ಪುಣ್ಯ ಪರ್ವ ದಿನ ಮಕರ ಸಂಕ್ರಮಣ

SANKRANTI
Published on

ಉತ್ತರಾಯಣದಾರಂಭ ಬೇಸಿಗೆಯ ಮುನ್ಸೂಚನೆ. ಎಲ್ಲಾ ಹಬ್ಬಗಳನ್ನು ನಾವು ಚಾಂದ್ರಮಾನ ಅಥವಾ ನಿರಯನ ಪಂಚಾಂಗದ ಪ್ರಕಾರ ಆಚರಿಸಿದರೆ ಮಕರ ಸಂಕ್ರಾಂತಿಯನ್ನು ಮಾತ್ರ ಸಾಯನ ಅಥವಾ ಸೂರ್ಯನ ಚಲನೆಯಾಧರಿಸಿ ಮಾಡುತ್ತೇವೆ. ಉತ್ತರಾಯಣವು ದೇವತೆಗಳಿಗೆ ಪ್ರಿಯವಾದ ಕಾಲ.

ಈ ಅವಧಿಯಲ್ಲಿ ಕೈಗೊಂಡ ದಾನ, ಪೂಜೆ ಮುಂತಾದ ಕಾರ್ಯಗಳು ಶ್ರೇಷ್ಠವೆಂದು ಪರಿಗಣಿತವಾಗುತ್ತವೆ. ಈ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬುದು ನಂಬಿಕೆ. ಅಂತೆಯೇ ಇಚ್ಛಾಮರಣಿಯಾದ ಭೀಷ್ಮರು ದೇಹವನ್ನು ತ್ಯಜಿಸಲು ಶರಶಯ್ಯೆಯಲ್ಲಿ ಉತ್ತರಾಯಣಕ್ಕಾಗಿ ಕಾದಿದ್ದರು ಎಂಬ ಸಂಗತಿ ಮಹಾಭಾರತದಲ್ಲಿದೆ.

ಸೂರ್ಯ ಜಗಚ್ಚಕ್ಷು, ಪ್ರತ್ಯಕ್ಷ ದೈವ, ಲೋಕಸಾಕ್ಷಿ, ಸೂರ್ಯನಿಂದಲೇ ಮನುಕುಲದ ವ್ಯಾಪಾರ, ಜೀವನಚರ್ಯು. ಮಳೆ ಬೀಳಲು, ಬೆಳೆ ಬೆಳೆಯಲು, ಇಳೆ ಬೆಳಗಲು ಸೂರ್ಯನೇ ಆಧಾರ. ‘ಸೂರ್ಯ ಆತ್ಮ ಜಗತ್ ಸ್ಥುಪಶ್ಚ’ ಎಂದು ವರ್ಣಿಸಿದೆ ಋಗ್ವೇದ. ಹಗಲು ರಾತ್ರಿಗಳೆಂಬ ತನ್ನ ಗತಪ್ರಭಾವದಿಂದ ಕಾಲವನ್ನು ನಿಯಂತ್ರಣ ಮಾಡುವುದರಿಂದ ಭಾಸ್ಕರ ಕಾಲಸ್ವರೂಪಿ. ‘ಸುವತಿ ಕರ್ಮಣಿ ಲೋಕಂ ಪ್ರೇರಯತಿ ಇತಿ ಸೂರ್ಯಃ’. ಆತನೇ ಲೋಕದ ಕರ್ಮಗಳಿಗೆ ಪ್ರೇರಕ. ‘ರೂಯತೇ ಇತಿ ರವಿಃ’. ಅಂದರೆ ಆತ ಲೋಕರಕ್ಷಕ. ‘ಸವಿತಾ ಸರ್ವಸ್ಯ ಪಸವಿತಾ’. ಸಮಸ್ತ ಜಗತ್ತಿಗೆ ಉತ್ಪತ್ತಿ ಸ್ಥಾನನು. ಜ್ಯೋತಿಷ್ಯದಲ್ಲಂತೂ ಸೂರ್ಯ ಸಾರ್ವಭೌಮ. ‘ಆರೋಗ್ಯ ಭಾಸ್ಕರಾತ್ ಇಚ್ಛೇತ್’. ಆರೋಗ್ಯ ಭಾಗ್ಯಕ್ಕಾಗಿ ಸೂರ್ಯನ ಉಪಾಸನೆ, ಆರಾಧನೆ ಅತ್ಯಗತ್ಯ.

ಹಿಗ್ಗು ತರುವ ಕಾಲ: ಉತ್ತರಾಯಣವೆಂದರೆ ಹಿಗ್ಗುವುದರ ಸಂಕೇತ. ಕೃಷಿಕನಿಗೆ ತನ್ನ ದುಡಿಮೆಯ ಫಲದ ಭಾಗ್ಯವನ್ನು ಮನೆ ತುಂಬಿಸಿಕೊಳ್ಳುವ ಹರುಷದ ಪರ್ವ ಕಾಲ. ಮಕರ ರಾಶಿಗೆ ಶನಿ ಒಡೆಯ. ಅಂದು ಸೂರ್ಯ ತನ್ನ ಸುತನನ್ನು ಸಂಧಿಸುವ ದಿನ. ಪುರಾಣದ ಪ್ರಕಾರ ಪಿತೃಗಳ ಮುಕ್ತಿಗಾಗಿ ಭಗೀರಥ ಮಹಾರಾಜ ತಪಸ್ಸು ಮಾಡಿ ಗಂಗೆಯನ್ನು ಭುವಿಗೆ ಕರೆತಂದ ದಿನ ಈ ಸಂಕ್ರಮಣ. ಹಾಗಾಗಿ ಇದೊಂದು ಪುಣ್ಯ ಪರ್ವ ದಿನ.

ಭಾರತದಾದ್ಯಂತ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ದಕ್ಷಿಣ ಭಾರತೀಯರಿಗಂತೂ ಇದು ವಿಶೇಷ ಹಬ್ಬ. ಸುಗ್ಗಿಯ ಕಾಲ. ಸಮೃದ್ಧಿಯ ಸಂಕೇತ. ದೇವರಿಗೆ ‘ಎಳ್ಳು ಬೆಲ್ಲ’ದ ನಿವೇದನೆ. ದಕ್ಷಿಣ ಕರ್ನಾಟಕದಲ್ಲಿ ಎಳ್ಳು ಬೆಲ್ಲ ಬೀರುವ ಭರಾಟೆ. ಜತೆಗೆ ವಿವಿಧಾಕೃತಿಯ ಬಣ್ಣ ಬಣ್ಣದ ಸಕ್ಕರೆ ಅಚ್ಚು, ಹಣ್ಣು, ನೆಲಗಡಲೆ, ಎಲಚಿ ಹಣ್ಣು, ಕಬ್ಬಿನ ತುಂಡುಗಳ ಜೋಡಣೆ.

ಉತ್ತರ ಕರ್ನಾಟಕದವರು ‘ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ’ ಎನ್ನುತ್ತಾ ಎಳ್ಳು ಬೆಲ್ಲವನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಾರೆ. ನವ ವಿವಾಹಿತೆಯರು ಇದರೊಂದಿಗೆ ಹಣ್ಣು ಬೀರಿ ಸಂಭ್ರಮಿಸುತ್ತಾರೆ. ಈ ಹಬ್ಬದ ಅವಧಿಯಲ್ಲಿ ಜನತೆಗೆ ಗಾಳಿಪಟ ಹಾರಿಸುವ ಸಡಗರ. ಅಲ್ಲದೆ ಕೃಷಿಕನಿಗೆ ಆಧಾರವಾದ ದನಕರುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದು, ಕಿಚ್ಚು ಹಾಯಿಸುವುದು ಸಂಪ್ರದಾಯ. ಜಾನುವಾರುಗಳಿಗೆ ದೃಷ್ಟಿ ತಾಕದಿರಲೆಂಬುದು ಇದರ ಆಶಯ.

ಕರ್ನಾಟಕವಲ್ಲದೆ ಇತರ ರಾಜ್ಯಗಳಲ್ಲಿಯೂ ಬೇರೆ ಬೇರೆ ಹೆಸರಿನಿಂದ ಸಂಕ್ರಾಂತಿ ಹಬ್ಬದಾಚರಣೆಯುಂಟು. ತಮಿಳುನಾಡಿನಲ್ಲಿ ಇದು ಪೊಂಗಲ್. ಕೇರಳದಲ್ಲಿ ಮಕರವಿಳಕ್ಕು. ಶಬರಿಮಲೈನಲ್ಲಿ ಮಕರ ಸಂಕ್ರಾಂತಿಯಂದು ಮಕರಜ್ಯೋತಿಯನ್ನು ವೀಕ್ಷಿಸಲು ಸಹಸ್ರಾರು ಭಕ್ತರು ಸೇರುತ್ತಾರೆ. ಪಂಜಾಬ್, ಹರ್ಯುಣಾದಲ್ಲಿ ಈ ಹಬ್ಬಕ್ಕೆ ಲೋಹರಿ ಎನ್ನುತ್ತಾರೆ. ಮಹಾರಾಷ್ಟ್ರದಲ್ಲಿ ಎಳ್ಳಿನ ಚಿಕ್ಕಿ ಇಲ್ಲವೆ ಉಂಡೆ ಮಾಡಿ ‘ತಿಳ್ ಗುಳ್ ಘ್ಯಾ ಆಣಿ ಗೋಡ್ ಗೋಡ್ ಬೋಲಾ’ ಎಂದು ಹೇಳುತ್ತಾ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುತ್ತಾರೆ.

ಎಳ್ಳು-ಬೆಲ್ಲವೇ ಯಾಕೆ?: ಮಕರ ಸಂಕ್ರಾಂತಿಯಂದು ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯ ಶೀತ ವಾತ ಜನ್ಯವಾದ ಜಡ್ಡು ಆಲಸ್ಯಗಳನ್ನು ದೂರಗೊಳಿಸುವ ಗುಣಧರ್ಮ ಎಳ್ಳು ಬೆಲ್ಲಗಳಿಗಿದೆ. ನಮ್ಮ ಸಾಂಪ್ರದಾಯಿಕ ಹಬ್ಬಗಳನ್ನು ಪೂರ್ವಜರು ಧರ್ಮ ವಿಜ್ಞಾನಗಳ ನೆಲೆಗಟ್ಟಿನಲ್ಲಿಯೇ ರೂಪಿಸಿದ್ದಾರೆ.

ಅವುಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡಾಗಲೇ ಆರೋಗ್ಯಯುತ ಜೀವನ ನಮ್ಮದಾಗುತ್ತದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಅಡಿಯಿಡುವ ಸಂದರ್ಭ, ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಂಧಿ ಕಾಲ ಮೈಕೊರೆಯುವ ಚಳಿಗೆ ದೇಹದ ಉಷ್ಣತೆ ಹೊರಗೆ ಬರದೆ ಒಡಲಿನಲ್ಲಿ ಶೇಖರವಾಗುವುದರಿಂದ ಜಠರಾಗ್ನಿ ಪ್ರಬಲವಾಗಿ ಹಸಿವು ಹೆಚ್ಚಾಗುತ್ತದೆ.

ಸ್ನಿಗ್ಧ, ಪುಷ್ಟಿದಾಯಕ, ಸತ್ವಭರಿತ ಆಹಾರ ಬೇಕಾಗುತ್ತದೆ. ಅಂದರೆ ಎಳ್ಳು, ಶೇಂಗಾ, ಹಾಲು, ಗೋಧಿ, ಹೆಸರು, ಉದ್ದು, ಕಬ್ಬಿನ ರಸಗಳಂತಹ ಪದಾರ್ಥಗಳಿಂದ ತಯಾರಿಸಿದ ಖಾದ್ಯ ಗಳು ಹಾಗೂ ಸಿಹಿ ತಿಂಡಿಗಳು ಈ ಸಮಯಕ್ಕೆ ಸೂಕ್ತ. ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ ಈ ಹಬ್ಬದ ವಿಶೇಷ ಭಕ್ಷ್ಯಳು.

ಭಾರತೀಯ ವೈದ್ಯ ಶಾಸ್ತ್ರದಲ್ಲಿ (ಆಯುರ್ವೆದ) ಆಚಾರ್ಯ ಚರಕರು ಎಣ್ಣೆಗಳಲ್ಲಿ ಎಳ್ಳೆಣ್ಣೆ ಅತಿ ಶ್ರೇಷ್ಠವೆಂದು ದೃಢಪಡಿಸಿದ ಉಲ್ಲೇಖವಿದೆ. ಎಣ್ಣ್ಣೆ ಎಂದರೆ ಎಳ್ಳಿನಿಂದ ತೆಗೆದ ಜಿಡ್ಡು (ಎಳ್​ನೆಯ್). ವೇದಕಾಲದಿಂದಲೂ ಧಾರ್ವಿುಕ ವಿಧಿವಿಧಾನಗಳಲ್ಲಿ ಎಳ್ಳಿಗೆ ಹೋಮಧಾನ್ಯವೆಂದೇ ಮಹತ್ವ ನೀಡಿದ್ದಾರೆ. ಔಷಧೀಯ ಆಗರವಾದ ಎಳ್ಳು ಈ ಸಮಯಕ್ಕೆ ಅತಿ ಸೂಕ್ತ. ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಹಿಮೋಗೊ್ಲೕಬಿನ್ ಹೆಚ್ಚಳಕ್ಕೆ ಸಹಕಾರಿ. ಸಿಹಿ ಸಂತೋಷದ ಪ್ರತೀಕ.

ಇವೆರಡನ್ನೂ ಸಮನ್ವಯಗೊಳಿಸಿ ವಿನಿಮಯಿಸಿಕೊಳ್ಳುವುದು ಪ್ರೀತಿ ವಿಶ್ವಾಸ ಬೆಸೆಯುವ ದ್ಯೋತಕ. ಅಂದು ಮನೆಯ ಚಿಕ್ಕ ಮಕ್ಕಳಿಗೆ ಕುಸುರೆಳ್ಳಿನ ಆಭರಣಗಳನ್ನು ತೊಡಿಸಿ ಕಳ್ಳೇಪುರಿ, ಗಜ್ಜರಿ (ಕ್ಯಾರಟ್) ತುಂಡುಗಳು, ಹಸಿರು ಕಡಲೆಕಾಯಿ ಕಬ್ಬಿನ ತುಂಡುಗಳ ಮಿಶ್ರಣದಿಂದ ಕರಿ ಎರೆದು ಆರತಿ ಎತ್ತಿ ದೃಷ್ಟಿ ತೆಗೆಯುವ ಸಂಪ್ರದಾಯವಿದೆ.

ವೈಜ್ಞಾನಿಕ ಮಹತ್ವ: ಎಳ್ಳಿನ ಸಸ್ಯಶಾಸ್ತ್ರೀಯ ಹೆಸರು ‘ಸಿಸಾನಮ್ ಇಂಡಿಕಮ್. ಪೆಡಿಲ್ಲಿಯೇಸಿ ಸಸ್ಯ ಕುಟುಂಬಕ್ಕೆ ಸೇರಿದ ಇದು ಸಮತಲ ಪ್ರದೇಶದ ಬೆಳೆ. ಇದರಲ್ಲಿ ಕಪ್ಪು ಕಂದು ಬಿಳಿ ಬೀಜಗಳನ್ನು ಹೊಂದಿದ ಮೂರು ವಿಧಗಳಿವೆ. ಉತ್ತಮ ಗುಣಮಟ್ಟ್ಟ ಎಣ್ಣ್ಣೆಗೆ ಹಾಗೂ ಔಷಧ ತಯಾರಿಕೆಗೆ ಕಪ್ಪು ಎಳ್ಳನ್ನು ಉಪಯೋಗಿಸುತ್ತಾರೆ. ಬಿಳಿ ಎಳ್ಳು ಕ್ಯಾಲ್ಸಿಯಂ ಮತ್ತು ಕಂದು ಬೀಜಗಳು ಕಬ್ಬಿಣಾಂಶ ಭರಿತವಾಗಿವೆ.

ಎಳ್ಳು ದೇಹ ಪೋಷಣೆಗೆ ಸಹಾಯಕ. ಕ್ಯಾಲ್ಸಿಯಂ, ಕಬ್ಬಿಣ, ಅಯೋಡಿನ್, ಸತು, ಕೊಬಾಲ್ಟ್, ಮೊಲ್ಬಿಡಿನಂ ಮತ್ತು ನಿಕ್ಕೆಲ್ ಧಾತುಗಳಿಂದ ಸಮೃದ್ಧವಾಗಿದೆ. ಇದು ಪ್ರೊಟೀನ್​ನ ಆಗರ. ಇದರ ಮೃದುಕಾರಕ ಗುಣ ಚರ್ಮವನ್ನು ಮೃದುವಾಗಿ, ತಾರುಣ್ಯವಾಗಿರಿಸುತ್ತದೆ. ಅದಕ್ಕೆಂದೇ ಸಂಕ್ರಾಂತಿಯಂದು ಮೈಗೆ ಎಳ್ಳನ್ನು ಉಜ್ಜಿಕೊಂಡು ಸ್ನಾನ ಮಾಡುವ ಪದ್ಧತಿ ಕೆಲವೆಡೆ ಉಂಟು. ಚಳಿಗಾಲದಲ್ಲಿ ಚರ್ಮ ಒಡೆಯುವುದರಿಂದ ರಕ್ಷಣೆ ಒದಗಿಸುತ್ತದೆ. ವಿರೇಚಕ ಹಾಗೂ ಮೂತ್ರವರ್ಧಕ ಗುಣಗಳೂ ಇದರಲ್ಲಿವೆ.

ಆರೋಗ್ಯಕ್ಕೂ ಹಿತ: ಸ್ತ್ರೀಯರ ಅನಿಯಮಿತ ಮಾಸಿಕ ತೊಂದರೆಗೆ ಎಳ್ಳು ರಾಮಬಾಣ. ಎಳ್ಳನ್ನು ಬೆಲ್ಲದೊಡನೆ ಸೇರಿಸಿ ಪುಡಿ ಮಾಡಿ ನೆಲ್ಲಿಕಾಯಿ ಗಾತ್ರದ ಉಂಡೆಗಳನ್ನು ಮಾಡಿಟ್ಟುಕೊಂಡು ಮಾಸಿಕ ಅವಧಿಗೆ 4-5 ದಿನ ಮುಂಚಿತವಾಗಿ ದಿನಕ್ಕೆರಡರಂತೆ ಸೇವಿಸಿದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ. ಬಿಸಿ ನೀರಿನಲ್ಲಿ ಒಂದೆರಡು ಗಂಟೆ ನೆನೆಸಿಟ್ಟ ಎಳ್ಳನ್ನು ಒಂದು ಬಟ್ಟಲು ಹಾಲಿನೊಂದಿಗೆ ರುಬ್ಬಿ ಬೆಲ್ಲ ಸೇರಿಸಿ ಸೇವಿಸುವುದು ರಕ್ತಹೀನತೆಗೆ ಉತ್ತಮ ಮದ್ದು. ಎಲೆಗಳ ರಸವನ್ನು ಶಾಂಪೂವಿನಂತೆ ಬಳಸಿದರೆ ಹೊಟ್ಟು ನಿವಾರಣೆ ಆಗುತ್ತದೆ.

ಕೂದಲು ಬಿಳಿಯಾಗುವದನ್ನೂ ತಡೆಯುತ್ತದೆ. ಹುಣ್ಣು ಹಾಗೂ ಸುಟ್ಟ ಗಾಯಗಳಿಗೆ ಎಳ್ಳೆಣ್ಣೆ ಪರಿಣಾಮಕಾರಿ ಔಷಧ. ಅಡುಗೆಯಲ್ಲಿ, ಉಪ್ಪಿನಕಾಯಿ, ಚಟ್ನಿಗಳು, ಸೂಪ್, ಬ್ರೆಡ್ ತಯಾರಿಕೆಯಲ್ಲಿ ರುಚಿ ಹಾಗೂ ಸ್ವಾದ ಹೆಚ್ಚಿಸಲು ಎಳ್ಳನ್ನು ವಿಶೇಷವಾಗಿ ಬಳಸುತ್ತಾರೆ. ಸಾಸಿವೆಯಷ್ಟು ಪುಟ್ಟದಾಗಿರುವ ಎಳ್ಳಿನಲ್ಲಿ ಬ್ರಹ್ಮಾಂಡದಷ್ಟು ಔಷಧೀಯ ಭಂಡಾರವೇ ಆಡಗಿದೆ. ಇಂತಿರುವ ಎಳ್ಳನ್ನು ಸಂಪ್ರದಾಯದ ಚೌಕಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಬಳಸುವ ಪದ್ಧತಿ ಉಪಯುಕ್ತವಲ್ಲವೇ?! ಸಂಕ್ರಾಂತಿಯ ಈ ಸಂದರ್ಭದಲ್ಲಿ ಎಳ್ಳು ಬೆಲ್ಲ ಸೇವಿಸಿ ಉತ್ತಮ ಆರೋಗ್ಯ ಪಡೆಯೋಣ, ಒಳ್ಳೆಯ ಮಾತೂ ಆಡೋಣ.

ಉತ್ತರಾಯಣ ಪುಣ್ಯಕಾಲ

ಭೂಮಿಯು ಸೂರ್ಯನ ಸುತ್ತ ಬರುವ ಸಮಯ ಸಂವತ್ಸರ. ಇದನ್ನು ಎರಡು ಅಯನಗಳಾಗಿ ವಿಂಗಡಿಸಲಾಗಿದೆ. ಉತ್ತರಾಯಣ ಮತ್ತು ದಕ್ಷಿಣಾಯಣ. ಡಿಸೆಂಬರ್ 22ರಿಂದ ಜೂನ್ 21ರವರೆಗೆ ಉತ್ತರಾಭಿಮುಖ ಚಲನೆಯೇ ಉತ್ತರಾಯಣ. ಜೂನ್ 21ರಿಂದ ಡಿಸೆಂಬರ್ 22ರವರೆಗೆ ದಕ್ಷಿಣಾಭಿಮುಖ ಚಲನೆಯೇ ದಕ್ಷಿಣಾಯಣ. ಅಂತೆಯೇ 12 ರಾಶಿ, 12 ಮಾಸ. ಡಿಸೆಂಬರ್ 22 ಮತ್ತು ಜೂನ್ 21 ಚಲನ ದಿಕ್ಕು ಪಲ್ಲಟವಾಗುವ ದಿನಗಳು.

ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸೂರ್ಯನ ಕ್ರಮಣವೇ ಸಂಕ್ರಾಂತಿ. 30 ಡಿಗ್ರಿಗೆ ರಾಶಿಯಂತೆ ಪ್ರತಿ ತಿಂಗಳೂ ಸೂರ್ಯನ ಒಂದು ಸಂಕ್ರಾಂತಿ. ವರ್ಷದಲ್ಲಿ ಹಗಲು ರಾತ್ರಿಗಳು ಸಮನಾಗಿರುವ ದಿನಗಳು ಎರಡೇ. ಇವು ವಿಷುವತ್ಸಂಕ್ರಾಂತಿ ದಿನಗಳು. ಸೂರ್ಯೋದಯ, ಸೂರ್ಯುಸ್ತ ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ ಎಂಬುದಾದರೂ ದಿನವೂ ಉದಯ ಪೂರ್ವದ ಬಲಕ್ಕೆ ಅಂದರೆ ಉತ್ತರಕ್ಕೆ ಅಥವಾ ಎಡಕ್ಕೆ ಅಂದರೆ ದಕ್ಷಿಣಕ್ಕೆ ಆಗುತ್ತದೆ.

ಚಳಿಗಾಲ (ಇರುಳಿನ ಪ್ರಮಾಣ) ಹೆಚ್ಚಾದಂತೆ ಸೂರ್ಯನ ಉದಯ ಪೂರ್ವದ ಎಡಕ್ಕೆ ಅಂದರೆ ದಕ್ಷಿಣಕ್ಕೆ ಗೋಚರಿಸುವದು ಕೊನೆಗೊಂದು ದಿನ ದಕ್ಷಿಣದ ತುತ್ತತುದಿಯನ್ನು ತಲುಪಿ ಅಚಲವೆಂಬಂತೆ ಕಂಡು ಮರುದಿನದಿಂದ ಮರಳಿ ಉದಯ ವಿರುದ್ಧ ದಿಕ್ಕಿನಲ್ಲಾಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನಲ್ಲಿ ತನ್ನ ಚಲನೆಯನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಈ ಚಲನೆಗೆ ಭೂಮಿಯ ಅಕ್ಷರೇಖೆ ಇಪ್ಪತ್ತೆರಡೂವರೆ ಡಿಗ್ರಿ ವಾಲಿರುವದೇ ಕಾರಣ.

| ಪುಷ್ಪಾ ಮೋಹನ ಮುದಕವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net