

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಯಾವುದೇ ಪೂಜೆಯನ್ನು ಅದರ ಅರ್ಥ ತಿಳಿದು ಆಚರಿಸಿದರೆ ಫಲ ಹೆಚ್ಚು. ಭಾದ್ರಪದ ಮಾಸದಲ್ಲಿ ಬರುವ ಈ ಸ್ವರ್ಣಗೌರಿ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಇದು ಸುಮಂಗಲಿಯರ ಪೂಜೆ ಎನ್ನುವರು. ಆದರೆ ಮೊದಲಿಗೆ ಭೂಲೋಕದಲ್ಲಿ ಪುರುಷರು ಈ ವ್ರತವನ್ನು ಮಾಡಿದರು ಎಂಬುದಕ್ಕೆ ಸ್ಕಂದ ಪುರಾಣದಲ್ಲಿ ಬರುವ ಚಂದ್ರಪ್ರಭ ರಾಜನೇ ಸಾಕ್ಷಿ.
ಹಿನ್ನೆಲೆ: ಚಂದ್ರಪ್ರಭ ರಾಜನಿಗೆ ಸಂತಾನ ಭಾಗ್ಯ ಇರಲಿಲ್ಲ. ಅದೊಂದು ಬಹು ದೊಡ್ಡ ಕೊರತೆಯಾಗಿತ್ತು. ಒಂದು ದಿನ ರಾಜನು ಮೃಗಬೇಟೆಗೆಂದು ಕಾಡಿಗೆ ಹೊದನು. ಬಹಳ ಹೊತ್ತು ಬೇಟೆ ಮಾಡಿ ದಣಿದಿದ್ದರಿಂದ ವಿಶ್ರಾಂತಿಗಾಗಿ ಸ್ಥಳವನ್ನು ಹುಡುಕುತ್ತಾ ಒಂದು ರಮಣೀಯವಾದ ಸರೋವರದ ಬಳಿಗೆ ಬಂದನು. ಅಲ್ಲಿ ಅನೇಕ ಮಂದಿ ಅಪ್ಸರೆಯರು ಶ್ರದ್ಧೆಯಿಂದ ಸ್ವರ್ಣಗೌರಿ ವ್ರತವನ್ನು ಆಚರಿಸುತ್ತಿದ್ದರು. ರಾಜನು ಆ ಸ್ತ್ರೀಯರ ಬಳಿ ಹೋಗಿ ಈ ವ್ರತದ ಬಗ್ಗೆ ನಮಗೆ ತಿಳಿಸಿ ಎಂದು ಹೇಳಿಕೊಂಡನು. ಆಗ ಅವರು ಈ ಸ್ವರ್ಣಗೌರಿ ವ್ರತದ ಬಗ್ಗೆ ವಿವರಿಸುತ್ತಾ, ಈ ವ್ರತವನ್ನು ಭಾದ್ರಪದ ಮಾಸದ ಶುದ್ಧ ತದಿಗೆ ದಿನದಂದು ಆಚರಿಸಬೇಕು ಎಂದರು. ರಾಜನು ಆ ವ್ರತವನ್ನು ಆಚರಿಸಿ 16 ಗಂಟು ಇರುವ ದಾರವನ್ನು ಕೈಯಲ್ಲಿ ಕಟ್ಟಿಕೊಂಡು ಅರಮನೆಗೆ ಬಂದು ತನ್ನ ಇಬ್ಬರು ಪತ್ನಿಯರಿಗೆ ಆ ವ್ರತದ ಬಗ್ಗೆ ವಿವರಿಸಿ, ಈ ವ್ರತದ ಆಚರಣೆಯಿಂದ ಸಂತಾನ ಭಾಗ್ಯವುಂಟಾಗುವುದು ಎಂದು ಹೇಳಿದನು. ವ್ರತವನ್ನು ಆಚರಿಸಲು ಹಿರಿಯ ಪತ್ನಿಗೆ ತಾನು ತಂದಿರುವ ಗೌರಿದಾರವನ್ನು ಕೊಟ್ಟನು. ಆದರೆ ಅವಳು ಅದನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆದಳು. ಆ ದಾರದ ಮಹಿಮೆಯಿಂದ ಆ ಗಿಡವು ಚಿಗುರಿತು. ನಂತರ ಕಿರಿಯ ಪತ್ನಿಯು ಆ ವ್ರತದ ಮಹಿಮೆಯನ್ನು ಅರಿತು ಆ ದಾರವನ್ನು ಕಟ್ಟಿಕೊಂಡು ವ್ರತವನ್ನು ಆಚರಿಸಿದಳು. ನಂತರ ಆ ವ್ರತದ ಮಹಿಮೆಯಿಂದ ಪುತ್ರ ಪೌತ್ರರನ್ನು ಪಡೆದು ಕೊನೆಯಲ್ಲಿ ಸತಿ-ಪತಿಯರು ಶಿವಲೋಕ ಹೊಂದಿ ಮುಕ್ತಿಯನ್ನು ಪಡೆದರು.
ಸುಮಂಗಲಿಯರು ಈ ವ್ರತವನ್ನು ಆಚರಿಸಿದರೆ ಸಂತಾನ ಭಾಗ್ಯ. ಮದುವೆ ಆಗದ ಹೆಣ್ಣುಮಕ್ಕಳು ಆಚರಿಸಿದರೆ ಕಂಕಣಭಾಗ್ಯ. ಪುರುಷರು ಆಚರಿಸಿದರೆ ಒಳ್ಳೆಯ ಸತಿಯನ್ನು ಪಡೆದು ಉತ್ತಮವಾದ ಜೀವನವನ್ನು ನಡೆಸಬಹುದು. ಸಾಕ್ಷಾತ್ ಪಾರ್ವತಿ ದೇವಿಯೇ ಈ ಸ್ವರ್ಣ ಗೌರಿ ವ್ರತವನ್ನು ಆಚರಿಸಿ ಶಿವನನ್ನು ಪಡೆದಳು ಎಂಬ ವಿಷಯ ಪುರಾಣದಲ್ಲಿ ಬರುತ್ತದೆ.
ಈ ವ್ರತವನ್ನು ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು, ದ್ವಾಪರ ಯುಗದಲ್ಲಿ ಧರ್ಮರಾಯನು ಆಚರಿಸಿರುವರು. ಈ ಕಲಿಯುಗದಲ್ಲಿ ನಾವುಗಳು ಶ್ರದ್ಧೆ ಭಕ್ತಿ ಮತ್ತು ಲೋಪದೋಷ ಇಲ್ಲದೆ ವ್ರತಗಳನ್ನು ಆಚರಿಸಿದರೆ ಭಗವಂತನ ಕೃಪೆ ಮತ್ತು ಅನುಗ್ರಹ ಸಿಗುವುದರಲ್ಲಿ ಅನುಮಾನವಿಲ್ಲ.
ಬಾಗಿನ: ಸುಮಂಗಲಿಯರು ಈ ವ್ರತವನ್ನು ಆಚರಿಸಿದ ನಂತರ ಮುತೆôದೆಯರಿಗೆ ಬಾಗಿನವನ್ನು ಕೊಡಬೇಕು. ಹಾಗೆ ಗೌರಿಗೂ ಒಂದು ಬಾಗಿನವನ್ನು ಕೊಡಬೇಕು. ಹೊಸದಾಗಿ ಮದುವೆ ಆದ ಹೆಣ್ಣು ಮಕ್ಕಳು 16 ಜೊತೆ ಬಾಗಿನವನ್ನು ಸುಮಂಗಲಿಯರಿಗೆ ಕೊಡಬೇಕು ಎಂಬ ನಿಯಮ ಇದೆ. ಬಾಗಿನದಲ್ಲಿ ಮೊರ, ಅರಿಶಿನ, ಕುಂಕುಮ, ಬಳೆ, ಹೂ, ಕಾಯಿ, ಬೆಲ್ಲ, ಉಪು್ಪ, ಬೇಳೆ, ರವಿಕೆಬಟ್ಟೆ, ಎಲೆ, ಅಡಿಕೆ, ದಕ್ಷಿಣೆ ಇರುತ್ತದೆ. ಕನ್ನಿಕೆಯರಿಗೆ ಬಳೆ, ಅರಿಶಿನ ಕುಂಕುಮ, ಲಂಗದ ಬಟ್ಟೆ, ದಕ್ಷಿಣೆ ಇಟ್ಟುಕೊಡಬೇಕು.