

ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನಕ್ಕೆ ಮಾಡಲಾದ ಹಾನಿಗಳನ್ನು ಡಿನ್ನರ್ ಮೆನು ಮೂಲಕ ಟ್ರೋಲ್ ಮಾಡಲಾಗಿತ್ತು. ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ನಡೆದ ಆ ಕಾರ್ಯಾಚರಣೆ ವೇಳೆ ವಿವಿಧ ಪ್ರದೇಶಗಳನ್ನು ಗುರಿಮಾಡಿದ್ದು, ಅವನ್ನು ಮೆನುವಿನಲ್ಲಿ ಹೆಸರಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಒಳಗಾಗಿತ್ತು. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು.
ಇದಕ್ಕೆ ಮುನ್ನ, ಅಂದರೆ ಅಕ್ಟೋಬರ್ 2ರಂದು ದೇಶವು ದಸರಾ ಸಂಭ್ರಮದಲ್ಲಿರುವಾಗ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುಜರಾತಿನ ಭುಜ್ ಸೇನಾ ಠಾಣ್ಯಕ್ಕೆ ಭೇಟಿ ನೀಡಿ ಸೈನಿಕರೊಂದಿಗೆ ದಸರಾ ಆಚರಿಸಿದರು; ಶಸ್ತ್ರಪೂಜೆಯನ್ನೂ ನೆರವೇರಿಸಿದರು. ಈ ಪ್ರದೇಶವು ಪಾಕ್ ಗಡಿಯಲ್ಲಿದೆ. ಕಛ್ ಭಾಗದಲ್ಲಿ ಕಾವಲು ಕಾಯುವ ಸೈನಿಕರನ್ನುದ್ದೇಶಿಸಿ ಅವರು ಮಾತನಾಡಿದರು. ‘ಆಪರೇಷನ್ ಸಿಂಧೂರ ಸಂದರ್ಭದಲ್ಲಿ, ಪಾಕಿಸ್ತಾನವು ಲೇಹ್ದಿಂದ ಸರ್ ಕ್ರೀಕ್ ಪ್ರದೇಶದವರೆಗೆ ಭಾರತದ ಸೇನಾ ಸನ್ನದ್ಧತೆಯನ್ನು ಅಂದಾಜಿಸದೆ, ದುಸ್ಸಾಹಸಕ್ಕೆ ಯತ್ನಿಸಿತು. ಆದರೆ ಯಶಸ್ವಿಯಾಗಲಿಲ್ಲ. ಸರ್ ಕ್ರೀಕ್ ಭಾಗದಲ್ಲಿ ಪಾಕಿಸ್ತಾನವು ಸೇನಾ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವುದು ಅದರ ಉದ್ದೇಶವನ್ನು ಬಿಂಬಿಸುತ್ತದೆ. ಸೇನೆ ಹಾಗೂ ಗಡಿ ಭದ್ರತಾ ಪಡೆಗಳು ಭಾರತದ ಗಡಿಯನ್ನು ಕಾಯುತ್ತಿವೆ.
ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನವೇನಾದರೂ ದುಸ್ಸಾಹಸಕ್ಕೆಳೆಸಿದಲ್ಲಿ, ನಾವು ಎಂಥ ನಿರ್ಣಾಯಕ ಪ್ರತಿಕ್ರಿಯೆ ನೀಡುತ್ತೇವೆಂದರೆ, ಅದು ಇತಿಹಾಸ ಮತ್ತು ಭೂಗೋಳ ಎರಡನ್ನೂ ಬದಲಿಸುತ್ತದೆ’ಎಂದು ಪಾಕ್ಗೆ ಖಡಕ್ ಎಚ್ಚರಿಕೆ ನೀಡಿದರು. ಅವರ ಮಾತು ಅಷ್ಟಕ್ಕೇ ನಿಲ್ಲಲಿಲ್ಲ. 1965ರ ಯುದ್ಧದ ವೇಳೆ ಭಾರತೀಯ ಸೇನೆ ಲಾಹೋರ್ಗೆ ಸಾಗಿದ್ದನ್ನು ಉಲ್ಲೇಖಿಸಿ, ‘ಭಾರತದ ತಾಳ್ಮೆಯನ್ನು ಪರೀಕ್ಷಿಸದಿರಿ. ಅರವತ್ತು ವರ್ಷದ ನಂತರ, ಒಂದು ದಾರಿಯು ಸರ್ ಕ್ರೀಕ್ ಮೂಲಕ ಲಾಹೋರಿಗೆ ಸಾಗುತ್ತದೆ’ ಎಂದೂ ಹೇಳಿದರು. 1965ರ ಏಪ್ರಿಲ್ನಲ್ಲಿ ಪಾಕಿಸ್ತಾನವು ಕಛ್ ಪ್ರದೇಶದಲ್ಲಿ ಆಪರೇಷನ್ ಹ್ವಾಕ್ ಮೂಲಕ, ಭಾರತದ ಭೂಸೇನೆ ಹಾಗೂ ಯುದ್ಧ ಟ್ಯಾಂಕುಗಳ ಸನ್ನದ್ಧತೆಯನ್ನು ಪರೀಕ್ಷಿಸಿತ್ತು. ಭಾರತದ ಸೈನಿಕರು ಆಗ ಪಾಕ್ಗೆ ತಕ್ಕ ಉತ್ತರ ನೀಡಿದ್ದರು. ಈ ಹಣಾಹಣಿಯು ಶೀಘ್ರದಲ್ಲೇ ಯುದ್ಧಕ್ಕೇ ತಿರುಗಿ, ಪಾಕ್ಗೆ ಸೋಲಿನ ಪೆಟ್ಟು ಬಿದ್ದಿತ್ತು.
ಈ ನೆಲದಲ್ಲಿ ನಿಂತು ರಾಜನಾಥ್ ಸಿಂಗ್ ಗುಡುಗುವುದಕ್ಕೂ ಬಲವಾದ ಕಾರಣವಿದೆ. ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನವು ಮಿಲಿಟರಿ ಮೂಲಸೌಕರ್ಯಗಳನ್ನು ಬಲಗೊಳಿಸುತ್ತಿದೆ ಎಂಬ ವರದಿಗಳಿವೆ. ಸೇನಾ ಮೂಲಸೌಕರ್ಯ ಅಭಿವೃದ್ಧಿ ಎಂದರೆ, ಎಂದರೆ ಸಾಮಾನ್ಯವಾಗಿ ಮುಂಚೂಣಿ ಸೇನಾನೆಲೆಗಳ ನಿರ್ವಣ, ಸೈನಿಕರು ತ್ವರಿತವಾಗಿ ಸಾಗಲು ಅನುವಾಗುವಂತೆ ಉತ್ತಮ ರಸ್ತೆಗಳ ನಿರ್ಮಾಣ ಇತ್ಯಾದಿ ಸೇರಿರುತ್ತವೆ. ಅದರಲ್ಲೂ, ಆಪರೇಷನ್ ಸಿಂಧೂರದ ತರುವಾಯ ಈ ಚಟುವಟಿಕೆಗಳು ಹೆಚ್ಚಿವೆ ಎಂದು ಗುಪ್ತಚರ ಮಾಹಿತಿಗಳು ಹಾಗೂ ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಏನಿದು ಸರ್ ಕ್ರೀಕ್: ಗುಜರಾತಿನ ಕಛ್ ಜಿಲ್ಲೆ ಹಾಗೂ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಡುವೆ ಸರ್ ಕ್ರೀಕ್ ಇದೆ. ಮೂಲತಃ ಇದರ ಹೆಸರು ‘ಬಾಣ ಗಂಗಾ’ ಎಂದು. ಆದರೆ ಕಂಡಲ್ಲೆಲ್ಲ ತಮ್ಮ ಹೆಸರು ಇಡುವುದು ಬ್ರಿಟಿಷರ ಚಾಳಿಯಲ್ಲವೆ? ಅದಕ್ಕೆಂದೇ ಜಲಪಾತದಿಂದ ಹಿಡಿದು ನಗರಗಳ ಪ್ರಮುಖ ವೃತ್ತದವರೆಗೂ ಅವರ ಹೆಸರುಗಳ ಮೆರವಣಿಗೆ. ಇಲ್ಲಿಯೂ ‘ಬಾಣ ಗಂಗಾ’ ಬದಲಿಗೆ ಬ್ರಿಟಿಷ್ ಅಧಿಕಾರಿಯೊಬ್ಬರ ಹೆಸರಿನಲ್ಲಿ ‘ಸರ್ ಕ್ರೀಕ್’ ಎಂದು ಕರೆದರು. ಈ ಪ್ರದೇಶ ಸುಮಾರು 96 ಕಿಲೋಮೀಟರ್ ಉದ್ದದ ಅಳಿವೆ ಅಥವಾ ಜೌಗು ಪ್ರದೇಶ. ನದಿ ನೀರು ಅರಬ್ಬಿ ಸಮುದ್ರವನ್ನು ಸೇರುವ ಈ ಭಾಗದಲ್ಲಿ ಜನರು ವಾಸ ಮಾಡುವುದಿಲ್ಲ. ಆದರೆ ಹೇರಳವಾಗಿ ಮೀನುಗಾರಿಕೆ ನಡೆಯುತ್ತದೆ. ಮೀನುಗಾರಿಕೆಗೆ ಹೋದ ಎರಡೂ ಕಡೆಯವರು ಬಂಧನಕ್ಕೆ ಒಳಗಾಗುವ ಪ್ರಸಂಗಗಳೂ ನಡೆಯುತ್ತಿರುತ್ತವೆ.
ಎರಡೂ ದೇಶಗಳ ಗಡಿ ಕಾಯುವ ಸೈನಿಕರ ಉಪಸ್ಥಿತಿ ಮಾತ್ರ ಇರುತ್ತದೆ. ಆದರೆ, ಈ ಚಿಕ್ಕ ಪ್ರದೇಶವು ವ್ಯೂಹಾತ್ಮಕವಾಗಿ ಬಹಳ ಮಹತ್ವ ಪಡೆದಿದೆ. ಈ ಕಾರಣಕ್ಕಾಗಿಯೇ, ಎರಡೂ ಬದಿಗಳ ನಡುವೆ ಹಲವು ದಶಕಗಳಿಂದ ವಿವಾದಕ್ಕೆ ಆಸ್ಪದವಾಗಿದೆ. ಇಲ್ಲಿಂದ ಕರಾಚಿ ಬಂದರಿಗೆ ನೇರ ಸಂಪರ್ಕ ಇದೆ. ಎಲ್ಲರಿಗೂ ಗೊತ್ತಿರುವಂತೆ, ಕರಾಚಿ ಬಂದರು ಪಾಕಿಸ್ತಾನದ ವಾಣಿಜ್ಯ ಚಟುವಟಿಕೆಯ ನಾಡಿ ಇದ್ದಂತೆ. ಕರಾಚಿ ಬಂದರು ಟ್ರಸ್ಟ್ ಮೂಲಕ ಇಲ್ಲಿನ ವ್ಯಾಪಾರ ವ್ಯವಹಾರಗಳು ನಡೆಯುತ್ತಿದ್ದು, ಪಾಕಿಸ್ತಾನದ ಬಂದರು ಮತ್ತು ಹಡಗು ಇಲಾಖೆ ವ್ಯಾಪ್ತಿಗೆ ಬರುತ್ತದೆ. ವಾರ್ಷಿಕ ಸುಮಾರು 65 ಮಿಲಿಯನ್ ಮೆಟ್ರಿಕ್ ಟನ್ಗಳಷ್ಟು ಸರಕುಗಳ ವ್ಯವಹಾರ ಇಲ್ಲಿ ನಡೆಯುತ್ತದೆ ಎಂದರೆ ಈ ಬಂದರಿನ ಅಗಾಧ ವ್ಯಾಪ್ತಿ ಅಂದಾಜಾಗುತ್ತದೆ.
ಕರಾಚಿ ಬಂದರಿನ ಮೇಲೆ ಸದಾ ಗಮನವಿಡಲು ಸರ್ ಕ್ರೀಕ್ ಪ್ರದೇಶ ಭಾರತಕ್ಕೆ ಮುಖ್ಯವಾದುದು. ಸಂಘರ್ಷ ಅಥವಾ ಸಮರ ಸಮಯದಲ್ಲಿ ಶತ್ರುದೇಶದ ಪ್ರಮುಖ ಬಂದರುಗಳ ಮೇಲೆ ಸಹ ಕಣ್ಣಿಡುವುದು ಜಾಗತಿಕವಾಗಿ ಸಮರ ತಂತ್ರದ ಒಂದು ಭಾಗವೇ ಆಗಿದೆ. ಪಾಕಿಸ್ತಾನಕ್ಕೆ ಕೂಡ ಭಾರತದ ಮೇಲೆ ಕಣ್ಣಿಡಲು ಸರ್ ಕ್ರೀಕ್ ಆಯಕಟ್ಟಿನ ಜಾಗ. ಪಾಕ್ಗೆ ಸೇರಿದ ರಣ್ ಪ್ರದೇಶದಲ್ಲಿ ಚೀನಾವು ಗಣಿಗಾರಿಕೆ ನಡೆಸುತ್ತಿದೆ ಹಾಗೂ ವಿದ್ಯುತ್ ಯೋಜನೆಗಳನ್ನು ಸಹ ಕೈಗೆತ್ತಿಕೊಂಡಿದೆ. ಈ ಹೆಸರಲ್ಲಿ ಸೇನಾನೆಲೆ ಸ್ಥಾಪನೆಯಾದರೂ ಆದೀತು ಎಂಬುದು ಭಾರತದ ಕಳವಳ.
ಈ ಅಳಿವೆಯ ಗಡಿಯನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾಗದ್ದರಿಂದ, ಈಗಲೂ ವಿವಾದಾಸ್ಪದವಾಗಿಯೇ ಮುಂದುವರಿದಿದೆ. ದೇಶ ವಿಭಜನೆಗೆ ಮೊದಲಿನ ದಾಖಲೆಗಳಲ್ಲಿ ಈ ಪ್ರದೇಶ ಸಿಂಧ್ ಪ್ರಾಂತ್ಯಕ್ಕೆ ಸೇರಿದ್ದು ಎಂದಿದ್ದುದರಿಂದ, ತನಗೆ ಸೇರಿದ್ದು ಎಂಬುದು ಪಾಕಿಸ್ತಾನದ ವಾದ. ಆದರೆ ಭಾರತ ಇದನ್ನು ಒಪು್ಪತ್ತಿಲ್ಲ. ಈ ವಿವಾದ ಬಗೆಹರಿಸಲು 1989ರ ಲಾಗಾಯ್ತು ಅನೇಕ ಬಾರಿ ಮಾತುಕತೆಗಳು ನಡೆದಿದ್ದರೂ ಇತ್ಯರ್ಥಕ್ಕೆ ಬರಲು ಆಗಿಲ್ಲ. ಗಡಿ ಗುರುತಿಗೆ ಜಂಟಿ ಸಮೀಕ್ಷೆ ಸಹ ನಡೆದಿತ್ತು.
ಆಪರೇಷನ್ ಸಿಂಧೂರ ಸಮಯದಲ್ಲಿ ಪಾಕಿಸ್ತಾನವು ಅನೇಕ ಸ್ಥಳಗಳಿಂದ ಭಾರತದ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಭಾರತದ ಪ್ರಬಲ ವಾಯುರಕ್ಷಣಾ ವ್ಯವಸ್ಥೆಯ ಎದುರು ಈ ಡ್ರೋನ್ ಆಟ ನಡೆಯಲಿಲ್ಲ. ಪಾಕ್ ಹೀಗೆ ದಾಳಿ ನಡೆಸಿದ ಜಾಗಗಳಲ್ಲಿ ಸರ್ ಕ್ರೀಕ್ ಕೂಡ ಸೇರಿತ್ತು. ಹೀಗಾಗಿ ಭಾರತ ತನಗೆ ರಕ್ಷಣಾ ಬೆದರಿಕೆ ಎದುರಾಗಬಹುದಾದ ಜಾಗ ಇದು ಎಂದು ಪರಿಗಣಿಸುತ್ತದೆ. ಅಂದಹಾಗೆ, ಇಲ್ಲಿ ಅಪಾರವಾದ ತೈಲ ಮತ್ತು ಅನಿಲ ನಿಕ್ಷೇಪ ಇದೆ ಎಂದು ಹೇಳಲಾಗುತ್ತದೆ. ಆದರೆ ಗಡಿ ವಿವಾದಿತ ಜಾಗವಾದುದರಿಂದ ನಿಕ್ಷೇಪ ಹುಡುಕಾಟ ನಡೆಸಲು ಆಗಿಲ್ಲ. ಹೀಗಿದ್ದರೂ, ಭಾರತಕ್ಕೆ ಸ್ವಲ್ಪ ತಲೆಬಿಸಿ ಉಂಟುಮಾಡಬಹುದಾದ ವಿದ್ಯಮಾನವೊಂದು ಈಗ ಘಟಿಸಿದೆ. ಪಾಕ್ ಮತ್ತು ಅಮೆರಿಕ ನಡುವೆ ಈಚೆಗೆ ಏರ್ಪಟ್ಟ ಒಪ್ಪಂದದ ಪ್ರಕಾರ, ಪಾಕಿಸ್ತಾನದಲ್ಲಿ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಲು ಅಮೆರಿಕ ನೆರವಾಗುತ್ತದೆ. ಆ ಒಪ್ಪಂದದ ವ್ಯಾಪ್ತಿ ಇಲ್ಲಿಗೂ ಚಾಚುತ್ತದೆಯೇ ಎಂಬುದು ಮುಂದೆ ತಿಳಿದುಬರಬೇಕಾದ ಸಂಗತಿ. ಒಟ್ಟಿನಲ್ಲಿ ಆಯಕಟ್ಟಿನ ಚಿಕ್ಕ ಜಾಗವೊಂದು ಹೇಗೆ ದೊಡ್ಡ ಸಂದಿಗ್ಧ ತರಬಲ್ಲದು ಎಂಬುದಕ್ಕೆ ಇದೊಂದು ನಿದರ್ಶನ.
ಪಾಕ್ ಸಮರೋತ್ಸಾಹ: ಬದಲಾದ ಜಾಗತಿಕ ವಾತಾವರಣದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುಂಕ ಮತ್ತಿತರ ವಿಚಾರದಲ್ಲಿ ಭಾರತದೊಂದಿಗಿನ ಸ್ನೇಹವನ್ನು ತುಸು ತಗ್ಗಿಸಿ, ಪಾಕ್ನತ್ತ ಕೈಚಾಚಿರುವುದು ಆ ದೇಶಕ್ಕೆ ಉಮೇದು ತುಂಬಿರುವಂತಿದೆ. ‘ಭಾರತದೊಂದಿಗೆ ಯುದ್ಧದ ಸಾಧ್ಯತೆ ಇರುವುದು ನಿಜ’ ಎಂದಿರುವ ಪಾಕ್ ರಕ್ಷಣಾ ಸಚಿವ ಖ್ವಾಜಾ ಅಸೀಫ್, ‘ಭವಿಷ್ಯದಲ್ಲಿ ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷ ನಡೆದರೆ ನಮ್ಮ ದೇಶ ದೊಡ್ಡಮಟ್ಟದ ಯಶಸ್ಸು ಗಳಿಸುತ್ತದೆ’ ಎಂದೂ ಹೇಳಿಕೊಂಡಿದ್ದಾರೆ. ಈವರೆಗೆ ಭಾರತ ಮತ್ತು ಪಾಕ್ ನಡುವೆ ನಾಲ್ಕು ಯುದ್ಧಗಳು ನಡೆದಿವೆ; ಎಲ್ಲದರಲ್ಲೂ ಪಾಕ್ ಸೋತಿದೆ.
ಈ ಎಲ್ಲದರ ನಡುವೆ, ಭಾರತವು ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಬೇಕು ಎಂಬ ಆಗ್ರಹ ಹಲವು ವಲಯಗಳಿಂದ ಇದ್ದೇ ಇದೆ. ‘ಪಿಒಕೆಯು ಭಾರತ ಎಂಬ ಮನೆಯ ಕೋಣೆ. ಆದರೆ ಅಪರಿಚಿತರು ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ನಮ್ಮ ದೇಶ ಆ ಕೋಣೆಯನ್ನು ವಾಪಸ್ ಪಡೆಯಬೇಕು’ ಎನ್ನುವ ಮೂಲಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಈ ಮನೋಗತಕ್ಕೆ ದನಿ ಸೇರಿಸಿದ್ದಾರೆ. ಮೋದಿ ಸರ್ಕಾರದ ಮುಂದಿನ ಗುರಿ ಪಿಒಕೆ ಇರಬಹುದೇ ಎಂಬ ಚರ್ಚೆ ಕೂಡ ಅನೇಕ ಸಂದರ್ಭಗಳಲ್ಲಿ ನಡೆದಿದ್ದಿದೆ.
ಭಾರತದ ಭೂಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿ, ‘ಪಾಕಿಸ್ತಾನಕ್ಕೆ ಭೂಪಟದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಬಯಕೆ ಇದ್ದರೆ ಅಲ್ಲಿನ ಸರ್ಕಾರ ಭಯೋತ್ಪಾದನೆಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಬೇಕು. ಆಪರೇಷನ್ ಸಿಂಧೂರ ವೇಳೆ ನಾವು ಪ್ರದರ್ಶಿಸಿದ ಸಂಯಮವನ್ನು ಮುಂದಿನ ದಿನಗಳಲ್ಲಿ ತೋರಿಸುವುದಿಲ್ಲ. ಭೂಗೋಳದಲ್ಲಿ ಇರಬೇಕೇ ಬೇಡವೇ ಎಂದು ಪಾಕ್ ಯೋಚಿಸುವ ರೀತಿಯಲ್ಲಿ ಕಾರ್ಯಾಚರಣೆ ಮಾಡುತ್ತೇವೆ’ ಎಂದು ಗುಡುಗಿದರು. ಯಾವುದೇ ಕ್ಷಣದಲ್ಲಿ ನಡೆಯಬಹುದಾದ ಕಾರ್ಯåಚರಣೆಗೆ ಸಜ್ಜಾಗಿರುವಂತೆ ಸೈನಿಕರಿಗೆ ಸೂಚನೆ ನೀಡಿದ ಜ. ದ್ವಿವೇದಿ, ‘ದೇವರು ಬಯಸಿದರೆ ನಿಮಗೆ ಬೇಗನೇ ಇನ್ನೊಂದು ಅವಕಾಶ ಸಿಗಲಿದೆ. ಆಲ್ ದ ಬೆಸ್ಟ್’ ಎಂದೂ ಹೇಳಿದರು. ಇದರರ್ಥ? ಅವರವರ ಭಾವಕ್ಕೆ...
ಕೊನೇ ಮಾತು: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮಗೆ ಈ ಬಾರಿ ನೊಬೆಲ್ ಶಾಂತಿ ಪುರಸ್ಕಾರ ಸಿಗಬೇಕು ಎಂದು ಪ್ರತಿಪಾದಿಸಿಕೊಂಡು ಬಂದಿದ್ದರು. ಇದಕ್ಕಾಗಿ ಇನ್ನಿಲ್ಲದ ಪ್ರಯತ್ನವನ್ನೂ ನಡೆಸಿದ್ದರು. ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರನ್ನು ಪಾಕಿಸ್ತಾನ ಸೂಚಿಸಿತ್ತು. ಇದಲ್ಲದೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಹೆಸರನ್ನು ನಾಮನಿರ್ದೇಶನ ಮಾಡಿದ್ದರು. ಆದರೆ ಪ್ರಶಸ್ತಿ ವೆನೆಜುವೆಲಾದ ಮಾರಿಯಾ ಕೋರಿನಾ ಮಚಾಡೋ ಅವರಿಗೆ ಸಂದಿದೆ. ತಮಗೆ ‘ಶಾಂತಿಭಂಗ’ ಆಗಿದ್ದಕ್ಕಾಗಿ ಸಹಜವಾಗಿ ಟ್ರಂಪ್ ಕನಲಿದ್ದಾರೆ. ಈ ಕೋಪದಲ್ಲಿ ಅವರ ನಡೆ-ನುಡಿಯಿಂದ ಶಾಂತಿಗೆ ಭಂಗ ಆಗದಿದ್ದರೆ ಸಾಕು ಎಂಬುದು ಜಾಗತಿಕ ದೇಶಗಳ ಆಶಯ!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)