ಗೃಹಸ್ಥಾಶ್ರಮದ ಸಂಕೇತ: ಕಾಲುಂಗುರ... ಶ್ರೀಮತಿಗೆ ಸುಂದರ...

KALUNGURA
Published on

ಸಂಪ್ರದಾಯ, ಆರೋಗ್ಯ, ಅಲಂಕಾರಗಳ ಬೆಸುಗೆ ಕಾಲುಂಗುರ. ಸ್ತ್ರೀ ಧರ್ಮ, ಕರ್ತವ್ಯಗಳನ್ನು ನೆನಪಿಸುವುದರ ಜತೆಗೆ ವೈಜ್ಞಾನಿಕ ಮಹತ್ವ ಪಡೆದುಕೊಂಡಿರುವ ಕಾಲುಂಗುರ, ಸುಮಂಗಲಿಯರ ಐದು ಮುತ್ತುಗಳಲ್ಲಿ ಒಂದಾಗಿದೆ. 16 ಶೃಂಗಾರಗಳಲ್ಲಿ (ಸೋಲಾ ಶೃಂಗಾರ) ಸಿಂಧೂರ ಧಾರಣೆಯು ಮೊದಲನೆಯದ್ದಾದರೆ ಬೆಳ್ಳಿ ಕಾಲುಂಗುರವು ಐದನೆಯದು. ಸಾಂಪ್ರದಾಯಿಕವಾಗಿ ಹಾಗೂ ವೈಜ್ಞಾನಿಕವಾಗಿ ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ... 

ಕನ್ನಡದಲ್ಲಿ ಕಾಲುಂಗುರ, ಹಿಂದಿಯಲ್ಲಿ ಬಿಚಿಯಾ, ತಮಿಳಿನಲ್ಲಿ ಮಿಂಚಿ, ಮಲಯಾಳದಲ್ಲಿ ಮಿಂಜಿ, ಮರಾಠಿಯಲ್ಲಿ ಜೊಡವಿ, ತೆಲುಗುವಿನಲ್ಲಿ ಮೆಟ್ಟಿಲು, ಬಂಗಾಲಿಯಲ್ಲಿ ಅಂಗೋಟ್ ಎಂದು ಕರೆಸಿಕೊಳ್ಳುವ ಕಾಲುಂಗುರವು ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ.

ರಾವಣ ಸೀತೆಯನ್ನು ಅಪಹರಿಸಿದಾಗ ಅವಳು ಎಸೆದ ಕಾಲುಂಗುರ ರಾಮನಿಗೆ ದಾರಿ ಪತ್ತೆ ಮಾಡಲು ಸಹಾಯವಾಯಿತು ಎಂದು ಉಲ್ಲೇಖಿಸಲಾಗಿದೆ. ‘ಶ್ರೀಲಕ್ಷ್ಮಿಯ ಕಾಲುಂಗುರ ಘಲಕೆನಲು ಲೋಲಾಕ್ಷಿ ಮೆಲ್ಲನೆ ನಡೆತಂದಳು’ ಎಂಬ ಕೀರ್ತನೆಯ ಸಾಲಿನಂತೆ ಕಾಲುಂಗುರದಲ್ಲಿ ಗೆೆಜ್ಜೆಗಳು ಆ ಕಾಲದಲ್ಲಿಯೇ ಇತ್ತೆಂದು ತಿಳಿಯುತ್ತದೆ.

ಭಾರತದಲ್ಲಿನ ಎಲ್ಲ ಧರ್ವಿುಯರೂ ಸಂಪ್ರದಾಯಕ್ಕಾಗಿ ಧರಿಸಿದರೆ, ವಿದೇಶಿಗರು ಫ್ಯಾಷನ್ ಎಂಬಂತೆ ಧರಿಸಲು ಶುರು ಮಾಡಿದ್ದಾರೆ. ವೇದ, ಆಯುರ್ವೆದ ವೈದ್ಯ ಶಾಸ್ತ್ರಗಳಲ್ಲಿ ಕಾಲುಂಗುರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಬ್ರಹ್ಮಾಂಡದಿಂದ ಬರುವ ಇಚ್ಛಾ ಲಹರಿಗಳನ್ನು ಗ್ರಹಿಸುವ, ಸ್ತ್ರೀಯರ ಪ್ರಾಣಶಕ್ತಿಯನ್ನು ಜಾಗೃತಗೊಳಿಸುವ ಶಕ್ತಿ ಇದಕ್ಕಿದೆ.

ಬೆಳ್ಳಿಯೇ ಏಕೆ?: ಕಾಲುಂಗುರಗಳು ಹೆಚ್ಚಾಗಿ ಬೆಳ್ಳಿಯಿಂದ ಮಾಡಲ್ಪಟ್ಟಿರುತ್ತವೆ. ಬೆಳ್ಳಿಗೆ ಉತ್ತಮ ವಾಹಕತ್ವದ ಗುಣವಿರುವ ಕಾರಣ, ಕಾಲುಂಗುರವು ಭೂಮಿಯ ಧ್ರುವಶಕ್ತಿಯನ್ನು ಹೀರಿಕೊಂಡು ಆ ಸಕಾರಾತ್ಮಕ ಶಕ್ತಿ ದೇಹದಲ್ಲೆಲ್ಲಾ ಸಂಚಾರವಾಗುವಂತೆ ಮಾಡುತ್ತದೆ. ಅಲ್ಲದೇ ಬೆಳ್ಳಿಗೆ ಚರ್ಮರೋಗವನ್ನು ತಡೆಯುವ ಶಕ್ತಿಯಿದೆ.

ಕಾಲುಗಳ ಬೆರಳಿಗೆ ಬಿಗಿದಿರುವ ಕಾರಣ, ನರಗಳು ಪ್ರಚೋದನೆಗೊಂಡು ಮೆದುಳಿನ ಕೇಂದ್ರದಲ್ಲಿ ಪ್ರಕ್ರಿಯೆಗಳು ಆರಂಭವಾಗಿ ಮಹಿಳೆಯರಲ್ಲಿ ಜವಾಬ್ದಾರಿ ಮತ್ತು ನೆಮ್ಮದಿಯ ಭಾವ ಮೂಡಿಸುತ್ತವೆ. ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತವೆ ಎನ್ನುತ್ತದೆ ವಿಜ್ಞಾನ. ಹೆಬ್ಬೆರಳಿನ ಪಕ್ಕದ ಬೆರಳಿಗೆ ಕಾಲುಂಗುರ ತೊಡುವುದು ವಾಡಿಕೆ. ಕಾಲಿನ ಉದ್ದನೆಯ ಬೆರಳು ಅದೇ ಆಗಿರುತ್ತದೆ. ಇದನ್ನು ಸ್ತ್ರೀ ಜಾಗೃತ ಶಕ್ತಿ ತತ್ವಕ್ಕೆ ಹೋಲಿಸುತ್ತಾರೆ.

ಹಾಗೆ ಆಯುಷ್ಯಕ್ಕೆ ಸಂಬಂಧಿಸಿದ ಬೆರಳು ಎಂದೂ ಹೇಳುತ್ತಾರೆ. ಇದಕ್ಕೂ ಗರ್ಭಾಶಯಕ್ಕೂ ನೇರ ಸಂಬಂಧವಿದೆ. ಆ ಬೆರಳ ಮೇಲೆ ಕಾಲುಂಗುರಗಳ ಒತ್ತಡ ಹಾಗೂ ಮರ್ದನ ಉಂಟಾದಾಗ ರಕ್ತ ಪರಿಚಲನೆ ಸರಾಗವಾಗಿ ಕಾಲಿನ ಕೆಲವು ನರಗಳು ಉತ್ತೇಜನಗೊಂಡು ಗರ್ಭಕೋಶದ ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಸಹಾಯಕವಾಗುತ್ತದೆ.

ಎರಡನೆ ಬೆರಳು ನರ ಗರ್ಭಕೋಶದ ಮೂಲಕ ಹೃದಯಕ್ಕೆ ಜೋಡನೆಯಾಗಿರುತ್ತದೆ. ಋತು ಚಕ್ರದ ಸಮಸ್ಯೆಗಳು, ನಿವಾರಣೆಯಾಗಿ ಸ್ವಾಸ್ಥ್ಯ ಶಿಶು ಜನಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ. ಬೆಳ್ಳಿಗೆ ದೇಹದ ಉಷ್ಣತೆಯನ್ನು ತಗ್ಗಿಸಿ ದೇಹವನ್ನು ತಂಪಾಗಿಸುವ ಗುಣವಿದೆ. ಕೋರಿಕೆಗಳು ಮಿತಿ ಮೀರದಂತೆ, ಕೋಪತಾಪಗಳನ್ನು ಹತೋಟಿಯಲ್ಲಿಡಲು, ಪೋಲಿ ಪೋಕರಿಗಳಿಂದ ತಪ್ಪಿಸಿಕೊಳ್ಳಲು ಕಾಲುಂಗರ ಸಹಕಾರಿ ಎನ್ನಬಹುದು.

ಆಭರಣಗಳೆಂದರೆ ನಮಗೆ ಚಿನ್ನದ, ಬೆಳ್ಳಿಯ ಆಭರಣಗಳು ನೆನಪಿಗೆ ಬರುತ್ತವೆ. ಸೊಂಟದಿಂದ ಕೆಳಗೆ ಚಿನ್ನ ಧರಿಸಬಾರದು ಎಂಬ ಕಾರಣಕ್ಕೆ ಉಡುದಾರ, ಕಾಲುಗೆಜ್ಜೆ, ಕಾಲಂದುಗೆ, ಕಾಲುಂಗುರಗಳು ಬೆಳ್ಳಿಯಿಂದಲೇ ಮಾಡಲ್ಪಟ್ಟಿರುತ್ತವೆ. ಅರಸು ಮನೆತನಗಳವರು ಮಾತ್ರ ಚಿನ್ನದ ಕಾಲುಗೆಜ್ಜೆ, ಕಾಲುಂಗುರ ಧರಿಸಬಹುದೆಂದು ಹೇಳುತ್ತಾರೆ.

ಗೃಹಸ್ಥಾಶ್ರಮದ ಸಂಕೇತ: ಕಾಲುಂಗುರವೆಂದರೆ ಗೃಹಸ್ಥಾಶ್ರಮದ ಸಂಕೇತ. ಮದುವೆಯ ಸಂದರ್ಭದಲ್ಲಿ ಕಾಲುಂಗುರ ತೊಡಿಸುವ ಶಾಸ್ತ್ರವಿದೆ. ಹಿರಿಯ ಸುಮಂಗಲಿಯರು, ಮದುಮಗ, ಸೋದರಮಾವ, ಅತ್ತೆ ಹೀಗೆ ಅವರವರ ಪದ್ಧತಿಗೆ ತಕ್ಕಂತೆ ಮದುಮಗಳಿಗೆ ಕಾಲುಂಗುರ ತೊಡಿಸುವುದಿದೆ. ಸಪ್ತಪದಿಯ ಸಮಯದಲ್ಲಿ ಮದುಮಗಳಿಗೆ ಕಾಲುಂಗರ ಹಾಕಿಸಿಯೇ ಸಪ್ತಪದಿ ತುಳಿಸುತ್ತಾರೆ.

ಮದುಮಗ ಮದುಮಗಳ ಕಾಲನ್ನು ಮುಟ್ಟಿ ಕಾಲುಂಗುರ ತೊಡಿಸುವುದೆಂದರೆ, ಸಂಗಾತಿಗೆ ಚಿಕ್ಕ ನೋವೂ ಆಗದ ಹಾಗೆ ನೋಡಿಕೊಳ್ಳುವನೆಂಬ ನಂಬಿಕೆ ತುಂಬುವುದು ಎಂದರ್ಥ. ಇನ್ನೂ ಕೆಲವು ಸಂಪ್ರದಾಯದಲ್ಲಿ ಮದುಮಗ ಕೂಡ ತೋರಬೆರಳಿನಲ್ಲಿ ಒಂದೇ ಸುತ್ತಿನ ಅಂದರೆ ಮಿಂಚು ಎಂಬ ಹೆಸರಿನ ಕಾಲುಂಗುರ ಹಾಕುವುದಿದೆ.

ಇಷ್ಟು ಓದಿದ ನಂತರ ‘ಬೆಳ್ಳಿ ಕಾಲುಂಗುರ... ಶ್ರೀಮತಿಗೆ ಸುಂದರ ಎಂಬ ಗೀತೆ ನೆನಪಾಗುತ್ತದಲ್ಲವೆ? ಹೌದು. ಕಾಲಿನ ತುಂಬ ಮೆಹಂದಿ, ಉಗುರುಗಳಿಗೆ ಹಾಕಿದ ನೇಲ್ ಪಾಲಿಷ್, ಅದನ್ನೂ ಮೀರಿಸುವಂತಹ ಬೆಳ್ಳಿ ಕಾಲುಂಗುರ ಪಾದದ ಅಂದವನ್ನು ಇಮ್ಮಡಿಗೊಳಿಸುವುದರೊಂದಿಗೆ ಕನ್ಯತ್ವದಿಂದ ಗೃಹಿಣಿಗೆ ಒಪ್ಪಿಗೆಯ ಪ್ರೀತಿಯ ಬಡ್ತಿ ನೀಡಿದ್ದರ ಸಂಕೇತವೂ ಹೌದು.

ಇರಲಿ ಎಚ್ಚರ...

ಮದುವೆಯಾದ ಮೇಲೆ ಧರಿಸುವ ಬೆಳ್ಳಿ ಕಾಲುಂಗುರಗಳು ಸಾಂಪ್ರದಾಯಿಕ, ಫ್ಯಾಷನ್ ಮತ್ತು ಆಲಂಕಾರಿಕ ಆಭರಣ. ಕಾಲಕ್ಕೆ ತಕ್ಕಂತೆ ಹೆಣ್ಣು ಮಕ್ಕಳು ತಮ್ಮ ಫ್ಯಾಷನ್ ಟ್ರೆಂಡ್ ಬದಲಾಯಿಸುತ್ತಿರುತ್ತಾರೆ. ಬೆಳ್ಳಿ ಬಿಟ್ಟು ವೈಟ್ ಮೆಟಲ್ ಇಲ್ಲವೇ ಅನ್ಯ ಲೋಹದಿಂದ ಮಾಡಿದ ಕಾಲುಂಗುರಗಳು ಮಾರುಕಟ್ಟೆಯಲ್ಲಿವೆ.

ಆದರೆ ಇವುಗಳು ಆರೋಗ್ಯಕ್ಕೆ ಮುಳುವಾಗಬಹುದು. ಮುಖ್ಯವಾಗಿ ಇವುಗಳು ಚರ್ಮದ ಸಮಸ್ಯೆ ತಂದೊಡ್ಡುತ್ತವೆ. ಕೆಲವರಿಗೆ ಅಲರ್ಜಿಯಾಗಬಹುದು. ಇಲ್ಲವೇ ಕಾಲು ತುಂಬಾ ಕಾಣಬೇಕೆಂದು ಬಿಗಿಯಾಗಿರುವ ಕಾಲುಂಗುರ ತೊಟ್ಟು ನೋವು ಅನುಭವಿಸಬಹುದು. ಫ್ಯಾಷನ್ ಮೋಹ ಆರೋಗ್ಯ ಕಸಿಯಬಾರದಷ್ಟೆ. ಏನೇ ಆಗಲಿ ಮನಸ್ಸಿಗೆ ಒಪ್ಪುವ ಬೆರಳಿಗೆ ಸರಿ ಹೊಂದುವ ಕಾಲುಂಗುರ ಅತ್ಯಂತ ಸೇಫ್.

ಕಲಾತ್ಮಕ ಕಾಲುಂಗುರ

ಕಾಲುಂಗುರಗಳಲ್ಲಿ ವಿಭಿನ್ನ ರೂಪಗಳಿವೆ. ವಂಕಿ, ಜಿಗ್ ಜಾಗ್, ಗೆಜ್ಜೆ, ಹರಳು, ಮಣಿಗಳಿಂದ ಕಲಾತ್ಮಕವಾಗಿ ಮಾಡಲ್ಪಟ್ಟಿರುವ ಕಾಲುಂಗುರಗಳು ಇರುತ್ತವೆ. ಪಿಲ್ಲಿ, ಮಿಂಚು, ಏರಿಗೆ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಪಿಲ್ಲಿಗಳಲ್ಲೂ ಕಿರುಪಿಲ್ಲಿ, ಗೆಜ್ಜೆಪಿಲ್ಲಿ, ಎಲೆ ಪಿಲ್ಲಿ, ನಿಂಬೆ ಹೂವಿನ ಪಿಲ್ಲಿ ಎಂಬೆಲ್ಲಾ ಪ್ರಕಾರಗಳಿವೆ. ಇವು ದಕ್ಷಿಣದ ಕಾಲುಂಗುರಗಳ ವಿಶೇಷತೆಯಾದರೆ, ಉತ್ತರ ಭಾರತದಲ್ಲಿ ಒಂದು ಕಾಲುಂಗುರ ಅದರ ಸರಪಳಿ ಇಡಿ ಕಾಲನ್ನು ಸುತ್ತುವರಿವಂತೆ ಧರಿಸುತ್ತಾರೆ.

ಇದು ಮೂರು ಬೆರಳನ್ನು ಸೇರಿಸಿಕೊಂಡು, ಐದು ಬೆರಳುಗಳನ್ನು ಸೇರಿಸಿಕೊಂಡು ಮಾಡಲ್ಪಟ್ಟವಾಗಿರುತ್ತವೆ. ಹೆಬ್ಬೆರಳು ಕಿರುಬೆರಳುಗಳನ್ನು ಬಿಟ್ಟು ಮೂರು ಬೆರಳುಗಳನ್ನು ಸೇರಿಸಿ ಮೂರೂ ಉಂಗುರಗಳು ಒಂದೇ ಆಭರಣದಲ್ಲಿ ಬರುವಂತೆ ತ್ರೀ ಫಿಂಗರ್ ಟೋರಿಂಗ್ ಕೂಡ ಇದೆ. ಬುಡಕಟ್ಟು ಜನಾಂಗದಲ್ಲಿ ಹೆಬ್ಬೆರಳುಗಳಿಗೆ ಧರಿಸುವುದಿದೆ. ಮದುವೆಯಾಗದೇ ಇರುವ ಯುವತಿಯರು ನಾಲ್ಕನೆಯ ಬೆರಳಿಗೆ ಮಾಸೋಳಿ ಎಂಬ ಹೆಸರಿನ ಕಾಲುಂಗುರ ಧರಿಸುತ್ತಾರೆ. ಮಾಸೋಳಿ ಎಂದರೆ ಮತ್ಸಾ್ಯಕಾರದ ಕಾಲುಂಗುರ.

ಕೆಲವರು ತುಂಬಾ ಸಿಂಪಲ್ ಎಂದು ಕೂದಲೆಳೆಯಂತಹ ಕಾಲುಂಗುರ ಧರಿಸಿರುತ್ತಾರೆ. ಅವರ ಪಾಲಿಗೆ ಕೇವಲ ಟೋರಿಂಗ್ ಅಷ್ಟೆ. ಇನ್ನು ಕೆಲವರು ಐದೂ ಬೆರಳಿಗೂ ಧರಿಸುತ್ತಾರೆ . ಇವರ ಪಾಲಿಗೆ ಕಾಲುಂಗರ ಅಲ್ಲ ಕಾಲೇ ಉಂಗುರ. ಸಾಮಾನ್ಯವಾಗಿ ಎರಡು ಸುತ್ತಿನ ಕಾಲುಂಗುರವೇ ಹೆಚ್ಚು ಅದಕ್ಕಿಂತ ಹೆಚ್ಚು ಅಂದರೆ ಎರಡು ಬೆರಳಿಗೆ ಧರಿಸಿರುವವರನ್ನು ನೋಡಬಹುದು. ಕಾಲುಂಗುರಗಳಲ್ಲಿ ಗೆಜ್ಜೆ ಇದ್ದರೆ ಬಹಳ ಚೆಂದ.

ಸುತ್ತಿನಲ್ಲೂ ಇದೆ ಮಹತ್ವ

ಕಾಲುಂಗುರದಲ್ಲಿ ಮೂರು, ಐದು, ಒಂಬತ್ತು ಸುತ್ತುಗಳ ಕಾಲುಂಗುರಗಳಿವೆ. ಒಂದೊಂದು ಸುತ್ತಿನ ಕಾಲುಂಗುರಕ್ಕೂ ಹಿರಿಯರು ಒಂದೊಂದು ಮಹತ್ವ ಹೇಳಿದ್ದಾರೆ.

  • ಎರಡು ಸುತ್ತಿನಲ್ಲಿ ಹರಿ-ಹರರ ಅನುಗ್ರಹವಿದೆ.
  • ಮೂರು ಸುತ್ತಿನಲ್ಲಿ ತ್ರಿಶಕ್ತಿ ಹಾಗು ತ್ರಿಮೂರ್ತಿಗಳ ಅನುಗ್ರಹವಾಗುತ್ತದೆ.
  • ಐದು ಸುತ್ತಿನದ್ದು ಧರಿಸಿದರೆ ‘ಪಂಚಮಮ್ ಕಾರ್ಯ ಸಿದ್ಧಿ’ ಅಂದರೆ ಎಲ್ಲಾ ಕಾರ್ಯಗಳು ಜಯವಾಗುತ್ತವೆ.
  • ಏಳು ಸುತ್ತಿನದ್ದು ಧರಿಸಿದರೆ ಸಪ್ತಪದಿಯ ನೆನಪಿನೊಂದಿಗೆ ದಾಂಪತ್ಯ ಜೀವನದಲ್ಲಿ ಸುಖ- ಸಂತಸ, ನೆಮ್ಮದಿ ಉಂಟಾಗುತ್ತದೆ.
  • ಎಂಟು ಸುತ್ತಿನಲ್ಲಿ ಅಷ್ಟಲಕ್ಷಮಿಯ ಪರಿಪೂರ್ಣ ಅನುಗ್ರಹವಿದೆ.
  • ಒಂಬತ್ತು ಸುತ್ತಿನದ್ದು ಧರಿಸಿದರೆ ದಾಂಪತ್ಯ ಜೀವನದಲ್ಲಿ ಆನಂದ ಯಶಸ್ಸು ತುಂಬಿ ಉತ್ತಮ ಸಂತತಿ ಭಾಗ್ಯವುಂಟಾಗುತ್ತದೆ.
  • ಹತ್ತು ಸುತ್ತಿನದ್ದು ಧರಿಸಿದರೆ ಶ್ರೀಹರಿಯ ದಶಾವತಾರದ ಅನುಗ್ರಹದೊಂದಿಗೆ ಸಂಪತ್ತು ವೃದ್ಧಿಸುತ್ತದೆ.

| ಸುಮಾವೀಣಾ ಹಾಸನ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net