ಹೆರಿಗೆ ನಂತರದ ಖಿನ್ನತೆ..!; ಆರೈಕೆ, ಹಾರೈಕೆ ಎರಡೂ ಮುಖ್ಯ

Lalitha
Published on
ಜೀವನದಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಬಾರಿ ಖಿನ್ನತೆಗೆ ಒಳಗಾಗಿರುತ್ತಾರೆ. ಆದರೆ ಮಹಿಳೆಯರಲ್ಲಿ ಖಿನ್ನತೆಗೆ ನಾನಾ ಕಾರಣಗಳಿವೆ. ಅದರಲ್ಲೂ ಗರ್ಭಾವಸ್ಥೆ ಹಾಗೂ ಪ್ರಸವಾ ನಂತರ ಎದುರಾಗುವ ಖಿನ್ನತೆ ಎದುರಿಸುವುದು ಹೇಗೆ? ಖಿನ್ನತೆ ಏಕಾಗುತ್ತದೆ? ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬ ಕುರಿತು ತಜ್ಞರ ವಿಶ್ಲೇಷಣೆಯ ಸಾರಸಂಗ್ರಹ ಇಲ್ಲಿದೆ.

| ಕೆ.ಬಿ.ಶುಭ

ತಾಯ್ತನ ಮಹಿಳೆಯರ ಜೀವನದಲ್ಲಿ ಒಂದು ಮಹತ್ವದ ಘಟ್ಟ. ಈ ಅವಧಿಯಲ್ಲಿ ಮಹಿಳೆಯರು ಸಾಮಾನ್ಯವಾಗಿ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಡೆ ಗಮನ ಹರಿಸಬೇಕಿರುತ್ತದೆ. ಕೆಲ ಮಹಿಳೆಯರಿಗೆ ಗರ್ಭಧಾರಣೆಯು ಸಂತೋಷದ ಅವಧಿಯಾಗಿದ್ದರೆ, ಇನ್ನು ಕೆಲವರಿಗೆ ಸವಾಲಿನ ಸಮಯ. ಖಿನ್ನತೆ ಎನ್ನುವುದು ಮೊದಲ ಮಗು ಅಥವಾ 2ನೇ ಮಗುವಿನ ಜನನದ ಸಂದರ್ಭದಲ್ಲಿ ಎಂದು ಹೇಳಲಾಗದು. ಆಯಾ ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ. ಗ್ರಾಮೀಣ ಮಹಿಳೆಯರಿಗಿಂತ ನಗರದ ಉದ್ಯೋಗಸ್ಥ ಮಹಿಳೆಯರಿಗೆ ಒತ್ತಡ ಹೆಚ್ಚಿರುತ್ತದೆ ಹಾಗೂ ಇವರಲ್ಲೇ ಖಿನ್ನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕಿ ಶಾಂತಾ ನಾಗರಾಜ್. ಹೊಟ್ಟೆಯನ್ನು ದೇಹದ 2ನೇ ಮಿದುಳು ಎನ್ನುತ್ತಾರೆ. ಮನಸ್ಸಿಗೆ ಬೇಜಾರಾದರೆ ಹೊಟ್ಟೆಗೆ ಶಿಕ್ಷೆ ಕೊಡುತ್ತೇವೆ. ಅದೇ ರೀತಿ ಗರ್ಭಿಣಿಯಾಗಿದ್ದಾಗ ನಮ್ಮ ಮನಸ್ಥಿತಿ ಹೇಗಿರುತ್ತದೋ ಅದು ಗರ್ಭದಲ್ಲಿರುವ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಆದ್ದರಿಂದ ಗರ್ಭಿಣಿಯಾಗಿದ್ದಾಗ ಆದಷ್ಟು ಮನಸ್ಸಿಗೆ ಮುದ ನೀಡುವ ಕೆಲಸ ಮಾಡುವುದು, ಸ್ನೇಹ ಮಾಡುವುದು, ಚಟುವಟಿಕೆ ಮಾಡುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಉದ್ಯೋಗಸ್ಥೆಯಾದರೆ ಕಚೇರಿ ಒತ್ತಡದ ನಡುವೆ ಮೆಟರ್ನರಿ ರಜೆ ಸಿಗುತ್ತದೆಯೇ? ಇಎಂಐ ಹೇಗೆ ಕಟ್ಟಲಿ?ಎಂಬ ಚಿಂತೆ. ಫ್ಯಾಮಿಲಿ ಪ್ಲಾನಿಂಗ್, ಮನೆ ಕೊಳ್ಳುವುದು, ಲೈಫ್ ಎಂಜಾಯ್ ಮಾಡಬೇಕು ಅದು.. ಇದು.. ಎಂದು ಮಗು ಪಡೆಯುವ ಯೋಜನೆ ಮುಂದೆ ಹಾಕುತ್ತಾರೆ. ಹೀಗಿರುವಾಗ ಇನ್ನೂ ಮಕ್ಕಳಾಗಿಲ್ವಾ ಎಂಬ ಒತ್ತಡ ಆರಂಭವಾಗುತ್ತದೆ. ಇದರ ಜತೆಗೆ ವಯಸ್ಸಾಗುತ್ತಿದ್ದರೆ ಗರ್ಭಕೋಶ ಸಮಸ್ಯೆ ಆಗುತ್ತದೆಯೇ ಎಂಬ ಚಿಂತೆ. ದೈಹಿಕವಾಗಿ ಸಮಸ್ಯೆ ಇದ್ದರೆ ಇನ್ನಷ್ಟು ಒತ್ತಡ, ಇದರ ನಡುವೆ ಕೆಲವರಿಗೆ ಬೆಳಗ್ಗೆ ಎದ್ದಾಗಿನ ವಾಕರಿಕೆ, ಬೇಳೆ ಪರಿಮಳ ಬಂದರೆ, ಕಾಫಿ ನೋಡಿದರೆ ಹೀಗೆ ಒಬ್ಬೊಬ್ಬರಿಗೆ ಒಂದೊಂದರ ಪರಿಮಳ ವಾಕರಿಕೆ ತರಿಸಿ ಊಟವೇ ಬೇಡ ಎಂಬ ಮನಸ್ಥಿತಿ ತರಿಸುತ್ತದೆ. ಮನೆಯಲ್ಲಿ ಸರಿಯಾಗಿ ತಿನ್ನು ಎಂಬ ಒತ್ತಡ ಬೀಳುತ್ತದೆ. ಇದು ಒಂದು ರೀತಿಯ ಮಾನಸಿಕ ಹಿಂಸೆ. ಎಲ್ಲ ಒತ್ತಡಗಳ ಜತೆಗೆ ಗರ್ಭಿಣಿಯಾದ ಮೇಲೆ ಮಗುವಿನ ಬೆಳವಣಿಗೆ ಸರಿ ಇಲ್ಲ, ಮಗು ತಿರುಗಿಲ್ಲ ಹೀಗೆ ವೈದ್ಯರು ಹೇಳುವ ಹಲವು ವಿಷಯಗಳಿಂದ ಚಿಂತೆ. ನಂತರ ಮಾತ್ರೆ, ಸ್ಕಾ್ಯನಿಂಗ್, ಇಂಜೆಕ್ಷನ್ ಹೀಗೆ ಸರಣಿ ಒತ್ತಡಗಳನ್ನು ಸಹಿಸಿಕೊಂಡು, ಮಗುವಿಗೆ ಜನ್ಮ ನೀಡುತ್ತಾಳೆ. ಮಗುವಿಗೆ ಜನ್ಮ ನೀಡಿದ ಮೇಲೆ ತಮ್ಮ ಅಪೇಕ್ಷೆಯ ಮಗು ಜನನವಾಗಿದ್ದರೆ ಒಂದು ನಿರಾಳತೆ, ಇಲ್ಲದಿದ್ದರೆ ಮತ್ತೆ ಆಕೆ ಮೇಲೆ ಒತ್ತಡ, ಆರೈಕೆ ಮಾಡುವವರು ಇಲ್ಲದಿದ್ದರೆ ತಾಳ್ಮೆ ಕಳೆದು ಹೋಗುತ್ತದೆ. ಅವಳ ಸಂಕಟವನ್ನು ಅರ್ಥಮಾಡಿಕೊಳ್ಳುವವರು ಇಲ್ಲದಿದ್ದರೆ, ಸಮಾಧಾನದ ಮಾತುಗಳು ಇಲ್ಲದಿದ್ದರೆ ಮತ್ತೆ ಕುಗ್ಗುತ್ತಾಳೆ. ಇದರ ಜತೆಗೆ ಹಾಮೋನ್​ನಲ್ಲಿ ವ್ಯತ್ಯಾಸವಾಗಿರುತ್ತದೆ. ಹೀಗೆ ಸಾಲು ಸಾಲು ಒತ್ತಡ ಸಹಿಸಿಕೊಳ್ಳಬೇಕು ಎಂದರೆ ಅವಳ ಮನಸ್ಥಿತಿ ಎಷ್ಟು ಗಟ್ಟಿಯಾಗಿರಬೇಕು ಎಂಬುದನ್ನು ಆಲೋಚಿಸಬೇಕು. ಒಂದು ವೇಳೆ ಈ ಒತ್ತಡ ಸಹಿಸಿಕೊಳ್ಳಲಾಗದಿದ್ದರೆ ಆಗ ಆಕೆ ಖಿನ್ನತೆಗೆ ಆಹಾರವಾಗುತ್ತಾರೆ.

ಪತಿಯ ಜವಾಬ್ದಾರಿ: ಗರ್ಭಿಣಿ ಹಾಗೂ ಬಾಣಂತನ ಎನ್ನುವ ಘಟ್ಟದಲ್ಲಿ ಪುರುಷರು ತಮ್ಮ ಜವಾಬ್ದಾರಿ ಅರಿಯಬೇಕಿದೆ. ಈ ಸಮಯದಲ್ಲಿ ಗಂಡನೂ ಅಮ್ಮನಾಗಿ ಪತ್ನಿ ಜತೆ ನಿಲ್ಲಬೇಕು. ಪತ್ನಿಯ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ಅವಳನ್ನು ನೋಡಿಕೊಳ್ಳುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ಮೆನ್ ಆರ್ ಫ್ರಮ್ ಮಾರ್ಸ್, ವುಮೆನ್ ಆರ್ ಫ್ರಮ್ ವೀನಸ್ ಎಂಬ ಜಾನ್ ಗ್ರೇಸ್ ಅವರ ಪುಸ್ತಕವನ್ನು ಎಲ್ಲ ಪುರುಷರು ಒಮ್ಮೆ ಓದಬೇಕು ಎನ್ನುತ್ತಾರೆ ಶಾಂತಾ ನಾಗರಾಜ್.

ಶಿಕ್ಷಣದ ಕೊರತೆ: ಸಾಮಾನ್ಯವಾಗಿ ವಿದ್ಯಾವಂತ ಹಾಗೂ ಉದ್ಯೋಗಸ್ಥ ಮಹಿಳೆಯರಲ್ಲಿ ಗರ್ಭಾವಸ್ಥೆ ಅಥವಾ ಪ್ರಸವಾ ನಂತರ ಖಿನ್ನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರಮುಖವಾಗಿ ದೈಹಿಕ ಆರೋಗ್ಯದಲ್ಲಿ ಪ್ರಸವಾ ಸಮಯದ ಆರೋಗ್ಯ ಸ್ಥಿತಿ ಹಾಗೂ ಪ್ರಸವಾ ನಂತರದ ಆರೈಕೆ ಪ್ರಮುಖ ಪಾತ್ರ ವಹಿಸಿದರೆ, ಮಾನಸಿಕ ಆರೋಗ್ಯ ಹದಗೆಡಲು ಮನೆಯ ವಾತಾವರಣ, ಮನೆಯವರು ಭಾವನೆ ಗಳಿಗೆ ಸ್ಪಂದಿಸುವ ರೀತಿ, ಹೆರಿಗೆ ಅಂದರೇನು, ಬಾಣಂತನ ಅಂದರೇನು ಎಂಬ ಶಿಕ್ಷಣದ ಕೊರತೆ ಕಾರಣವಾಗುತ್ತದೆ ಎನ್ನುತ್ತಾರೆ ಆಯುರ್ವೆದ ತಜ್ಞೆ ಡಾ.ಸಾವಿತ್ರಿ.

ಬಾಣಂತಿ ಆಗಿರುವಾಗ ಪತಿಯ ಪಾತ್ರ ಪ್ರಮುಖ. ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇಬ್ಬರಿಗೂ ಸಮನಾಗಿರುತ್ತದೆ. ತಾಯಿಯನ್ನು ಎಂದೂ ಇನ್ನೊಬ್ಬರ ಜತೆ ಹೋಲಿಕೆ ಮಾಡಿಕೊಳ್ಳಬೇಡಿ. ಜನಿಸಿದ ಮಗುವಿನಲ್ಲಿ ಆರೋಗ್ಯ ಸಮಸ್ಯೆ ಇದ್ದರೆ ಆ ಮಗುವಿನ ತಾಯಿಗೆ ಹೆಚ್ಚು ಆರೈಕೆ ಮಾಡಿ. ಬಾಣಂತಿಯನ್ನು ಒಂಟಿಯಾಗಿರಲು ಬಿಟ್ಟಾಗ ಈ ರೀತಿಯ ಸಮಸ್ಯೆ ಕಾಡಬಹುದು. ಅವಳ ಮನದಾಳ ಅರ್ಥಮಾಡಿಕೊಂಡು ನಡೆಯುವ ಕುಟುಂಬದ ಅವಶ್ಯಕತೆ ಅತಿಮುಖ್ಯ. | ಶ್ವೇತಾ ಶ್ರೀವಾತ್ಸವ್ ನಟಿ ಸಂಸ್ಕೃತಿ ಹೆಸರಲ್ಲಿ ಬಾಣಂತಿಗೆ ಸರಿಯಾದ ಆಹಾರ ನೀಡುವುದಿಲ್ಲ, ಮನರಂಜನೆ ಇರುವುದಿಲ್ಲ. ಇದು ಮಾನಸಿಕವಾಗಿ ಮಂಕಾಗಿಸುತ್ತದೆ. ಇದರ ಜತೆಗೆ ನಿಶ್ಯಕ್ತಿ, ಬೆನ್ನುನೋವು, ಮೊಲೆ ತೊಟ್ಟು ಒಡೆದ ನೋವು, ದೈಹಿಕ ನೋವುಗಳ ಜತೆಗೆ ನಿದ್ದೆ, ಆಹಾರದಲ್ಲಿ ವ್ಯತ್ಯಾಸವಾಗಿ ಖಿನ್ನತೆ ಕಾಡಲು ಆರಂಭಿಸುತ್ತದೆ. ಮಗು ಜನಿಸಿದಾಗಿನಿಂದ ನಂತರ 3 ತಿಂಗಳವರೆಗೆ ಬಾಣಂತಿಯನ್ನು ಆರೈಕೆ ಮಾಡಬೇಕು. ದಿನಕ್ಕೊಮ್ಮೆ ಗಾಳಿ-ಬೆಳಕಿನಲ್ಲಿ ಓಡಾಡಲು, ತರಕಾರಿ-ಹಣ್ಣು ಸೇವನೆ ಜತೆಗೆ ಅವಳಿಷ್ಟದಂತೆ ಇರಲು ಬಿಡಬೇಕು. | ಡಾ. ವಿದ್ಯಾಭಟ್ ತಜ್ಞ ವೈದ್ಯೆ, ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು

ಆರೋಗ್ಯ ಪರೀಕ್ಷೆ ಹೇಗೆ?

  • ಗರ್ಭಾವಸ್ಥೆಯಲ್ಲಿ ಮಲ ವಿಸರ್ಜನೆ ಸರಿಯಾಗಿ ಆಗುತ್ತಿದೆಯೇ ಎಂದು ಪರೀಕ್ಷಿಸುತ್ತಾರೆ. ಗರ್ಭಧರಿಸುವುದಕ್ಕೂ ಮುನ್ನ ಋತುಚಕ್ರ ಸರಿಯಾಗುತ್ತಿದೆಯೇ ಎಂದು ಗಮನಿಸಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ.
  • ಗರ್ಭಧಾರಣೆ ಹೆಣ್ಣಿಗೆ ವರ ಎಂದು ಪ್ರತಿ ಮಹಿಳೆ ಮನನ ಮಾಡಿಕೊಂಡು ಇದಕ್ಕೆ ಸಿದ್ಧಳಾಗಬೇಕು. ಆಗ ಮುಂದಿನ ಹಂತ ಹಾಗೂ ಸಂದರ್ಭಗಳನ್ನು ಸ್ಥಿರವಾಗಿ ಎದುರಿಸಬಹುದು.
  • ಪ್ರಸವಾ ನಂತರ ಕಡ್ಡಾಯವಾಗಿ 10 ದಿನ ಸರಿಯಾಗಿ ಆರೈಕೆ ಆಗಬೇಕು.

ಖಿನ್ನತೆಯ ಲಕ್ಷಣಗಳೇನು?

  • ನಿದ್ದೆ ಬರದೆ ಇರುವುದು
  • ಆಗಾಗ ಅಳು ಬರುವುದು. ಸದಾ ನಿರಾಶಾ ಭಾವನೆಯಲ್ಲಿರುವುದು
  • ಹಸಿವು ಆಗದಿರುವುದು
  • ಸಣ್ಣ-ಪುಟ್ಟ ವಿಷಯಕ್ಕೆ ಕೋಪ ಬರುವುದು
  • ಮನೋಭಾವನೆಯಲ್ಲಿ ಅಸಹಜತೆ. ಕಿರಿಕಿರಿ, ಚಡಪಡಿಕೆಯ ಭಾವನೆಗಳು
  • ಮಗುವಿನ ಮೇಲೆ ಆಸಕ್ತಿ ಕಳೆದುಕೊಳ್ಳುವುದು
  • ಆತ್ಮಹತ್ಯೆ, ಸಾಯುವ ಮಾತನಾಡುವುದು

ಹೊರಬರುವುದು ಹೇಗೆ?

  • ಸಾಧ್ಯವಾದಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು. ಮಗು ಮಲಗಿದಾಗೆಲ್ಲಾ ತಾಯಿಯೂ ಮಲಗಬೇಕು
  • ವೈದ್ಯರ ಸಲಹೆ ಮೇರೆಗೆ ಧ್ಯಾನ, ಯೋಗ ಮಾಡುವುದು, ದೇವರ ಸ್ಮರಣೆ, ಭಜನೆ, ಇಷ್ಟದ ಸಂಗೀತ ಕೇಳಬಹುದು
  • ಪತಿ, ಒಡನಾಡಿ, ಸ್ನೇಹಿತೆ, ಯಾರೊಂದಿಗಾದರೂ ಭಾವನೆಗಳನ್ನು ಹಂಚಿಕೊಳ್ಳಬೇಕು.
  • ನಿತ್ಯವೂ ಸ್ನಾನ ಮಾಡಿ ಶುಭ್ರವಾಗಿರಬೇಕು.
  • ಬಾಣಂತಿಯಲ್ಲಿ ಏನಾದರೂ ಸಮಸ್ಯೆ ಕಂಡ ಕೂಡಲೆ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಪಡೆಯುವುದು
  • ಮಗುವಿನ ಲಾಲನೆ, ಪಾಲನೆ ಜವಾಬ್ದಾರಿಯನ್ನು ಇತರರೂ ಹಂಚಿಕೊಳ್ಳುವುದು
  • ಆಪ್ತ ಸಮಾಲೋಚಕರ ಸಲಹೆ ಪಡೆಯಬಹುದು
  • ಮನೆ ಸ್ವಚ್ಛತೆ ಹಾಗೂ ಇತರ ಕೆಲಸಗಳಿಂದ ಆದಷ್ಟು ದೂರವಿರಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net