ಅಂಗೈಯಲ್ಲೇ ಅರಳಿಕಟ್ಟೆ!; ಕ್ಲಬ್​ಹೌಸ್-ಸ್ಪೇಸ್​ನಲ್ಲಿ ಮಾತು ಮಾತು ಮಾತು..

Masth 1
Published on

ಇದುವರೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಟೆ ಎಂಬುದು ಅಕ್ಷರಶಃ ಚಾಟ್​ಗೆ, ಅಂದರೆ ಲಿಖಿತ ಸಂವಾದ ಕ್ಕಷ್ಟೇ ಸೀಮಿತವಾಗಿತ್ತು. ಆದರೆ ಈಗ ಸೋಷಿಯಲ್ ಚಾಟ್ ನಿಜಕ್ಕೂ ಮಾತಿನ ರೂಪ ಪಡೆದಿದೆ. ಮಾತ್ರವಲ್ಲ ಮಾತನಾಡುವುದು ಕೂಡ ಒಂದು ಟ್ರೆಂಡ್ ಆಗಿದೆ. ಹಾಳುಹರಟೆಯೇ ಇರಲಿ, ಗಂಭೀರ ಚರ್ಚೆಯೇ ಇರಲಿ ಹಿಂದೆಲ್ಲ ಇಂಥವುಗಳಿಗೆಂದೇ ಅರಳಿಕಟ್ಟೆ, ಪಂಚಾಯ್ತಿಕಟ್ಟೆ ಇರುತ್ತಿದ್ದವು. ಅದು ಈಗಿನ ಡಿಜಿಟಲ್ ಜಮಾನಾದಲ್ಲಿ ‘ಕ್ಲಬ್​ಹೌಸ್’ ಆಗಿದೆ. ಈ ವಿಷಯದಲ್ಲಿ ಟ್ವಿಟರ್, ಟೆಲಿಗ್ರಾಂ ಕೂಡ ಹಿಂದೆ ಬಿದ್ದಿಲ್ಲ. ಇಲ್ಲಿ ಯಾರೊಂದಿಗೋ ‘ಸ್ಪೇಸ್’ನಲ್ಲಿ ವಿಹರಿಸಬಹುದು, ಇನ್ಯಾರನ್ನೋ ‘ರೂಮ್​ಗೂ ಕರೆಯಬಹುದು. ಜಸ್ಟ್ ಮಾತ್ ಮಾತಲ್ಲೇ ಇವೆಲ್ಲವನ್ನೂ ಸಾಧ್ಯವಾಗಿಸಿರುವ ಈ ಅತ್ಯಾಧುನಿಕ ಆವಿಷ್ಕಾರ ಈಗ ಎಲ್ಲೆಡೆ ಚರ್ಚೆಯ ವಸ್ತು.

| ರವಿಕಾಂತ ಕುಂದಾಪುರ ಆತ: ಡೇ ಜರ್ನಿ.. ಅದ್ರಲ್ಲೂ, ಎಂಟ್ಹತ್ತು ಗಂಟೆ ಒಬ್ನೇ ಅಷ್ಟ್ ದೂರದಿಂದ ಬರೋದಂದ್ರೆ ಬೋರ್ ಅಲ್ವಾ? ಈತ: ಆರಾಮ್ ಹರಟೆ ಹೊಡ್ಕೊಂಡ್ ಬಂದೆ.. ಆತ: ಯಾರ್ ಜೊತೆ!? ಈತ: ವಸಿಷ್ಠ ಸಿಂಹ, ಮಾನ್ವಿತಾ ಕಾಮತ್, ನೀತು ಶೆಟ್ಟಿ, ಟಿ.ಎನ್. ಸೀತಾರಾಮ್ ನಮ್ ಪಕ್ಕದ್ಮನೆ ಆಂಟಿ, ಎದುರುಮನೆ ಅಂಕಲ್, ನನ್ನ ಕಾಲೇಜ್ ಫ್ರೆಂಡ್, ಕಲೀಗ್, ನಮ್ ಸ್ಕೂಲ್ ಮೇಷ್ಟ್ರು.. ಇನ್ನೂ ಯಾರ್ಯಾರೋ ಇದ್ರು, ಅವರೆಲ್ಲರ ಮಾತು ಕೇಳ್ತಾ, ನಾನೂ ಒಂದಷ್ಟ್ ಮಾತಾಡ್ತಾ ಊರಿಗೆ ತಲುಪಿದ್ದೇ ಗೊತ್ತಾಗ್ಲಿಲ್ಲ... ಹೌದು... ಇನ್ನು ಮುಂದೆ ಯಾರಾದರೂ ಹೀಗೆ ಹೇಳಿದರೆ ಅಲ್ಲಗಳೆಯುವ ಹಾಗಿಲ್ಲ. ಏಕೆಂದರೆ ಈಗ ಈ ರೀತಿ ಸೆಲೆಬ್ರಿಟಿ-ಫ್ರೆಂಡ್ಸ್-ಕಲೀಗ್-ಕಸಿನ್ಸ್-ರಿಲೇಟಿವ್ಸ್ ಜತೆ ಮಾತಾಡ್ತಾನೇ ನಾವು ತಲುಪಬೇಕಾದ ಸ್ಥಳ ತಲುಪಿಕೊಳ್ಳಬಹುದು. ಮಾತ್ರವಲ್ಲ ನಮ್ಮಿಷ್ಟದವರೊಂದಿಗೆ ಹರಟುತ್ತಲೇ ನಮ್ಮ ಕೆಲವು ಕೆಲಸಗಳನ್ನು ಮಾಡಿ ಮುಗಿಸಬಹುದು. ಇನ್ನು ಮಹಿಳೆಯರಿಗಂತೂ ಹಬ್ಬವೇ. ‘ಅಯ್ಯೋ ಅಡುಗೆಗೆ ಲೇಟಾಯ್ತು.., ನಮ್ಮನೆಯವ್ರು ಬಂದ್ರು, ಆಮೇಲೆ ಸಿಗ್ತೀನಿ..’ ಅಂತ ಮಾತಿನ ಮಧ್ಯೆ ಎದ್ದು ಹೋಗಬೇಕಂತೇನೂ ಇಲ್ಲ. ಏಕೆಂದರೆ ಹರಟೆಪ್ರಿಯರು ಈಗ ತಮ್ಮ ಗೆಳತಿಯರೊಡನೆ ಆರಾಮವಾಗಿ ಹರಟೆ ಹೊಡೆಯುತ್ತಲೇ ಅಡುಗೆ ಮಾತ್ರವಲ್ಲ, ಮನೆಗೆಲಸವನ್ನೂ ಮಾಡಿ ಮುಗಿಸಬಹುದು. ಇತ್ತೀಚೆಗಷ್ಟೇ ಆಂಡ್ರಾಯ್್ಡಲ್ಲಿ ಬಿಡುಗಡೆಯಾಗಿ, ಜನಪ್ರಿಯವೂ ಆಗುತ್ತಿರುವ ಕ್ಲಬ್​ಹೌಸ್ ಆಪ್​ನಿಂದ ಇವೆಲ್ಲ ಸಾಧ್ಯವಾಗುತ್ತಿದೆ. ಈ ಮೂಲಕ ಮಾತು ಮನೆಮಾತಾಗುತ್ತಿದೆ. ವರ್ಕ್ ಫ್ರಮ್ ಹೋಮ್ ಈ ಕಾಲಘಟ್ಟದಲ್ಲಿ ಚಾಟ್ ಫ್ರಮ್ ಹೋಮ್ ಮಾತ್ರವಲ್ಲ ರೋಮ್ (ಟಚಞ) ಕೂಡ ಸಾಧ್ಯವಾಗಿದೆ.

ಬಿಡುಗಡೆ ಆಗುತ್ತಲೇ ಭಾರಿ ಜನಪ್ರಿಯತೆ

ಕ್ಲಬ್​ಹೌಸ್ ಎಂಬ ಆಂಡ್ರಾಯ್ಡ್ ಆಪ್ ಹೀಗೆ ಹರಟೆ-ಸಂವಾದಕ್ಕೆ ಅವಕಾಶ ಒದಗಿಸಿದ ಬೆನ್ನಿಗೇ ಆನ್​ಲೈನ್ ಹರಟೆ ಜನಪ್ರಿಯತೆ ಗಳಿಸುತ್ತಿದೆ. ಅದೇ ರೀತಿ ಟ್ವಿಟರ್-ಟೆಲಿಗ್ರಾಮ್ಳೂ ಅಕ್ಷರಶಃ ಮಾತುಕತೆಗೆ ವೇದಿಕೆ ಕಲ್ಪಿಸಿಕೊಟ್ಟಿವೆ. ಪರಿಣಾಮವಾಗಿ ಈಗ ಎಲ್ಲರೂ ಒಂದುಗೂಡಿ ಮಾತಾಡಲು, ಹರಟೆ ಹೊಡೆಯಲು ಭೇಟಿ ಆಗಲೇಬೇಕಂತೇನೂ ಇಲ್ಲ. ಕೈಯಲ್ಲೊಂದು ಸ್ಮಾರ್ಟ್​ಫೋನ್, ಒಳ್ಳೆಯ ಇಂಟರ್ನೆಟ್ ಸೌಲಭ್ಯ, ಕೆಲವು ಆಪ್​ಗಳ ಖಾತೆ ಇದ್ದುಬಿಟ್ಟರೆ ಸಾಕು... ಸಾಕುಸಾಕಾಗುವಷ್ಟು ಮಾತನಾಡಬಹುದು.

ಸಕಾಲಿಕ

ಎಲ್ಲವೂ ವರ್ಕ್ ಫ್ರಮ್ ಹೋಮ್ ಆಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂಥದ್ದೊಂದು ಮಾತುಕತೆ ವ್ಯವಸ್ಥೆ ಬಂದಿರುವುದು ಸಕಾಲಿಕವೇ. ತುರ್ತು ಸಭೆ, ಸಂವಾದ ಇತ್ಯಾದಿಗಳನ್ನು ದೈಹಿಕ ಅಂತರ ಕಾಪಾಡಿಕೊಂಡು ಮಾಡುವಂಥದ್ದು ಇದರಿಂದ ಸಾಧ್ಯವಾಗುತ್ತಿದೆ. ಸಂಬಂಧಪಟ್ಟವರು ಎಲ್ಲಿದ್ದಾರೋ ಅಲ್ಲಿಂದಲೇ ಅಥವಾ ಪ್ರಯಾಣದಲ್ಲಿದ್ದರೂ ಎಲ್ಲರೂ ಒಟ್ಟಾಗಿ ಮುಖ್ಯವಾದ ಮಾತುಕತೆ ನಡೆಸಲು, ಇಲ್ಲವೇ ಹಾಗೇ ಸುಮ್ಮನೆ ಹರಟೆ ಹೊಡೆಯಲಿಕ್ಕೂ ಈ ಹೊಸ ಆವಿಷ್ಕಾರ ಸೂಕ್ತವಾಗಿದೆ. ಇನ್ನು ಇಲ್ಲಿ ಯಾರ ಮುಖವೂ ಕಾಣುವುದಿಲ್ಲವಾದ್ದರಿಂದ ಅಂದರೆ ವಿಡಿಯೋ ಪ್ರಸಾರ ಆಗುವುದಿಲ್ಲವಾದ್ದರಿಂದ ಯಾರು ಎಲ್ಲಿ ಹೇಗಿದ್ದಾರೋ ಹಾಗೆಯೇ ಮಾತುಕತೆಯನ್ನು ಕೇಳಿಸಿಕೊಳ್ಳಬಹುದು. ಆಸಕ್ತಿ ಇದ್ದರೆ ಮಾತುಕತೆಯಲ್ಲಿ ಭಾಗವಹಿಸಬಹುದು. ನಮ್ಮ ಕಡೆಯಿಂದ ಮ್ಯೂಟ್ ಮಾಡಿಟ್ಟುಕೊಂಡರೆ ಆ ಕಡೆಯ ಮಾತನ್ನಷ್ಟೇ ಕೇಳುತ್ತ ನಾವು ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳಲೂಬಹುದು. ಇಷ್ಟೆಲ್ಲ ಅನುಕೂಲವಿರುವ ಈ ಆವಿಷ್ಕಾರಗಳನ್ನು ಬಳಕೆದಾರರು ಎಷ್ಟರಮಟ್ಟಿಗೆ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಇವುಗಳ ಪ್ರಯೋಜನ ಅವಲಂಬಿಸಿದೆ.

ವಾಯ್ಸ್ ಚಾಟ್

ಟೆಲಿಗ್ರಾಮ್ಲ್ಲಿನ ‘ವಾಯ್ಸ್ ಚಾಟ್’ ಟೆಲಿಗ್ರಾಮ್ ಗ್ರೂಪ್ ಹಾಗೂ ಚಾನೆಲ್ ಎರಡರಲ್ಲೂ ಲಭ್ಯವಿದೆ. ಇಲ್ಲಿ ಗ್ರೂಪ್ ಮೆಂಬರ್ ಹಾಗೂ ಚಾನೆಲ್ ಸಬ್​ಸ್ಕ್ರೈಬರ್ ಎಲ್ಲರೂ ಈ ಮಾತುಕತೆಯನ್ನು ಕೇಳಿಸಿಕೊಳ್ಳಬಹುದು. ಮಾತ್ರವಲ್ಲ, ಅವರೆಲ್ಲರೂ ಮಾತುಕತೆ ಯಲ್ಲಿ ಪಾಲ್ಗೊಳ್ಳಬಹುದು. ಅಲ್ಲದೆ ಕ್ಲಬ್​ಹೌಸ್​ನಲ್ಲಿದ್ದಂತೆ ಇಲ್ಲೂ ಕೈ ಎತ್ತುವ (ಹ್ಯಾಂಡ್ ರೇಸ್) ವ್ಯವಸ್ಥೆ ಕೂಡ ಇದ್ದು, ಅಡ್ಮಿನ್ ಅಂಥವರಿಗೆ ಮಾತುಕತೆಗೆ ಅವಕಾಶ ನೀಡುತ್ತಾರೆ.

ಸ್ಪೇಸ್

ಕ್ಲಬ್​ಹೌಸ್ ಜನಪ್ರಿಯತೆ ಪಡೆಯುತ್ತಿದ್ದಂತೆ ಹೀಗೆ ಮಾತುಕತೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದರೂ ಇದಕ್ಕೂ ಮೊದಲೇ ಟ್ವಿಟರ್-ಟೆಲಿಗ್ರಾಮ್ ಕೂಡ ಇಂಥದ್ದೇ ಅವಕಾಶ ಕಲ್ಪಿಸಿವೆ. ಟ್ವಿಟರ್ ‘ಸ್ಪೇಸ್’ ಎಂಬ ಸೌಲಭ್ಯ ನೀಡಿದ್ದರೆ, ಇಂಥ ಮಾತುಕತೆಗಂತಲೇ ಟೆಲಿಗ್ರಾಮ್ ‘ವಾಯ್ಸ್ ಚಾಟ್’ ಸೌಲಭ್ಯ ನೀಡಿದೆ. ಟ್ವಿಟರ್​ನಲ್ಲಿ ನಾವು ‘ಸ್ಪೇಸ್’ ಕ್ರಿಯೇಟ್ ಮಾಡಿಕೊಂಡರೆ ಅಲ್ಲಿ ಇನ್ನು ಹತ್ತು ಜನರನ್ನು ಸ್ಪೀಕರ್ ಆಗಿಸಿ, ಒಟ್ಟು ಹನ್ನೊಂದು ಮಂದಿ ಮಾತುಕತೆ ನಡೆಸಬಹುದು. ಈ ಮಾತುಕತೆಯನ್ನು ನಮ್ಮ ಫಾಲೋ ವರ್ಸ್ ಮಾತ್ರವಲ್ಲದೆ ಎಲ್ಲ ಟ್ವಿಟ್ಟಿಗರೂ ಕೇಳಿಸಿಕೊಳ್ಳಬಹುದು.

ರೂಮ್

ಕ್ಲಬ್​ಹೌಸ್​ನಲ್ಲಿ ಹೀಗೆ ಒಂದಷ್ಟು ಜನ ಒಂದೆಡೆ ಸೇರಿ ಮಾತನಾಡಲು ಮಾಡಿಕೊಳ್ಳುವ ಅವಕಾಶವನ್ನು ‘ರೂಮ್ ಎನ್ನಲಾಗುತ್ತದೆ. ಕ್ಲಬ್​ಹೌಸ್​ನಲ್ಲಿ ನಾವೇ ಒಂದು ಟಾಪಿಕ್ ಕೊಟ್ಟುಕೊಂಡು, ಒಂದು ರೂಮ್ ಕ್ರಿಯೇಟ್ ಮಾಡಿಕೊಂಡುಬಿಟ್ಟರೆ ನಮ್ಮ ಫಾಲೋವರ್ಸ್ ಸೇರಿ, ಒಂದಷ್ಟು ಜನ ಮಾತಿಗೆ ಸಿಕ್ಕಿಬಿಡುತ್ತಾರೆ. ರೂಮ್ ಕ್ರಿಯೇಟ್ ಮಾಡಿ ತಕ್ಷಣವೇ ಮಾತಿಗಿಳಿಯಬಹುದು ಅಥವಾ ಷೆಡ್ಯೂಲ್ ಮಾಡಿದರೆ ಅದು ಹೆಚ್ಚಿನ ಮಂದಿಗೆ ತಿಳಿದು, ಆ ಸಮಯಕ್ಕೆ ಸರಿಯಾಗಿ ಹಲವರು ಮಾತಿಗೆ ಸಿಗುತ್ತಾರೆ. ಹೀಗೆ ರೂಮ್ ಕ್ರಿಯೇಟ್ ಮಾಡಿಕೊಳ್ಳುವಾಗ ಓಪನ್, ಸೋಷಿಯಲ್, ಕ್ಲೋಸ್ಡ್ ಅಂತ ಮೂರು ವಿಭಾಗಗಳಿವೆ. ಓಪನ್ ರೂಮ್ೆ ಎಲ್ಲರಿಗೂ ಪ್ರವೇಶವಿದ್ದರೆ, ಸೋಷಿಯಲ್​ನಲ್ಲಿ ನಾವು ಫಾಲೋ ಮಾಡುತ್ತಿರುವವರಿಗೆ ಮಾತ್ರ ಅವಕಾಶ. ಇನ್ನು ನಮಗೆ ಬೇಕಾದವರನ್ನಷ್ಟೇ ಆಯ್ಕೆ ಮಾಡಿಕೊಂಡು ಮಾತುಕತೆ ನಡೆಸುವುದು ಕ್ಲೋಸ್ಡ್ ರೂಮ್ಂದ ಸಾಧ್ಯ. ಕೇಳುಗರಿಗೆ ಹ್ಯಾಂಡ್ ರೇಸ್ (ಕೈ ಎತ್ತುವ) ಮಾಡುವ ಅವಕಾಶವಿದ್ದು, ಅವರಿಗೆ ರೂಮ್ ಕ್ರಿಯೇಟರ್ ಅಥವಾ ಮಾಡರೇಟರ್ ಆಗಿರುವವರು ಮಾತನಾಡಲು ಅವಕಾಶ ಮಾಡಿಕೊಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net