

ಶರೀರದ ಛಿದ್ರಗಳು, ಆಶಯಗಳು, ಅವಕಾಶಗಳು ಎಲ್ಲವೂ ಈ ಸ್ರೋತಸ್ಗೆ ಸಂಬಂಧಿಸಿದವು. ದೇಹದಲ್ಲಿ ಪೂರ್ಣವಾಗಿ ವ್ಯಾಪಿಸಿರುವ, ಶರೀರದ ಧಾತುಗಳಿಗೆ ಬೇಕಾದ ಪೋಷಕಗಳನ್ನು ಅವಯವಗಳಿಂದ ಅಥವಾ ಮೂಲಸ್ಥಾನದಿಂದ ಸಾಗಿಸಿ ಮತ್ತೆ ಧಾತುಗಳಿಂದ ದೇಹದ ಎಲ್ಲ್ಲ ಭಾಗಗಳಿಗೆ ತಲುಪಿಸಿ, ದೇಹಕ್ಕೆ ಬೇಡವಾದವುಗಳನ್ನು ಹೊರಗೆ ಹಾಕುವ ಬಲುದೊಡ್ಡ ಜಾಲವೇ ಸ್ರೋತಸ್ಗಳು. ಈ ದಾರಿಗಳಲ್ಲಿ ಅಡಚಣೆ ಉಂಟಾದರೆ, ಸುಗಮ ವಾಗಿ ಸಾಗಾಟ ನಡೆಯದಿದ್ದರೆ ವಾತ, ಪಿತ್ತ, ಕಫಗಳಲ್ಲಿ ಏರುಪೇರು ಉಂಟಾಗುತ್ತದೆ. ಇದು ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ.
ದೇಹದಲ್ಲಿ 13 ಪ್ರಮುಖ ಸ್ರೋತಸ್ಗಳ ಸರಣಿ ವ್ಯವಸ್ಥೆ ಇದೆ. ಉಸಿರಾಟಕ್ಕೆ ಸಂಬಂಧಿಸಿದ ಪ್ರಾಣವಹ ಸ್ರೋತಸ್, ನೀರಿನ ಸಮತೋಲನ ಕಾಪಾಡುವ ಉದಕವಹ ಸ್ರೋತಸ್, ಜೀರ್ಣವ್ಯೂಹದ ಅನ್ನವಹ ಸ್ರೋತಸ್, ಹೃದಯ ಸಂಬಂಧಿ ಹಾಗೂ ದುಗ್ಧರಸ ಪರಿಚಲನೆಯ ರಸವಹ ಸ್ರೋತಸ್, ರಕ್ತಾಂಶಗಳ ಕಾರ್ಯ ನಿರ್ವಹಿಸುವ ರಕ್ತವಹ ಸ್ರೋತಸ್, ಮಾಂಸಧಾತುವನ್ನು ಪೋಷಿಸುವ ಮಾಂಸವಹ ಸ್ರೋತಸ್, ಮೇದೋಧಾತುವನ್ನು ಸಮಪ್ರಮಾಣದಲ್ಲಿಟ್ಟು ಕಾರ್ಯವೆಸಗುವಂತೆ ಮಾಡುವ ಮೇದೋವಹ ಸ್ರೋತಸ್, ಮೂಳೆಗಳ ಸಮರ್ಪಕ ಕ್ಷಮತೆಗೆ ನೆರವಾಗುವ ಅಸ್ಥಿವಹ ಸ್ರೋತಸ್, ಮೂಳೆಗಳ ಒಳಭಾಗದಲ್ಲಿರುವ ಅಸ್ಥಿಮಜ್ಜೆಯ ದಕ್ಷತೆಗೆ ಪೂರಕವಾಗಿರುವ ಮಜ್ಜಾವಹ ಸ್ರೋತಸ್, ಸಂತಾನೋತ್ಪತ್ತಿ ವ್ಯವಸ್ಥೆಯ ಅಂಗಗಳ ಕಾರ್ಯಕ್ಷಮತೆ ನಿರ್ವಹಿಸುವ ಶುಕ್ರವಹ ಸ್ರೋತಸ್, ಮೂತ್ರ ಉತ್ಪತ್ತಿಯಿಂದ ವಿಸರ್ಜನೆಯ ತನಕದ ವ್ಯವಸ್ಥೆ ಸುಸ್ಥಿತಿಯಲ್ಲಿಡುವ ಮೂತ್ರವಹ ಸ್ರೋತಸ್, ಮಲ ನಿರ್ವಹಣೆಗೆ ಅನುಕೂಲ ಎಸಗುವ ಮಲವಹ ಸ್ರೋತಸ್, ಬೆವರು ಸರಿಯಾದ ರೀತಿಯಲ್ಲಿ ಪ್ರವರ್ತಿಸಲು ನೆರವಾಗುವ ಸ್ವೇದವಹ ಸ್ರೋತಸ್- ಇವು ಶರೀರದ ಸಮಗ್ರ ಕ್ರಿಯೆಗಳಿಗೆ ಆಧಾರವಾಗಿ ಕಾರ್ಯನಿರ್ವಹಿಸುತ್ತವೆ. ಇವಲ್ಲದೆ ಮನೋರೋಗ ವಿವರಿಸುವಾಗ ಮನೋವಹ ಸ್ರೋತಸ್ನ ಉಲ್ಲೇಖ ಚರಕಸಂಹಿತೆಯಲ್ಲೂ, ಮೂರ್ಛಾ ರೋಗ ನಿರೂಪಣೆ ಮಾಡುವಾಗ ಸಂಜ್ಞಾವಹ ಸ್ರೋತಸ್ನ ಪ್ರಸ್ತಾಪ ಸುಶ್ರುತ ಸಂಹಿತೆಯಲ್ಲೂ ಕಾಣಸಿಗುತ್ತದೆ.
ಸ್ರೋತಸ್ಗಳಲ್ಲಾಗುವ ವಿಕೃತಿಗೆ ಸ್ರೋತೋವೈಷಮ್ಯ ಎಂದು ಹೆಸರು. ಇದರಲ್ಲಿ ರಚನಾತ್ಮಕ ತೊಂದರೆಯಿದ್ದರೆ ಸ್ರೋತೋವೈಗುಣ್ಯ ಎನ್ನುತ್ತೇವೆ. ಕ್ರಿಯಾತ್ಮಕ ಲೋಪದೋಷ ಗಳಿದ್ದರೆ ಅದನ್ನು ಸ್ರೋತೋದುಷ್ಟಿ ಎಂದಿದೆ ಆಯುರ್ವೆದ. ರೋಗವು ಒಂದೇ ಕ್ಷಣದಲ್ಲಿ ಉತ್ಪತ್ತಿಯಾಗುವುದಿಲ್ಲ. ರೋಗ ಉಂಟಾಗುವ ಬೆಳವಣಿಗೆಯನ್ನು ಆರು ಹಂತಗಳಲ್ಲಿ ಹೇಳಲಾಗಿದ್ದು ಈ ರೋಗಪ್ರಕ್ರಿಯೆಯ ಶಾರೀರಿಕ ಕ್ರಿಯೆಗೆ ಕ್ರಿಯಾಕಾಲ ಎಂದು ಹೆಸರು. ಮೊದಲನೆಯ ಹಂತವೇ ಸಂಚಯ. ದೋಷಗಳು ಒಟ್ಟಾಗಿ ಕಲೆಯುತ್ತಾ ಹೋಗುವ ಹಂತ. ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದಂತೆ ನೀರು ಆ ಭಾಗಗಳಿಂದ ಹರಿದು ಅಣೆಕಟ್ಟೆಯಲ್ಲಿ ಸಂಗ್ರಹ ಆದಂತೆ. 2ನೆಯದು ಪ್ರಕೋಪ. ದೋಷಗಳು ಮಿತಿ ಮೀರಿ ಉಕ್ಕುವ ಹಂತವಿದು. ಅಣೆಕಟ್ಟೆಯಲ್ಲಿ ನೀರು ಉಲ್ಬಣಿಸಿ ಗರಿಷ್ಠ ಮಟ್ಟಕ್ಕೆ ಏರುವ ಹೊತ್ತು. ಮೂರನೆಯದು ಪ್ರಸರ ಅವಸ್ಥೆ. ಉಲ್ಬಣಗೊಂಡ ರೋಗಪ್ರಕ್ರಿಯೆ ಶರೀರದ ಇತರ ಭಾಗಗಳಿಗೆ ಹರಡುವ ಕಾಲ. ಅಣೆಕಟ್ಟೆಯಲ್ಲಿ ಗರಿಷ್ಠ ಮಟ್ಟ ತಲುಪಿದಾಕ್ಷಣ ಅಪಾಯ ತಪ್ಪಿಸಲು ಎಲ್ಲಾ ದ್ವಾರಗಳನ್ನೂ ತೆರೆದು ನೀರನ್ನು ವಿಶಾಲ ಪ್ರದೇಶಕ್ಕೆ ಹರಿಯಗೊಡಲಾಗುತ್ತದೆ. ಅದರಂತೆಯೇ ದೇಹದಲ್ಲೂ ರೋಗ ಪ್ರಕ್ರಿಯೆ ಸಾಗುತ್ತದೆ! ಈ ಮೂರು ಹಂತಗಳು ಸ್ರೋತೋವೈಗುಣ್ಯದ ಸಂದರ್ಭದಲ್ಲಿ ಕಂಡುಬರುತ್ತವೆ. ತದನಂತರ ರೋಗಕ್ಕೆ ಸಂಬಂಧಿಸಿದ ವಾತಾದಿ 3 ದೋಷಗಳು ಹಾಗೂ ರಸಾದಿ 7 ಧಾತುಗಳ ಅಂಶಗಳು ತೊಂದರೆಗೆ ಒಳಗಾಗುತ್ತವೆ.
ನಾಲ್ಕನೆಯ ಕ್ರಿಯಾಕಾಲ ಸ್ಥಾನಸಂಶ್ರಯ. ರೋಗವು ದೇಹದ ಯಾವ ನಿರ್ದಿಷ್ಟ ಭಾಗ ಅಥವಾ ಅವಯವದಲ್ಲಿ ಕಾಣಿಸಿಕೊಳ್ಳುತ್ತದೆಯೋ ಅಲ್ಲಿಗೆ ತೆರಳಿ ಆಶ್ರಯ ಪಡೆದುಕೊಳ್ಳುತ್ತದೆ. ಪೂರ್ವಲಕ್ಷಣಗಳು ಇದೇ ಸಮಯದಲ್ಲಿ ಪ್ರಕಟವಾಗಿ ಮುನ್ಸೂಚನೆ ನೀಡುತ್ತವೆ. ಅಣೆಕಟ್ಟೆಯಿಂದ ಹರಿದ ನೀರು ತಗ್ಗು ಪ್ರದೇಶಗಳಲ್ಲಿ ಸೇರಲು ಪ್ರಾರಂಭವಾಗುವ ಕಾಲವೆನ್ನಬಹುದು. ಐದನೆಯ ಹಂತ ವ್ಯಕ್ತಿ ಅಂದರೆ ರೋಗದ ಲಕ್ಷಣಗಳು ವ್ಯಕ್ತವಾಗುವ ವ್ಯಾಧಿಘಟ್ಟ. ತಗ್ಗು ಪ್ರದೇಶಕ್ಕೆ ಪ್ರವಾಹವಾಗಿ ನುಗ್ಗಿದ ನೀರು ಬೆಳೆಹಾನಿ, ಸಾಮಾನ್ಯ ಬದುಕಿಗೆ ತೊಡಕುಗಳನ್ನು ತಂದೊಡ್ಡುತ್ತದೆ. ಆರನೆಯ ಕೊನೆಯ ಕ್ರಿಯಾಕಾಲವೇ ಭೇದ. ಈ ಹಂತದಲ್ಲಿ ರೋಗವು ಮತ್ತಷ್ಟು ಉಲ್ಬಣಿಸಿ ರೋಗಿಯಲ್ಲಿ ವ್ಯಾಧಿನಾಶಕ ಶಕ್ತಿಯಾದ ಓಜಸ್ ಕ್ಷಯವಾಗಿ ವ್ಯಾಧಿಕ್ಷಮತ್ವ ನಶಿಸಿ ಯಶಸ್ವೀ ಚಿಕಿತ್ಸೆ ನಡೆಸಿದರೆ ಮಾತ್ರ ಜೀವ ಉಳಿಯುತ್ತದೆ. ನೀರಿನ ಪ್ರವಾಹವುಂಟಾಗಿ ಪ್ರಾಣರಕ್ಷಣೆ ದುಸ್ತರವಾಗಿ ಕೈಚೆಲ್ಲಿ ಹೋಗುವ ವಿಪರೀತ ಕಾಲಘಟ್ಟ. ಹೀಗೆ ಶರೀರದಲ್ಲಿ ರೋಗ ಬೆಳವಣಿಗೆಯನ್ನು ಆಯುರ್ವೆದ ವಿವರಿಸಿದ ಪರಿ ಅನನ್ಯವಾಗಿದೆ.