ನಗೆ ಮೊಗದ ವೈ.ಎಂ.ಎನ್.

YMN
Published on

‘ಹ್ಯೂಮರ್ ಕ್ಲಬ್ ಇಂಟರ್​ನ್ಯಾಷನಲ್’ ಅನ್ನು ವೈ.ಎಂ.ಎನ್. ಮೂರ್ತಿಯವರು ಪ್ರಾರಂಭಿಸಿದಾಗ ಇಂದಿನ ಎಷ್ಟೋ ಹಾಸ್ಯ ಭಾಷಣಕಾರರು ಹುಟ್ಟೇ ಇರಲಿಲ್ಲ. 1970ರ ದಶಕದಲ್ಲಿ ಹಾಸ್ಯವನ್ನು ಜನಪ್ರಿಯಗೊಳಿಸಿ ನಗೆ ಹಬ್ಬಗಳನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿದ್ದ ಹಾಸ್ಯಪರಿಚಾರಕ ಅವರು.

ನಗುವು ನಂದಾದೀಪವಾಗಿರಲಿ

ಕೋಪವು ನಂದಿದ ದೀಪವಾಗಿರಲಿ

ಇದು ವೈ.ಎಂ.ಎನ್. ಸದಾ ಹೇಳುತ್ತಿದ್ದ ಮಾತು. ಇಂಥ ಅನೇಕ ನಲ್ನುಡಿಗಳನ್ನು ಅವರೇ ಸೃಷ್ಟಿಸಿದ್ದಾರೆ. ಅವುಗಳನ್ನು ಸ್ಟಿಕರ್ ರೂಪದಲ್ಲಿ ಹಂಚಿದ್ದಾರೆ. ಅವರು ಭಾಷಣಕ್ಕೆ ನಿಂತರೆ ಸಾಕು, ಇದು ಲಾಸ್ಟ್ ಜೋಕು ಎಂದು ನಾಲ್ಕಾರು ಲಾಸ್ಟ್ ಜೋಕ್​ಗಳನ್ನು ಹೇಳುತ್ತಿದ್ದರು. ಕೆಲವು ಸಲ ಮೊದಲು ಹೇಳಿದ ಜೋಕನ್ನೇ ಲಾಸ್ಟ್ ಜೋಕ್ ಆಗಿ ಲೇಟ್ ಕಮ್ಮರ್ಸ್​ಗೆ ರಿಪೀಟ್ ಮಾಡುತ್ತಿದ್ದರು. ‘‘ಕೆಲವರು ಸಭೆಗೆ ತಡವಾಗಿ ಬಂದಿರುತ್ತಾರೆ. ಅವರು ಇದನ್ನು ಕೇಳಿರುವುದಿಲ್ಲ’’ ಎಂದು ಮುಗುಳ್ನಗುತ್ತಿದ್ದರು.

ಹಾಸ್ಯಕ್ಕೆ ಡಿಮ್ಯಾಂಡ್ ಇಲ್ಲದೆ ಇದ್ದ 1970ರ ದಶಕದಲ್ಲಿ ವೈ.ಎಂ.ಎನ್. ಅವರು ಹ್ಯೂಮರ್ ಕ್ಲಬ್ ಇಂಟರ್​ನ್ಯಾಷನಲ್ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಅನೇಕ ಕಡೆ ಅದರ ಶಾಖೆಗಳನ್ನೂ ಪ್ರಾರಂಭಿಸಿದ್ದರು. ಇದರ ಹಿಂದೆ ಒಂದು ಕತೆಯೂ ಇದೆ. ನಾಡಿನ ಖ್ಯಾತ ಜರ್ನಲಿಸ್ಟ್ ಮತ್ತು ಪತ್ರಿಕೋದ್ಯಮಿ ಹಾಗೂ ಬರಹಗಾರ ಆಗಿದ್ದ ಖುಷ್ವಂತ್​ಸಿಂಗ್ ತಮ್ಮ ಲೇಖನದಲ್ಲಿ ‘ಭಾರತೀಯರಿಗೆ ಹಾಸ್ಯ ಪ್ರವಣತೆ ಇಲ್ಲ’ ಎಂದಿದ್ದರು. ಇದನ್ನು ಓದಿ ಸಿಟ್ಟಾದ ವೈ.ಎಂ.ಎನ್. ‘ಅದು ಯಾಕೆ’ ಎಂಬುದನ್ನು ಸಾಧಿಸಿ ತೋರಿಸಲು ಹೊರಟು ಯಶಸ್ವಿಯಾದರು.

ವೈ.ಎಂ.ಎನ್. ಮೂರ್ತಿ ಅವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪ್ರತಿ ತಿಂಗಳ ಕಡೆಯ ಭಾನುವಾರ ಹಾಸ್ಯ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಅಲ್ಲಿಗೆ ಖಾಯಂ ಆಗಿ ಬರುತ್ತಿದ್ದ ತ್ರಿಮೂರ್ತಿಗಳು ಎಂದರೆ ವೈ.ಎಂ.ಎನ್. ಮೂರ್ತಿ, ಪೊ›. ವಿ.ಕೆ. ದೊರೈಸ್ವಾಮಿ ಮತ್ತು ಡಾ. ಎಂ.ಎಚ್. ಶ್ರೀಕಂಠಯ್ಯ. ಇಂದು ಈ ಮೂವರೂ ಇಲ್ಲದಿರಬಹುದು. ಆದರೆ ಇವರು ಹರಿಸುತ್ತಿದ್ದ ನಗೆ ಬುಗ್ಗೆಯನ್ನು ಜನ ಮರೆತಿಲ್ಲ.

ವೈ.ಎಂ.ಎನ್. ಅವರ ಜೋಕುಗಳು ಸರಳ, ಸುಂದರ!

ಒಂದು ಮಧ್ಯಾಹ್ನ ಮನೆಗೆ ಊಟಕ್ಕೆ ಹೋದಾಗ ಮಗ ಕಾಣಲಿಲ್ಲ. ಮಡದಿಯನ್ನು ಕೇಳಿದರು,

‘‘ಆ ಈಡಿಯಟ್ ಎಲ್ಲಿ..?’’ ಅಂತ.

‘‘ಕ್ರಿಕೆಟ್ ಆಡಲು ಹೋಗಿದ್ದಾನೆ’ ಎಂದಳು ಮಡದಿ.

‘‘ಅರೇ, ನಾನು ನನ್ನ ಮಗನ ಹೆಸರು ಹೇಳಲಿಲ್ಲ, ಆದರೂ ನಿನಗೆ ಹೇಗೆ ಗೊತ್ತಾಯ್ತು..?’’ ಎಂದಾಗ ಮಡದಿ ಸರಳವಾಗಿ ಉತ್ತರ ಕೊಟ್ಟಳು, ‘‘ಈ ಮನೆಯಲ್ಲಿ ಇರೋದೇ ಇಬ್ಬರು..! ನೀವು ಇಲ್ಲಿದ್ದೀರ ಅಂದ ಮೇಲೆ, ನಿಮ್ಮ ಮಗನ ಬಗ್ಗೇನೇ ಕೇಳ್ತಾ ಇದ್ದೀರ ಅಂತ ನನಗೆ ಖಾತ್ರಿ ಆಯ್ತು’’ ಎಂದಳು. ವೈ.ಎಂ.ಎನ್. ಗಪ್​ಚುಪ್..!

ಅವರು ಅನೇಕ ಕಡೆಗಳಿಗೆ ನನ್ನನ್ನು ತಮ್ಮ ಜತೆ ಕರೆದುಕೊಂಡು ಹೋಗಿದ್ದು ನನ್ನ ಅದೃಷ್ಟ. ಮೂಡುಬಿದರೆ, ಹಾಸನ, ತುಮಕೂರು ಮೊದಲಾದ ಕಡೆ ನಡೆದ ನಗೆ ಹಬ್ಬಗಳಲ್ಲಿ ನನಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಅವರ ಸ್ವಂತ ಕಾರಿನಲ್ಲೇ ಎಲ್ಲಾ ಕಡೆಗೆ ಪ್ರಯಾಣ..! ಸ್ವತಃ ತಾವೇ ಡ್ರೈವ್ ಮಾಡುತ್ತಿದ್ದರು.

20 ವರ್ಷಗಳ ಹಿಂದಿನ ವಿಷಯ. ತುಮಕೂರಿನಲ್ಲಿ ಹಾಸ್ಯ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿಯುವ ವೇಳೆಗೆ ರಾತ್ರಿ 9 ಗಂಟೆ ಆಯ್ತು. ರಾತ್ರಿ ಡ್ರೈವಿಂಗ್ ನನಗೆ ಕಷ್ಟ. ಇಲ್ಲೇ ಹೋಟೆಲ್​ನಲ್ಲಿ ಇದ್ದು ಬೆಳಿಗ್ಗೆ ಹೋಗೋಣ ಎಂದರು. ತುಮಕೂರಿನ ನಂಜುಂಡೇಶ್ವರ ಹೋಟೆಲ್​ನಲ್ಲಿ ಸಿಂಗಲ್ ರೂಂ ಮಾತ್ರ ಲಭ್ಯವಿತ್ತು. ಸಿಂಗಲ್ ರೂಮಿನಲ್ಲಿ ಎಕ್ಸ್​ಟ್ರಾ ಬೆಡ್ ಹಾಕಿಸಿದರು. ಮಂಚದ ಮೇಲೆ ಒಬ್ಬರು, ನೆಲದ ಮೇಲೆ ಒಬ್ಬರು ಮಲಗಬೇಕಾಗಿತ್ತು. ನಾನು ನೆಲದ ಮೇಲೆ ಮಲಗಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾಗ ವೈ.ಎಂ.ಎನ್. ಒಪ್ಪಲಿಲ್ಲ. ಅವರು ನೆಲದ ಮೇಲೆ ಮಲಗಿ ನನಗೆ ಮಂಚ ಬಿಟ್ಟುಕೊಟ್ಟರು. ಕುರ್ಜಾಲ್ ಫಾರ್ವಸೂಟಿಕಲ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ನನಗಿಂತ 25 ವರ್ಷ ಹಿರಿಯರೂ ಆದ ವೈ.ಎಂ.ಎನ್. ಅವರ ಸರಳತೆಗಾಗಿ ಈ ಉದಾಹರಣೆ.

ಪ್ರತಿ ವರ್ಷ ಜನವರಿ 26 ಮತ್ತು ಆಗಸ್ಟ್ 15 ಇಡೀ ದಿನ ಗಾಯನ ಸಮಾಜದಲ್ಲಿ ಸಂಭ್ರಮದ ಕಾರ್ಯಕ್ರಮ ಮಾಡಿ ಅನೇಕ ಹಾಸ್ಯ ಭಾಷಣಕಾರರಿಗೆ ಅವಕಾಶ ಕೊಡುತ್ತಿದ್ದರು. ಹ್ಯೂಮರ್ ಕ್ಲಬ್ ಇಂಟರ್​ನ್ಯಾಷನಲ್ ಬುಲೆಟಿನ್ ಎಂಬ ತಮ್ಮ ಇಂಗ್ಲಿಷ್ ಮಾಸಿಕದಲ್ಲಿ ಉತ್ತಮ ಜೋಕುಗಳನ್ನು ಸಂಗ್ರಹಿಸಿ ನೀಡುತ್ತಿದ್ದರು. ‘ನಾಟ್ ಫಾರ್ ಸೇಲ್ , ನಾಟ್ ಈವನ್ ಫಾರ್ ಮನಿ’ ಎಂದು ಬುಲೆಟಿನ್ ಮೇಲೆ ಇರುತ್ತಿತ್ತು.

ವೈ.ಎಂ.ಎನ್. ಮೂರ್ತಿ ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್​ಗೆ ಪ್ರತಿನಿತ್ಯ ಸಂಜೆ 4.30ಕ್ಕೆ ಬಂದು ಅಲ್ಲಿರುವ ಬಡ ವರ್ತಕರಿಗೆ ಜೋಕ್ ಹೇಳಿ ನಗಿಸುತ್ತಿದ್ದರು. ಬಂದು ಹೋಗುವವರಿಗೆಲ್ಲಾ ಸ್ಟಿಕರ್ ಕೊಟ್ಟು ಹಾಸ್ಯ ಹಂಚುತ್ತಿದ್ದರು. ಇದು ಅವರ ಹಾಸ್ಯಾಭಿಮಾನ..! ಅವರ ಗರಡಿಯಲ್ಲಿ ಪಳಗಿದ ಅನೇಕ ಭಾಷಣಕಾರರು ಅನಂತರದ ದಿನಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಹ್ಯೂಮರ್ ಕ್ಲಬ್ ಇಂಟರ್​ನ್ಯಾಷನಲ್ ಅನ್ನು ವೈ.ಎಂ.ಎನ್. ಪ್ರಾರಂಭಿಸಿದಾಗ ಇಂದಿನ ಎಷ್ಟೋ ಹಾಸ್ಯ ಭಾಷಣಕಾರರು ಹುಟ್ಟೇ ಇರಲಿಲ್ಲ. 1970ರ ದಶಕದಲ್ಲಿ ಹಾಸ್ಯವನ್ನು ಜನಪ್ರಿಯಗೊಳಿಸಿ ನಗೆ ಹಬ್ಬಗಳನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗಿದ್ದ ವೈ.ಎಂ.ಎನ್. ಮೂರ್ತಿ ಯಾವ ರೀತಿಯ ಪ್ರಚಾರವನ್ನೂ ಬಯಸದೇ ಎಲೆಮರೆಯ ಕಾಯಿಯಂತೆ ಇದ್ದರು. ಇದೇ ಮಾರ್ಚ್ 8ರಂದು ತಮ್ಮ 95ನೇ ವಯಸ್ಸಿನಲ್ಲಿ ನಗುನಗುತ್ತಲೇ ಮರೆಯಾದರು. ಹಾಸ್ಯ ಪ್ರಪಂಚಕ್ಕೆ ಅವರು ಮಾಡಿರುವ ಸೇವೆ ಸ್ಮರಣೀಯ.

| ಎಂ.ಎಸ್. ನರಸಿಂಹಮೂರ್ತಿ

ಪ್ರತಿಕ್ರಿಯಿಸಿ: sundayvijayavani@gmail.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net