

ಮಕ್ಕಳಿಗೆ ಬರೀ ಹಣ ಗಳಿಸುವ, ಹೆಸರು ಮಾಡುವ ಮಾರ್ಗವನ್ನು ಕಲಿಸಿದರೆ ಆಗುವುದಿಲ್ಲ. ಸಮಯವಿದ್ದಾಗಲೆಲ್ಲ ಹಿರಿಯರೊಂದಿಗೆ ಸೇರಿ ಮನೆಗೆಲಸ ಮಾಡುವುದನ್ನೂ ಚಿಕ್ಕಂದಿನಿಂದಲೇ ಕಲಿಸಬೇಕಾಗುತ್ತದೆ. ಎಳವೆಯಿಂದಲೇ ಈ ಅಭ್ಯಾಸ ಮಾಡಿಸಿದರೆ ಸುಲಭ. ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಎಂಬ ಗಾದೆಯಂತೆ ಬೆಳೆದ ಮಕ್ಕಳಿಗೆ ಅಭ್ಯಾಸ ಮಾಡಿಸುವುದು ಕಷ್ಟ. ಆಗ ಪರಿಣಾಮ ಬೇರೆಯೇ ಆಗುವ ಸಂಭವ ಹೆಚ್ಚು.
ಇತ್ತೀಚೆಗೆ ಖ್ಯಾತ ಕನ್ನಡ ನಟಿಯೊಬ್ಬರು ಟಿವಿ ಸಂದರ್ಶನದಲ್ಲಿ ಒಂದು ಮಾತು ಹೇಳಿದ್ದರು. ‘‘ನಾನು ಬೆಳಗ್ಗೆ ಎಷ್ಟು ಗಂಟೆಗೆ ಏಳುತ್ತೇನೆ ಎಂಬುದಾಗಲೀ, ಏನೇನು ಕೆಲಸಗಳನ್ನು ಯಾವ ರೀತಿ ಮಾಡಿ ಮುಗಿಸಿರುತ್ತೇನೆ ಎಂಬುದಾಗಲೀ ನನ್ನ ಮಗಳ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ ಅವಳು ಏಳುವ ಹೊತ್ತಿಗೆ ನನ್ನ ಮನೆಗೆಲಸಗಳೆಲ್ಲವನ್ನೂ ಮುಗಿಸಿ, ಹೊರಗಿನ ಕರ್ತವ್ಯಕ್ಕೆ ಹೊರಡುವ ಸಮಯವಾಗಿರುತ್ತದೆ’’ ಎಂದು. ಇದು ಅವರೊಬ್ಬರ ಮನೆಯ ಸಂಗತಿಯಲ್ಲ, ಇಂದಿನ ಬಹುತೇಕ ಕುಟುಂಬಗಳ ಕಥೆ ಇದು.
‘ಮಕ್ಕಳು ನಮ್ಮ ಹಾಗೆ ಕಷ್ಟ ಪಟ್ಟು ಓದುವುದು ಬೇಡ. ಸಂಪೂರ್ಣ ಮನಸ್ಸನ್ನೂ ಓದಿಗೆ ಹಾಕಿ, ಆರಾಮವಾಗಿ ವಿದ್ಯೆ ಕಲಿಯಲಿ. ಮುಂದೆ ಮಾಡುವುದು ಇದ್ದೇ ಇದೆ’ ಎಂಬ ಭಾವನೆಯಿಂದ, ಒಂದೇ ಮಗು ಎಂಬ ಅಕ್ಕರೆಯಿಂದ, ನಮ್ಮ ತಲೆಮಾರಿನ ತಂದೆತಾಯಿಗಳು ಮಕ್ಕಳಿಗೆ ಬೇಗ ಎಬ್ಬಿಸುವ ಅಭ್ಯಾಸವನ್ನಾಗಲೀ ಮನೆಗೆಲಸಕ್ಕೆ ತೊಡಗಿಸುವ ರೂಢಿಯನ್ನಾಗಲೀ ಮಾಡಿಸದಿದ್ದುದು ಒಳ್ಳೆಯತನದಿಂದ. ಆದರೆ ಅದರ ಪರಿಣಾಮ ಮಾತ್ರ ಮಕ್ಕಳನ್ನು ನಿಶ್ಶಕ್ತರನ್ನಾಗಿಸಿದೆ, ಮಾನವೀಯತೆಯನ್ನೇ ಕಸಿದುಕೊಂಡಿದೆ. ಮಕ್ಕಳಿಗೆ ಹೊರಗಿನ ಕಷ್ಟಗಳಿರಲಿ, ಮನೆಗೆಲಸದ ಹೊಣೆಗಾರಿಕೆಯ ಸಣ್ಣ ಕಷ್ಟವೂ ಅರಿವಿಗೇ ಬರುತ್ತಿಲ್ಲ.
ಎಲ್ಲ ಓದು ವಿದ್ಯೆಗಳನ್ನೂ ಮುಗಿಸಿ, ಕೆಲಸಗಳಿಗೂ ಸೇರಿ ತಮ್ಮದೇ ಆದ ಕುಟುಂಬವೊಂದನ್ನು ನಿಭಾಯಿಸುವ ಸಂದರ್ಭ ಬಂದಾಗಲೇ ಅವರಿಗೆ ತಾವೂ ಮನೆಗೆಲಸ ಮಾಡುವುದು ಅನಿವಾರ್ಯವೆಂಬುದು ಮನದಟ್ಟಾಗುತ್ತಿ್ತೆ. ಸಣ್ಣ ಪುಟ್ಟ ಕೆಲಸಗಳೂ ಬೃಹತ್ ಹೊರೆಗಳಾಗಿ ಭಾಸವಾಗತೊಡಗುತ್ತಿವೆ. ಮಾಡಲಾಗದ ಕಗ್ಗಂಟಾಗಿ ಕಾಣತೊಡಗಿವೆ. ಸಣ್ಣಪುಟ ್ಟ ಸಮಸ್ಯೆಗಳಿಗೂ ದೊಡ್ಡ ದೊಡ್ಡ ಕದನಗಳಾಗತೊಡಗಿವೆ. ವಿಚ್ಛೇದನದವರೆಗೆ ತಲುಪುತ್ತಿವೆ.
ಹೆಣ್ಮಕ್ಕಳಿಗೆ ಸೀಮಿತವಲ್ಲ: ಹೆಣ್ಣುಮಕ್ಕಳು ಮಾತ್ರವಲ್ಲ, ಗಂಡು ಮಕ್ಕಳಿಗೂ ಅವರವರ ಪಾರಂಪರಿಕ ವೃತ್ತಿಯಲ್ಲಿ ಬಿಡುವಿನ ವೇಳೆಗಳಲ್ಲಿ ಹಿರಿಯರಿಂದ ತರಬೇತಿ ಸಿಗುತ್ತಿತ್ತು. ರೈತಾಪಿ ಮಕ್ಕಳಿಗೆ ಹೊಲದಲ್ಲಿ, ಹೋಟೆಲ್ ಉದ್ಯಮದವರ ಮಕ್ಕಳಿಗೆ ಹೋಟೆಲ್ಗಳಲ್ಲಿ, ಜವಳಿ ಅಂಗಡಿಯ ಮಕ್ಕಳಿಗೆ ತಂತಮ್ಮ ಬಟ್ಟೆ ಅಂಗಡಿಗಳಲ್ಲಿ, ಚಿನ್ನ-ಬೆಳ್ಳಿಯ ವ್ಯಾಪಾರಿಗಳಿಗೆ ಸಂಬಂಧಿತ ವೃತ್ತಿಯಲ್ಲಿ - ಹೀಗೆ ಅವರವರ ಕಸುಬುಗಳಲ್ಲಿ ಹಿರಿಯರಿಗೆ ಸಹಾಯ ಮಾಡುತ್ತ ತರಬೇತುಗೊಳ್ಳುತ್ತಿದ್ದರು. ಈ ಮನೆಗೆಲಸ ಅಥವಾ ವೃತ್ತಿಪರ ಕಸುಬುಗಳನ್ನು ಹಿರಿಯರೊಂದಿಗೆ ಮಕ್ಕಳೂ ಮಾಡುವಾಗ ಎಲ್ಲರೂ ಒಟ್ಟಾಗಿ ಮಾತಾಡುತ್ತ, ಸುತ್ತಮುತ್ತ ನಡೆಯುತ್ತಿದ್ದ ಸಂಗತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತ, ಬೇಕು ಬೇಡದ ವಿಷಯಗಳ
ಬಗೆ ಚರ್ಚಿಸುತ್ತ, ಎಷ್ಟೆಲ್ಲ ಜ್ಞಾನ, ತಲೆಯಲ್ಲಿ ಹೋಗುತ್ತಿತ್ತು. ಸ್ನೇಹಿತರು-ಸಂಬಂಧಿಗಳಿಂದ ಕುಟುಂಬದವರಿಗಾದ ಸಹಾಯ-ಅನ್ಯಾಯ, ಅಜ್ಜ ಮುತ್ತಾತರು ಮಾಡಿದ ಕೆಲಸ ಮತ್ತು ಗಳಿಸಿದ ಹಣ, ಅವಘಡಗಳಲ್ಲಿ ಕಳೆದುಕೊಂಡ ಆಸ್ತಿ - ಹೀಗೆ ಹಲವು ಕೌಟುಂಬಿಕ ವಿವರಗಳು, ಅವರ ಕಿವಿಗಳಿಗೆ ತಲುಪುತ್ತಿತ್ತು. ಆಗಿನ ಮಕ್ಕಳಿಗೆ ಬರೀ ಕೆಲಸದ ತರಬೇತಿ ಮಾತ್ರವಲ್ಲ, ಎಲ್ಲ ವಯಸ್ಸಿನವರೊಂದಿಗೆ ಹೊಂದಿಕೊಳ್ಳುವ ತರಬೇತಿಯೂ ಸಿಗುತ್ತಿತ್ತು.
ಪ್ರತಿ ಕೆಲಸಕ್ಕೆ ಪಡಬೇಕಾದ ದೈಹಿಕ ಶ್ರಮ, ಹಾಕಬೇಕಾದ ಹಣದ ಪ್ರಮಾಣ, ಬಳಸಬೇಕಾದ ಸಮಯ, ಜತೆಯಾಗಿ ಮಾಡುವ ಕೆಲಸದಲ್ಲಿ ಸಿಗುವ ನೆಮ್ಮದಿ, ಆಗುವ ಉಳಿತಾಯ, ಇವುಗಳೆಲ್ಲದರ ಮಾಹಿತಿ ಮತ್ತು ಅರಿವು ಅನುಭವದ ಚೀಲದಲ್ಲಿ ಸೇರುತ್ತಿತ್ತು.
ಮನೆಯ ಮಕ್ಕಳು ಏಳುವುದೇ ಹತ್ತು ಗಂಟೆಗಾದರೆ, ಅಡುಗೆಮನೆಯಲ್ಲಿ ಅಮ್ಮಕೆಲಸ ಮಾಡಿಮಾಡಿ ತಲೆ ತಿರುಗಿ ಕುಸಿದುಬಿದ್ದರೂ ಅವರಿಗೆ ಗೊತ್ತಾಗುವುದಿಲ್ಲ. ಹಿರಿಯರ ನೋವು, ಸಂಕಟಗಳು ಕಣ್ಣಿಗೇ ಕಾಣದಾದಾಗ ಮಾನವೀಯತೆ, ಅಂತಃಕರಣಗಳು ಎಲ್ಲಿ ಹುಟ್ಟುತ್ತವೆ? ಅಪ್ಪ, ಅಮ್ಮ, ಅಜ್ಜಿ ಅಥವಾ ಹಿರಿಯರಾರೊ ಪಡುವ ಶ್ರಮ ಅವರಿಗೆ ಹೇಗೆ ತಿಳಿಯುತ್ತದೆ? ತಮ್ಮ ಮುಂದೆ ಸಿದ್ಧವಾಗಿರುವ ತಿಂಡಿ, ಅಡುಗೆ, ಸ್ವಚ್ಛ ವ್ಯವಸ್ಥೆಗಳಷ್ಟೇ ಈಗಿನ ಮಕ್ಕಳಿಗೆ ಕಾಣುತ್ತದೆ. ಜತೆಜತೆಯಲ್ಲಿ ಕೆಲಸ ಮಾಡುವಾಗ ಹುಟ್ಟುವ ಆತ್ಮೀಯತೆ, ಬೆಸೆಯುವ ಬಾಂಧವ್ಯ, ಒಸರುವ ಮಾನವೀಯತೆ, ದೂರವಿದ್ದರೆ ಕಾಣಿಸುವುದಿಲ್ಲ. ಹಿರಿಯರೋ, ಹೆತ್ತವರೋ ಹುಶಾರಿಲ್ಲದೆ ಪರದಾಡುತ್ತಿದ್ದರೂ, ತಾವು ಅವರ ಹೊರೆಯನ್ನು ಹೊರಬಹುದೆಂಬ, ಹೊತ್ತರೆ ಅವರು ಸುಧಾರಿಸಿಕೊಳ್ಳುತ್ತಾರೆಂಬ, ಮಾನವೀಯ ಅಂಶವೇ ಹೊಳೆಯದಂತೆ ಆಗಬಹುದು. ಹೆತ್ತವರು, ಹಿರಿಯರು ಇರುವುದೇ ತಮ್ಮ ಅನುಕೂಲಕ್ಕಾಗಿ ಮತ್ತು ತಮ್ಮ ಏಳ್ಗೆಗೆ ದುಡಿಯುವುದಕ್ಕಾಗಿ ಎಂಬ ಭಾವನೆಯೊಂದೇ ಬಲಿಯಬಹುದು.
ಲಾಭ ಹಲವು
ಮಕ್ಕಳನ್ನು ಮನೆಗೆಲಸಕ್ಕೆ ತೊಡಗಿಸಿಕೊಂಡರೆ ಹಲವಾರು ಲಾಭಗಳೂ ಇವೆ. ಮೊದಲನೆಯದಾಗಿ ಒಳ್ಳೆಯ ವ್ಯಾಯಾಮ. ಓದಿನಿಂದ ತಲೆ ಬಿಸಿಯಾದಾಗ, ಒಂದೇ ಕಡೆ ಕುಳಿತು ದೇಹ ಜಡಗಟ್ಟಿದಾಗ, ಎದ್ದು ಬಂದು ಒಂದಿಷ್ಟು ಮನೆಗೆಲಸ ಮಾಡಿದರೆ ದೇಹ ಪುನಶ್ಚೇತನಗೊಳ್ಳುತ್ತದೆ. ದೇಹಕ್ಕೆ ನಿತ್ಯ ಕಸರತ್ತು ಆಗುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಚೆನ್ನಾಗಿ ಹಸಿವಾಗುತ್ತದೆ.
ಇನ್ನೊಬ್ಬರನ್ನು ಅವಲಂಬಿಸದೆ ತಾವೇ ಎಲ್ಲ ಕೆಲಸ ಮಾಡಲು ಕಲಿತರೆ, ಆತ್ಮವಿಶ್ವಾಸ ಹುಟ್ಟುತ್ತದೆ. ಕುಟುಂಬದ ಯಾವುದೇ ಸದಸ್ಯರು ದೀರ್ಘ ಕಾಲ ಪರಊರಿಗೋ, ಪರದೇಶಕ್ಕೋ ಹೋದರೂ, ಅಂಜದೇ ಕೊರಗದೇ, ತಮ್ಮನ್ನು ತಾವು ನೋಡಿಕೊಳ್ಳುವ ತಾಕತ್ತು ಬರುತ್ತದೆ. ಅದರಿಂದ ಸಿಗುವ ನೆಮ್ಮದಿ ಅಗಾಧ. ಅವರಿಲ್ಲದೆ ನನ್ನ ಬದುಕು ಸಾಗುವುದಿಲ್ಲ, ದಿನಗಳು ಕರಗುವುದಿಲ್ಲ, ಹೊಟ್ಟೆ ತುಂಬುವುದಿಲ್ಲ ಎಂದು ಕೊರಗಿ ಕೃಶರಾಗಿ ಆರೋಗ್ಯ ಕೆಡಿಸಿಕೊಳ್ಳುವ ಪ್ರಸಂಗವೇ ಬರುವುದಿಲ್ಲ. ಹಾಕಬೇಕಾದ ಶ್ರಮ, ಬಳಸಬೇಕಾದ ಸಮಯ ಮಹತ್ವದ್ದಾದ್ದರಿಂದ ‘ಮನೆಗೆಲಸ ಅಸಡ್ಡೆ ಮಾಡುವಂತಹದಲ್ಲ’, ‘ಸಣ್ಣದೆನಿಸಿದರೂ ಬಹು ಮಹತ್ವದ್ದು’ ಎಂಬ ಸತ್ಯದ ಅರಿವು ಮೂಡಿ, ತಾವೂ ಸಾಧ್ಯವಾದಷ್ಟು ಸಹಾಯ ಮಾಡಬೇಕೆನ್ನುವ ಮಾನವೀಯತೆ ಬೆಳೆಯುತ್ತದೆ.
ಹಿರಿಯರೊಂದಿಗೆ ನಡೆಯುವ ಸಂಭಾಷಣೆಯ ಮಧ್ಯೆ ಬರುವ ಗಾದೆಗಳು, ನುಡಿಮುತ್ತುಗಳು, ಯಾವ ಪುಸ್ತಕವನ್ನೂ ಓದದೆಯೇ ಮಕ್ಕಳ ಮನದಂಗಳದೊಳಗೆ ಸಂಗ್ರಹಗೊಳ್ಳುತ್ತವೆ. ಇದೆಲ್ಲವನ್ನೂ ಪಾಲಕರು ಕಲಿಸದಿದ್ದರೆ, ಮಕ್ಕಳು ಕೇವಲ ಹಣ, ಆಸ್ತಿ ಗಳಿಕೆಯಷ್ಟೇ ಜೀವನದ ಗುರಿ ಎಂಬ ಭಾವನೆಯಲ್ಲಿ ಮುಂದುವರೆಯಬಹುದು.
ಓದಿಗೇನೂ ಅಡ್ಡಿಯಾಗದು
ಚಿಕ್ಕ ಮಕ್ಕಳಿಗೆ ಹಲವು ಭಾಷೆಗಳನ್ನು ಒಂದೇ ಸಮಯದಲ್ಲಿ ಕಲಿಯಲು ಸಾಧ್ಯ ಇರುವಂತೆಯೇ, ಮನೆಗೆಲಸ ಮಾಡಿಕೊಂಡು ಓದುವ ಸಾಮರ್ಥ್ಯವೂ ಇರುತ್ತದೆ. ಪ್ರತಿ ವರ್ಷ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ಪರೀಕ್ಷೆಗಳ ಫಲಿತಾಂಶವನ್ನು ಗಮನಿಸಿದರೆ ಈ ಮಾತು ದೃಢಗೊಳ್ಳುತ್ತದೆ.
ಗಾಡಿಯಲ್ಲಿ ತರಕಾರಿ ಮಾರುವವರ ಮಕ್ಕಳು, ಹೋಟೆಲಿನಲ್ಲಿ ಕೆಲಸ ಮಾಡುವ ಮಕ್ಕಳು, ಅಮೆರಿಕದಲ್ಲಿ ಓದುತ್ತಲೇ ಕಿರಾಣಿ ಅಂಗಡಿಗಳಲ್ಲಿ, ಮಾಲ್ಗಳಲ್ಲಿ, ದಿನಗೂಲಿ ಕೆಲಸ ಮಾಡುವ ಭಾರತೀಯ ವಿದ್ಯಾರ್ಥಿಗಳು, ತಮ್ಮ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ತೆಗೆದುಕೊಳ್ಳುವುದು, ಈ ಮಾತಿಗೆ ಉದಾಹರಣೆಗಳಾಗಬಲ್ಲವು. ಈಗಿನ ತಂದೆತಾಯಿಗಳು ತಮ್ಮೊಂದಿಗೆ ಮನೆಗೆಲಸಕ್ಕೆ, ವೃತ್ತಿಗೆಲಸಕ್ಕೆ ಮಕ್ಕಳನ್ನು ಸೇರಿಸದೇ ಅವರ ಪಾಡಿಗೆ ಅವರನ್ನು ಓದಲು, ಆಡಲು, ಮೋಜು ಮಾಡಲು ಬಿಟ್ಟುದರಿಂದ ಇಂಥದೊಂದು ಮಾನವೀಯತೆ ತುಂಬಿದ ಅನುಭವದ ಅರಿವಿನ ಬುಟ್ಟಿ, ಮಕ್ಕಳ ತಲೆಯ ಮೇಲೆ ಕೂರಲೇ ಇಲ್ಲ.
| ಕೆ.ಎಂ. ವಿಜಯಲಕ್ಷ್ಮಿ