

ಏನಪ್ಪಾ ಇದು ಹೆಸರೇ ಇಷ್ಟು ವಿಚಿತ್ರವಾಗಿದೆಯಲ್ಲ ಅಂತ ಕೇಳ್ತಿದ್ದೀರಾ? ಹೌದು, ಇದು ಮಧ್ಯಪ್ರದೇಶ ಮೂಲದ ಬುಡಕಟ್ಟು ಜನಾಂಗದವರು ಸಾಕಣೆ ಮಾಡುತ್ತಿದ್ದ ಕೋಳಿಯ ವೆರೈಟಿ. 2018ರ ನಂತರದಲ್ಲಿ ಇದು ದೇಶಾದ್ಯಂತ ಮುನ್ನೆಲೆಗೆ ಬಂದಿದೆ. ಹಲವು ಭಾಗಗಳಲ್ಲಿ ರೈತರು ಈ ಕೋಳಿಯನ್ನು ಸಾಕಣೆ ಮಾಡಿ ಲಾಭ ಗಳಿಸುತ್ತಿದ್ದಾರೆ. ಕಡುಕಪ್ಪು ಬಣ್ಣದ ಈ ಕೋಳಿಯ ಮಾಂಸವೂ ಕಪ್ಪು. ಔಷಧೀಯ ಗುಣಗಳು ಹೆಚ್ಚಿಗೆ ಇರುವುದರಿಂದ ಈ ಕೋಳಿಯ ಮಾಂಸ ಮತ್ತು ಮೊಟ್ಟೆಗೆ ಮಾರುಕಟ್ಟೆಯಲ್ಲಿ ಸಖತ್ ಬೇಡಿಕೆ ಇದೆ. ಕೋಳಿ ಸಾಕಣೆ ಮಾಡಿ ಒಳ್ಳೆಯ ಆದಾಯ ಗಳಿಸಬೇಕು ಎನ್ನುವವರಿಗೆ ಕಡಕ್ನಾಥ್ ಒಳ್ಳೆಯ ಆಯ್ಕೆ.
ಸಾವಿರ ಕೋಳಿ ಸಾಕಿದರೆ 6 ತಿಂಗಳಿಗೆ 8 ಲಕ್ಷ ರೂ. ಆದಾಯ: ನಿಮ್ಮ ಬಳಿ ಸುಮಾರು 2 ಸಾವಿರ ಚದರಡಿ ವಿಸ್ತೀರ್ಣದ ಜಾಗವಿದ್ದು, ಅಲ್ಲಿ ಒಂದು ಸಾವಿರ ಕಡಕ್ನಾಥ್ ಕೋಳಿಗಳನ್ನು ಸಾಕಣೆ ಮಾಡಿದರೆ 5 ತಿಂಗಳಿಗೆ ಬರೋಬ್ಬರಿ 8 ಲಕ್ಷ ರೂ. ಆದಾಯ ಗಳಿಸಬಹುದು. ಈ ಲೆಕ್ಕಾಚಾರ ಕಾಲ್ಪನಿಕ ಅಂದಾಜಲ್ಲ, ಕರುನಾಡ ರೈತರೊಬ್ಬರು ಇಷ್ಟು ಆದಾಯ ಗಳಿಸಲು ಸಾಧ್ಯ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.
ಈ ಕೋಳಿ ಮಾಂಸದಲ್ಲಿದೆ ಔಷಧೀಯ ಗುಣ: ಫಾರಂ ಕೋಳಿಗೆ ಹೋಲಿಸಿದರೆ ಕಡಕ್ನಾಥ್ ಮಾಂಸ ಅತ್ಯಂತ ರುಚಿಕರ. ಈ ಕೋಳಿ, ರೈತರು ಮನೆಗಳಲ್ಲಿ ಸಾಕುತ್ತಿದ್ದ ನಾಟಿ ಕೋಳಿಯಂತೆ ಕಪ್ಪುಬಣ್ಣ ಹೊಂದಿದ್ದು ಮಧ್ಯಪ್ರದೇಶ ಮೂಲದ್ದಾಗಿದೆ. ನರ ದೌರ್ಬಲ್ಯ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಸೇರಿ ಅನೇಕ ಸಮಸ್ಯೆಗಳಿಗೆ ಇದರಲ್ಲಿ ಪರಿಹಾರವಿದೆ ಎನ್ನಲಾಗಿದೆ. ಕೊಬ್ಬಿನ ಅಂಶ ಕೂಡ ಕಡಿಮೆಯಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿದೆ. ಬಿಪಿ, ಸಕ್ಕರೆ ಕಾಯಿಲೆ ಪೀಡಿತರಿಗೂ ಇದು ಉತ್ತಮ ಆಹಾರ ಎಂದು ತಜ್ಞರು ಹೇಳುತ್ತಾರೆ.
ಕಡಕ್ನಾಥ್ ಕೋಳಿಗಳ ಆಹಾರ ಮತ್ತು ಆರೋಗ್ಯ: ಫಾರಂ ಕೋಳಿಗಳಿಗಾದರೆ 2-3 ರೀತಿಯ ಫೀಡ್ಗಳನ್ನು ಬಳಸಬೇಕು. ಆದರೆ ಕಡಕ್ನಾಥ್ ಕೋಳಿಗಳಿಗೆ ಆರಂಭಿಕ ಹಂತದಲ್ಲಿ ಮಾತ್ರ ಫೀಡ್ ಒದಗಿಸಬೇಕಾಗುತ್ತದೆ. ನಂತರದಲ್ಲಿ ಅಕ್ಕಿ, ಗೋಧಿ, ರಾಗಿ, ತರಕಾರಿ ಮತ್ತಿತರ ಆಹಾರ ಪದಾರ್ಥಗಳನ್ನು ನೀಡಬಹುದು. ಇದಕ್ಕೆ ಹೆಚ್ಚಾಗಿ ವಾಣಿಜ್ಯ ಆಹಾರ ಒದಗಿಸುವ ಅವಶ್ಯಕತೆಯಿಲ್ಲ. ಸಾಮಾನ್ಯ ಕೊಳಿಗಳಂತೆ ಇವು ಹೊಲದಲ್ಲಿ ಅಡ್ಡಾಡಿ ಮಣ್ಣು ಕೆದಕಿ ಹುಳ-ಹುಪ್ಪಟೆ ತಿನ್ನುತ್ತವೆ.