

| ಉಮೇಶ್ ಕುಮಾರ್ ಶಿಮ್ಲಡ್ಕ
ಕರೊನಾ ಬಂದು ಹೋದ ನಂತರದ ಅವಧಿಯ ಜಗತ್ತು ಹೇಗಿರಬೇಕು ಎಂಬ ಬಗ್ಗೆ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ಪರಿಸರ ಸ್ನೇಹಿ ಬದುಕು ಕಟ್ಟಿಕೊಳ್ಳುವುದಕ್ಕೆ ಜನರಿಗೆ ಒಂದು ಅವಕಾಶ ಈ ಸಂಕಷ್ಟದಿಂದಾಗಿ ಸಿಕ್ಕಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ವಿಶ್ವಸಂಸ್ಥೆಯಲ್ಲೂ ಕರೊನೋತ್ತರ ಕಾಲಾವಧಿಯಲ್ಲಿ ‘ಗ್ರೀನ್ ರಿಕವರಿ’ಯ ಚಾಲನಾ ಶಕ್ತಿಯಾಗಿ ಬೈಸಿಕಲ್ಸ್ ಯಾಕಾಗಬಾರದು ಎಂಬ ಪ್ರಶ್ನೆ ಕೋವಿಡ್ 19 ಬಂದ ಕೂಡಲೇ ಕೇಳಿಬಂದಿತ್ತು. ‘ಹೊಸ ಸಹಜತೆ’ಗೆ (ನ್ಯೂ ನಾರ್ಮಲ್) ಹೊಂದಿಕೊಳ್ಳಲು ಸಾರಿಗೆ ಸೌಕರ್ಯ ಹೆಚ್ಚು ಪರಿಸರ ಸ್ನೇಹಿ, ಆರೋಗ್ಯ ಪೂರ್ಣ ಮತ್ತು ಸುಸ್ಥಿರವಾದುದಾಗಿರಬೇಕು ಎಂದು ಯುನೈಟೆಡ್ ನೇಷನ್ಸ್ ಎಕನಾಮಿಕ್ ಕಮಿಷನ್ ಫಾರ್ ಯುರೋಪ್ (ಯುಎನ್ಇಸಿಇ) ಬೆಟ್ಟು ಮಾಡಿ ತೋರಿಸಿದೆ. ಭಾರತದಲ್ಲೂ ರಾಜ್ಯ ಸರ್ಕಾರಗಳು ಕೆಲವೆಡೆ ಸೈಕ್ಲಿಂಗ್ ಪಥ ನಿರ್ವಿುಸಿವೆಯಾದರೂ ಅದರ ಅನುಷ್ಠಾನ ಸಮರ್ಪಕವಾಗಿಲ್ಲ ಎಂಬುದು ಖೇದಕರ. ಆದಾಗ್ಯೂ, ನಾಳೆ ವಿಶ್ವ ಬೈಸಿಕಲ್ ದಿನದ ಹಿನ್ನೆಲೆ, ಆರೋಗ್ಯ ಪ್ರಯೋಜನಗಳ ಸಂಕ್ಷಿಪ್ತ ವಿವರಗಳ ಅವಲೋಕನಕ್ಕೆ ಈ ದಿನ ಒಂದು ನಿಮಿತ್ತ.
ಬೈಸಿಕಲ್ ದಿನಾಚರಣೆ ಹಿನ್ನೆಲೆ: ಬೈಸಿಕಲ್ ಬಳಕೆಗೆ ಸುಮಾರು 200 ವರ್ಷಗಳ ಇತಿಹಾಸವಿದೆ. ಬೈಸಿಕಲ್ನ ಅನನ್ಯತೆ, ದೀರ್ಘ ಬಾಳ್ವಿಕೆ, ಬಹುಮುಖತೆ, ಸರಳವಾಗಿರುವ, ಕೈಗೆಟುಕುವ, ವಿಶ್ವಾಸಾರ್ಹವಾಗಿರುವ ಗುಣಗಳು ಸ್ವಚ್ಛ ಮತ್ತು ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ಎಂಬ ಮನ್ನಣೆಯನ್ನು ಅದಕ್ಕೆ ಕೊಟ್ಟಿದೆ. ಇವಿಷ್ಟೇ ಅಲ್ಲ, ಆರೋಗ್ಯಕ್ಕೂ ಸೈಕ್ಲಿಂಗ್ ಪೂರಕವಾಗಿದೆ. ಇವೆಲ್ಲವನ್ನೂ ಮನಗಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2018ರ ಏಪ್ರಿಲ್ನಲ್ಲಿ ಜೂನ್ 3ರಂದು ಪ್ರತಿ ವರ್ಷ ವಿಶ್ವ ಬೈಸಿಕಲ್ ದಿನ ಆಚರಿಸುವುದಾಗಿ ಘೋಷಿಸಿತು.