

| ರಶ್ಮಿ ರಾ. ಹೆಬ್ಬೂರು
ಕರೊನಾ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಭಾರತೀಯರು ಮತ್ತೊಮ್ಮೆ ಮನೆಯೊಳಗೇ ಇರುವುದು ಈಗ ಅನಿವಾರ್ಯವಾಗಿದೆ. ಇದರಿಂದಾಗಿ ಒಟ್ಟಾರೆ ಮಾರುಕಟ್ಟೆಯ ಮೇಲೆ ಹೇಗೆ ಹೊಡೆತ ಬೀಳುತ್ತದೆ ಎಂಬುದನ್ನು ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮತ್ತೊಮ್ಮೆ ಲಾಕ್ಡೌನ್ಗೆ ಹೊಂದಿಕೊಳ್ಳುತ್ತಿರುವ ಭಾರತೀಯ ಗ್ರಾಹಕರಲ್ಲಿ ಕಳೆದ ವರ್ಷ ಆರಂಭವಾದ ಹಲವು ಬದಲಾವಣೆಗಳು ಗಟ್ಟಿಯಾಗಿ ಮುಂದುವರಿಯಲಿವೆ ಎಂಬುದಂತೂ ಸತ್ಯ. ಕಳೆದ ವರ್ಷ ಡಿಸೆಂಬರ್ನಲ್ಲಿ ಜಾಗತಿಕವಾಗಿ 17 ದೊಡ್ಡ ಮಾರುಕಟ್ಟೆಗಳಲ್ಲಿ ಯೂಗವ್ ಸಂಸ್ಥೆ 18,000 ಗ್ರಾಹಕರ ಸಮೀಕ್ಷೆ ನಡೆಸಿತು. ಕರೊನಾದಿಂದಾಗಿ ಭಾರತೀಯರ ಕೊಳ್ಳುವಿಕೆಯ ರೀತಿನೀತಿಗಳು ಬೇರೆ ದೇಶದವರಿಗಿಂತ ಹೆಚ್ಚು ಬದಲಾಗಿದೆ ಎಂಬ ಅಂಶ ಈ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಅಭಿವೃದ್ಧಿ ಹೊಂದಿದ ಅಮೆರಿಕ, ಇಂಗ್ಲೆಂಡ್ನಂಥ ಮಾರುಕಟ್ಟೆಗಳಿಗೆ ಹೋಲಿಸಲು ಸುಲಭವಾಗುವಂತೆ, ಭಾರತದಲ್ಲಿ ನಗರ ಪ್ರದೇಶಗಳ ಗ್ರಾಹಕರ ಅಭಿಪ್ರಾಯಗಳನ್ನು ಹೆಚ್ಚಾಗಿ ಸಂಗ್ರಹಿಸಲಾಗಿತ್ತು.
ನಿತ್ಯಬಳಕೆಯ ವಸ್ತುಗಳ ವಿಷಯದಲ್ಲಿ ಎಲ್ಲಾ ಮಾರುಕಟ್ಟೆಗಳಲ್ಲಿ ಬದಲಾವಣೆಗಳಾಗಿದ್ದು, ಭಾರತದಲ್ಲಿ ಶೇ. 81ರಷ್ಟು ಜನರು ಇದರ ಬಗ್ಗೆ ಮಾತನಾಡಿದ್ದಾರೆ. ಬಹುತೇಕ ಪ್ರದೇಶಗಳಲ್ಲಿ ಗ್ರಾಹಕರಿಗೆ ನಿತ್ಯಬಳಕೆಯ ವಸ್ತುಗಳ ಖರೀದಿ ಈಗ ಹೆಚ್ಚು ಯೋಜಿತ ಕೆಲಸವಾಗಿದೆ. ಅನಿಸಿದ ತಕ್ಷಣ ಅಥವಾ ಅಗತ್ಯ ಬಿದ್ದ ಕ್ಷಣವೇ ವಸ್ತುಗಳನ್ನು ಕೊಳ್ಳಲು ಹೋಗುವುದಾಗಿ ಹೇಳಿದವರು ಬಹಳ ಕಡಿಮೆ. ಭಾರತದಲ್ಲಿ ಪ್ರತಿಕ್ರಿಯೆ ನೀಡಿದ ಗ್ರಾಹಕರಲ್ಲಿ ಶೇ. 90ರಷ್ಟು ಜನ ಚೆನ್ನಾಗಿ ಪ್ಲಾನ್ ಮಾಡಿಯೇ ನಿತ್ಯಬಳಕೆ ವಸ್ತುಗಳ ಖರೀದಿ ನಡೆಸುತ್ತಿದ್ದಾರಂತೆ! ಇದರಿಂದ ಮತ್ತೆ ಮತ್ತೆ ಅಂಗಡಿಗೆ ಹೋಗಿ ಕಂಡಿದ್ದನ್ನೆಲ್ಲಾ ಅನಗತ್ಯವಾಗಿ ಖರೀದಿ ಮಾಡುವುದು ನಿಂತಿದೆ.
ಶೀಘ್ರವಾಗಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳು- ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್ (ಎಫ್ಎಂಸಿಜಿ) ಖರೀದಿ ಕುರಿತು ಯೂಗವ್ ಸಮೀಕ್ಷೆ ನಡೆಸಿದಾಗ ಕರೊನಾ ಎರಡನೇ ಅಲೆ ಇನ್ನೂ ಭಾರತವನ್ನು ಪ್ರವೇಶಿಸಿರಲಿಲ್ಲ. ಆದರೆ, ಬಹುತೇಕ ಅಭಿವೃದ್ಧಿ ಹೊಂದಿದ ದೇಶಗಳನ್ನು ಪ್ರವೇಶಿಸಿತ್ತು. ಇದರಲ್ಲಿ, ಜಾಗತಿಕವಾಗಿ ಶೇ. 38ರಷ್ಟು ಜನರು ಹೆಚ್ಚಾಗಿ ಹಣ್ಣು-ತರಕಾರಿ ತಿನ್ನುತ್ತಿರುವುದಾಗಿ ಹೇಳಿದರೆ, ಶೇ. 24ರಷ್ಟು ಜನರು ಹಾಲು ಮತ್ತು ಅದರ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸಿದ್ದರು. ಜಂಕ್ ಫುಡ್ ಬೇಡಿಕೆ ಎಂದಿನಂತೆ ಹೆಚ್ಚೇ ಇತ್ತು. ಏಕೆಂದರೆ ಅಧಿಕ ಜನರು ಫೋ›ಜನ್ ಫುಡ್, ಬೇಕರಿ ತಿಂಡಿ ಮತ್ತು ಸಿದ್ಧ ಆಹಾರಗಳ ಬಳಕೆ ಮಾಡಿದ್ದಾರೆ. ಇನ್ನು ಶೇ. 25ರಷ್ಟು ಗ್ರಾಹಕರು ಮದ್ಯ ಸೇವನೆ ಹೆಚ್ಚಿಸಿದ್ದರೆ, ಶೇ. 20ರಷ್ಟು ಜನರು ಮುಂಚಿಗಿಂತ ಕಡಿಮೆ ಮದ್ಯ ಸೇವಿಸುತ್ತಿರುವುದಾಗಿ ಹೇಳಿದ್ದಾರೆ. ಮದ್ಯ ಮಾರಾಟ ಹೆಚ್ಚಿರುವ ಮಾರುಕಟ್ಟೆಗಳಲ್ಲಿ ಭಾರತದ್ದೇ ಮೊದಲ ಸ್ಥಾನ. ಸಮೀಕ್ಷೆ ನಡೆಸಲಾದ ಶೇ. 29ರಷ್ಟು ಭಾರತೀಯ ಗ್ರಾಹಕರು ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚು ಮದ್ಯ ಸೇವಿಸುತ್ತಿರುವುದಾಗಿ ಹೇಳಿದ್ದಾರೆ.
ಬೇರೆಲ್ಲ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯ ಭಾರತೀಯ ಗ್ರಾಹಕರು, ಹಣ್ಣು-ತರಕಾರಿ ಮತ್ತು ಡೇರಿ ಉತ್ಪನ್ನಗಳನ್ನು ಹೆಚ್ಚು ಖರೀದಿಸುತ್ತಿರುವುದಾಗಿ ಹೇಳಿದ್ದಾರೆ. ಹೆಚ್ಚು ಜನ ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಮದ್ಯ ಸೇವನೆ ಪ್ರಮಾಣ ಹೆಚ್ಚಾಗಿದೆ ಎಂದವರಲ್ಲೂ ಭಾರತೀಯರೇ ಹೆಚ್ಚು! ಕರೊನಾ ಸಮಯದಲ್ಲಿ ಮದ್ಯ ಸೇವನೆಯನ್ನು ಹೆಚ್ಚಿಸಿರುವುದಾಗಿ ಹೇಳಿದವರಲ್ಲಿ ಭಾರತದ ಶೇ. 29 ಮತ್ತು ಚೀನಾದ ಶೇ. 27ರಷ್ಟು ಜನ ಇದ್ದಾರೆ. ನಗರ ಪ್ರದೇಶದ ಭಾರತೀಯರಲ್ಲಿ ಶೇ. 27ರಷ್ಟು ಜನರು ಫೋ›ಜನ್ ಫುಡ್ ಬಳಕೆಯನ್ನು ಹೆಚ್ಚಿಸಿದ್ದಾರೆ. ಇದು ಶೇ. 29ರ ಜಾಗತಿಕ ಸರಾಸರಿ (ಗ್ಲೋಬಲ್ ಎವರೇಜ್) ಅಂಕಿಗೆ ಹತ್ತಿರವಾಗಿದೆ. ಆದರೆ ಉತ್ತರಿಸಿದ ಬಳಕೆದಾರರಲ್ಲಿ ಶೇ. 33ರಷ್ಟು ಜನ ಫೋ›ಜನ್ ಫುಡ್ ಬಳಕೆ ಕಡಿಮೆ ಮಾಡಿರುವುದಾಗಿಯೂ ಹೇಳಿದ್ದಾರೆ. ಇದರಿಂದ ಹೆಚ್ಚು ಆರೋಗ್ಯಕರ ತಾಜಾ ಆಹಾರದೆಡೆಗೆ ಗ್ರಾಹಕರ ಒಲವು ಮೂಡಿರುವುದೂ ಕಂಡುಬಂದಿದೆ.
ಕರೊನಾ ಮುನ್ನೆಚ್ಚರಿಕೆಯಾಗಿ ಜನರು ಮನೆಯಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಮಹಿಳೆಯರು ಮೇಕಪ್ ಮಾಡಿಕೊಳ್ಳುವ ಪ್ರಸಂಗಗಳೂ ಕಡಿಮೆಯಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಮಾರುಕಟ್ಟೆಗಳಲ್ಲಿ ಸೌಂದರ್ಯವರ್ಧಕಗಳ ಬೇಡಿಕೆ ಕಡಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಶೇ. 33ರಷ್ಟು ಜನ ಸೌಂದರ್ಯವರ್ಧಕಗಳ ಖರೀದಿಯನ್ನು ಕಡಿಮೆ ಮಾಡಿರುವುದಾಗಿ ಹೇಳಿದರೆ, ಭಾರತದಲ್ಲಿ ಶೇ. 39ರಷ್ಟು ಗ್ರಾಹಕರು ಸೌಂದರ್ಯ ವರ್ಧಕಗಳ ಖರೀದಿ ಕಡಿಮೆ ಮಾಡಿರುವುದಾಗಿ ಹೇಳಿದ್ದಾರೆ.