

ಅಮೆರಿಕನ್ ರಾಯಭಾರಿಯ ಮಾತು ಅಂದಿನ ಆಳುಗರ ಗಮನಕ್ಕೆ ಬರಲಿಲ್ಲ ಎನ್ನುವುದನ್ನು ಒಪ್ಪಲಾಗದು. ಆದರೆ ಅವರ ಮೇಲೆ ಅದು ಏನೂ ಪರಿಣಾಮ ಬೀರಿರಲಿಕ್ಕಿಲ್ಲ ಅಷ್ಟೇ. ಭಯೋತ್ಪಾದನೆ, ಭ್ರಷ್ಟಾಚಾರ, ಅನರ್ಹ ಅಸಮರ್ಥ ಅಧಿಕಾರಿಗಳ ಅವಿವೇಕ ವರ್ತನೆಗಳು, ಅಪ್ರಸ್ತುತ ಶೈಕ್ಷಣಿಕ ವ್ಯವಸ್ಥೆ, ಅಬದ್ಧಗಳ ಅಂಬುಧಿಯಾದ ಚರಿತ್ರೆಯ ಪುಸ್ತಕಗಳು, ಪ್ರತಿಭಾ ಪಲಾಯನ, ಪ್ರಜ್ಞಾವಂತ ಪ್ರಬುದ್ಧ ವ್ಯಕ್ತಿಗಳಿಗೆ ಅವಕಾಶಗಳ ವಂಚನೆ, ತಮ್ಮ ಜಾತಿಯವರೇ ರಾಜಕೀಯ ನಾಯಕರು ಎಂಬುದನ್ನು ಹೊರತುಪಡಿಸಿ ಇನ್ನಾವ ಯೋಗ್ಯತೆಯೂ ಇಲ್ಲದವರಿಗೆ ಜಾತ್ಯತೀತ ಭಾರತದಲ್ಲಿ ವಿಪುಲವಾದ ಅವಕಾಶ ಎನ್ನುವ ಆತ್ಮಹತ್ಯಾಕಾರಕ ಪರಿಸ್ಥಿತಿ ಇದಾವುದೂ ಆಡಳಿತಯಂತ್ರದ ಗಮನಕ್ಕೆ ಬರುವುದಿಲ್ಲ ಎಂದರೆ ಅದು ಕ್ರಿಯಾಶೀಲ ಅರಾಜಕತೆಯಲ್ಲದೆ ಮತ್ತೇನು? ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ; ಜಾತ್ಯತೀತತೆ. ಸ್ವಾತಂತ್ರ್ಯಕ್ಕಿಂತ ಮುಂಚೆ ರಾಜಪ್ರಭುತ್ವವನ್ನು ಒಪ್ಪಿಕೊಂಡಿದ್ದೆವು. ಅಲ್ಲಿ ಪ್ರಾಮಾಣಿಕತೆ ಇತ್ತು. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗುಜರಾತ್ನಿಂದ ಅಸ್ಸಾಂವರೆಗೆ ಪ್ರತಿಯೊಂದು ರಾಜ್ಯದಲ್ಲಿಯೂ ಒಂದೋ ಎರಡೋ ಕುಟುಂಬಗಳೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತವೆ. ಅವರ ನಂತರ ಅವರ ಮಕ್ಕಳು, ಮೊಮ್ಮಕ್ಕಳು. ಈ ಸಂಸ್ಕೃತಿಯೇ ಮುಂದುವರಿದಿದೆ. ಹಿಂದಿನ ರಾಜಕುಟುಂಬಗಳ ಮೇಲೆ ಯಾವ್ಯಾವ ದೋಷಾರೋಪಗಳಿದ್ದವೋ ಅವೆಲ್ಲಾ ಮತ್ತು ಅವಕ್ಕಿಂತ ಹೆಚ್ಚಾಗಿ ಇಂದಿನ ನಾಯಕರು ಮತ್ತು ಅಧಿಕಾರಿಗಳ ಮೇಲೆ ಇದೆ. ಅಂದು ಒಂದು ಕುಟುಂಬದ ಅವಘಡಗಳನ್ನು ಸಹಿಸಿಕೊಳ್ಳಬೇಕಾದ ಸಂದರ್ಭ ಇದ್ದರೆ ಇಂದು ಪ್ರತಿರಾಜ್ಯದಲ್ಲಿಯೂ ಹತ್ತಾರು, ನೂರಾರು ಕುಟುಂಬಗಳ ಅವಘಡಗಳನ್ನು ನೋಡಿಕೊಂಡು ಮೌನವಾಗಿ ಕೂರುವ ಪರಿಸ್ಥಿತಿ ಇದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳೇ ಆರಿಸುವ ವಿಧಾನ ಪ್ರಜಾಪ್ರಭುತ್ವ ಎನ್ನುವುದು Theory ಮಾತ್ರ. ಇದನ್ನು ಇಂಗ್ಲಿಷಿನಲ್ಲಿ ಬಹಳ ಚೆನ್ನಾಗಿ ಹೇಳುತ್ತಾರೆ. By the People, for the people, of the people ಎನ್ನುವುದು By the People, for the people, of the people ಆಗಿ ಪರಿವರ್ತನೆಯಾಗಿದೆ. ಅಷ್ಟೇ ಅಲ್ಲದೆ ಪರ್ಯಾಯ ವ್ಯಕ್ತಿ, ವ್ಯವಸ್ಥೆ ಬೆಳೆಯದಂತೆ ನೋಡಿಕೊಳ್ಳುವುದಕ್ಕೆ ಇವರ ಹತ್ತಿರ ಒಂದು ವಿಭಾಗ (Department)ವೇ ಇರುತ್ತದೆ. ಭಾರತವೇನಾದರೂ ನಿಜವಾಗಿಯೂ ಜಾತ್ಯತೀತವಾಗಿಬಿಟ್ಟರೆ ಶೇ. 90ರಷ್ಟು ರಾಜಕಾರಣಿಗಳು ಬೀದಿಗೆ ಬರುತ್ತಾರೆ. ಜಾತ್ಯತೀತ ಅನುಕೂಲಕರವಾದ ಸಂದರ್ಭದಲ್ಲಿ ಮಾತ್ರ. ಕುರ್ಚಿಗೆ ಧಕ್ಕೆ ಬರುವ ಸಂದರ್ಭಗಳಲ್ಲಿ ಇವರು ಹೂಡುವ ಅಸ್ತ್ರವೇ ಜಾತಿ. ಅದಕ್ಕೆ ಅವರು ಬಳಸಿಕೊಳ್ಳುವುದು ಜಾತಿಯ ಮಠಗಳನ್ನು. ಮಠಗಳಿಗೂ ರಾಜಕೀಯಕ್ಕೂ ಅವ್ಯಕ್ತ ಆತ್ಮೀಯತೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾವು ಜಾತಿಗಳ ದೇಶ ಎಂದು ಒಪ್ಪಿಕೊಂಡಿದ್ದೆವು. ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಈ ಜಾತಿ ಭಾವನೆಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಸುಧಾರಣೆಯಂತೂ ಮೊದಲೇ ಇಲ್ಲ. ಆದರೆ ಅಪ್ರಾಮಾಣಿಕರೂ, ಮೋಸಗಾರರೂ ಆಗಿದ್ದೇವೆ. ಜಾತ್ಯತೀತ ರಾಷ್ಟ್ರ ಎಂದು ಬೊಬ್ಬೆ ಹೊಡೆದದ್ದೇ ಬಂತು. ಸರ್ಕಾರದ ಪ್ರತಿ ಸವಲತ್ತು ನಿಂತಿರುವುದು ಜಾತಿಯ ಆಧಾರದ ಮೇಲೆ; ಚುನಾವಣೆಯಲ್ಲಂತೂ ಟಿಕೆಟ್ ನೀಡುವುದರಿಂದ ಹಿಡಿದು ಮಂತ್ರಿ ಪದವಿಯವರೆಗೆ ಕೇವಲ ಅದೇ ಮಾನದಂಡ. ಈ ಎಲ್ಲಾ ದೋಷಗಳನ್ನು ಮುಚ್ಚಿಕೊಳ್ಳುವುದಕ್ಕೆ ಬಳಸುವ ಗುಮ್ಮ ಮಾತ್ರ ಮನುವಾದ. ಇಂದು ನಮ್ಮ ಸಮಾಜ ಜಾಗೃತವಾಗಿದೆ ಎನ್ನುವುದು ಕೆಲವರ ಅಂಬೋಣ. ಜಾಗೃತ ಎಂದರೆ ಇದೇ. ಹೇಗಾದರೂ ಮಾಡಿ ಅಧಿಕಾರಗಳನ್ನು ಜಾತಿಯ ತನ್ಮೂಲಕ ಕುಟುಂಬದ ಕೈಗಳಲ್ಲಿಯೇ ಉಳಿಯುವಂತೆ ನೋಡಿಕೊಳ್ಳುವುದು. ಇದು ಡೆಮಾಕ್ರಸಿ ಅಲ್ಲ ಹಿಪೋಕ್ರಸಿ.
ಈ ಆಷಾಢಭೂತಿತನ ಅಥವಾ ಸೋಗಲಾಡಿತನದ ನೇರ ಫಲಿತಾಂಶವೇ ಎಲ್ಲ ಸರ್ಕಾರಿ ವಲಯಗಳಲ್ಲಿ ಗುಣಾತ್ಮಕತೆ ಎನ್ನುವುದು ಸ್ಮಶಾನರೋದನವಾಗಿರುವುದು. ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ, ಸರ್ಕಾರ ಕೈಯಿಟ್ಟ ಎಲ್ಲೆಲ್ಲೂ ಎದ್ದು ಕಾಣುವುದು ಕಳಪೆತನ, ನಷ್ಟ, ಗುಣಾತ್ಮಕತೆಯ ಸಂಪೂರ್ಣ ರಾಹಿತ್ಯ. ಸವಾಲುಗಳನ್ನು ಎದುರಿಸುವ, ಗುಣಮಟ್ಟ ಕಾಯ್ದುಕೊಳ್ಳುವ, ಹತ್ತು ಕಷ್ಟಗಳನ್ನು ಹೇಳಿಕೊಂಡು ತಮ್ಮ ಹತ್ತಿರ ಬರುವ ಜನರಿಗೆ ಸಹಾಯಮಾಡಬೇಕೆಂಬ ಕನಿಷ್ಠ ಮಾನವೀಯ ತುಡಿತ ಇಲ್ಲದಿರುವುದು. ಒಂದು ಮಾತಿನಲ್ಲಿ ಹೇಳಬೇಕೆಂದರೆ ಅತ್ಯಂತ ಬೇಜವಾಬ್ದಾರಿ ಪ್ರವೃತ್ತಿ ಇಂದು ತಾಂಡವವಾಡುತ್ತಿರುವುದಕ್ಕೆ ಕಾರಣ ಆಡಳಿತಯಂತ್ರದ ಮೇಲ್ಪದರಗಳಲ್ಲಿ ಮೇಲಿನ ಅವಗುಣಗಳು ತುಂಬಿ ತುಳಕಾಡುತ್ತಿರುವುದು. ಇದಕ್ಕೆಲ್ಲ ಕಾರಣ Right people in the right place ತತ್ವದ ಬದಲು Right people in the right place ಆಗಿ ಪರಿವರ್ತನೆಯಾಗಿರುವುದು. ಜಿಲ್ಲಾಧಿಕಾರಿಯೂಬ್ಬರು ಕೆಲವರ್ಷಗಳ ಹಿಂದೆ ಎಸ್ಎಸ್ಎಲ್ಸಿಯಲ್ಲಿ ಕಾಪಿ ನಡೆಯದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಕೈಗೊಂಡಿದ್ದರು. ಅಲ್ಲಿಯವರೆಗೆ ಶೇಕಡ ಎಂಬತ್ತು, ತೊಂಬತ್ತು ಫಲಿತಾಂಶಗಳನ್ನು ಪಡೆಯುತ್ತಿದ್ದ ಶಾಲೆಗಳೆಲ್ಲಾ ಆ ವರ್ಷ ಶೂನ್ಯಕ್ಕೆ ತೃಪ್ತಿಗೊಳ್ಳಬೇಕಾಯ್ತು. ಅನೇಕ ಜೂನಿಯರ್ ಕಾಲೇಜುಗಳಿಗೆ ಬೀಗ ಹಾಕಬೇಕಾದ ಸಂದರ್ಭ. ಆಗ ಶಿಕ್ಷಕರೆಲ್ಲಾ ಸೇರಿ ಇದಕ್ಕೆ ಕಂಡುಕೊಂಡ ಉಪಾಯವೆಂದರೆ ಶಿಕ್ಷಕರ ಕ್ಷೇತ್ರದಿಂದ ಆರಿಸಲ್ಪಟ್ಟಿದ್ದ ಎಂಎಲ್ಸಿ ಮೂಲಕ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಿಸಿದ್ದು.
ಮಕ್ಕಳು ತೇರ್ಗಡೆಯಾಗುತ್ತಿಲ್ಲ ಅನುತ್ತೀರ್ಣರಾಗುತ್ತಿದ್ದಾರೆ ಎಂತಿಟ್ಟುಕೊಳ್ಳಿ. ಪರಿಹಾರ? ಪರೀಕ್ಷೆಗಳನ್ನೇ ರದ್ದುಪಡಿಸಿದರಾಯ್ತು. ಮಹಾಪ್ರಾಣಗಳನ್ನು ಉಚ್ಚರಿಸಲಾಗುತ್ತಿಲ್ಲ, ಮಹಾಪ್ರಾಣಗಳನ್ನೇ ತೆಗೆದುಬಿಟ್ಟರಾಯಿತು! ಶತ್ರು ರಾಷ್ಟ್ರ ಯುದ್ಧಕ್ಕೆ ಬರುತ್ತಿದೆ. ದೇಶವನ್ನೇ ಅವರಿಗೆ ಒಪ್ಪಿಸಿದರಾಯ್ತು!! ಹೀಗೆನ್ನುವ ದಿಗ್ಧಂತಿಗಳನ್ನು ನಾವು ಇತ್ತೀಚೆಗೆ ನೋಡುತ್ತಿದ್ದೇವಲ್ಲ? ಅವೆಲ್ಲ ಈ ವ್ಯವಸ್ಥೆಯಿಂದ ಉದ್ಭವಿಸಿದ ಅದ್ಭುತ ಫಲಗಳೇ.
ಇದಕ್ಕೆ ಪರಿಹಾರವೇ ಇಲ್ಲವೇ? ‘ಶಿಸ್ತು ಇಲ್ಲವೇ ಪಶ್ಚಾತ್ತಾಪ ಎನ್ನುವ ಎರಡು ನೋವುಗಳ ನಡುವೆ ಒಂದನ್ನು ನೀವು ಆರಿಸಿಕೊಳ್ಳಲೇಬೇಕಾಗುತ್ತದೆ’ ಎಂಬ ಆಂಗ್ಲ ನಾಣ್ಣುಡಿಯೇ ಪರಿಹಾರ. 75 ವರ್ಷ ಪಶ್ಚಾತ್ತಾಪದ ನೋವು ಅನುಭವಿಸಿದ್ದಾಯ್ತು. ಇನ್ನಾದರೂ ’‘ಶಿಸ್ತು’ ಎನ್ನುವ ನೋವನ್ನು ಆರಿಸಿಕೊಳ್ಳೋಣ.
ಎಲ್ಲಿಯೇ ಆಗಲಿ ಅಧಿಕಾರದ ಆಸೆಯಿದ್ದು ಅಥವಾ ಯಾವುದೇ ಆಸೆಯಿದ್ದು ಅರ್ಹತೆ ಇಲ್ಲದಿದ್ದಲ್ಲಿ ವ್ಯಕ್ತಿ ಅನ್ಯಾಯಕ್ಕೆ ಎಳಸುವುದು ಅನಿವಾರ್ಯ. ಈ ಅನ್ಯಾಯದ ಮಾರ್ಗ ಸಫಲವಾಗಬೇಕಾದರೆ ಅಲ್ಲಿ ಮತ್ತೊಮ್ಮೆ ಅನಿವಾರ್ಯವಾಗುವುದು ಆಮಿಷಗಳನ್ನೊಡ್ಡುವುದು. ಅದಕ್ಕಾಗಿ ಹಣದ ರಾಶಿಯನ್ನೇ ಸಂಗ್ರಹಿಸಬೇಕಾದ ಪರಿಸ್ಥಿತಿ. ಕರ್ನಾಟಕದ ಕೆಲ ರಾಜಕಾರಣಿಗಳು ಇಲ್ಲಿ ಅದ್ಭುತವಾದ case study ಆಗಬಲ್ಲರು.
ಒಂದು ಓಟಿನ ಬೆಲೆ ಎಷ್ಟು? ಯೋಗ್ಯ ವ್ಯಕ್ತಿ ಚುನಾವಣೆಯಲ್ಲಿ ಆರಿಸಲ್ಪಟ್ಟಾಗ ಎಂತೆಂಥ ಕ್ರಾಂತಿಕಾರಿ ಬದಲಾವಣೆಗಳು ಸಾಧಿಸಲ್ಪಟ್ಟಿವೆ ಮತ್ತು ಅನರ್ಹವ್ಯಕ್ತಿ ಆರಿಸಲ್ಪಟ್ಟಾಗ ಎಂತೆಂಥ ಅವ್ಯವಸ್ಥೆಗಳು ತಲೆದೋರಿದೆ ಎಂಬ ‘ಪ್ರಜ್ಞೆ’ ಯಾರಿಗೆ ಇಲ್ಲವೋ ಅವನು ‘ಪ್ರಜೆ’ಯೇ ಅಲ್ಲ. ಪ್ರಜ್ಞಾವಂತಿಕೆಯೇ ‘ಪ್ರಜೆ’ ಪದದ ಅರ್ಥ. ಇಡೀ ಪ್ರಜಾತಂತ್ರದ ಮೂಲ ಆಕರ ಗ್ರಂಥ ಎಂದು ಪರಿಗಣಿಸಲ್ಪಟ್ಟಿರುವ ಪ್ಲೇಟೋನ ‘ದಿ ರಿಪಬ್ಲಿಕ್’ ಕೃತಿಯಲ್ಲಿ ಆತ ಪ್ರಜೆ ಎಂದರೆ ಈ ಅರ್ಥವನ್ನೇ ಕೊಟ್ಟಿರುವುದು. ಯೂರೋಪ್, ಅಮೆರಿಕಾಗಳು ವಯೋ ಆಧಾರವನ್ನು ಇಟ್ಟುಕೊಂಡಿರುವುದರಿಂದ ಬಹಳಷ್ಟು ವಿಷಯಗಳಲ್ಲಿ ಕಣ್ಣು ಮುಚ್ಚಿ ಅವರನ್ನೇ ಅನುಸರಿಸಿದಂಥ ನಾವೂ ಹಾಗೆಯೇ ಮಾಡಿಕೊಂಡಿದ್ದೇವೆ, ಯಾರು ‘ಪ್ರಜೆ’ಯೋ ಅವನೇ ಮತ ಹಾಕುವಂತಿರಬೇಕು. ಇಲ್ಲದಿದ್ದಲ್ಲಿ ಇದಕ್ಕೆ ಇನ್ನೊಂದು ಪರ್ಯಾಯವೇ ಕೆಳಗೆ ನಾನು ವಿವರಿಸಿರುವುದು.
ಧರ್ಮ, ಜಾತಿ, ರಾಜಕೀಯಗಳ ನಡುವಿನ ಸಂಬಂಧ, ಇವುಗಳ ಸಾಂರ್ದಭಿಕ ಪ್ರಸ್ತುತತೆ ಮತ್ತು ಇತಿಮಿತಿಗಳ ಸ್ಪಷ್ಟ ಚಿತ್ರ ಭಾರತೀಯ ಪ್ರಜೆಗೆ ಇಲ್ಲದಿರುವುದು, ನಾಯಕರಿಗೂ ಇಲ್ಲದಿರುವುದು ಸಮಕಾಲೀನ ಬಹಳಷ್ಟು ದುರಂತಗಳಿಗೆ ಕಾರಣ. ರಾಜಕೀಯ ಪಕ್ಷಗಳು ಸಿಕ್ಕಿದವರಿಗೆ ಸದಸ್ಯತ್ವ ಕೊಡುವುದನ್ನು ನಿಲ್ಲಿಸಬೇಕು. ಚುನಾವಣೆಗೆ ನಿಲ್ಲುವುದಕ್ಕೆ ಅರ್ಹತಾ ಮಾನದಂಡ ನಿಗದಿಪಡಿಸಬೇಕು. ಕಚೇರಿಯೊಂದರಲ್ಲಿ ಗುಮಾಸ್ತನಾಗಲು ಮಾನದಂಡ ಬೇಕು. ಹಾಗಿದ್ದಾಗ ಇಡೀ ವ್ಯವಸ್ಥೆಯ ನೀತಿ ನಿರ್ವಪಕರಿಗೆ ಎಷ್ಟು ಇರಬೇಡ. ಐಐಎಂ, ಐಐಟಿಗಳ ಮಾದರಿಯಲ್ಲಿ ರಾಜ್ಯಗಳ ರಾಜಧಾನಿಗಳಲ್ಲಿ ತರಬೇತಿ ಕಾಲೇಜು ಸ್ಥಾಪಿಸಿ ಇಲ್ಲಿ ಅರ್ಹತಾ ಪತ್ರವನ್ನು ಸಂಪಾದಿಸಿದವರಿಗೆ ಮಾತ್ರವೇ ಯಾವುದೇ ಪಕ್ಷದ ಉಮೇದುವಾರಿಕೆಯನ್ನು ಕೊಡಬೇಕು. ಅರ್ಹತಾ ಪತ್ರ ಪಡೆದವರು ತಾವು ಇಚ್ಛಿಸಿದ ರಾಜಕೀಯ ಪಕ್ಷವನ್ನು ಸೇರಿಕೊಳ್ಳಲಿ. ಯಾವ ಪಕ್ಷಕ್ಕೆ ಸೇರಿದರೂ ಅವನಲ್ಲಿ ಪರಿಪೂರ್ಣ ವ್ಯಕ್ತಿತ್ವವಿರುತ್ತದೆಯಾದ್ದರಿಂದ ನಷ್ಟವೇನು ಇಲ್ಲ. ಅಲ್ಲಿ ತರಬೇತಿಯ ಲಕ್ಷಣವೇ ಹಾಗಿರುತ್ತದೆ. ಮೊಟ್ಟ ಮೊದಲು ಆತ ಧರ್ಮ, ಜಾತಿ, ಭಾಷೆ, ಊರು ಕೇರಿಗಳ ಬಾಂಧವ್ಯಗಳನ್ನು ಸಂಪೂರ್ಣ ವೈಯಕ್ತಿಕ ಮಟ್ಟಕ್ಕೆ ಇಳಿಸಿ ತಾನೊಬ್ಬ ಕೇವಲ ಭಾರತೀಯ ಎನ್ನುವುದನ್ನು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳಬೇಕು. ಧರ್ಮವೊಂದರಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳಿರುತ್ತವೆ. ನೈತಿಕ ಆಯಾಮವನ್ನು ಸಾರ್ವತ್ರೀಕರಣಗೊಳಿಸಿ (ಆಧ್ಯಾತ್ಮಿಕ) ಆಯಾಮವನ್ನು ಸಂಪೂರ್ಣವಾಗಿ ವೈಯಕ್ತಿಕ ಮಟ್ಟಕ್ಕೆ ಸನಾತನ ಸಂಸ್ಕೃತಿ ಯುಗಗಳಷ್ಟು ಹಿಂದೆಯೇ ಸೀಮಿತಗೊಳಿಸಿದೆ. ಇಂಥ ಅದ್ಭುತ ವ್ಯವಸ್ಥೆಯನ್ನು ನಮ್ಮ ಕಾಮಾಲೆ ಕಣ್ಣುಗಳು ಕಾಣಲೇ ಇಲ್ಲ. ಅವರಿಗೆ ಕಂಡಿದ್ದು ‘ಮನುವಾದ’ ಮಾತ್ರ! ಉದ್ದೇಶಗಳಲ್ಲಿ ಸ್ಪಷ್ಟತೆ, ಕರ್ತವ್ಯ ಬದ್ಧತೆ, ನಾಯಕತ್ವ, ನಿಷ್ಪಕ್ಷಪಾತತನ, ರಾಷ್ಟ್ರಪ್ರೇಮ, ದೀನದಲಿತರಲ್ಲಿ ಅಸಹಾಯಕರಲ್ಲಿ ಕಾಳಜಿ ಇತ್ಯಾದಿ ಲಕ್ಷಣಗಳುಳ್ಳ ಮತ್ತು ಅದರಲ್ಲಿ ತರಬೇತಿಗೊಳಗಾದ ಯುವಕರು ಯಾವ ಪಕ್ಷದಿಂದ ಆರಿಸಿ ಬಂದರೂ ರಾಷ್ಟ್ರದ ಭವಿಷ್ಯ ಸುಭದ್ರ. ಯಾವ ಯೋಗ್ಯತೆಯೂ, ಜ್ಞಾನವೂ ಇಲ್ಲದ ತಂದೆಯೋ, ತಾತನೋ ಮಾಡಿರುವ ಹೆಸರಿನ ನೆರಳಲ್ಲಿ ಕೇವಲ ಧೂಳೆಬ್ಬಿಸುತ್ತಿರುವ ವ್ಯಕ್ತಿಗಳ ಕೈಯಲ್ಲಿ ನಲುಗುತ್ತಿರುವ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಸಫಲಗೊಳ್ಳಬೇಕಾದರೆ ಆಮೂಲಾಗ್ರ ಸುಧಾರಣೆ ಅತ್ಯಾವಶ್ಯಕ. he Price of apathy towards public affairs is to be ruled by evil menಎಂಬ ಪ್ಲೇಟೋನ ಉಕ್ತಿಯನ್ನು ಮರೆಯಬಾರದು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)