ಆಕೆಯದು ಬಿಡುವಿಲ್ಲದ ದುಡಿಮೆ; ನಮ್ಮ ಮುಖವಾಡ ನಮ್ಮ ಹೆಮ್ಮೆ

Lalitha
Published on
‘ಜೀವನವೆಂಬುದು ಸೈಕಲ್ ಸವಾರಿಯಂತೆ.. ಬೀಳದಂತಿರಲು ಯಾವಾಗಲೂ ಸೈಕಲ್ ತುಳಿಯುತ್ತಲೇ ಇರಬೇಕು’ ಐನ್​ಸ್ಟೈನ್​ ಅವರ ಈ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಜೀವವೆಂದರೆ ಅದು ಹೆಣ್ಣೇ ಇರಬೇಕು. ಹುಟ್ಟಿನಿಂದಲೂ ಹೆಣ್ಣಿಗೊಂದು ಸ್ವಭಾವವಿದೆ. ಅದೇನೆಂದರೆ ತನ್ನಲ್ಲಿರುವ ಕೌಶಲ, ಶಕ್ತಿ, ಸಾಮರ್ಥ್ಯವನ್ನು ಸಮಾಜಕ್ಕೆ, ನೆರೆಹೊರೆಯವರಿಗೆ, ಸ್ನೇಹಿತರಿಗೆ ವಿಸ್ತರಿಸುತ್ತಾ ಒಬ್ಬರಿಂದೊಬ್ಬರಿಗೆ ಹಂಚುತ್ತಾ ತಾನೂ ಗಟ್ಟಿಯಾಗಿ ಇತರರನ್ನೂ ಗಟ್ಟಿಯಾಗಿಸುವ ಕಲೆ ಆಕೆಗೆ ಜನ್ಮದತ್ತವಾಗಿಯೇ ಬಂದಿದೆ. ಇದನ್ನು ಅಂದಿನಿಂದ ಇಂದಿನವರೆಗೂ ಅನೇಕ ಸಾಕ್ಷಿ ಸಮೇತ ನಿರೂಪಿಸುತ್ತ ಬಂದಿದ್ದಾಳೆ.

| ಡಾ. ಪೂರ್ಣಿಮಾ ಶಶಿಧರ್ ಭಾವೆ

ಹೊಲ, ಮನೆ, ಆಫೀಸ್ ಎಂದು ಅಂದಿನ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ತುಲನೆ ಮಾಡಿದಾಗ ಅಂತಹ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಅಕ್ಕನ ವಚನದಂತೆ ‘ಕ್ಷಮೆ, ದಯೆ, ಶಾಂತಿಯಿರಲು ಸಮಾಧಿಯ ಹಂಗೇಕೆ, ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕೆ’ ಎಂದು ಜೀವನ ಮತ್ತು ಜೀವನದ ಪ್ರೀತಿಗೆ ಯಾವ ಭಂಗ ಬಾರದಂತೆ ಸರಿದೂಗಿಸುತ್ತಿರುವುದು ಬಹುಶಃ ಆಕೆ ಧರಿಸಿರುವ ಸ್ಮರಣೆ ಎನ್ನುವ ಮುಖವಾಡದಿಂದಲೇ ಇರಬಹುದು. ಹಿಂದೆ ಯಾವ ಸಲಕರಣೆ ಇಲ್ಲದ ಹೊತ್ತಲ್ಲಿ ಆಕೆಯೊಳಗಿನ ಶಕ್ತಿಯನ್ನು ಕ್ರೋಡೀಕರಿಸಿ ಅದ್ವಿತೀಯವಾಗಿ ಕುಟುಂಬ ನಿರ್ವಹಿಸಿದ್ದಾಳೆ. ಇಂದು ಆಕೆಯ ಅರಿವು, ವಿವೇಕ ವಿಸ್ತಾರಗೊಂಡಿದೆ. ವಿಶಾಲ ಕ್ಷೇತ್ರದಲ್ಲಿ ಸಾಧಿಸುವ ಹಂಬಲ ಹೆಚ್ಚಾಗಿದೆ. ಅಂದು ಆಕೆಯ ಮುಂದಿದ್ದ ಸವಾಲುಗಳು ಇಂದು ಆಕೆಯ ಮುಂದಿರುವ ಸವಾಲುಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿದೆ.

ಎಲ್ಲೆಡೆ ಸಲ್ಲುವವಳು: ಕರೊನಾ ಅಲೆಯಲ್ಲಿ ಇಡೀ ಭೂಮಂಡಲ ತೇಲುವ ಹೊತ್ತಿನಲ್ಲಿ ಮಹಿಳೆ ಮಾತ್ರ ಯಾವುದಕ್ಕೂ ಕುಗ್ಗದೆ, ಮನೆ, ಮನೆಕೆಲಸ, ಮನೆಯಿಂದ ಕಚೇರಿ ಕೆಲಸ, ಮಕ್ಕಳ ಶಾಲೆ ಎಂದು ವಿವಿಧ ವಿಭಾಗಗಳಾಗಿ ವಿಂಗಡಿಸುತ್ತಾ ಸಮರ್ಥವಾಗಿ ಶಕ್ತಿಯ ಅನಾವರಣಗೊಳಿಸಿದ್ದು ಬಹುಶಃ ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಅದರಲ್ಲೂ ‘ನೋ ಮಾಸ್ಕ್ ನೋ ಎಂಟ್ರಿ’ ಎಂದು ಧ್ಯಾನಿಸುವ ಈ ಹೊತ್ತಲ್ಲಿ ಪುರಾಣ ಕಾಲದಿಂದ ಇಂದಿನ ಕೋವಿಡ್ ಕಾಲಘಟ್ಟದವರೆಗೂ ಅನೇಕ ಸನ್ನಿವೇಶಗಳಲ್ಲಿ, ಸಂದರ್ಭಗಳಲ್ಲಿ ಮೌಲ್ಯಯುತವಾದ ಮುಖವಾಡ ಹೊತ್ತು, ಜಾಣ್ಮೆಯಿಂದ ಸಂಸಾರವೆಂಬ ಸೈಕಲ್ ಬೀಳದಂತೆ, ಮುನ್ನಡೆಸುವ ವಿದ್ಯೆ ಆಕೆಗೆ ಮಾತ್ರ ಗೊತ್ತು.

ದೌರ್ಜನ್ಯ ನಿಲ್ಲುವುದು ಯಾವಾಗ?: ನಾಗರಿಕತೆಯ ಮುನ್ನಡೆಯಲ್ಲಿ ಸ್ತ್ರೀಯರ ಪಾತ್ರ ಪುರುಷರ ಪಾತ್ರಕ್ಕಿಂತ ಹಿರಿದು. ದೇಹ ರಚನೆಯಿಂದಲ್ಲದೆ ಮನೋರಚನೆಯ ಜತೆಗೆ ಸ್ವಭಾವದ ದೃಷ್ಟಿಯಿಂದಲೂ ಭಿನ್ನಳು. ಇತ್ತೀಚಿನ ದಿನಗಳಲ್ಲಿ ಅನೇಕ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾಳೆ. ಭಾವನಾತ್ಮಕವಾಗಿ, ದೈಹಿಕ ವಾಗಿ ಕೂಡ. ದೈಹಿಕ ದೌರ್ಜನ್ಯ ಒಂದು ತೆರನಾದರೆ ಭಾವನಾತ್ಮಕ ದೌರ್ಜನ್ಯ ಹೆಚ್ಚು ಹಾನಿಕರ. ಅಂದರೆ ಆಕೆಯನ್ನು ಸಂಶಯಿಸುತ್ತಾ, ವಿರೋಧಿಸುತ್ತಾ, ಅವಹೇಳನಕಾರಿಯಾಗಿ ಟೀಕಿಸುತ್ತಾ ಇರುವ ವಿದ್ಯಮಾನ ಆಕೆಯ ಉದ್ಯೋಗ, ಖಾಸಗಿ, ವೈವಾಹಿಕ ಭವಿಷ್ಯದ ಚಟುವಟಿಕೆಗಳಿಗೆ ತೊಂದರೆಯಾಗಬಲ್ಲುದು.

ಉನ್ನತಿಗೆ ಹೆಗಲು ಕೊಡೋಣ: ದಿನಬೆಳಗಾದರೆ ಕಾಣುವ ನಾನಾ ಏರಿಳಿತಗಳಿಂದ ಪರಾವಲಂಬಿಯಾಗದೆ ಆರ್ಥಿಕವಾಗಿ ಸುಭದ್ರ ವಾಗಿ ನೆಲೆ ನಿಲ್ಲಬೇಕೆನ್ನುವ ಚಂಚಲತೆ ಇನ್ನೂ ಸ್ಥಿರಗೊಂಡಿಲ್ಲ. ಹಳ್ಳಿ ವಾಸಿಯೇ ಇರಲಿ ನಗರವಾಸಿಯೇ ಇರಲಿ ವೇದನೆ ಹಂಚಿಕೊಳ್ಳುವುದ ರಲ್ಲಿ ಸರಿಸಮಾನರು. ನಾವು ನೋಡುವ ದೃಷ್ಟಿ ಇನ್ನೂ ವಿಶಾಲವಾಗಬೇಕು. ನಮಗೇ ಗೊತ್ತಿಲ್ಲದೆ ಅನೇಕ ಚಟ ಅಂಟಿಸಿಕೊಂಡಿರುತ್ತೇವೆ. ಅದರಲ್ಲಿ ತಾತ್ಸಾರ, ಹಗೆತನ, ಅಸೂಯೆ ಇನ್ನೂ ಅನೇಕ ಜಾಡ್ಯಗಳು ಬಂದು ಸೇರಿರುತ್ತವೆ. ಇವೆಲ್ಲ ಗುಣಗಳು ಆಕೆಯ ಉನ್ನತಿಗೆ ತೊಡಕಾಗುವ ಬಹುದೊಡ್ಡ ಶತ್ರುಗಳು. ಈ ಗುಣಗಳನ್ನು ಕಿತ್ತೊಗೆಯುವ ಕಡೆ ಪುರುಷ ಸಮಾಜ ಗಮನ ಹರಿಸಿದರೆ, ಸಮಾಜದಲ್ಲಿ ಪರಿವರ್ತನೆಯ ಗಾಳಿ ಬೀಸಬಹುದು. ಯಾಕೆಂದರೆ ವಿಶ್ವದ ಪರಿವರ್ತನೆಗೆಂದೇ ದೇವರು ಕೊಟ್ಟ ದೊಡ್ಡ ವರವೆಂದರೆ ಅದು ಹೆಣ್ಣು.

ಸವಾಲು ಮೆಟ್ಟಿ ನಿಂತವರು: ಅನಾದಿ ಕಾಲದಿಂದಲೂ ಹೆಣ್ಣನ್ನು ಅನೇಕ ಕ್ಷೇತ್ರಗಳಲ್ಲಿ ದಮನಿಸುತ್ತಾ ಬಂದಿರುವುದು ಚರಿತ್ರೆಗಳಲ್ಲಿ ದಾಖಲಾಗುತ್ತಲೇ ಇದೆ. ಆಕೆ ತನ್ನ ಮುಟ್ಟು, ಹೆರಿಗೆ, ಬಾಣಂತನ, ಮನೋ, ದೈಹಿಕ ನೋವುಗಳನ್ನು ತೋರ್ಪಡಿಸಿಕೊಳ್ಳುವುದಿರಲಿ, ಅನೇಕ ವಿಚಾರಗಳನ್ನು ಹೇಳುವುದು ಅಪರಾಧವೆಂದೇ ಬಿಂಬಿತವಾಗಿದೆ. ಸಾವಿತ್ರಿಬಾಯಿ ಫುಲೆ, ಅಮೆರಿಕಾದ ಮೊದಲ ಮಹಿಳಾ ವೈದ್ಯೆ ಎಲಿಜಬೆತ್ ಬ್ಲಾಕ್​ವೆಲ್, ಮದರ್ ತೆರೇಸಾ, ಇತ್ತೀಚಿನ ಆನಂದಿ ಬಾಯಿ ಜೋಶಿ ಇನ್ನು ಅನೇಕರು ತಮ್ಮ ಜೀವನದಲ್ಲಿ ನಡೆಯುತ್ತಿದ್ದ ನಿತ್ಯ ದೌರ್ಜನ್ಯವನ್ನು ಪ್ರಶ್ನಿಸುತ್ತಾ, ಧಿಕ್ಕರಿಸುತ್ತಾ ಸವಾಲುಗಳನ್ನು ಮೆಟ್ಟಿ ನಿಂತವರು. ಇಂತಹ ಇನ್ನೂ ಅನೇಕ ಸ್ತ್ರೀಕುಲ ಇಂದಿನ ಮಹಿಳೆಯರ ಜೀವನದ ಏಳಿಗೆಗೆ ದಾರಿದೀಪವಾಗಬಲ್ಲದು.

ಎಷ್ಟು ವಸಂತ ಕಾಯಬೇಕು?: ಸಂತಸದ ಸಂಗತಿ ಎಂದರೆ ಶೈಕ್ಷಣಿಕವಾಗಿ ಉದ್ಯೋಗದ ಸಲುವಾಗಿ ನಡೆವ ದೌರ್ಜನ್ಯಗಳನ್ನು ವಿರೋಧಿಸುವ ಧ್ವನಿ ಎತ್ತರಕ್ಕೇರಿದ್ದು ಉತ್ತಮ ಬೆಳವಣಿಗೆಗಳಲ್ಲೊಂದು. ಆರ್ಥಿಕ ಸ್ವಾವಲಂಬನೆ, ಒಳ್ಳೆಯ ಶಿಕ್ಷಣ, ಕುಟುಂಬದ ಸಹಕಾರ ಎಲ್ಲವೂ ಪುರುಷನಷ್ಟೇ ಸ್ತ್ರೀಗೂ ಅತ್ಯವಶ್ಯಕ. ಇತ್ತೀಚಿನ ವರದಿಗಳ ಪ್ರಕಾರ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳನ್ನು ಹೆಣ್ಣು ಆತಂಕರಹಿತವಾಗಿ ಜೀವನ ನಡೆಸಲು ಯೋಗ್ಯವಾದ ದೇಶಗಳೆಂದು ಗುರುತಿಸಲಾಗಿದೆ. ಆ ಸ್ಥಾನದಲ್ಲಿ ನಮ್ಮ ಭಾರತವನ್ನು ನೋಡಲು ಆಸೆ ಕಣ್ಣುಗಳಿಂದ ಸ್ತ್ರೀಕುಲ ಇನ್ನು ಎಷ್ಟು ವಸಂತಗಳಿಗಾಗಿ ಕಾಯಬೇಕೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net