ವಯಸ್ಸಾದಂತೆ ಮಗುವಾಗುವ ಜೀವಿ ಅಂಬಲಿ ಮೀನು ಅಥವಾ ಲೋಳೆ ಮೀನು!

JELLY
Published on

ಈ ಭೂಮಿಯ ಮೇಲೆ ಹುಟ್ಟಿದವ ಒಂದಲ್ಲಾ ಒಂದು ದಿನ ಸಾಯಲೇಬೇಕು ಎನ್ನುವ ಮಾತನ್ನು ನೀವೆಲ್ಲರೂ ಕೇಳಿರುತ್ತೀರಲ್ಲವೆ? ಆದರೆ ಸಾವೇ ಇಲ್ಲದ ಜೀವಿಯೊಂದು ಇದೆ ಎಂದರೆ ನಂಬುವಿರಾ? ನಂಬಲೇಬೇಕು. ಇಂಥದ್ದೊಂದು ಜೀವಿಯಿದೆ. ಹಾಗಿದ್ದರೆ ಈ ಜೀವಿ ಯಾವುದು? ವಯಸ್ಸಾದಾಗ ಅದಕ್ಕೆ ಏನಾಗುತ್ತದೆ? ನೋಡೋಣ ಬನ್ನಿ...

ನೀವೆಲ್ಲಾ ಪ್ರತಿ ಸೆಕೆಂಡೂ ಬೆಳೆಯುತ್ತಲೇ ಇರುತ್ತೀರಿ. ವರ್ಷವರ್ಷವೂ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಂತೆಯೇ ನಿಮ್ಮ ವಯಸ್ಸು ಒಂದೊಂದು ವರ್ಷ ಹೆಚ್ಚಾಗುತ್ತಲೇ ಹೋಗುತ್ತದೆ. ಪಾಪುವಿನಿಂದ ಚಿಕ್ಕ ಮಕ್ಕಳಾಗಿ, ವರ್ಷ ಕಳೆದಂತೆ ಯುವಕ-ಯುವತಿಯರಾಗಿ ನಂತರ ಆಂಟಿ-ಅಂಕಲ್​ಗಳಾಗಿ, ಇನ್ನೂ ಸ್ವಲ್ಪ ವರ್ಷ ಹೋದಂತೆ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯಾಗಿ ಒಂದು ದಿನ ಎಲ್ಲರೂ ಸಾಯಲೇಬೇಕು.

ಇದು ನಿಮಗೆಲ್ಲರಿಗೂ ಗೊತ್ತೇ ಇದೆ ತಾನೆ? ಒಂದಿಷ್ಟು ಮೇಕಪ್ ಮಾಡಿಕೊಂಡು ಯಂಗ್ ಆಗಿ ಕಂಡರೂ ಈ ಭೂಮಿಯ ಮೇಲೆ ಚಿರಂಜೀವಿಯಾಗಿ, ಶಾಶ್ವತವಾಗಿ ಉಳಿಯಲು ಯಾರಿಗೂ ಸಾಧ್ಯವೇ ಇಲ್ಲ!

ಚಿರಂಜೀವಿಯಾಗಿರುವವರು ಯಾರು ಎಂದು ನಿಮ್ಮನ್ನು ಕೇಳಿದರೆ ತಕ್ಷಣ ‘ದೇವರು’ ಎನ್ನುತ್ತೀರಿ ನೀವೆಲ್ಲಾ. ದೇವರನ್ನು ಬಿಟ್ಟರೆ ಯಾರೂ ಶಾಶ್ವತವಾಗಿ ಉಳಿಯಲು ಸಾಧ್ಯವೇ ಇಲ್ಲ ಎಂದು ನೀವಷ್ಟೇ ಅಲ್ಲ, ಎಲ್ಲರೂ ಹೇಳುತ್ತಾರೆ ಅಲ್ಲವೆ? ಆದರೆ ನಿಮಗೆ ಗೊತ್ತಾ? ಇಲ್ಲೊಂದು ಜೀವಿ ಇದೆ. ಅದಕ್ಕೆ ಸಾವೇ ಇಲ್ಲ. ಒಂದು ಹಂತದ ವಯಸ್ಸಾಗುತ್ತಿದ್ದಂತೆಯೇ ಪುನಃ ಮಗುವಾಗಿ (ಹುಳುವಿನ ಆರಂಭಿಕ ರೂಪ) ಬಿಡುತ್ತದೆ! ಅದರ ಹೆಸರೇ ಜೆಲ್ಲಿಫಿಶ್.

ಮನುಷ್ಯ ಎಷ್ಟೇ ಬುದ್ಧಿವಂತನಾದರೂ, ಏನೆಲ್ಲಾ ತಂತ್ರಜ್ಞಾನಗಳನ್ನು ಕಂಡುಹಿಡಿದರೂ, ಎಷ್ಟೊಂದು ಸಂಶೋಧನೆ ಮಾಡಿದರೂ ಈ ಪ್ರಕೃತಿಯ ಕೆಲವೊಂದು ವಿಸ್ಮಯದ ಮುಂದೆ ಎಲ್ಲವೂ ಠುಸ್ಸೆ. ಅಂಥದ್ದೇ ಒಂದು ವಿಚಿತ್ರ ಸತ್ಯ ಈ ಜೆಲ್ಲಿಫಿಶ್. ಅಂಬಲಿ ಮೀನು, ಲೋಳೆ ಮೀನು ಎಂದೆಲ್ಲಾ ಕನ್ನಡದಲ್ಲಿ ಕರೆಸಿಕೊಳ್ಳುವ ಈ ಮೀನಿಗೆ ಸಾವಿಲ್ಲ. ಚಿರಂಜೀವಿ ಪಟ್ಟ ಪಡೆದಿರುವ ಏಕೈಕ ಜೀವಿ ಇದು. ಇವು ಸಾಯುವುದಿಲ್ಲ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದರೂ, ಅದಕ್ಕೆ ಕಾರಣ ಮಾತ್ರ ಇನ್ನೂ ಕಂಡುಹಿಡಿಯಲು ಆಗಲಿಲ್ಲವಂತೆ.

ಡೇಂಜರಸ್ ಜೆಲ್ಲಿಫಿಶ್

ಜೆಲ್ಲಿಫಿಶ್​ಗಳು ಹೆಚ್ಚಾಗಿ ಆಸ್ಟ್ರೇಲಿಯಾದ ಸಾಗರಗಳಲ್ಲಿ ಕಾಣಸಿಗುತ್ತವೆ. ಸುಮಾರು ಐದು ಮಿಲಿಮೀಟರ್ ಇರುತ್ತವೆ. ನೋಡಲು ತುಂಬಾ ವಿಚಿತ್ರ ಆಗಿರುವ ಇವು ಬಹಳ ಡೇಂಜರಸ್ ಜೀವಿ. ಇವುಗಳಿಗೆ ಜೋತಾಡುವ ಬಳ್ಳಿಯಂತೆ ಇರುವ ಕಾಲುಗಳಿದ್ದು, ಇವುಗಳು ವಿಷಕಾರಕವಾಗಿವೆ. ಸ್ವಲ್ಪ ಅಪಾಯ ಎದುರಾದಂತೆ ಕಂಡರೂ ಅಥವಾ ಯಾರಾದರೂ ತನ್ನನ್ನು ಹಿಡಿಯಲು ಬರುತ್ತಾರೆ ಎಂದುಕೊಂಡ ತಕ್ಷಣ ಈ ಕಾಲುಗಳನ್ನು ಚಾಚಿ ವಿಷವನ್ನು ಹೊರಚೆಲ್ಲುತ್ತವೆ. ಕ್ರಿಮಿ ಕೀಟಗಳಾದರೆ ಗಬಕ್ಕನೆ ಹಿಡಿದು ಬಾಯಿಯೊಳಕ್ಕೆ ಹಾಕಿಕೊಳ್ಳುತ್ತವೆ. ಒಮ್ಮೆ ಕೀಟ ಸಿಕ್ಕಿತೆಂದರೆ ಜಪ್ಪಯ್ಯ ಎಂದರೆ ಅದು ಬಿಡಿಸಿಕೊಳ್ಳಲು ಸಾಧ್ಯವಿಲ್ಲ.

ವಯಸ್ಸಾದ ಮೇಲೆ ಏನಾಗುತ್ತೆ?

ಹಾಗಿದ್ದರೆ ಜೆಲ್ಲಿಫಿಶ್​ಗೆ ವಯಸ್ಸೇ ಆಗುವುದಿಲ್ಲವೆ ಎಂಬ ಪ್ರಶ್ನೆ ನಿಮಗೆ ಉದ್ಭವಿಸಿರಬಹುದು. ಇದಕ್ಕೆ ದಿನಗಳೆದಂತೆ ವಯಸ್ಸಾಗುವುದು ನಿಜವೇ. ಆದರೆ ಒಂದು ಹಂತಕ್ಕೆ ಬಂದ ಮೇಲೆ ಇವು ತಮ್ಮ ವಯಸ್ಸಾದ ದೇಹದ ಕೋಶವನ್ನು ಸರಿಮಾಡಿಕೊಂಡು ಮತ್ತೆ ಹೊಸದಾಗುತ್ತವೆ.

ತಮ್ಮ ದೇಹಸ್ಥಿತಿ ಎಷ್ಟೇ ಕೆಟ್ಟು ಹೋಗಿದ್ದರೂ ಅವುಗಳನ್ನು ಮತ್ತೆ ರಿಪೇರಿ ಮಾಡಿಕೊಂಡು ಮತ್ತೆ ಬಾಲ್ಯಕ್ಕೆ ಬರುತ್ತವೆ. ಇದಕ್ಕೆ ಟ್ರಾನ್ಸ್ ಡಿಫರೆನ್ಸಿಯೇಷನ್ ಪ್ರಕ್ರಿಯೆ ಎನ್ನುತ್ತಾರೆ. ಎಂದರೆ ಕೋಶಗಳ ಸ್ಥಿತಿಯನ್ನು ಬದಲಾಯಿಸಿ ಅದನ್ನು ಹೊಸದಾಗಿ ಮಾಡಿಕೊಳ್ಳುವ ಪ್ರಕ್ರಿಯೆ ಎಂದರ್ಥ. ಹಲ್ಲಿ, ಓತಿಕ್ಯಾತಗಳು ತಮಗೆ ಅಪಾಯ ಎದುರಾಗಿದೆ ಎಂದಾಗ ಬಾಲವನ್ನು ಕಳಚಿ ಹೋಗುವುದು, ನಂತರ ಅವುಗಳಿಗೆ ಹೊಸ ಬಾಲ ಬರುವುದನ್ನು ನೀವು ಶಾಲೆಯ ಪುಸ್ತಕದಲ್ಲಿ ಓದಿರುತ್ತೀರಿ, ಅದೇ ರೀತಿ ಪೊರೆ ಕಳಚುವ ಹಾವಿನ ಬಗ್ಗೂ ನಿಮಗೆ ಗೊತ್ತಿರಬಹುದು. ಒಂದು ರೀತಿಯಲ್ಲಿ ಜೆಲ್ಲಿಫಿಶ್ ಕೂಡ ಅದೇ ರೀತಿ ಮಾಡುತ್ತದೆ. ಆದರೆ ಇವು ಮತ್ತೆ ಬಾಲ್ಯ ಪಡೆಯುತ್ತವಷ್ಟೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net