ಆದಾಯ ದ್ವಿಗುಣಕ್ಕೆ ಮಣ್ಣು ಪರೀಕ್ಷೆ ಮುಖ್ಯ

Soil
Published on
ಕೃಷಿ ಕ್ಷೇತ್ರದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಹಲವು ಅಂಶಗಳಲ್ಲಿ ಮಣ್ಣು ಪರೀಕ್ಷೆಗೆ ಅನುಗುಣ ಬಿತ್ತನೆ ಮತ್ತು ಪೋಷಕಾಂಶ ಬಳಕೆ ಅತಿ ಮುಖ್ಯ. ಮಣ್ಣು ಪರೀಕ್ಷೆಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದ್ದು, ಪರೀಕ್ಷಾ ಕಾರ್ಡ್ ನೀಡಿದವರಿಗೆ ಮಾತ್ರ ಬೀಜ ಮತ್ತು ರಸಗೊಬ್ಬರ ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸುವ ಚಿಂತನೆಯಲ್ಲಿದೆ.

| ಸತೀಶ್ ಕಂದಗಲ್​ಪುರ ಬೆಂಗಳೂರು

ನಮ್ಮ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಜಾಗತಿಕವಾಗಿ ಕೈಗಾರಿಕೆಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಬೆಳೆದಿದ್ದರೂ ಶೇ.60 ಮಂದಿ ಕೃಷಿ ಅವಲಂಬಿತರಾಗಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲ ಸರ್ಕಾರದಲ್ಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿದ್ದರಿಂದ ಅಗಾಧ ಬದಲಾವಣೆ ಕಂಡುಬಂದಿದ್ದು, ತೀವ್ರ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರದ ದಿನಗಳಲ್ಲಿ ಕೃಷಿ ಕ್ಷೇತ್ರದೆಡೆಗೆ ಯುವಜನತೆ ಹೆಚ್ಚಾಗಿ ಆಸಕ್ತಿ ತೋರಿಸಿದ್ದಾರೆ. ಜತೆಗೆ, ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಬದಲಾಯಿಸಿ ವೈಜ್ಞಾನಿಕ ಮಾದರಿಯಲ್ಲಿ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿ ಮಾಡುವತ್ತ ಒಲವು ಹೆಚ್ಚಾಗಿದೆ. ಈ ಹೊಸ ಪೀಳಿಗೆಯ ಕೃಷಿಕರು ಮೊದಲು ಮಾಡಬೇಕಾದ ಕೆಲಸವೇ ಮಣ್ಣು ಪರೀಕ್ಷೆ. ಅಲ್ಲಿಂದ ಮುಂದಿನ ಕೃಷಿ ಹಾದಿಯನ್ನು ಸುಗಮ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಮಣ್ಣು ಪರೀಕ್ಷಾ ಕೇಂದ್ರಗಳು: ಕೇಂದ್ರ ಸರ್ಕಾರ ರಾಷ್ಟ್ರೀಯ ಸುಸ್ಥಿರ ಅಭಿಯಾನದಡಿ ‘ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಕ್ರಮ’ ಜಾರಿಗೊಳಿಸಿದೆ. 2019-20ನೇ ಸಾಲಿನಿಂದ ರಾಜ್ಯಾದ್ಯಂತ 286 ಉಪ ಮಣ್ಣು ಪರೀಕ್ಷಾ ಘಟಕ ಪ್ರಾರಂಭಿಸುವ ಗುರಿ ನೀಡಿದ್ದು, ಈವರೆಗೆ 280ಕ್ಕೂ ಅಧಿಕ ಉಪ ಮಣ್ಣು ಪರೀಕ್ಷಾ ಘಟಕ ಸ್ಥಾಪಿಸಲಾಗಿದೆ. ಜತೆಗೆ, ಎಲ್ಲ ಜಿಲ್ಲೆಗಳ ಕೃಷಿ ಇಲಾಖೆಗಳು ಹಾಗೂ ರಾಜ್ಯದಲ್ಲಿನ ಎಲ್ಲ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ 2 ರಿಂದ 6 ಮಣ್ಣು ಪರೀಕ್ಷಾ ಘಟಕಗಳಿರುತ್ತದೆ. ಹತ್ತಿರದ ಕೃಷಿ ಇಲಾಖೆ ಅಥವಾ ರೈತ ಸಂಪರ್ಕದ ಕೇಂದ್ರದ ಸಹಾಯದಿಂದ ಮಣ್ಣು ಪರೀಕ್ಷೆ ಮಾಡಿಸಬಹುದು. ಜತೆಗೆ, ರೈತರ ಸಹಾಯವಾಣಿ-1800-425-3553ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಮಣ್ಣು ಸಂಗ್ರಹಣೆ ಕ್ರಮ: ಕೃಷಿ ಭೂಮಿ ಹೊಂದಿರುವ ಪ್ರತಿಯೊಬ್ಬ ರೈತರೂ ಪ್ರತಿ 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಬೇಕು. ಇದರಲ್ಲಿ ಏಕವಾರ್ಷಿಕ ಬೆಳೆ ಮತ್ತು ಬಹುವಾರ್ಷಿಕ ಬೆಳೆ ಪದ್ಧತಿಗೆ ಅನುಗುಣವಾಗಿ ಪರೀಕ್ಷೆ ಮಾಡಿಸಬೇಕು. ಏಕವಾರ್ಷಿಕ ಬೆಳೆಗೆ ಭೂಮಿಯ ಮೇಲ್ಪದರದಲ್ಲಿ 45 ಸೆ.ಮೀ. ಮಣ್ಣನ್ನು ಸರಿಸಿ ಅಲ್ಲಿಂದ ಅರ್ಧ ಅಡಿ ಆಳಕ್ಕೆ ’’ ಆಕಾರದಲ್ಲಿ ಗುಂಡಿ ತೋಡಬೇಕು. ಗುಂಡಿಯಲ್ಲಿದ್ದ ಮಣ್ಣನ್ನು ಹೊರತೆಗೆದು, ಸುತ್ತಲಿನ ಅರ್ಧ ಇಂಚು ಮಣ್ಣಿನ ಪದರವನ್ನು ಸಂಗ್ರಹಿಸಬೇಕು. ಇಡೀ ಜಮೀನಿನಲ್ಲಿ ’ಘ’ ಮಾದರಿ ಅಥವಾ ಜಿಗ್​ಜಾಗ್ ಮಾದರಿಯಲ್ಲಿ 4 ರಿಂದ 5 ಸ್ಥಳಗಳಲ್ಲಿ ಗುಂಡಿ ತೋಡಿ ಇದೇ ಮಾದರಿಯಲ್ಲಿ ಮಣ್ಣನ್ನು ಒಂದೆಡೆ ಸಂಗ್ರಹಿಸಬೇಕು. ಸಂಗ್ರಹಿಸಿದ ಮಣ್ಣನ್ನು ಒಂದು ಚೀಲದ ಮೇಲೆ ಮಿಶ್ರಣ ಮಾಡಿ, ಅದನ್ನು ವೃತ್ತಾಕಾರದಲ್ಲಿ ಹರಡಿ 4 ಭಾಗ ಮಾಡಿ ಅರ್ಧ ಭಾಗ ಇಟ್ಟುಕೊಳ್ಳಬೇಕು. ಇದೇ ಮಾದರಿಯನ್ನು ಪುನರಾವರ್ತನೆ ಮಾಡಿ ಅರ್ಧ ಕೆ.ಜಿ. ಮಣ್ಣನ್ನು ಪರೀಕ್ಷೆ ಕೇಂದ್ರಕ್ಕೆ ಕೊಂಡೊಯ್ಯಬೇಕು.

200 ರೂ.ಗೆ ಆರೋಗ್ಯ ಕಾರ್ಡ್: ರಾಜ್ಯಾದ್ಯಂತ ಆರಂಭಿಸಲಾಗಿರುವ ಮಣ್ಣು ಪರೀಕ್ಷಾ ಉಪಘಟಕಗಳಲ್ಲಿ 300 ರೂ.ಗೆ ಮಣ್ಣು ಪರೀಕ್ಷೆ ಮಾಡಿ ಮಣ್ಣಿನ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಇನ್ನು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿರುವ ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಮಣ್ಣು ಪರೀಕ್ಷಾ ಕೇಂದ್ರಗಳಲ್ಲಿ 200 ರೂ. ಪಡೆಯಲಾಗುತ್ತದೆ. ಏಕವಾರ್ಷಿಕ ಬೆಳೆಗಳಿಗೆ ಪ್ರತಿವರ್ಷ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ 3 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸುವುದು ಉತ್ತಮ. ಇದರಿಂದ ಬೆಳೆಗೆ ಅನಗತ್ಯವಾಗಿ ಗೊಬ್ಬರ ಮತ್ತು ಪೋಷಕಾಂಶಗಳನ್ನು ಹಾಕುವುದನ್ನು ತಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದು.

ಕೆಲವೆಡೆ ಸಂಗ್ರಹ ಬೇಡ: ಮುಖ್ಯವಾಗಿ ತಗ್ಗು ಪ್ರದೇಶ, ಕಸವನ್ನು ಹಾಕುವ ಸ್ಥಳ, ಜೌಗು ಪ್ರದೇಶ, ನೀರು ಯಥೇಚ್ಛವಾಗಿ ಹರಿಯುವ ಹಳ್ಳದ ಸ್ಥಳ, ಕಸ ಅಥವಾ ಗೊಬ್ಬರ ಸುರಿಯುವ ಸ್ಥಳ, ಕಾಂಪೋಸ್ಟ್ ಗೊಬ್ಬರ ಹಾಕಿದ ಸ್ಥಳಗಳಲ್ಲಿನ ಮಣ್ಣನ್ನು ಪರೀಕ್ಷೆಗೆ ತೆಗೆದುಕೊಂಡು ಹೋಗಬಾರದು. ಸಾಮಾನ್ಯ ಬಯಲು ಜಾಗದಲ್ಲಿನ ಮಣ್ಣು ಸಂಗ್ರಹಿಸಿ ಪರೀಕ್ಷೆಗೆ ಕೊಂಡೊಯ್ದರೆ ಅಗತ್ಯ ಜಮೀನಿನ ಮಣ್ಣಿನ ಸತ್ವಗಳ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗುತ್ತದೆ. ರೈತರು ಮಣ್ಣು ಪರೀಕ್ಷೆಗೆ ಹೋಗುವಾಗ ಆಧಾರ್ ಕಾರ್ಡ್, ಜಮೀನಿನ ಆರ್​ಟಿಸಿ ದಾಖಲೆ ಹಾಗೂ ಮೊಬೈಲ್ ನಂಬರ್ ಅನ್ನು ಪರೀಕ್ಷಾ ಕೇಂದ್ರಕ್ಕೆ ಕೊಡಬೇಕು. ಮಣ್ಣು ಸ್ವೀಕರಿಸಿದ ತಿಂಗಳ ಒಳಗಾಗಿ ಮಣ್ಣಿನ ಆರೋಗ್ಯ ಕಾರ್ಡ್ ಮಾಡಿಕೊಡಲಾಗುತ್ತದೆ.

8 ಉಪಘಟಕ ನಿರ್ಮಾಣ ಬಾಕಿ: ನಗರ ಪ್ರದೇಶಗಳಿಗೆ ರೈತರು ಮಣ್ಣು ಪರೀಕ್ಷೆ ಮಾಡಿಸಲು ಹೋಗುವುದನ್ನು ತಪ್ಪಿಸಲು ಹಾಗೂ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ 289 ಮಣ್ಣು ಪರೀಕ್ಷೆ ಉಪಕೇಂದ್ರ ಆರಂಭಿಸಲು ಕೇಂದ್ರ ಸರ್ಕಾರ ಸೂಚಿಸಿತ್ತು. ಯೋಜನೆ ಜಾರಿಗೊಳಿಸಲು ಎಸ್ಸೆಸ್ಸೆಲ್ಸಿ ಉತ್ತೀರ್ಣಗೊಂಡ ಯುವಕರಿಗೆ 5 ಲಕ್ಷ ರೂ. ಸಾಲ ನೀಡಿ,ಶೇ.75 ಸಬ್ಸಿಡಿ ಕೊಡಲಾಗಿದೆ. ಈಗ 281 ಮಣ್ಣು ಪರೀಕ್ಷಾ ಉಪಘಟಕ ಪೂರ್ಣಗೊಂಡು ಕಾರ್ಯ ನಿರ್ವಹಿಸುತ್ತಿವೆ. ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಮತ್ತು ಕೊಡಗು ಜಿಲ್ಲೆಗಳು ಸೇರಿ ತಲಾ ಎರಡರಂತೆ 8 ಮಣ್ಣು ಪರೀಕ್ಷಾ ಉಪಘಟಕ ಆರಂಭಿಸುವುದು ಬಾಕಿಯಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net