ಸೋದರತ್ತೆಯನ್ನೇ ಕೊಂದ ಪಾಪಿ

ವಿಜಯವಾಣಿ (1)
Published on

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ಹತ್ತೊಂಬತ್ತು ವರ್ಷದ ಯಶವಂತ್ ತೆಲಂಗಾಣದ ವಾರಂಗಲ್ ಜಿಲ್ಲೆಯವನು. ಮಾತಾಪಿತರ ಒಬ್ಬನೇ ಮಗ. ಅವನ ತಾಯಿ ಲಕ್ಷ್ಮಿ ಅಂಗವಿಕಲೆ. ಅವನ ತಂದೆ ರಾಮಪ್ಪ ಯಶವಂತ್​ಗೆ ಐದು ವರ್ಷವಾಗಿದ್ದಾಗ ಮೃತರಾಗಿದ್ದರು. ಬರುತ್ತಿದ್ದ ಮಾಸಾಶನದಿಂದ ಸಂಸಾರ ನಡೆಸುವುದು ಲಕ್ಷ್ಮಿಗೆ ಬಹಳ ಕಠಿಣವಾದಾಗ ಅವಳ ಸೋದರ ನರಸಿಂಹ ಅವಳ ಮನೆಯ ಖರ್ಚನ್ನು ನೋಡಿಕೊಳ್ಳಲು ಮುಂದೆ ಬಂದ. ಆತನಿಗೆ ಮಕ್ಕಳಿಲ್ಲದ್ದರಿಂದ ಅವನ ಪತ್ನಿ ಸುಕನ್ಯಾ ಯಶವಂತನನ್ನು ದತ್ತು ಪಡೆದುಕೊಳ್ಳೋಣವೆಂದು ಸೂಚಿಸಿದಳು. ಆದರೆ ಲಕ್ಷ್ಮಿ ಇದಕ್ಕೊಪ್ಪಲಿಲ್ಲ. ಹೀಗಾಗಿ ವಾರಕ್ಕೊಮ್ಮೆ ಯಶವಂತನನ್ನು ತನ್ನ ಮನೆಗೆ ಕರೆದುಕೊಂಡು ಬಂದು ಅವನಿಗೆ ಇಷ್ಟವಾದ ಅಡುಗೆ ಮಾಡಿ ಉಣಬಡಿಸುತ್ತಿದ್ದಳು.

ಯಶವಂತನಿಗೆ ಪ್ರೈಮರಿ ಶಾಲೆಯಿಂದಲೇ ಓದಿನಲ್ಲಿ ಆಸಕ್ತಿಯಿರಲಿಲ್ಲ. ತರಗತಿಗಳಿಗೆ ಹಾಜರಾಗದೆ ಪೋಲಿ ಹುಡುಗರ ಜತೆ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ. ಹೈಸ್ಕೂಲಿಗೆ ಬರುವಷ್ಟರಲ್ಲಿ ಶಾಲೆಯನ್ನು ಬಿಟ್ಟ. ಯಶವಂತನನ್ನು ತಾವೇ ಸಾಕಿದರೆ ಅವನು ಸರಿದಾರಿಗೆ ಬರಬಹುದೆಂದು ಸುಕನ್ಯಾ ತನ್ನ ಗಂಡನಿಗೆ ಪದೇಪದೆ ಹೇಳುತ್ತಿದ್ದರೂ, ತನ್ನ ಸೋದರಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಆತ ಸುಕನ್ಯಾಳ ಮಾತಿಗೆ ಒಪ್ಪಿರಲಿಲ್ಲ. ಏತನ್ಮಧ್ಯೆ ಸರ್ಕಾರಿ ಕೆಲಸದಲ್ಲಿದ್ದ ನರಸಿಂಹನಿಗೆ ಹೈದರಾಬಾದಿಗೆ ವರ್ಗವಾಯಿತು. ಆಗ ಸುಕನ್ಯಾ ಗಂಡನಿಗೆ ಬಲವಂತ ಮಾಡಿ ಯಶವಂತನನ್ನು ತಮ್ಮೊಡನೆ ಹೈದರಾಬಾದಿಗೆ ಕರೆದುಕೊಂಡು ಹೋಗಲು ಸೂಚಿಸಿದಳು. ನರಸಿಂಹ ಇದಕ್ಕೊಪ್ಪಿದ. ತನ್ನ ಸೋದರಿಯನ್ನು ಆಶ್ರಮವೊಂದಕ್ಕೆ ಸೇರಿಸಿ ಯಶವಂತನನ್ನು ತನ್ನೊಡನೆ ಕರೆದುಕೊಂಡು ಹೋದ. ಮಹಾನಗರಿ ಹೈದರಾಬಾದಿನಲ್ಲಿ ಯಶವಂತನನ್ನು ಒಳ್ಳೆಯ ಶಾಲೆಗೆ ಸೇರಿಸಿದ.

ಆ ಬಾಲಕನಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿಯೇ ಇರದಿದ್ದರಿಂದ ಆತ ಶಾಲೆಗೆ ಹೋಗುತ್ತಿರಲೇ ಇಲ್ಲ. ಕಡೆಗೊಂದು ದಿನ ಅವನನ್ನು ಶಾಲೆಯಿಂದ ಬಿಡಿಸಿದ ನರಸಿಂಹ ತನ್ನ ಸ್ನೇಹಿತರೊಬ್ಬರಿಗೆ ಹೇಳಿ ಅವರ ಫ್ಯಾಕ್ಟರಿಯಲ್ಲಿ ಅವನಿಗೆ ನೌಕರಿಯನ್ನು ಕೊಡಿಸಿದ. ತಿಂಗಳಿಗೆ ಆರು ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಅದರಲ್ಲಿ ಅರ್ಧದಷ್ಟನ್ನು ತಾಯಿಗೆ ಕಳಿಸಬೇಕೆಂದು ಸೂಚಿಸಿದ. ಇದಕ್ಕೊಪ್ಪಿದ ಯಶವಂತ್ ಪ್ರತಿ ತಿಂಗಳೂ ತಾಯಿಗೆ ಹಣ ಕಳಿಸಲಾರಂಭಿಸಿದ. ಊಟ, ತಿಂಡಿ, ಮತ್ತು ವಸತಿಗಾಗಿ ಖರ್ಚಿಲ್ಲದಿದ್ದರಿಂದ ತಾನು ಉಳಿಸಿದ ಹಣವನ್ನು ಯಶವಂತನೇ ಖರ್ಚು ಮಾಡುತ್ತಿದ್ದ. 6 ತಿಂಗಳ ನೌಕರಿಯ ನಂತರ ಯಶವಂತ್ ತನಗೊಂದು ಬೈಕ್ ಕೊಡಿಸಲು ನರಸಿಂಹನನ್ನು ಕೋರಿದ. ‘ಡೌನ್ ಪೇಮೆಂಟ್ ಮಾತ್ರ ನೀವು ಮಾಡಿ, ಇ.ಎಂ.ಐ.ಗಳನ್ನು ನಾನೇ ಕಟ್ಟುವೆ’ ಎಂದ. ಇದಕ್ಕೊಪ್ಪಿದ ನರಸಿಂಹ ಬೈಕ್ ಕೊಡಿಸಿದ.

ಬೈಕ್ ಬಂದ ನಂತರ ಅವನಿಗೆ ಶೋಕಿ ಬಂದಿತು. ಕುಡಿತದ ಚಟ ಕಲಿಸಿದ ಸಹೋದ್ಯೋಗಿಯೊಬ್ಬನ ಜತೆ ಪ್ರತಿ ವಾರವೂ ಬಾರ್​ಗಳಿಗೆ ಹೋಗತೊಡಗಿದ. ಬರುತ್ತಿದ್ದ ಹಣ ಸಾಲದಾಯಿತು. ತನ್ನ ಸೋದರತ್ತೆ ಸುಕನ್ಯಾಳನ್ನು ಪೀಡಿಸಿ ಪ್ರತಿತಿಂಗಳೂ ಅವಳಿಂದ ಹಣ ಪಡೆಯುತ್ತಿದ್ದ. ಸುಕನ್ಯಾಳಿಗೋ ಅವನನ್ನು ಕಂಡರೆ ಎಷ್ಟು ಪ್ರೀತಿಯಿತ್ತೆಂದರೆ ಆತ ಏನನ್ನು ಕೇಳಿದರೂ ಇಲ್ಲವೆನ್ನುತ್ತಲೇ ಇರಲಿಲ್ಲ. ಒಂದು ದಿನ ಯಶವಂತ್ ತನ್ನ ಸೋದರತ್ತೆಯ ಬಳಿ ಬಂದು ತನಗೆ ಚಿನ್ನದ ಸರ ಮಾಡಿಸಿಕೊಡು ಎಂದು ಕೇಳಿದಾಗ ಅನಾಥ ಬಾಲಕನ ಆಸೆಯನ್ನು ತೀರಿಸಬೇಕೆಂದು ಆಕೆ ಅವನಿಗೆ ಒಂದು ಚಿನ್ನದ ಸರವನ್ನು ಮಾಡಿಸಿಕೊಟ್ಟಳು. ಇಷ್ಟೆಲ್ಲಾ ಮಾಡಿದರೂ ಯಶವಂತ್​ನಿಗೆ ತೃಪ್ತಿಯೇ ಇರದೆ ಕಾಲಕಾಲಕ್ಕೆ ತನ್ನ ಸೋದರತ್ತೆಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಅವನ ಮೇಲಿನ ವಾತ್ಸಲ್ಯದಿಂದ ತನ್ನ ಗಂಡನಿಂದ ಬೈಸಿಕೊಂಡರೂ ಸುಕನ್ಯಾ ಅವನಿಗೆ ಹಣ ಕೊಡುತ್ತಿದ್ದಳು.

ಒಂದು ದಿನ ತನ್ನ ಸರಕ್ಕೆ ವಜ್ರದ ಲಾಕೆಟ್ ಮಾಡಿಸಿಕೊಡು ಎಂದು ಯಶವಂತ್ ಕೇಳಿದಾಗ, ‘ಈಗ ನನ್ನ ಬಳಿ ಅಷ್ಟು ಹಣವಿಲ್ಲ, ಐದಾರು ತಿಂಗಳು ತಡೆ, ಖಂಡಿತವಾಗಿ ಮಾಡಿಸಿಕೊಡುವೆ’ ಎಂದು ಸುಕನ್ಯಾ ಹೇಳಿದಾಗ ಯಶವಂತ್ ಕೋಪಿಸಿಕೊಂಡ. ಸಾಕಷ್ಟು ರಂಪಾಟವನ್ನು ಮಾಡಿದ. ಮಾರನೆಯ ದಿನದಿಂದಲೇ ಪ್ರತಿದಿನವೂ ಲಾಕೆಟ್ ಮಾಡಿಸಿಕೊಡಲು ಪೀಡಿಸತೊಡಗಿದ. ಕಡೆಗೊಮ್ಮೆ ಬೇಸತ್ತ ಸುಕನ್ಯಾ ತಾನು ಅವನಿಗೆ ಇನ್ನು ಮುಂದೆ ಒಂದು ಪೈಸೆ ಹಣವನ್ನೂ ಕೊಡುವುದಿಲ್ಲವೆಂದು ಹೇಳಿದಳು. ಅದೇ ದಿನವೇ ಯಶವಂತ್ ನಾಪತ್ತೆಯಾದ. ಆತನ ಕಾರ್ಖಾನೆಯಲ್ಲಿ ಅವನ ಬಗ್ಗೆ ವಿಚಾರಿಸಿದಾಗ ಆತ ಕಾರ್ಖಾನೆಗೆ ಬಂದೇ ಇಲ್ಲವೆಂದು ತಿಳಿಯಿತು. ಅವನಿಗಾಗಿ ನರಸಿಂಹ ಹೈದರಾಬಾದಿನ ಹಲವಾರು ಕಡೆಗಳಲ್ಲಿ ಹುಡುಕಾಡಿದ. ಆತ ಸಿಕ್ಕಲಿಲ್ಲ. ಇತ್ತ ಸುಕನ್ಯಾ ತನ್ನಿಂದಾಗಿಯೇ ಸೋದರಳಿಯ ಮನೆಬಿಟ್ಟು ಹೋದ ಎಂದು ಕೊರಗತೊಡಗಿದಳು. ಪೊಲೀಸ್ ಠಾಣೆಗೆ ದೂರನ್ನು ಕೊಡಲು ಗಂಡನಿಗೆ ಬಲವಂತ ಮಾಡಿದಳು.

ನರಸಿಂಹ ಠಾಣೆಗೆ ಹೋಗುತ್ತಿರುವಾಗಲೇ ವಾರಂಗಲ್​ನಿಂದ ಅವನ ಮಿತ್ರನೊಬ್ಬ ಫೋನ್ ಮಾಡಿ ಯಶವಂತ್ ಅಲ್ಲಿಗೆ ಬಂದಿರುವುದಾಗಿ ಮಾಹಿತಿಯಿತ್ತ. ನರಸಿಂಹ ಅವನಿಗೆ ಫೋನ್ ಮಾಡಿ ಹೈದರಾಬಾದಿಗೆ ಮರಳಲು ಹೇಳಿದ. ‘ಒಂದೆರಡು ವಾರಗಳ ನಂತರ ಬರುತ್ತೇನೆ’ ಎಂದ ಯಶವಂತ್ ಫೋನ್ ಕಟ್ ಮಾಡಿದ. ಆದರೆ ಒಂದು ತಿಂಗಳ ನಂತರವೂ ಯಶವಂತ್ ಬಾರದಿದ್ದಾಗ ಸುಕನ್ಯಾ ಅವನನ್ನು ಮರಳಿ ಕರೆತರಲು ತನ್ನ ಗಂಡನ ಮೇಲೆ ಒತ್ತಡವನ್ನು ಹೇರಿದಳು. ನರಸಿಂಹ ಮುಂದಿನ ಭಾನುವಾರದಂದು ವಾರಂಗಲ್​ಗೆ ಹೋಗಿ ಅವನನ್ನು ತನ್ನೊಡನೆ ಕರೆತರುವುದಾಗಿ ಹೇಳಿದ. ಅದೇ ವಾರವೇ ಮಧ್ಯಾಹ್ನದ ಸುಮಾರು 12 ಗಂಟೆಗೆ ಸುಕನ್ಯಾಳ ಮನೆಗೆ ಏಕಾಏಕಿ ಬಂದ ಯಶವಂತ, ‘ಅತ್ತೆ, ವಾರಂಗಲ್​ನಿಂದ ಈಗ ತಾನೇ ಬಂದೆ. ನನ್ನ ನಾಲ್ಕೈದು ಸ್ನೇಹಿತರು ಇಲ್ಲಿಗೆ ಬರುವವರಿದ್ದರು. ಅವರು ಕಾರಿನಲ್ಲಿ ನನ್ನನ್ನು ಇಲ್ಲಿಗೆ ಕರೆತಂದರು.

ನಿನ್ನನ್ನು ಬಹಳ ದಿನಗಳ ನಂತರ ನೋಡಿದ ಖುಷಿಯಲ್ಲಿ ನಾನು ನಿನಗೆ ಈಗಿಂದೀಗಲೇ ಪಾರ್ಟಿ ಕೊಡುವೆ. ಬೇಗ ರೆಡಿಯಾಗು. ನಾವಿಬ್ಬರೂ ಹೊರಗಡೆ ಊಟ ಮಾಡಿ ಸಿನಿಮಾ ನೋಡಿಕೊಂಡು ಬರೋಣ’ ಎಂದ. ಮೊದಲ ಬಾರಿಗೆ ಯಶವಂತ್ ತನ್ನನ್ನು ಹೊರಗೆ ಕರೆದೊಯ್ಯುತ್ತಿದ್ದಾನೆಂದು ಸಂತಸ ಗೊಂಡ ಸುಕನ್ಯಾ ಚೆನ್ನಾಗಿ ಸಿಂಗರಿಸಿಕೊಂಡು ಅವನೊಡನೆ ಹೊರಟಳು. ಇಬ್ಬರೂ ಮಾಲ್ ಒಂದಕ್ಕೆ ಹೋಗಿ ಅಲ್ಲಿಯೇ ಊಟ ಮಾಡಿ ಹೊಸ ಸಿನಿಮಾವೊಂದನ್ನು ನೋಡಿದರು. ಮಾಲ್​ನಿಂದ ಹೊರಗೆ ಬರುತ್ತಲೇ ಅಲ್ಲಿಯೇ ಇದ್ದ ನಾಲ್ಕು ಜನರನ್ನು ಸುಕನ್ಯಾಗೆ ಪರಿಚಯ ಮಾಡಿಸಿದ ಯಶವಂತ್, ‘ಅತ್ತೆ, ಇವರೇ ನನ್ನ ಸ್ನೇಹಿತರು. ನಾನು ಅವರ ಜತೆ ಕೆಲ ಸಮಯ ಕಳೆದು ರಾತ್ರಿ ಊಟ ಮಾಡಿಕೊಂಡು ಮನೆಗೆ ಬರುತ್ತೇನೆ. ಈಗ ಅವರ ಕಾರಿನಲ್ಲಿ ನಿನ್ನನ್ನು ಮನೆಗೆ ಬಿಟ್ಟು ಅಲ್ಲಿಂದ ಮುಂದೆ ಹೋಗುತ್ತೇವೆ’ ಎಂದ. ಒಪ್ಪಿದ ಸುಕನ್ಯಾ ಅವರೊಡನೆ ಕಾರಿನಲ್ಲಿ ಕೂತಳು. ಆಗ ಸಂಜೆ ಆರು ಗಂಟೆಯಾಗಿತ್ತು.

ಯಶವಂತ್ ಸುಕನ್ಯಾಳನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲ. ಮೊದಲೇ ಸ್ನೇಹಿತರೊಡನೆ ಹೂಡಿದ್ದ ಸಂಚಿನಂತೆ ಅವರ ಕಾರು ಹೈದರಾಬಾದಿನಿಂದ ಹೊರಗಡೆ ಇರುವ ನಿರ್ಜನ ಪ್ರದೇಶವೊಂದಕ್ಕೆ ಹೋಯಿತು. ‘ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ, ನಮ್ಮ ಮನೆಗೆ ಹೋಗೋಣ’ ಎಂದು ಸುಕನ್ಯಾ ಹೇಳಿದರೂ ಅವಳ ಮಾತುಗಳನ್ನು ಯಾರೂ ಆಲಿಸಲಿಲ್ಲ. ಕಾರು ನಿಂತ ಕೂಡಲೇ ಯಶವಂತನ ಇಬ್ಬರು ಸ್ನೇಹಿತರು ಸುಕನ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದರು. ಆಕೆಯ ಉಸಿರು ನಿಂತ ಮೇಲೆ ಯಶವಂತ್ ತನ್ನಲ್ಲಿದ್ದ ಕತ್ತರಿಯಿಂದ ಆಕೆಯ ತಲೆ ಕೂದಲನ್ನು ಬಾಬ್​ಕಟ್​ನಂತೆ ಕತ್ತರಿಸಿದ. ಅವಳ ಮೈಮೇಲಿದ್ದ ಎಲ್ಲ ಒಡವೆಗಳನ್ನೂ ಹೊರತೆಗೆದು, ಅವಳ ಪರ್ಸಿನಲ್ಲಿದ್ದ ಹಣ ಮತ್ತು ಮೊಬೈಲನ್ನು ತನ್ನ ಜೇಬಿಗೆ ಹಾಕಿಕೊಂಡ. ಆನಂತರ ಎಲ್ಲರೂ ಅವಳ ಶವವನ್ನು ಕಾರಿನಿಂದಿಳಿಸಿ ಸುಮಾರು ನೂರು ಮೀಟರ್ ದೂರ ತೆಗೆದುಕೊಂಡು ಹೋಗಿ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಸುಕನ್ಯಾಳ ಮೊಬೈಲ್ ಫೋನ್ ತನ್ನ ಬಳಿಯಿದ್ದರೆ ತೊಂದರೆಯೆಂದು ಮನಗಂಡ ಯಶವಂತ್ ಅದನ್ನೂ ಬೆಂಕಿಗೆಸೆದ. ನಂತರ ಎಲ್ಲರೂ ಹೊರಟುಹೋದರು.

ರಾತ್ರಿ ನರಸಿಂಹ ಮನೆಗೆ ಬಂದಾಗ ಸುಕನ್ಯಾ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಗಾಬರಿಯಾಗಿ ಅವಳ ಮೊಬೈಲ್​ಗೆ ಫೋನ್ ಮಾಡಿದ. ಮೊಬೈಲ್ ಸ್ವಿಚ್​ಆಫ್ ಆಗಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದ. ಅಲ್ಲೂ ಏನೂ ತಿಳಿಯಲಿಲ್ಲ. ಮಾರನೆಯ ದಿನ ಮಧ್ಯಾಹ್ನವಾದರೂ ಪತ್ನಿ ಮನೆಗೆ ಬರದಿದ್ದಾಗ ಆತ ಪೊಲೀಸ್ ಠಾಣೆಗೆ ಹೋಗಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರಿತ್ತ. ಏತನ್ಮಧ್ಯೆ ಅದೇ ಮುಂಜಾನೆ ಹೈದರಾಬಾದಿನ ಹೊರವಲಯದಲ್ಲಿ ದೇಹವೊಂದು ಸುಟ್ಟು ಉರಿಯುತ್ತಿರುವುದನ್ನು ಕಂಡ ಹಾದಿಹೋಕರು ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದರು. ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಶವ ಸಂಪೂರ್ಣ ಸುಟ್ಟುಹೋಗಿದ್ದು ಅದರ ಗುರುತು ಗೊತ್ತಾಗಲಿಲ್ಲ. ಆದರೆ ಅಲ್ಲಿಯೇ ಬಿದ್ದಿದ್ದ ಮೊಬೈಲ್ ಫೋನ್​ಗೆ ಬೆಂಕಿ ತಾಕಿರದೇ ಅದಕ್ಕೇನೂ ಆಗಿರಲಿಲ್ಲ. ಅದನ್ನು ಮತ್ತು ಶವದ ಮೇಲೆ ಉರಿಯದೇ ಇದ್ದ ಬಟ್ಟೆ ತುಂಡುಗಳನ್ನು ಜಪ್ತಿ ಮಾಡಿದ ಪೊಲೀಸರು ಶವದ ಫೋಟೋ ತೆಗೆದುಕೊಂಡು ಅವನ್ನು ಹೈದರಾಬಾದಿನ ಎಲ್ಲ ಪೊಲೀಸ್ ಠಾಣೆಗಳಿಗೂ ರವಾನಿಸಿದರು. ಕಾಕತಾಳೀಯ ಎನ್ನುವಂತೆ ಆ ಫೋಟೋ ಬಂದ ಸಮಯಕ್ಕೆ ಅಲ್ಲಿಯೇ ಇದ್ದ ನರಸಿಂಹನಿಗೆ ಪೊಲೀಸರು ಆ ಫೋಟೋ ತೋರಿಸಿ ಅವನನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕಳಿಸಿದರು. ಅಲ್ಲಿ ಜಪ್ತಿಯಾಗಿದ್ದ ಮೊಬೈಲ್ ಫೋನ್ ಮತ್ತು ಬಟ್ಟೆಗಳನ್ನು ನೋಡಿ ಅವನ್ನು ಸುಕನ್ಯಾಳದು ಎಂದಾತ ಗುರುತಿಸಿದ.

ಸುಕನ್ಯಾಳ ಫೋನಿಗೆ ಬಂದಿದ್ದ ಕೊನೆಯ ಕರೆಯನ್ನು ಯಶವಂತ್ ಮಾಡಿದ್ದನೆಂದು ತಿಳಿದಾಗ ಪೊಲೀಸರು ಅವನನ್ನು ಗೋವಾದಲ್ಲಿ ಪತ್ತೆ ಮಾಡಿ ಬಂಧಿಸಿದರು. ಆತ ಕೊಲೆ ಹೇಗೆ ನಡೆಯಿತೆಂದು ಪೊಲೀಸರಿಗೆ ವಿವರಿಸಿದ್ದೇ ಅಲ್ಲದೆ ಕೊಲೆ ಮಾಡಲು ತನಗೆ ಸಹಕರಿಸಿದವರೆಲ್ಲರ ಹೆಸರುಗಳನ್ನು ಕೊಟ್ಟ. ಹಣಕ್ಕಾಗಿಯೇ ತನ್ನ ಸೋದರತ್ತೆಯನ್ನು ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಹೇಳಿದ. ಯಶವಂತ್​ನ ನಾಲ್ಕೂ ಸ್ನೇಹಿತರನ್ನು ಬಂಧಿಸಿ ಅವರ ಕಾರನ್ನು ಜಪ್ತಿ ಮಾಡಿ, ಮಾಲ್ ಹೊರಗಿದ್ದ ಸಿಸಿಟಿವಿ ಫುಟೇಜ್​ಗಳ ಆಧಾರದ ಮೇರೆಗೆ ಎಲ್ಲ ಐದೂ ಆರೋಪಿಗಳ ಮೇಲೆ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. ನ್ಯಾಯಾಲಯವು ಎಲ್ಲರಿಗೂ ಹತ್ತು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿತು. ‘ಮಾನಸ ಸರೋವರ’ ಚಿತ್ರಕ್ಕೆ ವಿಜಯನಾರಸಿಂಹ ಬರೆದ ಗೀತೆ ‘ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ, ನಿನ್ನ ಹದ್ದಾಗಿ ಕುಕ್ಕಿತಲ್ಲೋ...’ ಎನ್ನುವಂತೆಯೇ ಆಯಿತು ಸುಕನ್ಯಾಳ ಬಾಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net