

ಜ್ಞಾನವಿಜ್ಞಾನತೃಪ್ತಾತ್ಮಾ ಕೂಟಸ್ಥೋ ವಿಜಿತೇಂದ್ರಿಯಃ |
ಯುಕ್ತ ಇತ್ಯುಚ್ಯತೇ ಯೋಗೀ ಸಮಲೋಷ್ಟಾಶ್ಮಕಾಂಚನಃ || 6.8
ಶ್ರೀ ರಾಮಕೃಷ್ಣ ಪರಮಹಂಸರು ಹಾಲಿನಲ್ಲಿರುವ ಬೆಣ್ಣೆಯ ಜ್ಞಾನದ ಉದಾಹರಣೆ ಕೊಡುತ್ತಿದ್ದರು. ಕೇವಲ ಜ್ಞಾನದಿಂದ ಬೆಣ್ಣೆ ದೊರೆಯದು. ಹಾಲನ್ನು ಕಾಯಿಸಿ ಹೆಪ್ಪುಹಾಕಿ ಮರುದಿನ ಮೊಸರನ್ನು ಕಡೆದಾಗ ಬೆಣ್ಣೆ ಬರುವುದು. ಕಷ್ಟ ಸಾಧನೆಗಳಿಲ್ಲದೆ ಸಿದ್ಧಿಯಿಲ್ಲ. ಈ ಶ್ಲೋಕದಲ್ಲಿ ಸಾಧನೆಗಳ ಪಟ್ಟಿ ಕೊಟ್ಟಿದ್ದಾನೆ ಭಗವಂತ.
ಜ್ಞಾನ: ಬುದ್ಧಿಯ ಮೂಲಕ ಶಾಸ್ತ್ರವನ್ನೋದಿ ವಿಷಯ ತಿಳಿಯುವುದೇ ಜ್ಞಾನ. ಋಷಿಗಳು ತಮ್ಮ ಅನುಭವಗಳನ್ನು ಶಾಸ್ತ್ರದಲ್ಲಿ ಅಡಗಿಸಿಟ್ಟಿದ್ದಾರೆ. ಗ್ರಂಥಗಳನ್ನು ಓದಿ ಹಾಗೂ ಗುರುಹಿರಿಯರಿಂದ ಕೇಳಿ ಅವುಗಳನ್ನು ಚಿಂತಿಸಿ ಬೌದ್ಧಿಕ ಜ್ಞಾನ ಪಡೆಯಬಹುದು.
ವಿಜ್ಞಾನ: ಶಾಸ್ತ್ರದಿಂದ ತಿಳಿದದ್ದನ್ನು ಅನುಭವಕ್ಕೆ ತಂದುಕೊಳ್ಳುವುದು. ಸಾಧನೆಯಿಂದ ಮನಸ್ಸು ಶುದ್ಧವಾದಷ್ಟು ಕ್ರಮೇಣ ಅನುಭವಕ್ಕೆ ಬರುವುದು.
ತೃಪ್ತ ಆತ್ಮ: ಇಲ್ಲಿ ಆತ್ಮ ಎಂದರೆ ಮನಸ್ಸು. ಜ್ಞಾನ-ವಿಜ್ಞಾನಗಳಿಂದ ಮನಸ್ಸು ತೃಪ್ತವಾಗುವುದು. ತಿಳಿಯದಿದ್ದುದು ತಿಳಿದಾಗ ಸಂತೋಷವಾಗುವುದು. ಮಕ್ಕಳಿಗೆ ಅರ್ಥವಾಗದ್ದನ್ನು ಅರ್ಥವಾಗುವಂತೆ ತಿಳಿಸಿದಾಗ ಅವರಿಗೆ ಆನಂದವಾಗುವುದನ್ನು ಕಾಣುತ್ತೇವೆ.
ಕೂಟಸ್ಥ: ಅಕ್ಕಸಾಲಿಗ ಚೆನ್ನಾಗಿ ಲೋಹಗಳಿಂದ ಆಭರಣ ಮಾಡಲು ಒಂದು ಕಬ್ಬಿಣದ ಚಪ್ಪಟೆಯಾಕಾರದ ಚಿಕ್ಕ ವೇದಿಕೆಯಿಟ್ಟುಕೊಂಡಿರುತ್ತಾನೆ. ಅದರ ಮೇಲೆ ಚಿನ್ನ ಹಾಕಿ ಕುಟ್ಟಿದಾಗ ಅದು ಅಲುಗಾಡದು. ಅದೇ ಕೂಟ, ಗಟ್ಟಿಯಾದದ್ದು. ನಮ್ಮ ಮನಸ್ಸನ್ನು ಹೀಗೆ ಗಟ್ಟಿಯಾಗುವಂತೆ ಅಭ್ಯಾಸ ಮಾಡಬೇಕು. ಮನಸ್ಸಿಗೆ ಎಷ್ಟೇ ಆಘಾತವಾದರೂ, ಬಲವಾದ ಪೆಟ್ಟು ಬಿದ್ದರೂ, ಮನಸ್ಸು ಅಲುಗಾಡದಂತೆ ಸಹಿಸುವಂತೆ ಇರಬೇಕು.
ವಿಜಿತೇಂದ್ರಿಯ: ಐದು ಜ್ಞಾನ ಹಾಗೂ ಐದು ಕಮ್ವೇಂದ್ರಿಯಗಳನ್ನು ಭಗವಂತ ಕೊಟ್ಟಿದ್ದಾನೆ. ಇವುಗಳ ಜೊತೆಯಲ್ಲಿ ಮನಸ್ಸೂ ಓಡುತ್ತಿರುತ್ತದೆ. ವಿವೇಕ ಬುದ್ಧಿಯಿದ್ದಲ್ಲಿ ಕುದುರೆಯನ್ನು ಲಗಾಮಿನಿಂದ ನಿಯಂತ್ರಿಸುವಂತೆ ಇವುಗಳನ್ನು ನಿಯಂತ್ರಿಸಬಹುದು. ಮನಸ್ಸಿನ ಮೂಲಕ ಇಂದ್ರಿಯಗಳನ್ನು ಗೆದ್ದಿರುವವನು.
ಸಮಲೋಷ್ಟಾಶ್ಮಕಾಂಚನ: ಮಣ್ಣು, ಕಲ್ಲು, ಚಿನ್ನ -ಈ ಮೂರನ್ನೂ ಯೋಗಿಯು ಸಮವೆಂದು ಭಾವಿಸುವನು. ಶ್ರೀ ರಾಮಕೃಷ್ಣ ಪರಮಹಂಸರು ಸಾಧನೆಯಲ್ಲಿರುವಾಗ ‘ರೂಪಾಯಿ-ಮಣ್ಣು’ ಎರಡೂ ಒಂದೇ ಎಂದು ಗಂಗೆಗೆ ಬಿಸಾಡುತ್ತಿದ್ದರು. ಎಂದರೆ ಭಗವಂತನ ಸಾಕ್ಷಾತ್ಕಾರದ ಮಾರ್ಗದಲ್ಲಿ ಎರಡಕ್ಕೂ ಬೆಲೆಯಿಲ್ಲ. ರೂಪಾಯಿಯಿಂದ ಪ್ರಾಪಂಚಿಕ ವಸ್ತುಗಳು ಸಿಗಬಹುದೇ ಹೊರತು ಭಗವಂತ ದೊರೆಯುವುದಿಲ್ಲ, ಕೆಟ್ಟಿರುವ ಮನಸ್ಸನ್ನು ದುರಸ್ತಿ ಮಾಡಲಾಗದು.
ಈ ಮೇಲಿನ ಆರನ್ನು ಸಾಧಿಸಿರುವ ಯೋಗಿಯೇ ಯುಕ್ತನು. ಇವನನ್ನು ಯೋಗದ ಕೊನೆಯ ಮೆಟ್ಟಿಲನ್ನು ಹತ್ತಿದ ‘ಯೋಗಾರೂಢ’ ಎಂದೂ ಹೇಳುವರು. ಯೋಗದ ಚರಮ ಹಂತ ತಲುಪಿದವನೇ ‘ಯುಕ್ತ’. ಇವನು ಜಾರುವ ಸಂಭವವೂ ಇರದು. ಉಪದೇಶದಿಂದ ಬಂದಿರುವ ಜ್ಞಾನ, ಅಪರೋಕ್ಷ ಅನುಭವದ ವಿಜ್ಞಾನ, ನಿರ್ವಿಕಾರವೆಂಬ ಕೂಟಸ್ಥಿತಿ, ಬೇಕು-ಬೇಡವೆಂಬುದಿರದ ಭಾವನೆಯ ಬುದ್ಧಿಯೇ ಸಮಲೋಷ್ಟಾಶ್ಮಕಾಂಚನದ ಸ್ಥಿತಿ, ಸಮದೃಷ್ಟಿ ಇವು ಆಧ್ಯಾತ್ಮಿಕ ಜೀವನದಲ್ಲಿ ಪ್ರಧಾನವಾಗಿರುವವು. ಇಂದ್ರಿಯ ಮನಸ್ಸುಗಳು ವಿಷಯವಸ್ತುಗಳ ಸನ್ನಿಧಿಯಲ್ಲಿದ್ದರೂ ಮನಸ್ಸಿನಲ್ಲಿ ವಿಕಾರ ಉಂಟಾಗದಿರುವುದೇ ‘ಕೂಟಸ್ಥ’ ಸ್ಥಿತಿ ಎನ್ನುವರು ಮಧುಸೂದನ ಸರಸ್ವತಿಯವರು. ಬೆಣ್ಣೆ ಬೆಂಕಿಗೆ ಕರಗುವಂತೆ ಬೆಣ್ಣೆಯಂತಹ ಮನಸ್ಸನ್ನು ವಿಷಯವಸ್ತುಗಳೆಂಬ ಬೆಂಕಿಗೆ ಕರಗದ ವಿಶೇಷ ಬೆಣ್ಣೆಯ ಮನಸ್ಸನ್ನಾಗಿ ಸಾಧನೆಯಿಂದ ಪರಿವರ್ತಿಸಬೇಕು. ಈ ಜಗತ್ತಿನಲ್ಲಿ ಯಾವುದೂ ಸುಲಭವಾಗಿ ದೊರೆಯದು. ಹಿಂದಿನ ದುಃಖಗಳು ಸಾಧನೆಯಾದಂತೆ ದುಃಖವೆನಿಸದು. ಅವುಗಳನ್ನು ಸಹಿಸುವ ಶಕ್ತಿ ಅಭ್ಯಾಸದಿಂದ ಬರುವುದು. ಇದರಿಂದ ಉದ್ಧಾರ ಬೇಗನೆ ಆಗುವುದು. ಇದಕ್ಕಾಗಿ ಮನಸ್ಸನ್ನು ತೊಡಗಿಸಬೇಕಷ್ಟೇ. ಮನಸ್ಸಿನ ಜ್ಞಾನ, ವಿಜ್ಞಾನ ಹಾಗೂ ಸರ್ವಸಹನ ಶಕ್ತಿಯೇ ಕೂಟಸ್ಥತ್ವ. ‘ಮನಸ್ಸಿಗೆ ವಿರುದ್ಧವಾದ ಸಂದರ್ಭ ಬಂದಾಗ, ಪರಬ್ರಹ್ಮದಿಂದ ಮನಸ್ಸು ಅಲುಗಾಡದಂತೆ ಕಾಪಾಡಿಕೊಳ್ಳುವವನೇ ಯುಕ್ತ, ಯೋಗಾರೂಢನೆಂದು ಹೇಳುವರು. ಇಲ್ಲಿ ಹೇಳಿರುವ ಆರೂ ಗುಣಗಳನ್ನು ಅಭ್ಯಾಸ, ಸಾಧನೆಗಳಿಂದ ಸಾಕ್ಷಾತ್ಕರಿಸಿಕೊಂಡ ಯೋಗಿಯು ಯುಕ್ತನಾಗುವನು.’ ಎನ್ನುವರು ಶಂಕರಾನಂದರು. ಕೇವಲ ಬೌದ್ಧಿಕ ಜ್ಞಾನದಿಂದ ಯಾವುದೇ ಪ್ರಯೋಜನವಿಲ್ಲ, ಅನುಭವದಿಂದ ಮಾತ್ರ ಉಪಯೋಗ.
ಸುಹೃನ್ಮಿತ್ರಾರ್ಯುದಾಸೀನಮಧ್ಯಸ್ಥದ್ವೇಷ್ಯಬಂಧುಷು |
ಸಾಧುಷ್ವಪಿ ಚ ಪಾಪೇಷು ಸಮಬುದ್ಧಿರ್ವಿಶಿಷ್ಯತೇ || 6.9
ಪ್ರತ್ಯುಪಕಾರ ಬಯಸದೆ ಉಪಕರಿಸುವ ‘ಸುಹೃತ್ತು’, ‘ಮಿತ್ರ’ (ಸಮವಯಸ್ಕನಾಗಿ ಹಿತೈಷಿಯಾಗಿರುವವನು - ಶ್ರೀ ರಾಮಾನುಜ), ಶತ್ರು (ಯಾವುದೋ ಒಂದು ಕಾರಣದಿಂದ ಅನರ್ಥವನ್ನು ಬಯಸುವವನು - ಶ್ರೀ ರಾಮಾನುಜ), ‘ಉದಾಸೀನ’ (ಹಿತೈಷಿಯೂ ಅಲ್ಲದ, ಅನರ್ಥವನ್ನೂ ಬಯಸದವನು - ಶ್ರೀ ರಾಮಾನುಜ), ಇಬ್ಬರಿಗೂ ಹಿತ ಕೋರುವ ‘ಮಧ್ಯಸ್ಥ’ (ಆಜನ್ಮ ಹಿತಾಹಿತ ಬಯಸದವನು - ಶ್ರೀ ರಾಮಾನುಜ), ತನಗೆ ಅಪ್ರಿಯನಾಗಿರುವ ‘ದ್ವೇಷ್ಯ’ (ಜನ್ಮದಿಂದಲೇ ಅನಿಷ್ಟ ಬಯಸುವವನು - ಶ್ರೀ ರಾಮಾನುಜ), ‘ಬಂಧು’ (ಜನ್ಮದಿಂದಲೇ ಹಿತವನ್ನು ಬಯಸುವವನು - ಶ್ರೀ ರಾಮಾನುಜ) ಇವರಲ್ಲಿಯೂ, ಶಾಸ್ತ್ರಗಳನ್ನು ಅನುಸರಿಸುವ ‘ಸಾಧು’ಗಳಲ್ಲಿಯೂ, ನಿಷಿದ್ಧ ಕರ್ಮಗಳನ್ನು ಆಚರಿಸುವ ‘ಪಾಪಿ’ಗಳಲ್ಲಿಯೂ, ಸುಹೃನ್ಮಿತ್ರಾದಿಗಳಲ್ಲಿ ಪ್ರಯೋಜನವಾಗಲಿ, ವಿರೋಧವಾಗಲಿ ಇಲ್ಲದಿರುವ ಸಮಬುದ್ಧಿಯುಳ್ಳವನು (ಯೋಗಾರೂಢರಲ್ಲಿ) ಶ್ರೇಷ್ಠನಾಗಿರುತ್ತಾನೆ’ ಎಂದು ಶ್ರೀಶಂಕರರು ಮೇಲಿನಂತೆ ಈ ಶ್ಲೋಕವನ್ನು ವ್ಯಾಖ್ಯಾನಿಸಿದ್ದಾರೆ.
ಸುಹೃತ್ತು ಎಂದರೆ ಒಳ್ಳೆಯ ಹೃದಯದ ಸ್ನೇಹಿತ, ಎಂದರೆ ಅಧರ್ಮದ ದಾರಿ ತಡೆದು ಧರ್ಮದ ದಾರಿ ಪ್ರೋತ್ಸಾಹಿಸುವವನು, ಕಷ್ಟದಲ್ಲಿ ಸಹಾಯ ಮಾಡುವವನು, ಇತರರ ಎದುರು ಕೆಟ್ಟದಾಗಿ ಮಾತನಾಡದಿರುವವನು (ಗೊತ್ತಿದ್ದರೂ), ರಹಸ್ಯವನ್ನು ಕಾಪಾಡುವವನು, ತೊಂದರೆ ಕೊಡಲು ಪ್ರಯತ್ನಿಸುವ ಶತ್ರು, ತನಗೆ ಯಾರೂ ಯಾವುದೂ ಬೇಡವೆಂಬ ಉದಾಸೀನ, ಇಬ್ಬರಲ್ಲಿ ಭೇದವುಂಟಾದಾಗ ಇಬ್ಬರಿಗೂ ಬೇಕಾದವನಾಗಿ ಬುದ್ಧಿವಾದ ಹೇಳುವ ಮಧ್ಯಸ್ಥ, ವಿನಾಕಾರಣ ದ್ವೇಷಿಸುವವನು ರಕ್ತಸಂಬಂಧಿ, ನೆಂಟ, ಶಾಸ್ತ್ರಗಳ ರೀತಿ ಜೀವನ ನಡೆಸುವ ಸಾಧು, ಶಾಸ್ತ್ರ ವಿರುದ್ಧ ಜೀವನ ನಡೆಸುವ ಪಾಪಿ - ಇವರೆಲ್ಲರಲ್ಲಿ ಒಂದೇ ಭಾವದಿಂದ ವರ್ತಿಸುವವನು ಯೋಗಾರೂಢರಲ್ಲಿ ಶ್ರೇಷ್ಠನು. ಕಾರಣವೆಂದರೆ - ಇವನು ಸಮಬುದ್ಧಿಯಿರದ ಅವರೆಲ್ಲರ ಹೃದಯದಲ್ಲಿ ಒಬ್ಬನೇ ಪರಮಾತ್ಮನಿದ್ದಾನೆ ಎಂಬ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವನು. ಈ ಸಮಬುದ್ಧಿ ಅವನ ವಿಶೇಷ ಗುಣ. ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು. ‘ನೆಲದಲ್ಲಿರುವಾಗ ಗಿಡ, ಮರ, ಗುಡ್ಡ, ಹುಲ್ಲು ಇತ್ಯಾದಿಗಳ ವ್ಯತ್ಯಾಸ ತಿಳಿಯುವುದು. ಅದನ್ನೇ ಬೆಟ್ಟದ ಮೇಲಿಂದ ನೋಡಿದಾಗ ಎಲ್ಲವೂ ಸಮವಾಗಿರುವಂತೆ ಕಾಣುವುದು’ ಎಂದು. ಹಾಗೆಯೇ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ, ಮನಸ್ಸನ್ನು ಬಹಳ ಮೇಲೆ ಏರಿಸಿರುವುದರಿಂದ ಎಲ್ಲರಲ್ಲಿನ ವ್ಯತ್ಯಾಸ ತಿಳಿಯುತ್ತಿದ್ದರೂ ಅವನಿಗೆ ಒಂದೇ ಏಕಾತ್ಮಭಾವದಿಂದ ಕಾಣುವರು. ಪರಮಾತ್ಮದೃಷ್ಟಿಯಿಂದ ನೋಡುವುದರಿಂದ ಅವನಲ್ಲಿ ಭೇದವಿರದು. ಇಲ್ಲಿಂದ ಮುಂದೆ ಪರಮಾತ್ಮ ಪಾತಂಜಲ ಯೋಗಸೂತ್ರದಲ್ಲಿರುವ ವಿವರಣೆಗಳನ್ನು ಭಿನ್ನವಾಗಿ, ಸುಂದರವಾಗಿ ನಿರೂಪಿಸುವನು.
ಯೋಗೀ ಯುಂಜೀತ ಸತತಮಾತ್ಮಾನಂ ರಹಸಿ ಸ್ಥಿತಃ |
ಏಕಾಕೀ ಯತಚಿತ್ತಾತ್ಮಾ ನಿರಾಶೀರಪರಿಗ್ರಹಃ || 6.10
‘ನಿರ್ಜನ ಪ್ರದೇಶದಲ್ಲಿದ್ದುಕೊಂಡು, ಏಕಾಕಿಯೂ ಯಥಾಚಿತ್ತಾತ್ಮನೂ (ಚಿತ್ತವೆಂದರೆ ಅಂತಃಕರಣ ಹಾಗೂ ಆತ್ಮವೆಂದರೆ ದೇಹ - ಇವುಗಳನ್ನು ನಿಗ್ರಹಿಸುವವನು- ಶ್ರೀ ರಾಮಾನುಜ), ನಿರಾಶಿಯೂ, ಅಪರಿಗ್ರಹನೂ ಆಗಿ, ಯೋಗಿಯು ಯಾವಾಗಲೂ (ಪ್ರತಿದಿನ ಯೋಗಕಾಲದಲ್ಲಿ - ಶ್ರೀ ರಾಮಾನುಜ) ಮನಸ್ಸನ್ನು ಯೋಗದಲ್ಲಿಡಬೇಕು.’ ಯೋಗಿಯಾದವನು ಧ್ಯಾನ, ಜಪಾದಿಗಳಿಂದಾಗಿ ರಹಸ್ಯವಾದ ಸ್ಥಳದಲ್ಲಿ, ಏಕಾಕಿಯಾಗಿ ಕುಳಿತುಕೊಳ್ಳಬೇಕು. ಅಂತಃಕರಣ ಹಾಗೂ ದೇಹವನ್ನು ನಿಗ್ರಹಿಸಿ, ಆಶಾರಹಿತನಾಗಿ, ಅಪರಿಗ್ರಹಿಯಾಗಿರಬೇಕು. ಯೋಗ ಹಾಗೂ ಧ್ಯಾನಾಭ್ಯಾಸಗಳನ್ನು ಅಖಂಡವಾಗಿ, ಸದಾ ಮಾಡಬೇಕು. ಇದಕ್ಕೆ ಪೂರಕವಾದ ಪತಂಜಲಿ ಯೋಗಸೂತ್ರವಿದೆ. ‘ಸ ತು ದೀರ್ಘಕಾಲನೈರಂತರ್ಯ ಸತ್ಕಾರಾಸೇವಿತೋ ದೃಢಭೂಮಿಃ’ - ಧ್ಯಾನದ ಅಭ್ಯಾಸವನ್ನು ಬಹಳ ಕಾಲ ಅವಿಚ್ಛಿನ್ನವಾಗಿ ಮತ್ತು ಆದರದಿಂದ ಮಾಡಲ್ಪಟ್ಟರೆ ಮಾತ್ರ ದೃಢವಾಗುತ್ತದೆ. ಧ್ಯಾನದ ದೀರ್ಘಕಾಲವೆಂದರೆ ಎಷ್ಟು? ಸಾಕ್ಷಾತ್ಕಾರವಾಗುವವರೆಗೆ ಅಥವಾ ದೇಹ ಬಿಡುವವರೆಗೆ - ಈ ಎರಡರಲ್ಲಿ (ಒಂದರ) ಗುರಿ ಸೇರುವವರೆಗೆ ಧ್ಯಾನ ಮಾಡಬೇಕೆಂದು ವಿದ್ಯಾರಣ್ಯರು ಹೇಳುವರು. ಇದನ್ನು ನಿರಂತರವಾಗಿ ಮಾಡಬೇಕು. ವೀಣೆ ಕಲಿಯುವವರು ಎರಡು ತಿಂಗಳು ಅಭ್ಯಾಸ ನಿಲ್ಲಿಸಿ ಮತ್ತೆ ಪ್ರಾರಂಭಿಸಿದಾಗ ಅಭ್ಯಾಸದ ಕೊಂಡಿ ಇಲ್ಲದಿರುವುದರಿಂದ ನುಡಿಸುವುದು ಕಷ್ಟವಾಗುವುದು. ನಾವು ಮಾಡುವ ಧ್ಯಾನದಲ್ಲಿ ಸತ್ಕಾರ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕು. ಅಡ್ಡಾದಿಡ್ಡಿ ಅಭ್ಯಾಸ ಪ್ರಯೋಜನವಾಗದು. ಹೀಗೆ ನಿರಂತರವಾಗಿ ನಾವೇ ಯೋಗಾಭ್ಯಾಸ ಮಾಡಿದಾಗ ಮಾತ್ರ ಧ್ಯಾನವು ಸ್ಥಿರವಾಗುವುದು.