ಅಧ್ಯಾತ್ಮನಿಧಿಯ ಅನನ್ಯಲೋಕ

DASARU
Published on

ಹರಿದಾಸರ ಹಾಡುಗಳು ಆಸಕ್ತರಿಗೆ ಒಂದೇ ಕಡೆ ದೊರೆಯಬೇಕೆಂಬ ಸದುದ್ದೇಶದಿಂದ ಕೆಲ ವರ್ಷಗಳ ಹಿಂದೆಯೇ ‘ಹರಿದಾಸರ ನಾಲ್ಕು ಸಾವಿರ ಹಾಡುಗಳು’ ಕೃತಿಯನ್ನು ಅರಳುಮಲ್ಲಿಗೆ ಪಾರ್ಥಸಾರಥಿ ಹೊರತಂದಿದ್ದರು. ಆದರೆ, ಹರಿದಾಸ ಸಾಹಿತ್ಯದ ವ್ಯಾಪಕತೆಯನ್ನು ಮನಗಂಡು ‘ಹರಿದಾಸರ ಹತ್ತು ಸಾವಿರ ಹಾಡುಗಳು’ ಕೃತಿಯನ್ನು ತರಲಾಯಿತು. ಇದರ ಪರಿಷ್ಕೃತ ಆವೃತ್ತಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಲೋಕಾರ್ಪಣೆಯಾಗಿದೆ. 2086 ಪುಟಗಳ ಈ ಬೃಹತ್ ಗ್ರಂಥ, ದಾಸರನ್ನು ನಮ್ಮೊಂದಿಗೆ ಮುಖಾಮುಖಿ ಮಾಡಿಸುತ್ತದೆ.

ಭಕ್ತಿಯ ಅಭಿವ್ಯಕ್ತಿಗೆ ನೂರೆಂಟು ಮಾರ್ಗಗಳು. ಸರ್ವಶಕ್ತ ಪರಮಾತ್ಮನನ್ನು ತಲುಪಲು, ಭಕ್ತಿಪ್ರವಾಹದಿಂದ ಲೌಕಿಕ ಬದುಕನ್ನು ಚೆಂದವಾಗಿಸಲು ಸಂತ-ಮಹಂತರು, ಋಷಿಮುನಿಗಳು, ದಾರ್ಶನಿಕರು, ವಚನಕಾರರು, ದಾಸರು ನೀಡಿರುವ ಕೊಡುಗೆ ಅನನ್ಯ, ವಿಶಿಷ್ಟ. ಚಿಂತೆ ಕಳೆಯುತ್ತ, ಮನದ ಕಲ್ಮಶವನ್ನೆಲ್ಲ ದೂರ ಮಾಡುತ್ತ ಅದೆಷ್ಟೋ ಹರಿದಾಸರು ವಿಶಿಷ್ಟ ಲೋಕವನ್ನೇ ಸೃಷ್ಟಿಸಿದರು.

ಅವರ ಹಾಡುಗಳು ಭಕ್ತಿಸುಧೆಯನ್ನಷ್ಟೇ ಹರಿಸಲಿಲ್ಲ; ಬದುಕನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡಿದವು. ಲೌಕಿಕ ಬದುಕಿನಲ್ಲಿದ್ದುಕೊಂಡೇ ಜ್ಞಾನಮಾರ್ಗ, ಭಕ್ತಿಮಾರ್ಗದಲ್ಲಿ ಸಾಗಲು ದಿಕ್ಕು ತೋರಿದವು. ಅಂಥ ಹಾಡುಗಳು ರಚನೆಯಾಗಿ ಶತಮಾನಗಳೇ ಕಳೆದರೂ ಹೊಸ ಹೊಳಹನ್ನು ಒದಗಿಸುತ್ತ, ಮನುಷ್ಯನನ್ನು ಆಂತರ್ಯದಿಂದ ಬಡಿದೆಬ್ಬಿಸುತ್ತಿವೆ. ಸಂಗೀತಲೋಕಕ್ಕಂತೂ ಇವು ಭೂಷಣವೇ ಸರಿ. ಇಂಥ ಹರಿದಾಸರ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ದಾಸಪರಂಪರೆಯ ತೇರನ್ನು ಮುಂದೆ ಕೊಂಡೊಯ್ಯುವುದು ಸುಲಭವೇನಲ್ಲ.

ಈ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸುತ್ತಲೇ ಹರಿದಾಸ ಸಾಹಿತ್ಯದ ಸತ್ವವನ್ನು ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವ, ಅರವತ್ತು ಗ್ರಂಥಗಳನ್ನು ರಚಿಸಿರುವ, ಐದು ಸಾವಿರಕ್ಕೂ ಅಧಿಕ ಉಪನ್ಯಾಸಗಳನ್ನು ಮಾಡಿರುವ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಮತ್ತೊಂದು ವಿಶಿಷ್ಟ ಕೊಡುಗೆ ‘ಹರಿದಾಸರ ಹತ್ತು ಸಾವಿರ ಹಾಡುಗಳು’. ಇಂಥದ್ದೊಂದು ಬೃಹತ್ ಸಂಕಲನ ಸಾಂಸ್ಕೃತಿಕ ಮತ್ತು ಭಕ್ತಿಲೋಕದ ಅವಶ್ಯಕತೆಯಾಗಿತ್ತು.

ಈ ಕೃತಿಯಲ್ಲಿರುವ ಹಾಡುಗಳು ಮಾಧುರ್ಯದಲ್ಲಿ ಭಕ್ತಿಯ ಆಳಕ್ಕೆ ಕರೆದುಕೊಂಡು ಹೋಗುತ್ತದೆ. ಹಲವು ವರ್ಷಗಳ ನಿರಂತರ ಶ್ರಮ, ಆಸ್ಥೆಯಿಂದ ಈ ಕೃತಿ ಹೊರಬಂದಿದೆ. ಎಲ್ಲ ಹಾಡುಗಳು ಸರಳಗನ್ನಡದಲ್ಲಿ ಇರುವುದರಿಂದ ಇವು ಶ್ರೀಸಾಮಾನ್ಯರಿಗೂ ಹತ್ತಿರವಾಗಿವೆ.

‘ತಪವ ಮಾಡಲಿಲ್ಲ ತತ್ತ್ವ ಕೊನೆಗೂ ತಿಳಿಯಲಿಲ್ಲ

ತಾನಾರೆಂದು ಅರಿಯುವ ಮೊದಲೇ

ಹೊರಟು ಹೋಯಿತಲ್ಲ ಬದುಕು ಸಾರ್ಥಕಾಗಲಿಲ್ಲ

ತಮವ ಕಳೆಯಲಿಲ್ಲ ನಿಜ ಬೆಳಕು ಬರಲೆ ಇಲ್ಲ

ಜ್ಞಾನಪ್ರಕಾಶದ ಬೆಳ್ಳಂಬೆಳಕು

ಕಡೆಗೂ ಬರಲೇ ಇಲ್ಲ-ಜನ್ಮ ಸಾರ್ಥಕಾಗಲಿಲ್ಲ...’

ಇಂಥ ಹಾಡುಗಳು ಎಂಥ ನಾಸ್ತಿಕನ ಹೃದಯವನ್ನೂ ತಟ್ಟಿಬಿಡುತ್ತವೆ, ಚಿಂತನೆಗೆ ಹಚ್ಚಿ ಬದುಕು ಎತ್ತ ಸಾಗುತ್ತಿದೆ ಎಂದು ಅವಲೋಕಿಸುವಂತೆ ಮಾಡುತ್ತವೆ. ಒಂದೊಂದು ಹಾಡಿಗೂ ಇಷ್ಟು ಶಕ್ತಿ ಇರಬೇಕಾದರೆ, ಹತ್ತು ಸಾವಿರ ಹಾಡುಗಳ ಓದು, ಅದರ ಗಾಯನ, ಮಂಥನ ಎಂಥ ಬದಲಾವಣೆಯನ್ನು ತರಬಲ್ಲದು!

ವ್ಯಾಸರಾಜರು, ವಾದಿರಾಜರು, ಗೋಪಾಲದಾಸರು, ಜಗನ್ನಾಥದಾಸರಿಂದ ಹಿಡಿದು ನಿಡಗುರಕಿ ಜೀವೂಬಾಯಿ, ಐಹೊಳೆಯ ನಾರಾಯಣರಾಯರವರೆಗಿನ ಹಾಡುಗಳನ್ನು ಕೃತಿ ಒಳಗೊಂಡಿದೆ. ಮುಖ್ಯವಾಗಿ, ಹರಿದಾಸರ ಹೆಸರು ಮತ್ತು ಅಂಕಿತವನ್ನು ಪ್ರತ್ಯೇಕವಾಗಿ ನಮೂದಿಸಿದ್ದು, ಸರಳವಾಗಿ ಮಾಹಿತಿ ಸಿಗುವಂತೆ ಮಾಡಲಾಗಿದೆ.

ಕೃತಿಯ ಲೇಖಕರೇ ಹೇಳುವಂತೆ-‘ಕರ್ನಾಟಕದ ಸಹಸ್ರಾರು ವರ್ಷಗಳ ಇತಿಹಾಸದಲ್ಲಿ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಎರಡು ಕಣ್ಣುಗಳಿದ್ದಂತೆ. ಕಾಲದ ಅಗ್ನಿಪರೀಕ್ಷೆಯಲ್ಲಿ ಎದ್ದುಬಂದ, ಗೆದ್ದು ಬಂದ ಈ ಸಾಹಿತ್ಯ ಸಮಾಜಮುಖಿಯಾಗಿ ಹೊರಟಿದ್ದರಿಂದ ಮೌಲಿಕವಾಗಿ, ಶಾಶ್ವತವಾಗಿ ಸ್ಥಾನ ಗಳಿಸಿಕೊಂಡಿತು. ಕನ್ನಡ ನಾಡು ಸೌಭಾಗ್ಯದ ಬೀಡು. ಏಕೆಂದರೆ ಹರಿದಾಸರೆಲ್ಲರೂ ಕನ್ನಡನಾಡಿನವರು’. ಹರಿದಾಸರು ಮಾನವೀಯತೆಯ ಮನೋಧರ್ಮವನ್ನು ಮೆರೆಸಿದರು.

ಉದಾರಭಾವ, ಉದಾತ್ತ ಚಿಂತನೆ, ಶೀಲಶುದ್ಧಿ, ಸಾಮಾಜಿಕ ಕಳಕಳಿ, ಧರ್ಮಪ್ರವೃತ್ತಿ ಇವೆಲ್ಲ ದಾಸಸಾಹಿತ್ಯದ ಸೌಂದರ್ಯ ಹೆಚ್ಚಿಸಿವೆ. ಈ ಬಗೆಯ ಸಾಹಿತ್ಯ ಎಲ್ಲರನ್ನೂ ಒಳಗೊಂಡಿತು. ಆತ್ಮೋದ್ಧಾರದ ಸರಳ ಮಾರ್ಗವನ್ನು ಅನಾವರಣಗೊಳಿಸಿತು. ಅಲ್ಲದೆ, ಸಾಹಿತ್ಯ, ಸಂಗೀತ, ಸಂಸ್ಕಾರಗಳ ಹೊಸದೊಂದು ಸಂಸ್ಕೃತಿ ಹುಟ್ಟುಹಾಕಿತು. ಭಕ್ತಿಆಂದೋಲನದಲ್ಲಿ ಮುಖ್ಯವಾದ ಪಾತ್ರ ವಹಿಸಿತು. ಇಂಥ ಹರಿದಾಸರ ಹಾಡುಗಳನ್ನೆಲ್ಲ ಒಂದೇ ಕಡೆ ತಂದು, ಅದರ ಶಕ್ತಿಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ತುಂಬ ಕಠಿಣವಾದದ್ದು. ಅದರಲ್ಲೂ ಸಾಹಿತ್ಯದ ಪ್ರಕಾರಗಳಲ್ಲಿ ಈ ಬಗೆಯ ಹೊಸ ಸಾಹಸ ಮಾಡಲು ಹೊರಟಾಗ ಅನೇಕ ಸವಾಲು, ಸಮಸ್ಯೆ, ಅಡ್ಡಿ-ಆತಂಕಗಳು ಇದ್ದದೇ. ಆದರೆ, ಸತ್ವಪೂರ್ಣ ಚಿಂತನೆಗಳನ್ನು ಸಮಷ್ಟಿಗೆ ನೀಡಬೇಕೆಂಬ ಸಂಕಲ್ಪದ ಮುಂದೆ ಎಲ್ಲ ಸವಾಲುಗಳು ಶರಣಾಗಿವೆ.

‘ಈಸಬೇಕು| ಇದ್ದು ಜಯಿಸಬೇಕು

ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದ್ಹಾಗೆ’...

‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣುಬಟ್ಟೆಗಾಗಿ

ತುತ್ತು ಹಿಟ್ಟಿಗಾಗಿ, ವೇದ, ಶಾಸ್ತ್ರ, ಪಂಚಾಂಗ ಓದಿಕೊಂಡು

ಪರರಿಗೆ ಬೋಧನೆಯ ಮಾಡುವುದು

ಹೊಟ್ಟೆಗಾಗಿ ಗೇಣುಬಟ್ಟೆಗಾಗಿ...’

ಹೀಗೆ ದಾಸರ ಪ್ರತೀ ಹಾಡು ಕೂಡ ಅಧ್ಯಾತ್ಮನಿಧಿಯ ದಿವ್ಯತೆಯನ್ನು ಪರಿಚಯಿಸುತ್ತ, ಜೀವನದರ್ಶನ ಮಾಡಿಸುತ್ತದೆ, ಧನ್ಯತೆ ಮೂಡಿಸುತ್ತದೆ. ಎಷ್ಟೋ ದಾಸರು ಹಸ್ತಪ್ರತಿಗಳಲ್ಲಿ ಬರೆದ ಹಾಡುಗಳು ಇತಿಹಾಸದ ಗರ್ಭದಲ್ಲಿ ರಕ್ಷಣೆ ಆಗದೆ ಲುಪ್ತವಾಗಿ, ವರ್ತಮಾನಕ್ಕೆ ದೊರೆಯದ ಕಳವಳವನ್ನು ಮನಗಂಡೇ ನೂರಾರು ದಾಸರ ಹಾಡುಗಳನ್ನು ಕೃತಿ ರೂಪದಲ್ಲಿ ಸಂಕಲಿಸಲು ಮೂಲಪ್ರೇರಣೆ.

ಡಾ. ಅರಳುಮಲ್ಲಿಗೆ ಪಾರ್ಥ ಸಾರಥಿಯವರು ಸಹಸ್ರಾರು ಕೀರ್ತನೆಗಳನ್ನು ‘ಪಾರ್ಥಸಾರಥಿವಿಠಲ’ ಅಂಕಿತದಲ್ಲಿ ಬರೆದಿದ್ದು, 150 ಕೀರ್ತನೆಗಳು ಈ ಕೃತಿಯಲ್ಲಿವೆ. ಹಾಗೆಯೇ, ಅವರು ಬರೆದ ಸುಳಾದಿ, ಉಗಾಭೋಗಗಳು ಈ ಕೃತಿಯ ಮಹತ್ವ ಹೆಚ್ಚಿಸಿವೆ. ಉಗಾಭೋಗಗಳಂತೂ ಎಲ್ಲರ ಮನಸ್ಸಿಗೂ ನಾಟುವಂಟಿವೆ.

‘ಅನ್ಯಾಯ ಮಾಡದಿರುವುದೆ ಅಧ್ಯಾತ್ಮ ವಿದ್ಯೆ

ಬದ್ಧ ನಡೆನುಡಿಯಿರುವುದೆ ಬ್ರಹ್ಮವಿದ್ಯೆ

ಮಾನಮರ್ಯಾದೆಯಲ್ಲಿ ಬಾಳ್ವುದೆ ಮಂತ್ರವಿದ್ಯೆ

ಜ್ಞಾನಭಕ್ತಿಯ ನೀಡಿ ಕರುಣಿಸೊ ಪಾರ್ಥಸಾರಥಿವಿಠಲ’ ಇಂಥ 152 ಸುಳಾದಿಗಳ ಸಂಗ್ರಹವಿದೆ.

‘ಭಾವಶುದ್ಧಿ, ಬುದ್ಧಿಶುದ್ಧಿ, ಮನೋಶುದ್ಧಿ, ಹೃದಯಶುದ್ಧಿ ಬೇಕೆನ್ನುವವರು ದಾಸಸಾಹಿತ್ಯಕ್ಕೆ ಬರಬೇಕು. ಇಲ್ಲಿ ಗುರುವಿನ ಗುರುತಾಗುತ್ತದೆ. ಪರಮಾತ್ಮನನ್ನು ಪ್ರೀತಿ ಮಾಡುವ ಕಲೆ ಕರಗತವಾಗುತ್ತದೆ’ ಎನ್ನುವ ಕೃತಿಯ ಲೇಖಕರ ಆಶಯದಂತೆ ಇಂದಿನ ವರ್ತಮಾನದಲ್ಲಿ ಸಮಾಜೋನ್ನತಿಗೂ, ಆತ್ಮಸಾಧನೆಗೂ ಈ ಕೃತಿ ಪ್ರೇರಣೆ ನೀಡುತ್ತದೆ. ‘ಮಾನವ ಜನ್ಮ ದೊಡ್ಡದು’ ಎಂಬ ಧ್ಯೇಯವನ್ನು ಮತ್ತೆ ಮತ್ತೆ ನೆನಪಿಸುತ್ತ ಸಾರ್ಥಕ ಮಾರ್ಗದಲ್ಲಿ ಸಾಗಲು ದಿಕ್ಸೂಚಿಯಾಗುತ್ತದೆ. ದಾಸಸಾಹಿತ್ಯ ಕುರಿತು ಸಂಶೋಧನೆ ಮಾಡ ಬಯಸುವವರಿಗೂ ಉತ್ತಮ ಆಕರ ಗ್ರಂಥ. ಒಟ್ಟಿನಲ್ಲಿ, ಭಕ್ತಿಆಂದೋಲನಕ್ಕೆ, ನಮ್ಮ ಸಂಸ್ಕೃತಿಗೆ ಮತ್ತಷ್ಟು ಶಕ್ತಿ ತುಂಬಬಲ್ಲ ಇಂಥ ಪ್ರಯತ್ನಗಳನ್ನು ಸಮುದಾಯ ಪ್ರೀತಿಯಿಂದ ಸ್ವಾಗತಿಸುತ್ತದೆ. ಅದು ಅಂತರಂಗದ ಹುಡುಕಾಟಕ್ಕೆ ಸಾಕ್ಷಿ.

| ರವೀಂದ್ರ ಎಸ್. ದೇಶಮುಖ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net