

| ಎನ್. ಗುರುನಾಗನಂದನ
ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಟೆನ್ಷನ್ನಿಂದ ಬಳಲುತ್ತಿರುತ್ತೇವೆ. ಪರೀಕ್ಷೆ, ಕೆಲಸ, ಹಣಕಾಸು ಮುಂತಾದ ಹಲವಾರು ವಿಷಯಗಳ ಬಗ್ಗೆ ಒತ್ತಡಕ್ಕೆ ಒಳಗಾಗುತ್ತೇವೆ. ಇಂತಹ ದಿನನಿತ್ಯದ ಒತ್ತಡಗಳು ರಕ್ತದೊತ್ತಡ ಹೆಚ್ಚಾಗಲು ಕಾರಣವಾಗುತ್ತವೆ. ಇತ್ತೀಚೆಗೆ ಹೈಪರ್ ಟೆನ್ಷನ್ ಯುವಕರಲ್ಲಿ ಸಾಮಾನ್ಯವಾಗಿದೆ. ಅಧ್ಯಯನಗಳ ಪ್ರಕಾರ 8 ಜನ 20ರಿಂದ 40 ವರ್ಷದವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಕಾಡುತ್ತಿದೆ. ಗಮನ ನೀಡದೆ ಇರುವುದು ಇದಕ್ಕೆ ಬಹಳ ಮುಖ್ಯ ಕಾರಣ. ಸ್ನೇಹಿತ ಸಣ್ಣ ಸಮಸ್ಯೆಯ ಬಗ್ಗೆ ತಲೆ ಕೆಡಿಸಿಕೊಂಡು ‘ಮಗಾ... ತುಂಬ ಟೆನ್ಷನ್ ಆಗ್ತಿದೆ’ ಎಂದು ಹೇಳಿದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅಗತ್ಯ. ಏಕೆಂದರೆ ಇಂತಹ ಒತ್ತಡಗಳೇ ಕೆಟ್ಟ ಜೀವನಶೈಲಿಗೆ ಕಾರಣವಾಗುತ್ತದೆ. ಅದರಿಂದ ಹೈಪರ್ ಟೆನ್ಷನ್ ಆಗುವ ಸಾಧ್ಯತೆಗಳು ಹೆಚ್ಚು.
ಚಿಕ್ಕ ವಯಸ್ಸಿನಲ್ಲೇ ರಕ್ತದೊತ್ತಡ ಅಧಿಕವಾದರೆ ಮಧ್ಯ ವಯಸ್ಸಿಗೆ ಬಂದಾಗ ಹೃದಯ ಮತ್ತು ಮೆದುಳಿಗೆ ಸಂಬಂಧ ಪಟ್ಟ ರೋಗಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ನಮ್ಮ ದೇಶದಲ್ಲಿ ಶೇ. 63ರಷ್ಟು ಸಾವಿಗೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಕಾರಣ. ಅದರಲ್ಲಿ ಹೃದಯ ಸಂಬಂಧಿತ ರೋಗಗಳು ಶೇ. 27ರಷ್ಟು. ಅಧಿಕ ರಕ್ತದೊತ್ತಡ ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಆದ್ದರಿಂದ ಇದಕ್ಕೆ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ಆದರೆ ಹೈಪರ್ ಟೆನ್ಷನ್ ಸಮಸ್ಯೆ ಇದೆಯೆಂದು ಗುರುತಿಸಿ ಚಿಕಿತ್ಸೆ ನೀಡುವ ಪ್ರಕ್ರಿಯೆಯೇ ಯುವ ಪೀಳಿಗೆಯಲ್ಲಿ ನಿಧಾನವಾಗುತ್ತಿದೆ. ಅದರೊಂದಿಗೆ ‘ನಿನಗೆ ಹೈಪರ್ ಟೆನ್ಷನ್ ಸಮಸ್ಯೆ ಇದೆ’ ಎಂದರೆ ಬಹಳಷ್ಟು ಯುವಕರು ನಂಬುವುದಿಲ್ಲ. ಅಧಿಕ ರಕ್ತದೊತ್ತಡ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ. ಇದರ ಸಲುವಾಗಿ ಡಾಕ್ಟರ್ಗಳ ಬಳಿ ಹೋಗುತ್ತಾರೆ. ಅಧಿಕ ರಕ್ತದೊತ್ತಡ ಕಾರಣಕ್ಕಾಗಿ ಅಲ್ಲ. ಇದನ್ನು ಅರಿಯುವುದು ಬಹಳ ಕಷ್ಟ. ಅಧಿಕ ರಕ್ತದೊತ್ತಡ ಗುಣಲಕ್ಷಣಗಳು ಸ್ಪಷ್ಟವಾಗಿಲ್ಲ. ಸುಸ್ತು, ತಲೆ ಸುತ್ತು, ಹೆಚ್ಚಾಗಿ ಬೆವರುವುದು, ಕಾಲಿನಲ್ಲಿ ಊತ ಮತ್ತು ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಸಮಸ್ಯೆಗಳ ಮೂಲಕ ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆ ಎಂದು ಚಿಕಿತ್ಸೆಗೆ ಹೋದಾಗ ಅಧಿಕ ರಕ್ತದೊತ್ತಡದ ಬಗ್ಗೆ ತಿಳಿಯುತ್ತದೆ. ಮಾನಸಿಕ ಸಮಸ್ಯೆಗಳು ಕೂಡ ರಕ್ತದೊತ್ತಡವನ್ನು ಹೆಚ್ಚಿಸುತ್ತವೆ.
ಹೈಪರ್ ಟೆನ್ಷನ್ಅನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆಯುತ್ತಾರೆ. ಏಕೆಂದರೆ ಇದನ್ನು ಕಂಡುಹಿಡಿಯುವುದೇ ಬಹಳ ಕಠಿಣ. ಏಕೆಂದರೆ ಇದು ಯಾವುದೇ ರೀತಿಯ ಗುಣಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ ಇದರಿಂದ ಸ್ಟ್ರೋಕ್, ಹೃದಯ ಸಂಬಂಧಿತ ಕಾಯಿಲೆಗಳು ಮತ್ತು ಕಿಡ್ನಿಗೆ ಸಂಬಂಧ ಪಟ್ಟ ಮಾರಕ ಕಾಯಿಲೆಗಳು ಬರುತ್ತವೆ. ಅಧಿಕ ರಕ್ತದೊತ್ತಡಕ್ಕೆ ಹಲವಾರು ಕಾರಣಗಳಿವೆ. ಮೊದಲನೇ ಕಾರಣ ಬೊಜ್ಜು. ಅಧಿಕ ದೇಹದ ತೂಕ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಡಯಾಬಿಟೀಸ್ ಮುಂತಾದ ಗಂಭಿರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಜನರು ಇದರ ಚಿಕಿತ್ಸೆಗೆ ವೈದ್ಯರ ಬಳಿ ಹೋಗುತ್ತಾರೆ, ಆಗ ರಕ್ತದ ಒತ್ತಡ ಹೆಚ್ಚಾಗಿರುವುದರ ಬಗ್ಗೆ ಗೊತ್ತಾಗುತ್ತದೆ. ಆದರೆ ಸಾಕಷ್ಟು ಬಾರಿ ಚಿಕೆತ್ಸೆಗೆ ಬರುವಷ್ಟರಲ್ಲಿಯೇ ಕೈ ಮೀರಿ ಹೋಗುವ ಪರಿಸ್ಥಿತಿಗೆ ತಲುಪಿರುತ್ತದೆ. ಇದನ್ನು ತಪ್ಪಿಸಲು ಆರೋಗ್ಯಕರ ಜೀವನಶೈಲಿ ಬಹಳ ಅಗತ್ಯ.
ಪಿಜ್ಜಾ, ಬರ್ಗರ್ ಮೊದಲಾದ ಜಂಕ್ ಫುಡ್ಗಳಿಂದ ದೂರವಿರಬೇಕು. ಈ ಜಂಕ್ ಆಹಾರ ಪದಾರ್ಥಗಳೇ ಯುವಕರಲ್ಲಿ ಬೊಜ್ಜಿನ ಸಮಸ್ಯೆಯನ್ನು ಹೆಚ್ಚು ಮಾಡುತ್ತಿದೆ. ಇದರೊಂದಿಗೆ ಮತ್ತೊಂದು ಕಾರಣವೆಂದರೆ ಒತ್ತಡ. ಮಾನಸಿಕ, ಭೌತಿಕ, ಭಾವನಾತ್ಮಕವಾದ ಯಾವುದೇ ಒತ್ತಡ, ರಕ್ತದೊತ್ತಡ ಮಟ್ಟವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಹೆಚ್ಚಿಸುವಲ್ಲಿ ಸಾಮಾಜಿಕ ಜಾಲತಾಣದ ಕೊಡುಗೆ ಹೆಚ್ಚಿದೆ. ಏಕೆಂದರೆ ಅದರಲ್ಲಿನ ಕೆಲವು ವಿಷಯಗಳು ಟ್ರಿಗರ್ನಂತೆ ಕೆಲಸ ಮಾಡುತ್ತವೆ. ಅದರಿಂದ ಒತ್ತಡ ಹೆಚ್ಚಾಗಿ ಹೈಪರ್ ಟೆನ್ಷನ್ಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು.
‘ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗುವುದರಿಂದ ಹೈಪರ್ ಟೆನ್ಷನ್ ಆಗುತ್ತದೆ. ಇದಕ್ಕೆ ಹೊರಗಿನ ಸ್ಟ್ರೆಸ್ ಸೇರಿ ಉಲ್ಬಣವಾಗುತ್ತದೆ. ಉಪು್ಪ, ಹುಳಿ, ಖಾರ ಹೆಚ್ಚಾಗಿರುವ ಆಹಾರ ಸೇವನೆ ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೆ ಇರುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ನಿದ್ರೆಯಿಂದ ವಂಚಿತರಾದರೆ ಹಾಮೋನ್ಗಳಲ್ಲಿ ಅಸಮತೋಲನವಾಗುತ್ತದೆ. ಸ್ಟ್ರೆಸ್ ಹಾಮೋನ್ ಹೆಚ್ಚಾಗಿ, ದೇಹದಲ್ಲಿ ನೀರು ಸೇರಿಕೊಂಡು ರಕ್ತದೊತ್ತಡದ ಮಟ್ಟ ಹೆಚ್ಚಾಗುತ್ತದೆ. ಜೀನ್ಸ್ನಲ್ಲಿಯೇ ಇದ್ದರೆ ಅದನ್ನು ತಪ್ಪಿಸುವುದು ಕಷ್ಟ. ಆದರೆ ಮಿತವಾದ ಆಹಾರ ಸೇವನೆ, ದೇಹದ ತೂಕ ನಿರ್ವಹಣೆ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ತಪ್ಪಿಸಬಹುದು.’ | ಡಾ. ನಾಗೇಂದ್ರ ಹೆಬ್ಬಾರ್ ‘ಮನೆಯಲ್ಲಿ ಮಕ್ಕಳು ಓದುತ್ತಿಲ್ಲವೆಂದು ಕೋಪಗೊಂಡು ಕೂಗಾಡಿ ಅದರಿಂದ ಹೈಪರ್ ಟೆನ್ಷನ್ಗೆ ಗುರಿಯಾದವರು ಇದ್ದಾರೆ. ನನಗೆ ಬೇಕಾದದ್ದು ಆಗಿಲ್ಲ ಎಂಬ ಹತಾಶೆಯ ಭಾವನೆ ಸತತವಾಗಿ ಕಾಣಿಸಿಕೊಂಡು ಉದ್ವೇಗದಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇತ್ತೀಚೆಗೆ ಯುವಕರು ಹೆಚ್ಚಾಗಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಹೈಪರ್ ಟೆನ್ಷನ್. ಶಾಲೆ-ಕಾಲೇಜಿಗೆ ಹೋಗುವ ಮಕ್ಕಳು ದುಶ್ಚಟಗಳಿಗೆ ಈಡಾಗುತ್ತಿದ್ದಾರೆ. ಅದೂ ರಕ್ತದೊತ್ತಡವನ್ನು ಹೆಚ್ಚು ಮಾಡುತ್ತದೆ. ಅದಕ್ಕಾಗಿ ಒಳ್ಳೆಯ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು. ಇದರೊಂದಿಗೆ ಆತ್ಮೀಯರ ಜತೆ ಸಮಯ ಕಳೆಯುವುದರಿಂದ ರಕ್ತದೊತ್ತಡ ಮಟ್ಟವನ್ನು ಕಾಪಾಡಿಕೊಂಡು ಮಾನಸಿಕವಾಗಿ ಆರೋಗ್ಯವಾಗಿರಬಹುದು.’ | ಡಾ. ಗೋಪುಕುಮಾರ್, ಮನೋವೈದ್ಯರು, ಬೆಂಗಳೂರು ನ್ಯೂರೋ ಸೆಂಟರ್
‘ರಕ್ತದೊತ್ತಡದ ಮಟ್ಟವನ್ನು ನಿಖರವಾಗಿ ತಿಳಿಯಿರಿ, ನಿಯಂತ್ರಿಸಿ ಮತ್ತು ಹೆಚ್ಚು ಕಾಲ ಬದುಕಿ’ ಎಂಬುದು ಈ ವರ್ಷದ ವಿಶ್ವ ಅಧಿಕ ರಕ್ತದೊತ್ತಡ ದಿನದ ಥೀಮ್ ಅಧಿಕ ರಕ್ತದೊತ್ತಡ ಸಮಸ್ಯೆ ಇದೆ ಎಂದು ತಿಳಿಯಲು ಎರಡು ದಿನ ರಕ್ತದ ಒತ್ತಡವನ್ನು ಪರಿಶೀಲಿಸಬೇಕು. ಎರಡು ದಿನವೂ 140/90 ಎಮ್ವå್ಹೆಚ್ಜಿಗೆ ಸಮವಾಗಿ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಹೈಪರ್ ಟೆನ್ಷನ್ ಎಂದು ನಿರ್ಣಯಿಸಬಹುದು. ರಕ್ತದೊತ್ತಡ ಮಟ್ಟವನ್ನು ತಿಳಿಯದೆ ಇರುವುದೇ ಅದರ ಉಲ್ಬಣಕ್ಕೆ ಮುಖ್ಯ ಕಾರಣ. ವೈದ್ಯರ ಸಲಹೆಯಂತೆ ನಡೆದುಕೊಂಡು, ವ್ಯಾಯಾಮ, ಧ್ಯಾನ, ಆಹಾರ ಸೇವನೆಯ ಮೇಲೆ ನಿಗವಹಿಸಿದರೆ ರಕ್ತದೊತ್ತಡದ ಮಟ್ಟ ಕಾಪಾಡಿಕೊಂಡು ಆರೋಗ್ಯವಾಗಿ, ಹೈಪರ್ ಟೆನ್ಷನ್ ಫ್ರೀ ಜೀವನ ನಡೆಸಬಹುದು.
ವಿಶ್ವದಲ್ಲೇ ಅತಿ ಹೆಚ್ಚು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ದೇಶ ದಕ್ಷಿಣ ಅಮೆರಿಕದ ಪರಾಗ್ವೆ. ಅಲ್ಲಿ ಶೇ. 61 ಪುರುಷರು ಮತ್ತು ಶೇ. 51 ಮಹಿಳೆಯರಲ್ಲಿ ಹೈಪರ್ ಟೆನ್ಷನ್ ಸಮಸ್ಯೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ಭಾರತವು ಪುರುಷರಲ್ಲಿ 156 ಮತ್ತು ಮಹಿಳೆಯರಲ್ಲಿ 165ನೇ ಸ್ಥಾನದಲ್ಲಿ ನಿಲ್ಲುತ್ತದೆ. ಪ್ರತಿ 10 ಜನ 18-25 ವರ್ಷದ ವ್ಯಕ್ತಿಗಳಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದೆ. ನಮ್ಮ ದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವ ಕಾರಣದಿಂದ ರೋಗದ ಮಟ್ಟವನ್ನು ನಿಖರವಾಗಿ ತಿಳಿಯುವುದು ಕಷ್ಟ. 1950ರಿಂದ 2013ರ ನಡುವೆ ನಡೆದ ಹಲವಾರು ಅಧ್ಯಯನಗಳ ಪ್ರಕಾರ ಶೇ.25ರಷ್ಟು ಗ್ರಾಮೀಣ ಭಾಗದ ಮತ್ತು ಶೇ.42ರಷ್ಟು ನಗರ ಪ್ರದೇಶದ ಜನರಿಗೆ ಈ ಸಮಸ್ಯೆಯಿಂದ ಬಳಲುತ್ತಿದ್ದೀವಿ ಎಂಬ ಅರಿವಿದೆ. ಈ ಸಾಂಕ್ರಾಮಿಕವಲ್ಲದ ರೋಗ ನಗರ ಪ್ರದೇಶದಲ್ಲಿ ಹೆಚ್ಚಿದೆ. ದೇಶದಲ್ಲಿ ಹರಿಯಾಣ ಹೆಚ್ಚು ಹೈಪರ್ ಟೆನ್ಷನ್ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯ. ಜತೆಗೆ ತಮಿಳುನಾಡು ಮತ್ತು ಸಿಕ್ಕಿಂ ರಾಜ್ಯದಲ್ಲಿ ಇದು ಹೆಚ್ಚಿದೆ. ಭಾರತ ಸರ್ಕಾರ 2025ರ ವೇಳೆಗೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಶೇ.25ರಷ್ಟು ಕಡಿಮೆ ಮಾಡಬೇಕೆಂದು ಭಾರತೀಯ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮವನ್ನು 2017ರಲ್ಲಿ ಪ್ರಾರಂಭಿಸಿತು. ಇದರ ಮೂಲಕ ಹೈಪರ್ ಟೆನ್ಷನ್ ಕುರಿತ ಚಿಕಿತ್ಸೆ ಮತ್ತು ಅರಿವು ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ.