ಸಮಸ್ಯೆ ಅರಿತರೆ ಪರಿಹಾರ ಸರಳ: ಮನೋಲ್ಲಾಸ

Crown
Published on
| ಯೋಗೇಶ ಅಮೀನಗಡ

ಗ್ರೀಕ್ ದೇಶದ ಸೈರ್ಯಾಕ್ಯೂಸ್ ಎಂಬ ಆಸ್ಥಾನದಲ್ಲಿ ಹೀರೋ ಎಂಬ ರಾಜನಿದ್ದನು. ರಾಜನಿಗೆ ಚಿನ್ನದ ಕಿರೀಟ ಧರಿಸಿಕೊಳ್ಳಬೇಕು ಎಂಬ ಆಸೆಯಾಯಿತು. ಅಕ್ಕಸಾಲಿಗನನ್ನು ಕರೆಸಿ, ತನಗೊಂದು ಚೊಕ್ಕ ಚಿನ್ನದಿಂದ ಸುಂದರ ಕಿರೀಟ ತಯಾರಿಸಿ ಕೊಡಲು ತಿಳಿಸಿದನು. ಒಂದಿಷ್ಟು ದಿನಗಳು ಕಳೆದವು. ರಾಜರ ಅಣತಿಯಂತೆ ಚಿನ್ನದ ಕಿರೀಟ ತಯಾರಾಯಿತು. ರಾಜನಿಗೆ ಚಿನ್ನದ ಕಿರೀಟ ಒಪ್ಪಿಸಿ ಅಕ್ಕಸಾಲಿಗ ಹೊರ ನಡೆದ. ರಾಜನಿಗೆ ಅವನ ಮೇಲೆ ಸಂದೇಹ ಪ್ರಾರಂಭವಾಯಿತು. ಚಿನ್ನದ ಜೊತೆಗೆ ಬೇರೆ ಲೋಹದ ಮಿಶ್ರಣ ಮಾಡಿರಬಹುದೆ? ಎಂಬ ಸಂಶಯವೂ ಕಾಡಿತು. ಕಿರೀಟ ಸುಂದರವಾದ್ದರಿಂದ ಕರಗಿಸಿ ನೋಡಲು ರಾಜನಿಗೆ ಇಷ್ಟವಿರಲಿಲ್ಲ. ಕಿರೀಟ ಕರಗಿಸದೇ, ಒಡೆಯದೇ ಚಿನ್ನದ ಪರಿಶುದ್ದತೆ ಹೇಗೆ ಕಂಡುಹಿಡಿಯುವುದು? ಸಮಸ್ಯೆಯ ಸುಳಿಯೊಳಗೆ ಚಿಂತೆಯೂ ಪ್ರಾರಂಭವಾಯಿತು.

ನಮ್ಮ ರಾಜ್ಯದಲ್ಲಿ ಈ ಸಮಸ್ಯೆ ಪರಿಹರಿಸಲು ಯಾರಾದರೂ ಇದ್ದರೆ ಕರೆದುಕೊಂಡು ಬನ್ನಿ ಎಂದು ಆಜ್ಞೆ ಮಾಡಿದನು. ಅದೇ ದೇಶದ ಪ್ರಖ್ಯಾತ ವಿಜ್ಞಾನಿ, ಮಹಾನ್ ಮೇಧಾವಿ ಅರ್ಕಿಮಿಡೀಸ್​ರನ್ನು ಕರೆತರಲಾಯಿತು. ಕಿರೀಟ ಕರಗಿಸದೇ ಪರಿಶುದ್ಧತೆ ಕಂಡುಹಿಡಿಯುವ ಸಮಸ್ಯೆಯನ್ನು ರಾಜನು ಅರ್ಕಿಮಿಡೀಸ್​ನಿಗೆ ಒಪ್ಪಿಸಿ ಬೀಳ್ಕೊಟ್ಟನು. ಅರ್ಕಿಮಿಡೀಸ್​ನ ಯೋಚನಾ ಲಹರಿ ಪ್ರಾರಂಭವಾಯಿತು. ಹಗಲು ರಾತ್ರಿ ಎನ್ನದೇ, ಎಲ್ಲೆಂದರಲ್ಲಿ, ಸಮಸ್ಯೆ ಪರಿಹರಿಸಲು, ಸೂಕ್ತ ದತ್ತಾಂಶಗಳನ್ನು ತಾಳೆ ಹಾಕಿ ರ್ತಸುತ್ತಾ ಯೋಚಿಸತೊಡಗಿದನು. ಒಂದು ಸಲ ಸ್ನಾನ ಮಾಡುವ ನೀರಿನ ತೊಟ್ಟಿಯಲ್ಲಿ ಇಳಿಯುವಾಗ ತೊಟ್ಟಿಯಲ್ಲಿ ನೀರಿನ ಮಟ್ಟ ಏರುತ್ತಿರುವುದನ್ನು ಅರ್ಕಿಮಿಡೀಸ್ ಕಂಡನು. ಅದೇ ಆವಸ್ಥೆಯಲ್ಲಿಯೇ ಯೂರೇಕಾ ಯೂರೇಕಾ ಅಂದರೆ ಗೊತ್ತಾಯಿತು ಗೊತ್ತಾಯಿತು ಎಂದು ಸಂತಸದಿಂದ ಪ್ರಯೋಗಾಲಯಕ್ಕೆ ಧಾವಿಸಿದನು. ನಂತರ ಅರಮನೆಗೆ ಆಗಮಿಸಿ ಒಂದು ಪಾತ್ರೆಯ ತುಂಬ ನೀರನ್ನು ತರುವಂತೆ ಹೇಳಿ, ಆ ಪಾತ್ರೆಯಲ್ಲಿ ಕಿರೀಟವನ್ನು ಮುಳುಗಿಸಿದನು. ಹೊರಚೆಲ್ಲಿದ ನೀರನ್ನು ಸಂಗ್ರಹಿಸಿ, ತೂಕ ಮಾಡಿದನು. ನಂತರ ಅಷ್ಟೇ ಘನ ಗಾತ್ರದ ಶುದ್ಧ ಚಿನ್ನದ ಕಿರೀಟ ಮಾಡಲು ತಿಳಿಸಿದನು. ಶುದ್ಧ ಚಿನ್ನದ ಕಿರೀಟ ನೀರಿನಲ್ಲಿ ಮುಳುಗಿಸಿದಾಗ ನೀರು ಚೆಲ್ಲಿತು. ಅದನ್ನೂ ತೂಕ ಮಾಡಿ ನೋಡಿದಾಗ ವ್ಯತ್ಯಾಸ ಕಂಡು ಬಂದಿತು. ಕಶ್ಮಲದ ಪ್ರಮಾಣವನ್ನು ಲೆಕ್ಕ ಹಾಕಿ ತೋರಿಸಿದನು. ಅಕ್ಕಸಾಲಿಗನ ಮೋಸ ಬಯಲಾಯಿತು.

ಕೆಲವರು ಸಮಸ್ಯೆಗಳು ಬಂದಾಗ ಅಯ್ಯೋ ಹೀಗಾಯಿತಲ್ಲ? ಎಂದು ಕೊರಗುತ್ತಾರೆ. ಬೆಂಬಿಡದ ಭೂತವಾಗಿ ಕಾಡಿದಾಗ ಚಿಂತಿಸುತ್ತಾರೆ. ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕಲು ಮನಸ್ಸು ಮಾಡುವದಿಲ್ಲ. ಎಲ್ಲ ಸಮಸ್ಯೆಗೂ ಪರಿಹಾರವಿದೆ ಎಂಬುದನ್ನು ಅರಿಯಬೇಕು. ಸಮಸ್ಯೆಗಳ ಬಗ್ಗೆಯೇ ಯೋಚಿಸದೇ ಪರಿಹಾರ ಸಾಧ್ಯತೆಗಳ ಬಗ್ಗೆಯೂ ಯೋಚಿಸಬೇಕು. ಸಮಸ್ಯೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಸಮಸ್ಯೆ ಗುರುತಿಸಿ, ಸಂಭವನೀಯ ಪರಿಹಾರ ವಿಶ್ಲೇಷಿಸಿ, ಉತ್ತಮ ಕ್ರಮ ನಿರ್ಧರಿಸಿದರೆ ಯಶಸ್ಸು ಖಂಡಿತ. ನಿರಂತರ ತರ್ಕಬದ್ಧ ಆಲೋಚನೆ, ಸತತ ಪ್ರಯತ್ನ, ಸ್ಪಷ್ಟ ನಿರ್ಧಾರ, ವೈಚಾರಿಕ ನಿಲುವುಗಳಿಂದ, ಎಂತಹ ಕ್ಲೀಷ್ಟ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಾಧ್ಯವಾಗುತ್ತದೆ.

(ಲೇಖಕರು, ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net