

ಐರ್ಲೆಂಡಿನ ಮಾರ್ಗರೆಟ್ ತನ್ನ ಜೀವನಪಥದಲ್ಲಿ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿದ್ದಳು. ಕಾಯಿಲೆಯಿಂದ ತಂದೆ ಮತ್ತು ಪ್ರಿಯಕರ ಇಬ್ಬರನ್ನೂ ಕೆಲವೇ ದಿನಗಳ ಅಂತರದಲ್ಲಿ ಕಳೆದುಕೊಂಡಾಗ ಬದುಕಿನಲ್ಲಿ ಶೂನ್ಯತೆ ಆವರಿಸಿತು. ಒಮ್ಮೆ ಕಲ್ಲಿದ್ದಲು ಗಣಿ ಕಾರ್ವಿುಕರ ಊರಿಗೆ ತೆರಳಿ ಅಲ್ಲಿನ ಗರ್ಭಿಣಿಯರನ್ನು ಮಾತನಾಡಿಸಿ, ಅವರ ಕೆಲಸದ ಹೊರೆ ಕಡಿಮೆ ಮಾಡಿಸುವ ಪ್ರಯತ್ನ ಮಾಡುತ್ತಿದ್ದಳು. ಆಕೆಯ ಈ ಕೆಲಸವನ್ನು ಗಮನಿಸಿದ ಅಲ್ಲಿದ್ದ ಚರ್ಚ್ ಅವಳನ್ನು ಕರೆಸಿ, ‘ಈ ಕಾರ್ವಿುಕರು ಎಂದಿಗೂ ಚರ್ಚ್ಗೆ ಬಂದವರಲ್ಲ, ಅವರು ಬೇರೆ ಜಾತಿಗೆ ಸೇರಿದವರು ಅವರ ಸೇವೆ ಮಾಡುವುದು ತರವಲ್ಲ’ ಎಂದಿತು. ಚರ್ಚ್ನವರೊಂದಿಗಿನ ವಾದ-ವಿವಾದ ತಾರಕಕ್ಕೇರಿ ಮಾರ್ಗರೆಟ್ ನೆಮ್ಮದಿ ಕಳೆದುಕೊಂಡಳು. ಈ ಘಟನೆ ಆಕೆಯ ಮನಸಿನಲ್ಲಿ ಹಲವು ಪ್ರಶ್ನೆಗಳನ್ನು ಮೂಡಿಸಿತು.
ಈ ಸುಖ-ದುಃಖಗಳ ಚಕ್ರದಿಂದ ಪಾರಾಗಲು ಮಾರ್ಗವುಂಟೇ? ಚರ್ಚ್ ಇದಕ್ಕೆಲ್ಲ ಪರಿಹಾರವೇ? ಭಗವಂತನ ಹಾದಿಯಲ್ಲಿದ್ದ ಮೇಲೂ ಹೊಂದಾಣಿಕೆಯ ಬದುಕಿನ ಅವಶ್ಯಕತೆ ಇದೆಯೇ? ಎಂಬಂಥ ಪ್ರಶ್ನೆಗಳಿಗೆ ಉತ್ತರ ಲಭಿಸದೆ ಗೊಂದಲದಲ್ಲಿದ್ದ ಸಂದರ್ಭದಲ್ಲಿಯೇ ಆಕೆ, 1895ರಲ್ಲಿ ಇಸಾಬೆಲ್ ಅವರ ಮನೆಯಲ್ಲಿ ಸ್ವಾಮಿ ವಿವೇಕಾನಂದರನ್ನು ಮೊದಲ ಬಾರಿ ಭೇಟಿಯಾಗಿದ್ದು. ಅಲ್ಲಿ ನೆರೆದವರನ್ನು ಉದ್ದೇಶಿಸಿ ಸ್ವಾಮೀಜಿ- ‘ನಮ್ಮೆಲ್ಲರ ಹೋರಾಟ ಮುಕ್ತಿಗಾಗಿಯೇ. ನಮಗೆ ದುಃಖವೂ ಬೇಕಿಲ್ಲ, ಸಂತೋಷವೂ ಬೇಕಿಲ್ಲ. ಬೇಕಿರುವುದು ಮುಕ್ತಿಯೊಂದೇ’ ಎಂದ ಮಾತು ಸತ್ಯದ ಅನ್ವೇಷಣೆಯಲ್ಲಿದ್ದ ಮಾರ್ಗರೆಟ್ಗೆ ತನಗೇ ಹೇಳಿದ್ದು ಎಂದೆನಿಸಿತು. ಮುಂದಿನ ಅನೇಕ ಭೇಟಿಗಳಲ್ಲಿ ಮಾರ್ಗರೆಟ್, ಸ್ವಾಮೀಜಿಯವರೊಂದಿಗೆ ಕರ್ಮ ಮಾರ್ಗಗಳ ಕುರಿತು ರ್ಚಚಿಸಿದಳು. ಒಂದು ದಿನ ಸ್ವಾಮೀಜಿ ಅಂತರಾಳದ ಇಂಗಿತವನ್ನು ಮಾರ್ಗರೆಟ್ ಮುಂದೆ ಹೀಗೆ ಮಂಡಿಸಿದರು. ‘ನನ್ನ ದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಯೋಜನೆ ಹಾಕಿಕೊಂಡಿದ್ದೇನೆ, ನೀನು ಅದರಲ್ಲಿ ನನಗೆ ಅತಿ ಹೆಚ್ಚು ಸಹಕಾರಿಯಾಗಬಹುದು ಎನಿಸುತ್ತದೆ’. ಮಾರ್ಗರೆಟ್ ಮನಸ್ಸಲ್ಲಿ ಭಾರತಕ್ಕೆ ಹೋಗುವ ಇಚ್ಛೆ ಚಿಗುರೊಡೆದಿತ್ತಾದರೂ ಸ್ವಾಮೀಜಿ ಮಾತಿನ ನಂತರ ಆ ಇಚ್ಛೆ ಹೆಮ್ಮರವಾಯಿತು.
1897ರಲ್ಲಿ ಭಾರತದಲ್ಲಿದ್ದ ಸ್ವಾಮೀಜಿಗೆ ಪತ್ರ ಬರೆದ ಮಾರ್ಗರೆಟ್- ‘ನಾನು ಭಾರತಕ್ಕೆ ಏನಾದರೂ ಉಪಯೋಗವಾಗುವೆನಾ? ನನ್ನನ್ನು ನಾನು ಪರಿಪೂರ್ಣ ಗೊಳಿಸಿಕೊಳ್ಳುವುದನ್ನು ಭಾರತದಿಂದ ಕಲಿಯಲು ಬಯಸುತ್ತೇನೆ’ ಎಂದಿದ್ದಳು. ಅವಳ ಈ ಪಕ್ವ ವಿಚಾರ ದಿಂದ ಸಂಪ್ರೀತರಾದ ಸ್ವಾಮೀಜಿ ಆಕೆಗೆ ಭಾರತಕ್ಕೆ ಬರಲು ಸಮ್ಮತಿಸಿದರು.
1898 ಜ.28ರಂದು ಮಾರ್ಗರೆಟ್ ಭಾರತದ ನೆಲ ಸ್ಪರ್ಶಿಸಿದಳು. ಅದು 1898 ಮಾ.25ರ ಮುಂಜಾವು. ಕೊಲ್ಕತ್ತದ ನಿಲಾಂಬರ ಮುಖರ್ಜಿ ಉದ್ಯಾನದಲ್ಲಿದ್ದ ಆಶ್ರಮದ ಮಂದಿರದ ಗರ್ಭಗುಡಿ ಪ್ರವೇಶಿಸಿದ ವಿವೇಕಾನಂದರಿಗೆ ಮಾರ್ಗರೆಟ್ ಸಾಷ್ಟಾಂಗ ಎರಗಿದಳು. ಅವಳನ್ನು ಕಂಡು ಸ್ವಾಮಿ ವಿವೇಕಾನಂದರ ಅಂತರಾಳದಿಂದ ಸಹಜವಾಗಿ ಹೆಸರೊಂದು ಹೊಮ್ಮಿತು... ‘ನಿವೇದಿತಾ, ನೀನು ನಿವೇದಿತಾ...’ ಹೀಗೆ ಮಾರ್ಗರೇಟ್ ನಿವೇದಿತಾ ಆದಳು.
ರಾಷ್ಟ್ರವಾದದ ಪ್ರಖರ ಬೆಳಕು: ಮಾರ್ಗರೆಟ್ ಭಾರತಕ್ಕೆ ಬಂದ ಎರಡೇ ತಿಂಗಳಲ್ಲಿ ಸ್ವಾಮೀಜಿ ಆಕೆಗೆ ದೀಕ್ಷೆ ನೀಡಿ ನಿವೇದಿತೆಯಾಗಿಸಿದರು. ನಿವೇದಿತಾ ಹಿಂದೂ ಸಮಾಜದ ಜಾಗೃತಿಗೆ ಅನಿವಾರ್ಯವಿದ್ದ ಎಲ್ಲ ಕ್ಷೇತ್ರಗಳ ಸುಧಾರಣೆಯಲ್ಲಿ ತೊಡಗಿಸಿಕೊಂಡಳು. ಹಿಂದೂ ಯುವಕರಲ್ಲಿ ಕ್ಷಾತ್ರತೇಜವನ್ನು, ದೇಶಪ್ರೇಮವನ್ನು, ಭಾರತೀಯ ಸನಾತನ ಪರಂಪರೆ, ಇತಿಹಾಸ, ಜ್ಞಾನಗಳ ಬಗ್ಗೆ ಅಭಿಮಾನವನ್ನು ತುಂಬಿದಳು. ಶಿಕ್ಷಣ ಸ್ವದೇಶೀಕರಣ, ಕಲೆ-ಸಾಹಿತ್ಯಾದಿ ಕ್ಷೇತ್ರಗಳಲ್ಲಿ ಭಾರತೀಯತೆಯ ಅನುಸಂಧಾನವನ್ನು ಸ್ಪುಟವಾಗಿ ಪ್ರತಿಪಾದಿಸಿದಳು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಆ ಪೀಳಿಗೆಯ ಅನೇಕ ಜನರನ್ನು ಹೋರಾಟಕ್ಕೆ ಅಣಿಗೊಳಿಸಿದಳು. ಹೀಗೆ ನಿವೇದಿತಾ ಭಾರತದ ಹೆಮ್ಮೆಯ ಪುತ್ರಿಯಾಗಿ, ವಿವೇಕಾನಂದರ ನೆಚ್ಚಿನ ಶಿಷ್ಯೆಯಾಗಿ ಬದುಕಿ, ಭಾರತಕ್ಕೆ ನಿವೇದನೆಗೊಂಡ ಶ್ರೇಷ್ಠ ಕುಸುಮವಾದಳು.
ಹೆಣ್ಣುಮಕ್ಕಳ ಶಾಲೆ ತೆರೆದು, ಸ್ತ್ರೀಶಿಕ್ಷಣದ ಮಹತ್ವವನ್ನು ಸಾರಿದಳು. ಭಾರತದ ಭವ್ಯತೆಯನ್ನು ತಿಳಿಸಲು ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಳು. ‘ಕಾಳಿ ದಿ ಮದರ್’, ‘ಕ್ರೆಡಲ್ ಟೇಲ್ಸ್ ಆಫ್ ಹಿಂದೂಯಿಸಂ’, ‘ಸಿವಿಕ್ ಆಂಡ್ ನ್ಯಾಷನಲ್ ಐಡಿಲ್ಸ್’ ‘ದಿ ವೆಬ್ ಆಫ್ ಇಂಡಿಯನ್ ಲೈಫ್’-ಇವು ನಿವೇದಿತಾ ರಚಿಸಿದ ಪ್ರಮುಖ ಕೃತಿಗಳು. ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ತಾನೇ ಸ್ವತಃ ಸ್ವದೇಶಿ ಉತ್ಪನ್ನಗಳನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ಓಣಿಗಳಲ್ಲಿ ಸಂಚರಿಸಿ ಮಾರಾಟ ಮಾಡಿದಳು. ಪ್ಲೇಗ್ ಆವರಿಸಿದಾಗ ಕೈಯಲ್ಲಿ ಪೊರಕೆ ಹಿಡಿದು ರಸ್ತೆ, ಚರಂಡಿಗಳನ್ನು ಸ್ವಚ್ಛಗೊಳಿಸಿದಳು.
ಅಕ್ಕನ ಹಾದಿಯಲ್ಲಿ ಸ್ತ್ರೀಶಕ್ತಿ
ಚಿಂತಕ, ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನ ರಾಜ್ಯಾದ್ಯಂತ ಸೇವಾಬಸ್ತಿಗಳಲ್ಲಿ ಬಡಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಒದಗಿಸುತ್ತಿದೆ. ಮಹಿಳಾ ಸಬಲೀಕರಣಕ್ಕೂ ಅದು ಶ್ರಮಿಸುತ್ತಿದ್ದು, ಪ್ರೇರಣಾದಾಯಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮಾತೃತ್ವದ ಶಕ್ತಿಯನ್ನು ಪರಿಚಯಿಸುತ್ತಿದೆ.
ಆಸ್ತಿಯೆಲ್ಲ ಬೇಲೂರು ಮಠಕ್ಕೆ
ತನ್ನೆಲ್ಲ ಆಸ್ತಿಯನ್ನು ಬೇಲೂರು ಮಠಕ್ಕೆ ಬರೆದುಕೊಟ್ಟು, ಅದನ್ನು ರಾಷ್ಟ್ರೀಯ ಶಿಕ್ಷಣ ನೀಡಲು ಬಳಸಬೇಕೆಂದು ಸೂಚಿಸಿ, ತನ್ನ 43ನೇ ವಯಸ್ಸಿನಲ್ಲಿ, 1911 ಅಕ್ಟೋಬರ್ 13ರಂದು ಕೊನೆಯುಸಿರೆಳೆದಳು. (ನಿವೇದಿತಾ ಜನಿಸಿದ್ದು ಐರ್ಲೆಂಡ್ನಲ್ಲಿ 1867 ಅಕ್ಟೋಬರ್ 28ರಂದು. ತಂದೆ ಸ್ಯಾಮುಯೆಲ್ ನೊಬೆಲ್, ತಾಯಿ ಮೇರಿ ಹ್ಯಾಮಿಲ್ಟನ್.)
(ಲೇಖಕರು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು)