

| ಜಿ.ಕೆ. ವೆಂಕಟೇಶಮೂರ್ತಿ ಕಾರವಾರ
ಕ್ಯಾಲಿಗ್ರಫಿ ಇದು ಗ್ರೀಕ್ ಮೂಲದ ಪದ. ಇದರರ್ಥ ಸುಂದರ ಕೈಬರಹ. ವಿಶಿಷ್ಟ ರೀತಿಯ ಪೆನ್ನಿನಿಂದ ಅರಳುವ ಕಲೆಯೇ ಕ್ಯಾಲಿಗ್ರಫಿ. ಹ್ಯಾಂಡ್ರೈಟಿಂಗ್ ಮತ್ತು ಕ್ಯಾಲಿಗ್ರಫಿಗಳ ನಡುವೆ ವ್ಯತ್ಯಾಸವಿದೆ. ಕ್ಯಾಲಿಗ್ರಫಿಯನ್ನು ಕನ್ನಡದಲ್ಲಿ ‘ಚಿತ್ತಾರ ಕೈಬರಹ’ ಅಥವಾ ‘ಅಕ್ಷರ ವಿನ್ಯಾಸ’ ಎನ್ನುತ್ತಾರೆ. ಇಂಗ್ಲಿಷ್ನಲ್ಲಿ ‘ಪೆನ್ವುನ್ಷಿಸ್’ ಅಥವಾ ‘ಪೆನ್ಆರ್ಟ್’ ಎಂದೂ ಕರೆಯುತ್ತಾರೆ. ಇಂತಹ ಬರಹಗಳನ್ನು ಪತ್ರಿಕೆ, ಮ್ಯಾಗಝಿನ್, ಮದುವೆ ಆಹ್ವಾನ ಪತ್ರಿಕೆ, ಗ್ರೀಟಿಂಗ್ ಕಾರ್ಡ್, ಸಿನಿಮಾ ಪೋಸ್ಟರ್, ಅಂಗಡಿಗಳ ಬೋರ್ಡ್, ಪುಸ್ತಕದ ಮುಖಪುಟದಲ್ಲಿ ನೋಡಬಹುದು. ಅವುಗಳಲ್ಲಿ ಕೆಲವು ಬಾರಿ ಒಂದು ಪದವನ್ನು ಒಂದು ಅಥವಾ ಎರಡು ಅಕ್ಷರಗಳನ್ನು ಮಾತ್ರ ವಿಶೇಷ ರೀತಿಯಲ್ಲಿ ಅಲಂಕಾರಿಕವಾಗಿ ವಿನ್ಯಾಸಗೊಳಿಸಿರುತ್ತಾರೆ. ಕೈಯಲ್ಲಿ ಬರೆದಿದ್ದನ್ನು ಸ್ಕ್ಯಾನ್ ಮಾಡಿ ಬಳಿಕ ಮುದ್ರಿಸುತ್ತಾರೆ. ಈಗಂತೂ ಕಂಪ್ಯೂಟರ್ನಲ್ಲೇ ವಿವಿಧ ಫಾಂಟ್ ಮತ್ತು ಶೈಲಿಯ ಅಕ್ಷರಗಳು ಸಿಗುತ್ತವೆ. ಇದರಿಂದಾಗಿ ಕ್ಯಾಲಿಗ್ರಫಿಗೆ ತುಸು ಹಿನ್ನಡೆ ಆಗಿದೆ ಎಂದು ಹೇಳಲಾಗುತ್ತದೆಯಾದರೂ ಸಂದರ್ಭಕ್ಕೆ ತಕ್ಕಂತೆ ಕೈಯಿಂದ ಬರೆಯುವುದಕ್ಕೂ, ಎಲ್ಲ ಸಂದರ್ಭಗಳಿಗೂ ಹೊಂದುವಂತಹ ಫಾಂಟ್ಗಳಿಗೂ ಒಂದೇ ರೀತಿಯ ಫಾಂಟ್ಗಳಿಗೂ ವ್ಯತ್ಯಾಸ ಇದ್ದೇ ಇದೆ. ವಿದ್ಯಾರ್ಥಿಗಳು ಪ್ರಾಜೆಕ್ಟ್ ಮಾಡಿ ಒಪ್ಪಿಸುವಾಗ ಶೀರ್ಷಿಕೆ ಬರೆಯಲು ಕೂಡ ಕ್ಯಾಲಿಗ್ರಫಿ ಬರಹಗಳನ್ನು ಉಪಯೋಗಿಸಬಹುದು. ಬರ್ತ್ ಡೇ, ಟೀಚರ್ಸ್ ಡೇ ಮುಂತಾದ ಸಂದರ್ಭಗಳಲ್ಲಿ ಗ್ರೀಟಿಂಗ್ ಕಾರ್ಡ್ಗಳನ್ನು ಕೈಯಲ್ಲಿ ತಾವೇ ಸ್ವತಃ ತಯಾರಿಸಬಹುದು. ಇತರರಿಗೂ ತಯಾರಿಸಿ ಕೊಡಬಹುದು. ಇನ್ವಿಟೇಶನ್ ಕಾರ್ಡ್ ತಯಾರಿಸಿ, ಸ್ಕ್ಯಾನ್ ಮಾಡಿ ಮುದ್ರಿಸಿ ಹಂಚಬಹುದು ಅಥವಾ ಕಲರ್ ಝೆರಾಕ್ಸ್ ಮೂಲಕ ಪ್ರತಿಗಳನ್ನು ತಯಾರಿಸಬಹುದು. ಕೆಲವು ಕನ್ನಡ ಪತ್ರಿಕೆ ಅಥವಾ ಮ್ಯಾಗಝಿನ್ಗಳಲ್ಲಿ ಕ್ಯಾಲಿಗ್ರಾಫರ್ಗಳು ಇರುತ್ತಾರೆ. ಸಿನಿಮಾ ಪೋಸ್ಟರ್ ತಯಾರಿಸುವಾಗಲೂ ಕ್ಯಾಲಿಗ್ರಾಫರ್ ಬೇಕಾಗುತ್ತಾರೆ. ಕನ್ನಡ ಅಕ್ಷರಗಳನ್ನು ಒಂದೇ ಎಳೆತದಲ್ಲಿ (ಸ್ವೀಪ್) ಬರೆಯಲಾಗುವುದಿಲ್ಲ. ಆದ್ದರಿಂದ ಸ್ವಲ್ಪ ಸ್ವಲ್ಪ ಭಾಗವನ್ನೇ ಬರೆಯಬೇಕಾಗುತ್ತದೆ. ಇದು ನಮಗೆ ತಾಳ್ಮೆಯನ್ನೂ ಕಲಿಸುತ್ತದೆ.
ಈ ವಿಶೇಷ ಬರಹಕ್ಕೆಂದೇ ವಿಭಿನ್ನ ಪೆನ್ಗಳಿವೆ. ನಾಮದಂತೆ ಉದ್ದ ಇರುವ ಚಿಸಲ್ ಪಾಯಿಂಟ್ ಪೆನ್ಗಳು ಮಾರುಕಟ್ಟೆಯಲ್ಲಿ ಲಭ್ಯ. ಕ್ಯಾಲಿಗ್ರಫಿ ಪೆನ್ಗಳಲ್ಲಿ ಫೌಂಟನ್ಪೆನ್ ಮತ್ತು ಪ್ಯಾರಲೆಲ್ ಪೆನ್ ಎಂಬ 2 ಮಾದರಿ ಇವೆ. ಫೌಂಟನ್ ಪೆನ್ನಲ್ಲಿ ಇಂಕ್ ತುಂಬುವ ಕೊಳವೆಗೆ ವಿವಿಧ ಗಾತ್ರದ ನಿಬ್ ಹೊಂದಿರುವ ಕಂಠದ ಭಾಗವನ್ನು ಸೇರಿಸಬಹುದು. ಇವುಗಳಲ್ಲಿ ಇಂಕ್ ಸುಸೂತ್ರವಾಗಿ ಹರಿಯುವುದಿಲ್ಲ. ಪ್ರತಿ ಬಾರಿ ಇಂಕ್ನಲ್ಲಿ ಅದ್ದಿ ಬರೆಯಬೇಕಾಗುತ್ತದೆ. ಪ್ಯಾರಲೆಲ್ ಪೆನ್ನ ನಿಬ್ ಎರಡು ಸಮಾನಾಂತರ ಲೋಹದ ಪ್ಲೇಟ್ಗಳಂತೆ ಇರುತ್ತದೆ. ಅವುಗಳ ಮಧ್ಯದಿಂದ ಇಂಕ್ ಹರಿಯುತ್ತದೆ. ಇಂತಹ ದುಬಾರಿ ಪೆನ್ಗಳ ಜತೆಗೆ ಎರಡು ಬೇರೆಬೇರೆ ಬಣ್ಣದ ಇಂಕ್ ತುಂಬಿರುವ ಕಾರ್ಟಿ್ರ್ ನೀಡಿರುತ್ತಾರೆ. ಅವು ಖರ್ಚಾದರೆ ರೀಫಿಲ್ ಕಾರ್ಟಿ್ರ್ ಪ್ರತ್ಯೇಕವಾಗಿ ಕೊಳ್ಳಬಹುದು. ಈ ಎರಡೂ ಬಗೆಯ ಪೆನ್ಗಳು 1.5 ಮಿ.ಮೀ.ನಿಂದ ಪ್ರಾರಂಭವಾಗಿ 6 ಮಿ.ಮೀ.ವರೆಗೆ ವಿವಿಧ ದಪ್ಪದ ಗೆರೆಗಳನ್ನು ಬರೆಯಬಲ್ಲ ಶ್ರೇಣಿಯಲ್ಲಿವೆ. ಕ್ಯಾಲಿಗ್ರಫಿ ಪೆನ್ಗಳು 3 ಬಗೆಯ ಗೆರೆಗಳನ್ನು ಮೂಡಿಸುತ್ತವೆ. ನೆಟ್ಟಗೆ ಹಿಡಿದು ಮೇಲಿಂದ ಕೆಳಗೆ ಎಳೆದರೆ ನಾಮದಂತೆ ತೆಳುವಾದ ಗೆರೆ, ಅಡ್ಡಡ್ಡವಾಗಿ ಬರೆದರೆ ದಪ್ಪಗೆರೆ, 45 ಡಿಗ್ರಿ ಕೋನದಲ್ಲಿ ಹಿಡಿದು ಬರೆದರೆ ಸಮಾಂತರ ಚತುರ್ಭಜದಂತೆ ಗೆರೆ ಮೂಡಿಸುತ್ತವೆೆ. ವೃತ್ತಾಕಾರವಾಗಿ ಬರೆದರೆ ದಿಕ್ಕನ್ನು ಅವಲಂಬಿಸಿ ಕೆಲವು ಭಾಗ ದಪ್ಪವಾಗಿಯೂ ಮತ್ತು ಕೆಲ ಭಾಗ ತೆಳುವಾಗಿಯೂ ಅಲಂಕಾರಿಕವಾಗಿರುತ್ತದೆ.
ಮಾಮೂಲಿ ಪೇಪರಿನ ಮೇಲೆ ಕ್ಯಾಲಿಗ್ರಫಿ ಪೆನ್ನಿನಿಂದ ಬರೆದಾಗ ಇಂಕ್ ಹೀರಲ್ಪಟ್ಟು, ಹರಡಿ ‘ಫೈಬರ್ಗಳು’ ಮೂಡುತ್ತವೆ. ಆದ್ದರಿಂದ ಬಾಂಡ್ ಪೇಪರ್, ಆರ್ಟ್ ಪೇಪರ್, ಗ್ರೇಸ್ಡ್ ಅಥವಾ ಲ್ಯಾಮಿನೇಟೆಡ್ ಬೋರ್ಡ್ಗಳನ್ನು ಬರೆಯಲು ಉಪಯೋಗಿಸಬಹುದು. ಅವುಗಳ ಮೇಲೆ ಬರೆದಾಗ ಇಂಕ್ ಡ್ರೖೆ ಆಗುವವರೆಗೂ ಅದನ್ನು ಬೇರೆ ಯಾವುದಕ್ಕೂ ತಾಗಿಸದಂತೆ ಜೋಪಾನವಾಗಿ ನೋಡಿಕೊಳ್ಳಬೇಕು. ಪೇಪರಿನ ನುಣುಪಾದ ಪಾರ್ಶ್ವದಲ್ಲಿ ಚೆನ್ನಾಗಿ ಮೂಡುವ ಅಕ್ಷರಗಳು ಇನ್ನೊಂದು ಪಾರ್ಶ್ವದಲ್ಲಿ ಕಳಪೆಯಾಗುತ್ತವೆ.
ಆಪಲ್ ಐ-ಫೋನ್ ಕಂಡು ಹಿಡಿದ ಸ್ಟೀವ್ ಜಾಬ್ಸ್ ಒಬ್ಬ ಕಾಲೇಜ್ ಡ್ರಾಪ್ ಔಟ್. ಆದರೆ ಅವರು ಕ್ಯಾಲಿಗ್ರಫಿ ತರಗತಿಗೆ ಹೋಗುತ್ತಿದರಂತೆ. ‘ಅದರಿಂದಲೇ ಹೊಸ ಆಲೋಚನೆಗಳಿಗೆ ಮತ್ತು ಹೊಸ ಸಾಧ್ಯತೆಗಳಿಗೆ ನನ್ನ ಮನಸ್ಸು ತೆರೆದುಕೊಂಡಿತು’ ಎಂದು ಅವರು ಒಂದೆಡೆ ಬರೆದುಕೊಂಡಿದ್ದಾರೆ. ಕ್ಯಾಲಿಗ್ರಫಿಯಿಂದ ಮುದ್ದಾದ ಅಕ್ಷರ ವಿನ್ಯಾಸ ಮಾತ್ರವಲ್ಲ, ಬೇರೇನು ಸಿಗುತ್ತದೆ ಎಂಬುದಕ್ಕೆ ಈ ಹೇಳಿಕೆಗೆ ಸಾಕ್ಷಿ.
ಕ್ಯಾಲಿಗ್ರಫಿಯಲ್ಲಿ ಆಸಕ್ತಿವುಳ್ಳವರು ಪೆನ್ ಹೇಗೆ ಕೆಲಸ ಮಾಡುತ್ತೆ ಎಂಬುದನ್ನು ತಿಳಿದುಕೊಂಡು ಸಣ್ಣಪುಟ್ಟ ರಿಪೇರಿ ಮಾಡಿಕೊಳ್ಳಬೇಕು. ಫೌಂಟನ್ ಪೆನ್ನಾದರೆ ಕೊಳವೆಯಿಂದ ಕಂಠ, ನಾಲಿಗೆ ಮತ್ತು ನಿಬ್ಗಳನ್ನು ಬೇರ್ಪಡಿಸಿ ಸ್ವಚ್ಛ ನೀರಿನಿಂದ ತೊಳೆಯಬೇಕಾಗುತ್ತ್ತೆ. ನಿಬ್ಬಿನ ಸೀಳಿದ ಭಾಗದಲ್ಲಿ ಒಂದು ಬ್ಲೇಡನ್ನು ತೂರಿಸಿ ಸ್ವಚ್ಛಗೊಳಿಸಬೇಕು. ನಾಲಗೆ ಮೇಲೆ ಬೇಕಾದಷ್ಟು ಕೊರೆತಗಳಿರುತ್ತವೆ. ಅಲ್ಲಿ ಕಸ ಕಟ್ಟಿಕೊಂಡು ಇಂಕ್ ಸುಗಮವಾಗಿ ಹರಿಯುವುದಕ್ಕೆ ಅಡ್ಡಿಯಾಗುತ್ತದೆ. ಆ ಭಾಗವನ್ನು ಒಂದು ಪೆನ್ನಿನ ಚೂಪಾದ ಭಾಗದಿಂದ ಕ್ಲೀನ್ ಮಾಡಬೇಕು. ಪೆನ್ನನ್ನು ಉಪಯೋಗಿಸದೆ ಕೆಲ ದಿನ ಬಿಚ್ಚಿಟ್ಟರೆ ಸಮಸ್ಯೆ ಉಂಟಾಗುತ್ತದೆ. ಪೆನ್ನಿನ ಕಂಠದ ಥ್ರೆಡ್ ಇರುವ ಭಾಗಕ್ಕೆ ಸ್ವಲ್ಪ ಗ್ರೀಸ್ ಅಥವಾ ವ್ಯಾಸಲಿನ್ ಸವರಿದರೆ ಲೀಕಾಗುವುದನ್ನ ತಡೆಯಬಹುದು. ಪ್ಯಾರಲೆಲ್ ಪೆನ್ಗಳಿಗಾದರೆ ಅದರ ನಿಬ್ಬನ್ನು ಕ್ಲೀನ್ ಮಾಡಲು ತೆಳುವಾದ ಪ್ಲಾಸ್ಟಿಕ್ ಬ್ಲೇಡನ್ನು ಸೆಟ್ನೊಂದಿಗೇ ಕೊಟ್ಟಿರುತ್ತಾರೆ.