ಕರೊನಾ ಕಾಲದಲ್ಲೊಂದಿಷ್ಟು ಕಥಾ ಕಾಲಕ್ಷೇಪ

Water in desert
Published on
| ಪ್ರೊ. ನಾಗರಾಜ ಶೆಣೈ, ಬೆಂಗಳೂರು

ದಶದಿಕ್ಕುಗಳಿಂದಲೂ ಬರೀ ನಿರಾಶೆಯ, ದುಗುಡದ, ನೋವಿನ, ಸಾವಿನ ಸುದ್ದಿಗಳೇ ಕೇಳಿ ಬರುತ್ತಿರುವ ಈ ಕಾಲದಲ್ಲಿ, ಇಂಥ ಎಲ್ಲ ಸಮಸ್ಯೆಗಳು ಎದುರಾದಾಗ, ನಮ್ಮ ಮನದ ತಳಮಳವನ್ನು ತಗ್ಗಿಸುವ, ಸಂಕಲ್ಪದ ದೃಢತೆಯನ್ನು ಹೆಚ್ಚಿಸಿಕೊಳ್ಳುವ, ನಮ್ಮ ಪುರಾತನರ ವಿಧಾನವಾದ ಕಥಾ ಕಾಲಕ್ಷೇಪವನ್ನು ಕೈಗೆತ್ತಿಕೊಂಡರೆ ಹೇಗೆ? ಬನ್ನಿ, ಅಂಥದೊಂದು ಪ್ರಕರಣವನ್ನು ಚರ್ಚಿಸೋಣ.

ಒಮ್ಮೆ ಒಬ್ಬ ಮನುಷ್ಯ ಮರುಭೂಮಿಯಲ್ಲಿ ದಾರಿ ತಪ್ಪಿ ಕಳೆದುಹೋದನು. ಅವನ ಫ್ಲಾಸ್ಕನಲ್ಲಿನ ನೀರು ಎರಡು ದಿನಗಳ ಹಿಂದೆಯೇ ಮುಗಿದಿತ್ತು, ಮತ್ತು ಅವನ ಮೈಯಲ್ಲಿಯ ಎಲ್ಲ ಅಂಗಾಂಗಗಳು ಶಕ್ತಿಹೀನವಾಗಿದ್ದವು. ಸ್ವಲ್ಪವೂ ನೀರು ಸಿಗದಿದ್ದರೆ ತಾನು ಸಾಯುವದು ಖಚಿತ ಎಂದು ಅವನಿಗೆ ತಿಳಿದಿತ್ತು. ಅಂಥ ಸಮಯದಲ್ಲಿ ಆ ವ್ಯಕ್ತಿಗೆ ಅವನ ಮುಂದೆ ಒಂದು ಸಣ್ಣ ಗುಡಿಸಲು ಕಾಣಿಸುತ್ತದೆ. ಇದು ನಿಜವೇ, ಅಥವಾ ಮರುಭೂಮಿಯ ಮರೀಚಿಕೆಯಾಗಿರಬಹುದು ಅಥವಾ ತನ್ನ ಭ್ರಮೆಯಾಗಿರಬಹುದು ಎಂದು ಅವನು ಭಾವಿಸಿದ. ಆದರೆ ಬೇರೆ ದಾರಿಯಿಲ್ಲದ ಕಾರಣ ಅವನು ಅದರ ಕಡೆಗೆ ತನ್ನ ಕಾಲೆಳೆದುಕೊಂಡು ಹೋಗುತ್ತಾನೆ. ಅದು ಹತ್ತಿರವಾಗುತ್ತಿದ್ದಂತೆ, ಅದು ನಿಜವಾದ ಗುಡಿಸಲು ಅಂತ ಗೊತ್ತಾಗುತ್ತದೆ.

ಅಲ್ಲಿ ಪ್ರವೇಶಿಸಿದಾಗ, ಆ ಗುಡಿಸಲಿನಲ್ಲಿ ಯಾರೂ ಇದ್ದ ಹಾಗೆ ಕಾಣುವದಿಲ್ಲ. ಮತ್ತು ಸ್ವಲ್ಪ ಸಮಯದಿಂದ ಅಲ್ಲಿ ಯಾರೂ ವಾಸವಾಗಿಯೂ ಇಲ್ಲ ಎನಿಸುವಂಥ ಕುರುಹುಗಳು ಅವನ ಗಮನಕ್ಕೆ ಬರುತ್ತದೆ. ಆದರೇನಂತೆ? ಒಳಗೇನಾದರೂ ನೀರು ಸಿಗಬಹುದೆಂಬ ಭರವಸೆಯನ್ನಿಟ್ಟುಕೊಂಡು ಅದರೊಳಗೆ ಪ್ರವೇಶಿಸಿ ಅತ್ತಿತ್ತ ಹುಡುಕಾಡುತ್ತಾನೆ. ಹಾಗೆ ನೋಡುವಾಗ ಎದುರಿಗೆ ಕಂಡದ್ದು ಅವನ ಕಣ್ಣಲ್ಲಿ ಭರವಸೆಯ ಮಿಂಚು ಹೊಳೆಸುತ್ತದೆ. ಅದು - ನೀರಿನ ಕೈ ಪಂಪ್. ಅದರಲ್ಲಿ ನೆಲದ ಮೂಲಕ ಒಂದು ಪೈಪ್ ಕೆಳಗಿಳಿದಿತ್ತು, ಬಹುಶಃ ಭೂಮಿಯಾಳದಲ್ಲಿಯ ಮೂಲದಿಂದ ನೀರು ಸೆಳೆಯುವದಕ್ಕಾಗಿ. ಅವನು ಕೈ ಪಂಪ್ ಹಿಡಿಕೆಯನ್ನು ಬಿರುಸಾಗಿ ಮೇಲಕ್ಕೆ ಕೆಳಕ್ಕೆ ಚಲಿಸಲಾರಂಭಿಸಿದ. ಆದರೆ ನೀರು ಹೊರಬರಲಿಲ್ಲ. ಅದನ್ನು ಇನ್ನಷ್ಟು ಜೋರಾಗಿ, ಮತ್ತಷ್ಟು ಜೋರಾಗಿ ಮಾಡಿದ. ನೀರು ಮಾತ್ರ ಹೊರ ಬರಲಿಲ್ಲ. ಅಂತಿಮವಾಗಿ ಅವನು ಬಳಲಿಕೆ ಮತ್ತು ಹತಾಶೆಯಿಂದ ಹೊರಬಂದ. ಅಲ್ಲೇ ಕೈ ಚೆಲ್ಲಿ ತನ್ನ ಸಾವು ನಿಶ್ಚಿತ ಎಂದುಕೊಂಡು ಕುಸಿದು ಕೂತ.

ಆಗ ಆ ವ್ಯಕ್ತಿಗೆ ಗುಡಿಸಲಿನ ಮೂಲೆಯಲ್ಲಿ ಒಂದು ಬಾಟಲಿ ಕಾಣಿಸುತ್ತದೆ. ಅದು ನೀರಿನಿಂದ ತುಂಬಿರುತ್ತದೆ. ಮತ್ತು ಆವಿಯಾಗುವುದನ್ನು ತಡೆಯಲು ಕಾರ್ಕ್ ನ ಬಿರಡೆಯಿಂದ ಭದ್ರವಾಗಿ ಮುಚ್ಚಿರುತ್ತದೆ. ತಕ್ಷಣವೇ ಅವನು ಬಾಟಲಿಯನ್ನು ಬಿಚ್ಚಿ ನೋಡುತ್ತಾನೆ. ಶುದ್ಧ ಜೀವ ಜಲ, ಪ್ರಾಣರಕ್ಷಕ ಸಿಹಿನೀರು! ಹರ್ಷಾತಿರೇಕದಿಂದ ಕೂಡಲೇ ಎತ್ತಿ ಬಾಯಿಗೆ ಸುರಿದುಕೊಳ್ಳಲು ಅಣಿಯಾಗುವಷ್ಟರಲ್ಲಿ ಆ ಬಾಟಲಿಗೆ ಒಂದು ಕಾಗದದ ತುಂಡು ಅಂಟಿಕೊಂಡಿರುವುದನ್ನು ಗಮನಿಸಿದ. ಕಾಗದದ ಮೇಲೆ ಕೈಬರಹದಿಂದ ಹೀಗೆ ಬರೆಯಲಾಗಿತ್ತು: "ಪಂಪ್ ಪ್ರಾರಂಭಿಸಲು ಈ ನೀರನ್ನು ಬಳಸಿ. ನಿಮ್ಮ ಕೆಲಸ ಮುಗಿದ ನಂತರ ಬಾಟಲಿಯನ್ನು ಮತ್ತೆ ತುಂಬಲು ಮರೆಯಬೇಡಿ." {ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು Priming of the Pump ಅನ್ನುತ್ತಾರೆ.}

ಅವನಿಗೆ ಈಗ ಮಹಾ ಸಂದಿಗ್ಧತೆ ಕಾಡತೊಡಗಿತು. ಬಾಟಲಿ ಮೇಲಿನ ಸೂಚನೆಯನ್ನು ಅನುಸರಿಸಿ ನೀರನ್ನು ಮತ್ತೆ ಪಂಪ್‌ಗೆ ಸುರಿಯುವದೋ, ಅಥವಾ ಅದನ್ನು ನಿರ್ಲಕ್ಷಿಸಿ ನೀರನ್ನು ಕುಡಿಯುವದೋ, ಏನು ಮಾಡೋದು? ಅವನು ನೀರನ್ನು ಕುಡಿದುಬಿಟ್ಟರೆ ಮುಂದಿನ ಕೆಲವು ಗಂಟೆಗಳ ಕಾಲ ಅವನು ತನ್ನ ಜೀವ ಹಿಡಿದಿಟ್ಟುಕೊಳ್ಳಬಹುದು. ಆದರೆ ಅದರ ನಂತರ ... ಮುಂದೆ ಏನು? ಏನೂ ಗೊತ್ತಿಲ್ಲ.

ಅವನು ನೀರನ್ನು ಪಂಪ್‌ಗೆ ಸುರಿದು ಬಿಟ್ಟರೆ, ಅದು ಕೆಲಸ ಮಾಡುತ್ತದೆ ಅಂತ ಯಾವ ಭರವಸೆ ಇದೆ?... ಪಂಪ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ?... ಪೈಪ್`ನಲ್ಲಿಯೇ ಸೋರಿಕೆಯಾಗಿ ಹೋದ್ರೆ?... ಭೂಮಿಯಲ್ಲಿಯ ಜಲಸಂಚಯ ದೀರ್ಘಕಾಲದಿಂದ ಒಣಗಿ ಹೋಗಿದ್ದರೆ?

ಆದರೆ, ಬಹುಶಃ ಸೂಚನೆಯು ಸರಿಯಾಗಿದ್ದು ನೀರು ಹೊರಬಂದರೆ ಎಲ್ಲ ಸಮಸ್ಯೆಗೆ ದೀರ್ಘಕಾಲದ ಪರಿಹಾರ, ಮರುಭೂಮಿ ದಾಟಿ ಹೋಗುವಷ್ಟು ಕಾಲ ಬಾಯಾರಿಕೆ ತಡೆದುಕೊಳ್ಳಬಹುದು. ಆದರೆ ಸೂಚನೆ ಸುಳ್ಳು ಎಂದಾದರೆ, ಸಿಕ್ಕ ಕಟ್ಟಕಡೆಯ ಬದುಕುವ ಅವಕಾಶವನ್ನು ಕೈಯಾರೆ ಹಾಳುಮಾಡಿಕೊಂಡಂತೆ...

ಕಡೆಗೂ ಮನಸ್ಸನ್ನು ದೃಢಗೊಳಿಸಿ ನಡುಗುವ ಕೈಗಳಿಂದ ಅವನು ನೀರನ್ನು ಪಂಪ್‌ಗೆ ಸುರಿದ. ನಂತರ ಕಣ್ಣು ಮುಚ್ಚಿ ದೇವರಲ್ಲಿ ಪ್ರಾರ್ಥಿಸಿ ಪಂಪ್`ನ ಹಿಡಿಕೆಯನ್ನು ಆಕಾಶದತ್ತ ನೋಡುತ್ತಾ ಮೇಲೆ ಕೆಳಗೆ ಚಲಿಸತೊಡಗಿದ.

ಆಗ ನಿಧಾನವಾಗಿ ಅವನಿಗೆ ಗುಡು ಗುಡು ಗುಡು ಎಂಬ ಶಬ್ದ ಕೇಳಿ ಬರತೊಡಗಿತು. ಅದರ ಬೆನ್ನಿಗೆ ಒಂದಿಷ್ಟು ನೀರೂ ಹೊರಬಂದಿತು. ಆ ನೀರನ್ನೊಂದಿಷ್ಟು ಬಾಯಿಗೆ ಸುರಿದುಕೊಂಡು ಆತ ಉತ್ಸಾಹದಿಂದ ಪಂಪ್ ಮಾಡಲಾರಂಭಿಸಿದ. ನೀರು ಮತ್ತಿಷ್ಟು ರಭಸದಿಂದ ಹೊರಬರಲಾರಂಭಿಸಿತು. ತದನಂತರ ಅವನಿಗೆ ಬೇಕಾದಷ್ಟು, ಅದಕ್ಕಿಂತ ಹೆಚ್ಚು, ಇನ್ನಷ್ಟು ನೀರು ಹೊರಬಂದಿತು. ಆತ ತಂಪಾದ ಮತ್ತು ಉಲ್ಲಾಸಕರ ನೀರಿನ ಹರ್ಷದ ಹೊಳೆಯಲ್ಲಿ ಮಿಂದೆದ್ದ. ತಾನೀಗ ಬದುಕುವದು ನಿಶ್ಚಿತ ಅಂತ ಸಂಭ್ರಮಿಸಿದ!

ಹೊಟ್ಟೆ ತುಂಬುವಷ್ಟು ನೀರು ಕುಡಿದ ನಂತರ ಆತ ಸಮಾಧಾನದಿಂದ ಗುಡಿಸಲಿನ ಸುತ್ತಲೂ ಕಣ್ಣು ಹಾಯಿಸಿದ. ಆಗ ಅಲ್ಲೊಂದು, ಆ ಪ್ರದೇಶದ ನಕ್ಷೆಯು ಕಂಡುಬಂದಿತು. ಜನವಸತಿ ಪ್ರದೇಶದಿಂದ ಇನ್ನೂ ಬಹುದೂರ ಇರುವದನ್ನು ಅದು ಖಚಿತ ಪಡಿಸಿತು. ಆದರೆ ಈಗ ತಾನು ಎಲ್ಲಿದ್ದೇನೆ ಮತ್ತು ಯಾವ ದಿಕ್ಕಿನಲ್ಲಿ ಹೋಗಬೇಕೆಂದು ಅವನಿಗೆ ತಿಳಿದಿತ್ತು.

ಗುಡಿಸಲಿನಿಂದ ಹೊರಡುವ ಮೊದಲು, ಮುಂದಿನ ಪ್ರಯಾಣಕ್ಕಾಗಿ ಅವನು ತನ್ನ ಫ್ಲಾಸ್ಕನ್ನು ತುಂಬಿಸಿಕೊಂಡ. ಅದರ ಜತೆಗೇ ಆ ಗುಡಿಸಲಿನ ಬಾಟಲಿಯನ್ನೂ ತುಂಬಿಸಿ ಕಾರ್ಕನ್ನು ಮತ್ತೆ ಹಾಕಿ ಭದ್ರಪಡಿಸಿದ. ಅದರ ಮೇಲಿನ ಬರಹದ ಅಡಿಯಲ್ಲಿ ತನ್ನದೊಂದು ವಾಕ್ಯವನ್ನೂ ಸೇರಿಸಿದ: "ನನಗೆ ಸಂಪೂರ್ಣ ನಂಬಿಕೆ ಬಂದಿದೆ. ವಿಶ್ವಾಸ ಇರಲಿ. ಅದು ಕೆಲಸ ಮಾಡುತ್ತದೆ!"

ಈ ಕಥೆ ಜೀವನದ ಬಗ್ಗೆ ಒಂದು ಬಹು ಮುಖ್ಯ ಪಾಠ ನಮಗೆ ಕಲಿಸಿಕೊಡುತ್ತದೆ. ನಿಸರ್ಗದಿಂದ ಬಹಳಷ್ಟು ಸಿಗಬೇಕೆಂದು ಅಪೇಕ್ಷಿಸುವ ನಾವು ಅದಕ್ಕೂ ಮುಂಚೆ ನಿಸರ್ಗಕ್ಕೆ ಏನಾದರೂ ನೀಡಬೇಕು ಎನ್ನುವದನ್ನು ನಮಗದು ಸೂಚಿಸುತ್ತದೆ. ಹೀಗೆ ನೀಡುವಾಗ ಮುಖ್ಯವಾಗಿ ನಂಬಿಕೆ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಹ ಇದು ಕಲಿಸುತ್ತದೆ. ತನ್ನ ಕ್ರಿಯೆಗೆ ಪ್ರತಿಫಲ ಸಿಗುತ್ತದೋ ಇಲ್ಲವೋ, ಎಂದು ಆ ಮನುಷ್ಯನಿಗೆ ತಿಳಿದಿರಲಿಲ್ಲ. ಆದರೆ ಅವನು ಅದನ್ನು ಲೆಕ್ಕಿಸದೆ ಮುಂದುವರೆದ. ಖಚಿತವಾಗಿ ಏನನ್ನು ನಿರೀಕ್ಷಿಸಬೇಕೆಂದೂ ತಿಳಿಯದ ಅವನಿಗೆ, ಅವನ ನಂಬಿಕೆ ನಿರೀಕ್ಷಿಸದೆ ಇದ್ದುದನ್ನೂ ನೀಡಿತು.

ಈ ಕಥೆಯಲ್ಲಿನ ನೀರು ಜೀವನದಲ್ಲಿಯ ಒಳ್ಳೆಯತನವನ್ನು ಪ್ರತಿನಿಧಿಸುತ್ತದೆ. ಜಗಕ್ಕೊಂದಿಷ್ಟು ಜೀವಜಲ ನೀಡಿ, ಅದು ನೀವು ಕೊಟ್ಟಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಂತಿರುಗಿಸುತ್ತದೆ!

ಇದು ಪ್ರಸ್ತುತ ಸನ್ನಿವೇಶಕ್ಕೂ ಅನ್ವಯಿಸುತ್ತದೆ. ಪ್ರಸ್ತುತ ನಾವೆಲ್ಲರೂ ನಮ್ಮ ಮನೆಗಳ ಒಳಗೆ ನಮ್ಮ ಅನೇಕ ಅವಶ್ಯಕತೆಗಳನ್ನು ತ್ಯಾಗ ಮಾಡಿ ಬದುಕುತ್ತಿದ್ದೇವೆ. ನಮ್ಮಲ್ಲಿ ಕೆಲವರಿಗೆ ಎರಡು ಹೊತ್ತಿನ ಊಟ ಪಡೆಯುವುದೂ ಕಷ್ಟಕರವಾಗಿದೆ, ಹಣ ಖಾಲಿಯಾಗಿದೆ, ಇನ್ನೂ ಕೆಲವರು ಮನೆಯಿಂದ ದೂರವಾಗಿದ್ದಾರೆ, ಮತ್ತು ಇನ್ನೂ ಹಲವರಿಗೆ ದಿನನಿತ್ಯದ ದವಸ ಧಾನ್ಯ, ತರಕಾರಿಗಳಿಗೂ ಪರದಾಡುವಂತಾಗಿದೆ. ಬೇರೆ ಕಾಯಿಲೆಗಳ ರೋಗಿಗಳು, ಏಕಾಂಗಿ ವೃದ್ಧರು, ದಿನಗೂಲಿಯವರು, ಗರ್ಭಿಣಿಯರು, ಮಕ್ಕಳು, ಎಲ್ಲರೂ ವಿವಿಧ ರೀತಿಯ ಸಮಸ್ಯೆಗಳನ್ನೆದುರಿಸುತ್ತಿದ್ದಾರೆ. ಈ ಎಲ್ಲದರ ಹೊರತಾಗಿಯೂ, ನೀರನ್ನು ಮತ್ತೆ ಪಂಪ್‌ಗೆ ಹಾಕುವ ನಿರ್ಧಾರವನ್ನು ನಾವು ಆರಿಸಿಕೊಂಡಿದ್ದೇವೆ. ಇದು ದೀರ್ಘಾವಧಿಯ ಲಾಭಕ್ಕಾಗಿ ನಾವು ಮಾಡುತ್ತಿರುವ ಅಲ್ಪಾವಧಿಯ ತ್ಯಾಗ. ನಾವು ಕೊಟ್ಟದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಕೃತಿಯು ನಮಗೆ ಮರಳಿಸುತ್ತದೆ ಎಂಬ ನಂಬಿಕೆಯಲ್ಲಿ ದೃಢ ವಿಶ್ವಾಸವಿರಲಿ.

ಮನೆಯಲ್ಲೇ ಇರೋಣ, ಸುರಕ್ಷಿತವಾಗಿರೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net