

ಆಧ್ಯಾತ್ಮಿಕ ಪರಿಭಾಷೆಯಲ್ಲಿ ‘ಜ್ಞಾನೋದಯ’ ಎಂಬ ಪದವಿದೆ. ಅಂದರೆ, ಸೃಷ್ಟಿಯ-ಈ ಬದುಕಿನ ಅಂತಿಮಸತ್ಯವನ್ನು ಅರಿತವನು; ಸ್ವಸ್ವರೂಪವನ್ನು ತಿಳಿದವನು ಎಂಬೆಲ್ಲ ಅರ್ಥಗಳಿವೆ. ಈ ಪದ ತುಂಬಾ ಅರ್ಥವ್ಯಾಪ್ತಿಯುಳ್ಳದು. ಜ್ಞಾನೋದಯ ಹೊಂದಿದ ವ್ಯಕ್ತಿ ಮಾರ್ಗದರ್ಶಕನಾಗುತ್ತಾನೆ; ತನ್ನ ಬೋಧನೆಯಿಂದ ಇತಿಹಾಸದಲ್ಲಿ ದಾಖಲಾಗುತ್ತಾನೆ; ಲಕ್ಷಾಂತರ ಜನರು ಆತನ ಬೋಧನೆಯಿಂದ ತಮ್ಮ ಜೀವನವನ್ನು ಮಾರ್ಪಡಿಸಿಕೊಂಡು ಹೊಸ ಬೆಳಕಿನಲ್ಲಿ ಹೆಜ್ಜೆಹಾಕುತ್ತಾರೆ. ಹೀಗೆಂದೇ ವಿಶೇಷವಾಗಿ ಭಾರತದಲ್ಲಿ ಇಂಥ ವ್ಯಕ್ತಿಗಳಿಗೆ ವಿಶಿಷ್ಟ ಸ್ಥಾನಮಾನ, ಗೌರವ ಇದೆ. ಇಂಥ ಜ್ಞಾನೋದಯ ಯಾವ ಕ್ಷಣದಲ್ಲಿ ಎಲ್ಲಿ ಬೇಕಾದರೂ ಸಂಭವಿಸಿಬಿಡಬಹುದು. ಹಾಗಂತ ಇದು ಒಂದೇ ದಿನದಲ್ಲಿ ಅಥವಾ ಕ್ಷಣದಲ್ಲಿ ಆಗುವಂಥದಲ್ಲ.ಆ ಘಟನೆಗೆ ದೀರ್ಘಕಾಲದ ಪೂರ್ವತಯಾರಿ ಇರುತ್ತದೆ; ತಪಸ್ಸಿನಂತಹ ಬದುಕಿರುತ್ತದೆ; ಸಾಮಾನ್ಯಜನರು ಮೀರಲಾಗದ ಆಸೆಆಕಾಂಕ್ಷೆಗಳ ಬಲೆಯಿಂದ ಈತ ಪಾರಾಗಿರುತ್ತಾನೆ. ಅದರ ಫಲಶ್ರುತಿಯಾಗಿ ಜ್ಞಾನಿಯಾಗಿ ಹೊರಹೊಮ್ಮುತ್ತಾನೆ. ‘ಬೇರೆಯವರನ್ನು ಅರಿಯುವುದು ಬುದ್ಧಿವಂತಿಕೆ. ನಿನ್ನನ್ನು ನೀನು ಅರಿಯುವುದು ಜ್ಞಾನೋದಯ’ ಎಂದು ಹೇಳುತ್ತಾನೆ ಚೀನೀ ತತ್ತ್ವಜ್ಞಾನಿ ಲಾವೊ ತ್ಸೆ. ‘ನಾನು ಏನೂ ಬದಲಾಗಲಿಲ್ಲ. ಆದರೆ ತಿಳಿವು ಉಂಟಾಯಿತು’ ಎಂಬುದು ಜ್ಞಾನೋದಯದ ಕುರಿತು ಇರುವ ಸರಳ, ಅಷ್ಟೇ ಅರ್ಥಗರ್ಭಿತ ವ್ಯಾಖ್ಯಾನ. ‘ವಂಚಕನಿಗಾಗಿ ನಾನು ಎಲ್ಲೆಲ್ಲೂ ಹುಡುಕಾಡಿದೆ. ಆದರೆ ಒಬ್ಬರೂ ಸಿಗಲಿಲ್ಲ. ನಂತರ ನನ್ನೊಳಗೇ ಹುಡುಕಾಡಿದಾಗ ಅಲ್ಲಿ ಸಿಕ್ಕಿದ ನೋಡಿ’ ಎನ್ನುವ ಮೂಲಕ, ಆತ್ಮಾವಲೋಕನದ ಅಗತ್ಯವನ್ನು ಸರಳವಾಗಿ, ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತಾರೆ ಸಂತ ಕಬೀರ. ಆದರೆ ಇದು ಅಷ್ಟು ಸುಲಭವೆ? ಹಾಗಾಗಿದ್ದರೆ ಈ ಜಗತ್ತು ವಾಸಿಸಲು ಇನ್ನೂ ಎಷ್ಟು ಸುಂದರವಾಗಿರುತ್ತಿತ್ತಲ್ಲವೆ!
ಹಾಗೇ, ಮನುಕುಲದ ನಿತ್ಯಜೀವನದಲ್ಲಿ ಸಹ ಅನೇಕರು ಕೆಲವು ವಿಶಿಷ್ಟ ಕ್ಷಣಗಳಲ್ಲಿ ತಳೆದ ನಿರ್ಣಯಗಳು, ಕೈಗೊಂಡ ನಿಶ್ಚಯಗಳು ಮುಂದೆ ಇತಿಹಾಸವನ್ನೇ ಸೃಷ್ಟಿಸಿಬಿಡುತ್ತವೆ. ಮೊದಮೊದಲು ಇದೇನು ಮಹಾ ಎಂದು ಜನರು ಭಾವಿಸುವಂಥದು ಮುಂದೆ ಮಹಾವೃಕ್ಷವಾಗಿ ಎದ್ದುನಿಂತು ಬೆರಗುಗೊಳಿಸುತ್ತದೆ. ಟಾಟಾ ಕಂಪನಿಯ ಮುಖ್ಯಸ್ಥರಾಗಿದ್ದ ರತನ್ ಟಾಟಾ (ಈಗ ಅವರು ಟಾಟಾ ಸಮೂಹದ ಚೇರ್ಮನ್ ಎಮರ್ಟಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ) ಒಂದು ದಿನ ಹೀಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಒಂದು ದೃಶ್ಯ ಗೋಚರಿಸುತ್ತದೆ. ವ್ಯಕ್ತಿಯೊಬ್ಬ ಸ್ಕೂಟರಿನಲ್ಲಿ ಹೆಂಡತಿ ಮತ್ತು ಮೂರು ಮಕ್ಕಳನ್ನು ಕೂಡ್ರಿಸಿಕೊಂಡು ಹೊರಟಿದ್ದ. ಟಾಟಾಗೆ ಈ ಸನ್ನಿವೇಶ ಕಂಡು ಅಚ್ಚರಿ ಜತೆಗೆ ಆಘಾತ. ಸಣ್ಣ ಸ್ಕೂಟರಿನಲ್ಲಿ ಹೀಗೆ ಅಪಾಯದಿಂದ ಸಾಗುವ ಬದಲು ಕಾರಿನಲ್ಲೇ ಹೋಗಬಹುದಲ್ಲ ಎಂಬ ಆಲೋಚನೆ ಮೂಡುತ್ತದೆ. ಆದರೆ ಮರುಕ್ಷಣವೇ ಮಧ್ಯಮವರ್ಗದವರಿಗೆಲ್ಲ ಕಾರು ಖರೀದಿಸುವ ಶಕ್ತಿ ಎಲ್ಲಿರುತ್ತದೆ ಎಂಬ ವಾಸ್ತವವೂ ಅರಿವಾಗುತ್ತದೆ. ಆಗಲೇ ಅವರಿಗೊಂದು ಐಡಿಯಾ ಸ್ಪುರಿಸುತ್ತದೆ. ಕಡಿಮೆ ದರದಲ್ಲಿ ಕಾರು ಸಿಗುವಂತಾದರೆ ಮಧ್ಯಮವರ್ಗದ ಜನರೂ ಖರೀದಿಸಬಹುದಲ್ಲ ಎಂಬ ಹೊಳಹು ಮುಂದೆ ನ್ಯಾನೋ ಕಾರಿನ ಪರಿಕಲ್ಪನೆಗೆ ಮೂಲವಾಗುತ್ತದೆ. ರತನ್ ಸುಮ್ಮನಿರುವ ಆಸಾಮಿಯಲ್ಲ. ಎಷ್ಟೇ ತೊಂದರೆ ಎದುರಾದರೂ ಅಗ್ಗದ ಬೆಲೆಯ ಕಾರನ್ನು ರಸ್ತೆಗಿಳಿಸಿಯೇಬಿಟ್ಟರು. ನ್ಯಾನೊದಿಂದಾಗಿ ‘ರಸ್ತೆ ಕ್ರಾಂತಿ’ಯೇ ಆಗುತ್ತದೆ ಎಂದು ಹಲವರು ಅಂದಾಜಿಸಿದ್ದರು. ಆದರೆ, ಯಾಕೋ ಏನೋ ಮಾರುಕಟ್ಟೆಯಲ್ಲಿ ಲಕ್ಷ ರೂ. ಬೆಲೆಯ ನ್ಯಾನೊ ಕಾರು ಅಂದುಕೊಂಡಷ್ಟು ಸಂಚಲನ ಮೂಡಿಸಲೇ ಇಲ್ಲ. ಕಾರು ಎಂದರೆ ಪ್ರತಿಷ್ಠೆ ಎಂದು ಜನರು ಪರಿಭಾವಿಸಿ ‘ಅಗ್ಗದ ಬೆಲೆಯ ಕಾರು’ಹೊಂದಲು ಅಷ್ಟು ಇಷ್ಟಪಡಲಿಲ್ಲವೋ ಏನೋ, ಟಾಪ್ ಗೇರ್ಗೆ ಹೋಗದ ನ್ಯಾನೊ ಕಾರು ಕೊನೆಗೊಂದು ದಿನ ಮಾಯವಾಗಿಬಿಟ್ಟಿತು.
ಹಾಗಂತ ರತನ್ ಟಾಟಾ ಕನಸು ಕಾಣಲು ಜಿಪುಣತನ ತೋರಿದವರಲ್ಲ. ಅವರದೇನಿದ್ದರೂ ದೊಡ್ಡ ದೊಡ್ಡ ಕನಸುಗಳೇ. ಕನಸು ಕಂಡು ಸುಮ್ಮನಾಗುವ ಪೈಕಿಯೂ ಅಲ್ಲ. ಅದರ ಸಾಕಾರಕ್ಕೆ ಪಟ್ಟುಹಿಡಿದು ಶ್ರಮಿಸುವ ಛಲಗಾರ. ಹೀಗೆಂದೇ ಅವರ ನೇತೃತ್ವದ ಅವಧಿಯಲ್ಲಿ ಟಾಟಾ ಸಮೂಹ ತನ್ನ ರೆಂಬೆಕೊಂಬೆಯನ್ನು ಮತ್ತಷ್ಟು ವಿಸ್ತಾರಕ್ಕೆ ಚಾಚಿತು. ವಿದೇಶಗಳಲ್ಲಿ ಸಹ ಬೃಹತ್ ಕಂಪನಿಗಳನ್ನು ಸ್ವಾಧೀನ ಮಾಡಿಕೊಂಡು ತನ್ನ ಇರಾದೆಯನ್ನು ಸ್ಪಷ್ಟಪಡಿಸಿತು. ಈಗ ಟಾಟಾದ ಮಡಿಲಿಗೆ ಏರ್ ಇಂಡಿಯಾ ಬಂದು ಕುಳಿತಿದೆ. ಹೀಗಾಗಿ ಉದ್ಯಮವಲಯದಲ್ಲಿ ದೊಡ್ಡ ದೊಡ್ಡ ಚರ್ಚೆಗಳು ನಡೆಯುತ್ತಿವೆ.
ಆದರೆ, ಏರ್ ಇಂಡಿಯಾ ಟಾಟಾ ಸಮೂಹದ ಪಾಲಾಗಿರುವುದು, ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣಕ್ಕೆ ಮೋದಿ ಸರ್ಕಾರ ರತ್ನಗಂಬಳಿ ಹಾಸಿರುವುದರ ಮತ್ತೊಂದು ನಿದರ್ಶನ ಎಂಬ ಟೀಕೆಗಳೂ ಕೇಳಿಬಂದಿವೆ. ಇದಕ್ಕೆ ಅದಾನಿ ಮತ್ತೊಂದು ಮಗದೊಂದು ಉದಾಹರಣೆಗಳನ್ನು ವಿಪಕ್ಷಗಳ ನಾಯಕರು ನೀಡುತ್ತಿದ್ದಾರೆ. ಸರ್ಕಾರದ ಪಾಲುದಾರಿಕೆ ಇದ್ದರೆ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿ ವಲಯದವರು ಖರೀದಿಸಲು ಮುಂದೆ ಬರುವುದಿಲ್ಲ ಎಂಬುದು ಏರ್ ಇಂಡಿಯಾ ವ್ಯವಹಾರದ ವೇಳೆ ಸರ್ಕಾರಕ್ಕೆ ಮನದಟ್ಟಾಗಿತ್ತು. ಹಾಗೆಂದೇ ನೂರಕ್ಕೆ ನೂರು ಪಾಲನ್ನು ಮಾರಾಟಕ್ಕಿಟ್ಟಿತು. ಭಾರತ್ ಪೆಟ್ರೋಲಿಯಂ ಮತ್ತು ಶಿಪ್ಪಿಂಗ್ ಕಾರ್ಪೆರೇಷನ್ ಆಫ್ ಇಂಡಿಯಾ ಮುಂತಾದವನ್ನು ಸಹ ಕೇಂದ್ರ ಸರ್ಕಾರ ಪರಭಾರೆಗೆ ಇಟ್ಟಿದೆ. ಇದಲ್ಲದೆ, ಬಿಪಿಸಿಎಲ್, ಪವನ್ ಹನ್ಸ್, ಸೆಂಟ್ರಲ್ ಎಲೆಕ್ಟ್ರಾನಿಕ್ಸ್, ನೀಲಾಚಲ್ ಇಸ್ಪಾತ್ ನಿಗಮ ಮುಂತಾದವು ಸಹ ಮಾರಾಟಕ್ಕೆ ಕ್ಯೂನಲ್ಲಿ ನಿಂತಿವೆ. ಖರೀದಿದಾರರು ಯಾವಾಗ ಬರುತ್ತಾರೋ ನೋಡಬೇಕು. ಹೀಗಾಗಿಯೇ ಸರ್ಕಾರಿ ಉದ್ಯಮಗಳ ಖಾಸಗೀಕರಣದ ಪರ-ವಿರೋಧ ಚರ್ಚೆಗಳು ಮತ್ತೆ ದೊಡ್ಡಮಟ್ಟದಲ್ಲಿ ನಡೆಯುತ್ತಿವೆ. ಇದರ ನಡುವೆಯೇ, ‘ಇದರಿಂದ ಏನು ತೊಂದರೆ ಇದೇರೀ? ಹೇಗೂ ಈ ಏರ್ ಇಂಡಿಯಾ ನಷ್ಟದಲ್ಲಿತ್ತು. ಸರ್ಕಾರದಿಂದ ನಡೆಸಲು ಸಾಧ್ಯವೇ ಇರಲಿಲ್ಲ. ಟಾಟಾದಂಥ ಕಂಪನಿಯ ಪಾಲಾಗಿದ್ದು ಒಳ್ಳೆಯದೇ ಆಯ್ತು ಬಿಡಿ. ಇಲ್ಲವಾದಲ್ಲಿ ಏರ್ ಇಂಡಿಯಾ ಮುಚ್ಚಿದ್ದರೂ ಅಚ್ಚರಿ ಇರಲಿಲ್ಲ. ಅದೂ ಅಲ್ಲದೆ, ಟಾಟಾ ಭಾರತೀಯ ಕಂಪನಿಯೇ ತಾನೇ? ವಿದೇಶದ್ದೇನೂ ಅಲ್ಲವಲ್ಲ?’ ಎಂದೂ ಕೆಲವರು ಪ್ರತಿಪಾದಿಸುತ್ತಾರೆ. ಇದೇನೇ ಇದ್ದರೂ, ಟಾಟಾ ಸಮೂಹ ಮತ್ತೊಂದು ನೆಗೆತಕ್ಕಂತೂ ಸಜ್ಜಾಗಿದೆ. ಟಾಟಾ ಚೇರ್ಮನ್ ಎಮರ್ಟಿಸ್ ರತನ್ ಟಾಟಾ ಮತ್ತು ಟಾಟಾ ಸಮೂಹದ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರೆದುರು (ಕಾಪೋರೇಟ್ ವಲಯದಲ್ಲಿ ‘ಚಂದ್ರ’ ಹೆಸರಿನಿಂದ ಪರಿಚಿತರು) ಈಗ ಆಗಸದಷ್ಟೇ ಸವಾಲು ನಿಂತಿದೆ. ಈ ಜೋಡಿ ಸವಾಲಿಗೆ ಹೆದರುವವರಲ್ಲ. ಈ ಮಾತಿಗೆ ಪ್ರಬಲ ಪುರಾವೆಗಳಿವೆ. ಸೈರಸ್ ಮಿಸ್ತ್ರಿ ನೇಮಕದ ತರುವಾಯ ಅವರ ಕೆಲ ನಿರ್ಣಯಗಳು ಮತ್ತು ಕಾರ್ಯಶೈಲಿ ಬಗ್ಗೆ ಟಾಟಾ ಆಡಳಿತ ಮಂಡಳಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ, ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದ ನಂತರದಲ್ಲಿ ಟಾಟಾ ಸಮೂಹ ಇಕ್ಕಟ್ಟಿಗೆ ಸಿಲುಕಿತ್ತು. ಆ ಹಂತದಲ್ಲಿ ರತನ್ ಟಾಟಾ ಅವರೇ ಕೆಲ ಕಾಲ ಜವಾಬ್ದಾರಿ ನಿಭಾಯಿಸಿದರೂ ಅದು ಕಾಯಂ ಪರಿಹಾರ ಆಗುವಂತಿರಲಿಲ್ಲ. ಆಗ ಅಳೆದುಸುರಿದು ಆಲೋಚಿಸಿ, ಟಾಟಾ ಸಮೂಹದ ಭಾಗವೇ ಆಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ನ ಚುಕ್ಕಾಣಿ ಹಿಡಿದಿದ್ದ ಎನ್.ಚಂದ್ರಶೇಖರನ್ ಅವರನ್ನು ಟಾಟಾ ಸಮೂಹದ ನೇತೃತ್ವ ವಹಿಸಲು ಕರೆತರಲಾಯಿತು. ನಂತರದಲ್ಲಿ ಟಾಟಾ ಸಮೂಹದ ಕಾರ್ಯ ಎಂದಿನಂತೆ ಸಾಗಿತು. ಟಿಸಿಎಸ್ ಭಾರತದ ನಂಬರ್ ಒನ್ ಐಟಿ ಕಂಪನಿಯಾಗುವಲ್ಲಿ ಚಂದ್ರಶೇಖರನ್ ಯೋಗದಾನ ಮಹತ್ವದ್ದು. ಅಲ್ಲದೆ ರತನ್ ಟಾಟಾಗೆ ಅತ್ಯಂತ ವಿಶ್ವಾಸಿಕ ಕೂಡ.
ವಿಜಯ ಮಲ್ಯ ಒಡೆತನದ ಕಿಂಗ್ಫಿಷರ್ ಏರ್ಲೈನ್ಸ್, ನರೇಶ್ ಗೋಯೆಲ್ ಮಾಲೀಕತ್ವದ ಜೆಟ್ ಏರ್ವೇಸ್ ಮುಂತಾದ ವಿಮಾನಯಾನ ಸಂಸ್ಥೆಗಳ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ‘ಅದಕ್ಕೆ ಕಾರಣಗಳೂ ಬೇರೆ ಬೇರೆ ಇವೆ. ಎಲ್ಲ ಸಂಸ್ಥೆಗಳನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಲು ಬರುವುದಿಲ್ಲ. ಆದರೂ ಭಾರತೀಯ ವಿಮಾನಯಾನ ಉದ್ಯಮ ಬಿಕ್ಕಟ್ಟು-ಇಕ್ಕಟ್ಟು ಎದುರಿಸುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ’ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಕರೊನಾ ಕಾರಣದಿಂದಾಗಿ ನಿರ್ಬಂಧಗಳ ಪರಿಣಾಮವಾಗಿ ವಿಮಾನಯಾನ ಸಂಸ್ಥೆಗಳು ಸಹ ಅಪಾರ ನಷ್ಟ ಅನುಭವಿಸಿವೆ. ಈಗ ಕ್ರಮೇಣ ರಾಷ್ಟ್ರೀಯ ಮತ್ತು ಆಂತಾರಾಷ್ಟ್ರೀಯ ವಿಮಾನ ಸಂಚಾರ ಶುರುವಾಗಿದೆಯಾದರೂ, ಈ ರಂಗ ಚೇತರಿಕೆ ಕಾಣುವುದು
ಸುಲಭವಿಲ್ಲ ಎಂಬುದು ಪರಿಣತರ ಅನಿಸಿಕೆ. ಆದರೂ, ಟಾಟಾ ಸಮೂಹಕ್ಕಿರುವ ಹೆಸರು, ಇಮೇಜ್ ಕಾರಣಕ್ಕೆ ಏರ್ ಇಂಡಿಯಾ ಹೊಸ ಎತ್ತರಕ್ಕೆ ಹಾರಿದರೂ ಅಚ್ಚರಿ ಇಲ್ಲ ಎಂದು ಸಹ ಅಭಿಪ್ರಾಯವಿದೆ. ಇದಕ್ಕೆ ಪೂರಕ ಎಂಬಂತೆ, ಟಾಟಾ ಸಂಸ್ಥೆ ಈಗಾಗಲೇ ವಿಮಾನಯಾನ ರಂಗದಲ್ಲಿ ಸಕ್ರಿಯವಾಗಿದೆ. ಒಂದು-ಸಿಂಗಾಪುರ ಏರ್ಲೈನ್ಸ್ ಲಿಮಿಟೆಡ್ ಜತೆ ಜಂಟಿ ಪಾಲುದಾರಿಕೆಯಲ್ಲಿ (ಶೇ.51:49 ಷೇರು) ವಿಸ್ತಾರಾ ಏರ್ಲೈನ್ಸ್. ಇನ್ನೊಂದು- ಕಡಿಮೆ ಯಾನದರದ ಏರ್ ಏಷ್ಯಾ ಇಂಡಿಯಾ. ಇದರಲ್ಲಿ ಟಾಟಾ ಪಾಲು ಶೇ.81ರಷ್ಟಿದೆ. ಈ ಎಲ್ಲ ಲೆಕ್ಕದಲ್ಲಿ ನೋಡಿದರೆ ಟಾಟಾ ಸಮೂಹಕ್ಕೆ ದೇಶೀಯ ವಿಮಾನಯಾನ ವಲಯದಲ್ಲಿ ಶೇ.26 ಪಾಲು ಸಿಗಬಹುದು.
ಇಂಡಿಗೋ ಸಂಸ್ಥೆ ಶೇ.57 ಮಾರುಕಟ್ಟೆ ಪಾಲು ಹೊಂದಿದೆ. ‘ಅಧಿಕ ಕಾರ್ಯಾಚರಣಾ ವೆಚ್ಚ, ಕರೊನಾ ಸಾಂಕ್ರಾಮಿಕದ ಪರಿಣಾಮಗಳು, ದೇಶಿಯ ವಿಮಾನಯಾನದಲ್ಲಿ ಇರುವ ಕಡಿಮೆ ದರದ ಟ್ರೆಂಡ್- ಮುಂತಾದ ಅಂಶಗಳ ಹಿನ್ನೆಲೆಯಲ್ಲಿ ಲಾಭದ ಹಳಿಗೆ ಬರುವುದು ಟಾಟಾಗೆ ಬಹುದೊಡ್ಡ ಸವಾಲು’ ಎಂದು ತಜ್ಞರು ಪಟ್ಟಿಮಾಡುತ್ತಾರೆ. ಇಷ್ಟೆಲ್ಲ ಸವಾಲುಗಳನ್ನು ದಾಟಿ ಟಾಟಾ ಗೆದ್ದರೆ ಇತರ ಉದ್ಯಮಶೀಲರಿಗೂ ಅಲ್ಲೊಂದು ಪ್ರೇರಣೆ ಸಿಗುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ, ರತನ್ ಟಾಟಾ ಮತ್ತು ಎನ್.ಚಂದ್ರಶೇಖರನ್ ತಮ್ಮ ಕಾಪೋರೇಟ್ ಬದುಕಿನ ಮತ್ತೊಂದು ಬೃಹತ್ ಸವಾಲಿಗೆ ತೆರೆದುಕೊಳ್ಳುತ್ತಿದ್ದಾರೆ. ಮುಂದಿನ ಪಯಣ ಕುತೂಹಲಕಾರಿ.
ಕೊನೇ ಮಾತು: ಏರ್ ಇಂಡಿಯಾ ಟಾಟಾ ಸಮೂಹದ ಪಾಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸುತ್ತಿದ್ದಂತೆ ರತನ್ ಟಾಟಾ ಅವರು ‘Welcome back, Air India’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಾರಣವೂ ಇದೆ. 1932ರಲ್ಲೇ ಟಾಟಾ ಏರ್ಲೈನ್ಸ್ ಅಸ್ತಿತ್ವಕ್ಕೆ ಬಂದಿತ್ತು. 1948ರಲ್ಲಿ ಮೊದಲ ಅಂತಾರಾಷ್ಟ್ರೀಯ ಹಾರಾಟ ನಡೆಸಿತ್ತು. ಅದೇ ವರ್ಷ ಕೇಂದ್ರ ಸರ್ಕಾರ ಟಾಟಾ ಏರ್ಲೈನ್ಸ್ನಲ್ಲಿ ಶೇ.49 ಪಾಲು ಖರೀದಿಸಿತು. 1953ರಲ್ಲಿ ಏರ್ ಇಂಡಿಯಾ ರಾಷ್ಟ್ರೀಕರಣವಾಗುವುದರೊಂದಿಗೆ ಸರ್ಕಾರದ ತೆಕ್ಕೆಗೆ ಸೇರಿತು. ಈಗ ಮತ್ತೆ ಟಾಟಾ ಮಡಿಲಿಗೆ ಬಂದಿದೆ. ಈಗ ಜನರು ಟಾಟಾ ವಿಮಾನವನ್ನು ಹೇಗೆ ಸ್ವೀಕರಿಸುತ್ತಾರೆಂಬುದನ್ನು ಕಾದುನೋಡಬೇಕು...
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)