ್ನೂ ಪ್ರಶ್ನಿಸಲು ಆದೇಶಿಸಿದರು. ಲೇಕ್​ವ್ಯೂದಲ್ಲಿ ಕೆಲಸಕ್ಕೆ ಬರುವವರೆಲ್ಲರೂ ವೆಲ್​ಫೇರ್ ಅಸೋಸಿಯೇಷನ್​ನ ಪರವಾನಗಿ ಪಡೆದು ಗುರುತಿನ ಪತ್ರ ಹೊಂದಿರಬೇಕಾಗಿತ್ತು. ಎಲೆಕ್ಟ್ರಿಕ್ ಹಾಗೂ ಪ್ಲಂಬಿಂಗ್ ಕೆಲಸ ಮಾಡುವವರಿಗೆ ಮಾತ್ರ ಸಮುಚ್ಚಯದ ಎಲ್ಲ ಮನೆಗಳ ಬಗ್ಗೆಯೂ ಅರಿವಿರುತ್ತದೆ ಎನ್ನುವ ಊಹೆಯಿಂದ ಆ ಕೆಲಸ ಮಾಡುತ್ತಿದ್ದ ಆರು ಜನರನ್ನು ವಿಚಾರಣೆಗೆ ಕರೆಸಲಾಯಿತು. ಐವರು ವಿಚಾರಣೆಗೆ ಹಾಜರಾದರು. ವಿಚಾರಣೆಯ ನಂತರ ಅವರ್ಯಾರೂ ಪ್ರಕರಣದಲ್ಲಿ ಶಾಮೀಲಾಗಿಲ್ಲವೆಂದು ತನಿಖಾಧಿಕಾರಿಗೆ ಅನಿಸಿತು. ವಿಚಾರಣೆಗೆ ಬಾರದ ಅಬ್ದುಲ್ ಅನ್ಸಾರಿ ಎಂಬ ಪ್ಲಂಬರ್ ಮನೆಗೆ ಪೊಲೀಸರು ಹೋದರು. ಆತ ಜಾರ್ಖಂಡ್​ನಲ್ಲಿದ್ದ ತನ್ನ ಊರಿಗೆ ಹೋಗಿದ್ದ. ಕೆಲವು ದಿನಗಳಿಂದ ಆತ ಹೆಚ್ಚು ಹಣ ಖರ್ಚು ಮಾಡುತ್ತಿದ್ದನೆಂದು ತಿಳಿಯಿತು. ಪೊಲೀಸ್ ತಂಡವೊಂದು ಜಾರ್ಖಂಡ್​ದ ರಾಂಚಿಗೆ ಹೋಗಿ ಅವನನ್ನು ಪತ್ತೆ ಮಾಡಿತು.

ಪೊಲೀಸರಿಗೆ ಸಿಕ್ಕ ಕೂಡಲೇ ಆತ ಗಿಣಿಯಂತೆ ತಾನೇನು ಮಾಡಿದನೆಂದು ಹೀಗೆ ತಿಳಿಸಿದ: ‘ಯಾವ ಫ್ಲ್ಯಾಟ್​ನಲ್ಲಿ ಪ್ಲಂಬಿಂಗ್ ಸಮಸ್ಯೆಯಿದೆಯೋ ಅಲ್ಲಿಗೆ ರಿಪೇರಿ ಮಾಡಲು ಹೋದಾಗ ಯಾವ ಮನೆಯಲ್ಲಿ ಎಂತಹ ಜನರಿದ್ದಾರೆ, ಎಷ್ಟು ಜನರಿದ್ದಾರೆ, ಯಾರು ಶ್ರೀಮಂತರು ಎನ್ನುವುದನ್ನು ನಾನು ಗಮನಿಸುತ್ತಿದ್ದೆ. ಅಪಾರ್ಟ್​ವೆುಂಟ್ ಒಂದರಲ್ಲಿ ನಾನು ಕೆಲಸ ಮಾಡುವಾಗ ಅಡುಗೆ ಮನೆಯ ಕಿಟಕಿಯ ಮೂಲಕ ಸುಲಭವಾಗಿ ಪ್ರವೇಶಿಸಬಹುದು ಹಾಗೂ ಸಿ ಮತ್ತು ಡಿ ಬ್ಲಾಕ್​ಗಳ ಮಧ್ಯದ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಇಲ್ಲ ಎಂದರಿತೆ. ಈ ಎರಡೂ ಬ್ಲಾಕ್​ಗಳ ಮನೆಗಳಿಗೆ ಪೈಪ್ ಮೂಲಕ ಏರಿ ಕಿಟಕಿಯ ಮೂಲಕವೇ ನುಗ್ಗಿ ಅಲ್ಲಿಂದಲೇ ಕೆಳಗಿಳಿಯುತ್ತಿದ್ದೆ. ಒಂದು ರಾತ್ರಿ ಮನೆಯೊಂದಕ್ಕೆ ಕದಿಯಲು ಹೋದಾಗ ಅಲ್ಲಿ ವಿದೇಶೀ ಸ್ತ್ರೀಯೊಬ್ಬಳು ಅರೆನಗ್ನಾವಸ್ಥೆಯಲ್ಲಿ ಮಲಗಿದ್ದು ಕಂಡು ಉದ್ರೇಕಗೊಂಡು ಅತ್ಯಾಚಾರ ಮಾಡಿದೆ. ಆಕೆ ನನ್ನಿಂದ ಪಾರಾಗಿ ಬಾತ್​ರೂಮಿಗೆ ಹೋಗಿ ಅಡಗಿದಾಗ ನಾನು ಪರಾರಿಯಾದೆ. ಅದಾದ ನಂತರ ಇನ್ನೆರಡು ಮನೆಗಳ ಕಳ್ಳತನವನ್ನೂ ಮಾಡಿದೆ’.

ತಾನು ಕದ್ದಿದ್ದ ಬಹುತೇಕ ವಸ್ತುಗಳನ್ನು ಅನ್ಸಾರಿ ರಾಂಚಿಯಲ್ಲಿಟ್ಟಿದ್ದ. ಅವನ್ನು ಜಪ್ತು ಮಾಡಲಾಯಿತು. ನಂತರ ಆತನ ಡಿ.ಎನ್.ಎ ವಿದೇಶೀ ಮಹಿಳೆಯ ಮನೆಯ ಬೆಡ್​ಷೀಟಿನಲ್ಲಿದ್ದ ವೀರ್ಯಕ್ಕೆ ಮ್ಯಾಚ್ ಆಯಿತು. ಏತನ್ಮಧ್ಯೆ ಆ ಮಹಿಳೆ ಸ್ವದೇಶಕ್ಕೆ ವಾಪಸಾಗಿದ್ದ ಕಾರಣ ವಿಡಿಯೋ ಕಾನ್ಪರೆನ್ಸ್ ಮೂಲಕ ಸಂರ್ಪಸಲಾಗಿ ಆಕೆ ಆರೋಪಿಯನ್ನು ಗುರುತಿಸಿದಳು. ಮೂರು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅವನಿಗೆ ರೇಪ್ ಕೇಸಿನಲ್ಲಿ 10 ವರ್ಷ ಹಾಗೂ ಕಳ್ಳತನ ಕೇಸುಗಳಲ್ಲಿ ತಲಾ 3 ವರ್ಷ ಶಿಕ್ಷೆಯಾಯಿತು. ‘ಆಡುವ ಮಕ್ಕಳಿಗೆ ಊಡುವ ತಾಯಂತೆ ಮಾಡಿದ ಕರ್ಮ ಬಳಿವಿಡಿದು ಪಿಡಿತಂದು ಊಡುತ್ತಲಿಹುದು ಸರ್ವಜ್ಞ’ ಎಂದಂತೆ, ರೇಪ್ ಮಾಡಿಯೂ ಬಚಾವಾಗಿದ್ದೆ ಎಂದು ಭಾವಿಸಿದ್ದ ಅನ್ಸಾರಿ ಕಡೆಗೂ ತನ್ನ ಪಾಪಕ್ಕೆ ಫಲತೆತ್ತ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net