

| ಮೌಲಾಲಿ ಕೆ. ಆಲಗೂರ ಬೋರಗಿ
ನಾಡಿನ ಅಂಧರು, ಅನಾಥರು, ನಿರ್ಗತಿಕ ಬಡ ಮಕ್ಕಳ ಬದುಕಿಗೆ ಬೆಳಕಿನ ಹೊಂಗಿರಣವಾಗಿ, ನಡೆದಾಡುವ ದೇವರೆನಿಸಿದ ಯೋಗಿ, ಗದಗಿನ ಪುಟ್ಟರಾಜ ಗವಾಯಿಗಳು. 1914ರಲ್ಲಿ ಜನ್ಮ ತಾಳಿದ ಪುಟ್ಟರಾಜರು ಅಂಧತ್ವದ ಅಂಧಕಾರ ಮೆಟ್ಟಿ ನಿಂತು, ಅಂತರಾತ್ಮದಲ್ಲಿ ಪರಮಾತ್ಮನ ದಿವ್ಯ ಶಕ್ತಿ ಪಡೆದು, ಸಾವಿರಾರು ಜನತೆಗೆ ಸಂಗೀತದ ಸಾಕ್ಷಾತ್ಕಾರ ಮಾಡಿಸಿದ ಮೇಧಾವಿ. ಅವರ ಬದುಕೇ ಒಂದು ಪವಾಡ.
ಹಾವೇರಿ ಜಿಲ್ಲೆ ದೇವಗಿರಿಯ ಬಡ ಕುಟುಂಬದಲ್ಲಿ ಹುಟ್ಟಿ, ಹತ್ತು ತಿಂಗಳ ಮಗುವಿರುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಪುಟ್ಟಯ್ಯನವರಿಗೆ ಆಶ್ರಯವಾದವರು ಸಮೀಪದ ಸಂಬಂಧಿಕರು. ಅಜ್ಜ ಚಂದ್ರಶೇಖರಯ್ಯ ತಮ್ಮಲ್ಲಿನ ಸಂಗೀತದ ಜ್ಞಾನವನ್ನು ಪುಟ್ಟಯ್ಯನಿಗೆ ಧಾರೆ ಎರೆದರು. ನಂತರ ಆತನನ್ನು ಸಂಗೀತ ಲೋಕದ ಸ್ವರ ಸಾಮ್ರಾಟರಾದ ಪಂಚಾಕ್ಷರ ಗವಾಯಿಗಳ ಬಳಿ ಕರೆ ತಂದರು.
ಅತ್ಯಂತ ಭಕ್ತಿ, ಭಾವದಿಂದ ಸಂಗೀತ ಅಭ್ಯಾಸದ ಜೊತೆಗೆ ಗುರು ಪಂಚಾಕ್ಷರ ಗವಾಯಿಗಳ ಸೇವೆಯಲ್ಲಿ ನಿರತರಾಗಿ ಅಚ್ಚುಮೆಚ್ಚಿನ ಶಿಷ್ಯರೆನಿಸಿದ ಪುಟ್ಟರಾಜರು ತಬಲಾ, ಪಿಟೀಲು, ಹಾರ್ವೇನಿಯಂ, ಶಹನಾಯಿ, ವೀಣೆ ಸೇರಿದಂತೆ ಎಲ್ಲಾ ವಾದ್ಯಗಳನ್ನು ಕಲಿತರು. ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದರು. ಸಹಪಾಠಿಗಳಿಗೆ ಅಕ್ಕರೆಯಿಂದ ಸಂಗೀತ ಕಲಿಸಿದರು. 1944ರಲ್ಲಿ ಗುರು ಪಂಚಾಕ್ಷರ ಗವಾಯಿಗಳು ಲಿಂಗೈಕ್ಯರಾದಾಗ ಅವರ ಪ್ರಿಯ ಶಿಷ್ಯ ಪುಟ್ಟರಾಜ ಗವಾಯಿಗಳೇ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾಗಬೇಕಾಯಿತು.
ಆಶ್ರಮದ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಸದ್ವಿಚಾರ, ಸಮಾನತೆ, ಸಹಬಾಳ್ವೆ, ಸಹೋದರತೆ, ಸೌಹಾರ್ದತೆ ಜೊತೆಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ ಕಲಿಸಿದರು. ಜೊತೆಗೆ ಆಧ್ಯಾತ್ಮಿಕ ಬೋಧನೆ ಮುಂದುವರಿಸಿದರು. ನಿತ್ಯ ಬೆಳಗ್ಗೆ 4ಕ್ಕೆ ಬಿಲ್ವಪತ್ರೆ, ಪುಷ್ಪ, ಗಂಧ, ಕರ್ಪರ, ಊದುಬತ್ತಿ, ಪಂಚಾಮೃತ ಇಟ್ಟುಕೊಂಡು ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ ಧರಿಸಿ ಇಷ್ಟಲಿಂಗ ಪೂಜೆಗೆ ಕುಳಿತರೆ ಸಾಕ್ಷಾತ್ ಶಿವನೇ ಧ್ಯಾನದಲ್ಲಿ ಇರುವಂತೆ ಭಕ್ತರಿಗೆ ಭಾಸವಾಗುತ್ತಿತ್ತು. ಪುಟ್ಟರಾಜರು ಕವಿ, ಸಾಹಿತಿ, ಬರಹಗಾರರಾಗಿ 80ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಹಲವು ದಾರ್ಶನಿಕರ ಚರಿತ್ರೆ ಕೂಡ ಬರೆದಿದ್ದಾರೆ. ಇವರ ಆಧ್ಯಾತ್ಮಿಕ, ಧಾರ್ವಿುಕ, ಸಾಮಾಜಿಕ ಸೇವೆಯಿಂದ ಗದಗಿನ ವೀರೇಶ್ವರ ಪುಣ್ಯಾಶ್ರಮದ ಹೆಸರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ರಾಜ್ಯೋತ್ಸವ, ಗೌರವ ಡಾಕ್ಟರೇಟ್, ಕನಕ ಪುರಂದರ, ನಾಡೋಜ, ಬಸವಶ್ರೀ, ಕಾಳಿದಾಸ ಸಮ್ಮಾನ್, ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಪುಟ್ಟರಾಜರನ್ನು ಹುಡುಕಿಕೊಂಡು ಬಂದವು. ನೊಂದು ಬಂದ ಲಕ್ಷಾಂತರ ಬಡವರಿಗೆ ನೋವು ಮರೆಸಿ, ಬದುಕುವುದನ್ನು ಕಲಿಸಿದ ಸಂತ, ದೇವಸುತ ಪುಟ್ಟಜ್ಜ, 2010ರಲ್ಲಿ ಪರಮಾತ್ಮನಲ್ಲಿ ಲೀನರಾದರು. ಆದರೆ ಅವರ ಆದರ್ಶಗಳು ಮಾತ್ರ ಸದಾ ಕಾಲವೂ ಅಮರ.
ಬದುಕಲು ಕಲಿಸಿದ ಸಂತ: ವೀರೇಶ್ವರ ಪುಣ್ಯಾಶ್ರಮದ ಮಕ್ಕಳಿಗೆ, ಅದರಲ್ಲೂ ಅಂಗವಿಕಲರಿಗೆ ಯಾರ ಹಂಗಿಲ್ಲದೆ ಬದುಕುವ ಕಲೆಯನ್ನು ಕಲಿಸಿದರು. ಎಲ್ಲಾ ಜನಾಂಗಗಳ ಲಕ್ಷಾಂತರ ಮಂದಿಗೆ ಸಂಗೀತ ವಿದ್ಯೆಯನ್ನು ಧಾರೆಯೆರೆದರು. ಈ ಆಶ್ರಮದಲ್ಲಿ ಸಂಗೀತ ವಿದ್ಯೆ ಕಲಿತ ಸಾವಿರಾರು ಮಕ್ಕಳು ಇಂದು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ವರನಟ ಡಾ. ರಾಜ್ಕುಮಾರ್ ಕೂಡ ಪುಟ್ಟರಾಜ ಗವಾಯಿ ಬಳಿ ಸಂಗೀತ ಅಭ್ಯಾಸ ಮಾಡಿದ್ದರು. ತಮ್ಮ 96 ವರ್ಷಗಳ ಜೀವಿತಾವಧಿಯನ್ನು ಪುಟ್ಟರಾಜರು ಲೋಕ ಕಲ್ಯಾಣಕ್ಕಾಗಿಯೇ ವಿನಿಯೋಗಿಸಿದರು.
https://www.vijayavani.net/rishab-shetty-is-disappointed-with-bangalore-international-film-festival/
https://www.vijayavani.net/total-ten-people-lost-life-in-cylinder-blast-case/