ಸಂಗೀತವನ್ನು ಅರ್ಥಮಾಡಿಕೊಂಡು ಸಾಧನೆಗೈಯಬೇಕು...: ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​​ನಲ್ಲಿ ಸಂಗೀತಾ ಕಟ್ಟಿ..

Sangitha Katii
Published on
ಇತ್ತೀಚಿನ ವರ್ಷಗಳಲ್ಲಿ ಸಂಗೀತದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಸಂಗೀತ ಯಾವತ್ತೂ ಬದಲಾಗುವುದಿಲ್ಲ. ಏಕೆಂದರೆ, ಇರುವುದು ಏಳು ಸ್ವರ ಮಾತ್ರ. ಹಾಗಾಗಿ, ಸೂರ್ಯ-ಚಂದ್ರರಿರುವವರೆಗೂ ಸಂಗೀತ ನಿರಂತರವಾಗಿರುತ್ತದೆ ಮತ್ತು ಅದು ಬದಲಾಗುವುದಿಲ್ಲ. ಆದರೆ, ಈಗ ತಂತ್ರಜ್ಞಾನ ದೊಡ್ಡದಾಗಿ ಬೆಳೆದಿದೆ. ಮನುಷ್ಯರಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬೇಕಾದ್ದು ಮಾಡಬಹುದು. ಆದರೆ, ಬೇಗ ಜನಪ್ರಿಯವಾಗಬೇಕು, ಹಣ ಮಾಡಬೇಕು ಎಂಬ ಹಪಾಹಪಿ ಹೆಚ್ಚುತ್ತಿದೆ. ಇದರಿಂದಾಗಿ ಅನೇಕರು ಶಾರ್ಟ್​ಕಟ್​ಗಳ ಮೊರೆಹೋಗುತ್ತಿದ್ದಾರೆ.

ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ. There is no shortcut for hard work and success ಅಂತ. ಯಶಸ್ಸು ಸಿಗಬೇಕೆಂದರೆ ಕಷ್ಟಪಟ್ಟು ದುಡಿಯಬೇಕು. ಇದು ಎಲ್ಲ ಕ್ಷೇತ್ರಗಳಿಗೂ ಸಲ್ಲುವಂತಹ ಮಾತು. ಇವತ್ತಿನ ಸಂಗೀತ ಕ್ಷೇತ್ರವನ್ನೇ ತೆಗೆದುಕೊಂಡರೆ, ಇಲ್ಲಿ ಶಾರ್ಟ್​ಕಟ್​ಗಳು ಹೆಚ್ಚುತ್ತಿವೆ. ಒಂದನೇ ಕ್ಲಾಸ್ ಓದುತ್ತಿರುವ ವಿದ್ಯಾರ್ಥಿ ಎಷ್ಟೇ ಬ್ರಿಲಿಯಂಟ್ ಆದರೂ, 10ನೇ ಕ್ಲಾಸ್ ಪರೀಕ್ಷೆ ಬರೆಯುವುದಕ್ಕೆ ಅನುಮತಿ ಸಿಗುತ್ತದಾ? ಎರಡು, ಮೂರು, ನಾಲ್ಕು ಅಂತ ಹಂತಹಂತವಾಗಿ ಮೇಲೇರಬೇಕು. ಹಾಗೆಯೇ ಎಲ್ಲದಕ್ಕೂ ಒಂದು ಸಮಯವಿದೆ.

ಸಂಗೀತವೆಂದರೆ ಶಾಸ್ತ್ರೀಯ ಸಂಗೀತಗಾರ ಆಗುತ್ತೀವೋ, ಇಲ್ಲವೋ ಅದು ಬೇರೆ ಮಾತು. ಆದರೆ, ಸಂಗೀತವನ್ನು ಕಲಿಯಲೇಬೇಕು. ಸಪ್ತಸ್ವರಗಳನ್ನು, ಯಾವ ಸ್ವರವನ್ನು, ಯಾವ ಶೈಲಿಯಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳಬೇಕು. ನಾವು ಕಲಿಯುವಾಗ ಸಂಗೀತ ದಿಗ್ಗಜರಿದ್ದರು. ಭಕ್ತಿಯಿಂದ ಅಷ್ಟೇ ಅಲ್ಲ, ನಂಬಿಕೆ ಇಟ್ಟು ಗುರುಮುಖೇನ ಕಲಿತೆವು. ನಾವು ಎಷ್ಟು ಅದರ ಬೆನ್ನು ಹತ್ತಿಹೋದೆವು ಎಂದು ಗೊತ್ತಿಲ್ಲ. ಆದರೆ, ಸಂಗೀತ ನಮ್ಮನ್ನು ಬಿಡಲಿಲ್ಲ ಎನ್ನುವುದು ನಮ್ಮ ಪುಣ್ಯ. ಏಕೆಂದರೆ, ನಮಗೆ ಬೇರೆ ಯಾವುದೇ ಆಕರ್ಷಣೆಗಳು ಇರಲಿಲ್ಲ. ಆಕರ್ಷಣೆಗಳನ್ನು ನಾವು ನಕಾರಾತ್ಮಕವಾಗಿ ತೆಗೆದುಕೊಳ್ಳಬಾರದು, ಅದನ್ನು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳಬೇಕು. ನಮ್ಮ ಕನಸುಗಳನ್ನು ಸಾಕಾರಗೊಳಿಸುವುದು ಹೇಗೆ ಎಂದು ಯೋಚಿಸಬೇಕೇ ಹೊರತು, ಅದರಲ್ಲೇ ಕೊಚ್ಚಿಕೊಂಡು ಹೋಗಬಾರದು. ಹೆಸರು ಮಾಡುವುದು, ಹಣ ಮಾಡುವುದು ... ಇವೆಲ್ಲವೂ ಇದ್ದಿದ್ದೇ. ಇವೆಲ್ಲದರ ಮಧ್ಯೆ, ಕಲಿಯುವಿಕೆಗೂ ಹೆಚ್ಚು ಪ್ರಾಶಸ್ಱ ಕೊಡಬೇಕು.

ಬದಲಾವಣೆ ಎನ್ನುವುದು ಸಹಜ. ಆದರೆ, ನಾವು ಹೇಗೆ ಒಗ್ಗಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಸಂಗೀತದಲ್ಲಿ ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆಯೇ, ಅದರ ಬಗ್ಗೆ ಇವತ್ತಿನ ತಲೆಮಾರಿನವರು ರೀಸರ್ಚ್ ಮಾಡುತ್ತಿರುವುದಷ್ಟೇ ಅಲ್ಲ, ತಾಂತ್ರಿಕವಾಗಿ ಧ್ವನಿಮುದ್ರಣದಲ್ಲಿ ಅದ್ಭುತಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಆದರೆ, ಸಂಗೀತದ ಕಥೆ ಏನು? ಅದನ್ನು ಕಲಿಯಬೇಕು, ಅರ್ಥ ಮಾಡಿಕೊಳ್ಳಬೇಕು, ಸಾಧನೆ ಮಾಡಬೇಕು.

ಅಷ್ಟೊಂದು ಸಮಯವನ್ನು ಯಾರು ವ್ಯಯಿಸುತ್ತಾರೆ? ಅಷ್ಟೆಲ್ಲಾ ಬೇಡ, ಕಂಪ್ಯೂಟರ್ ಇದೆ, ಸಾಫ್ಟ್​ವೇರ್​ಗಳಿವೆ ... ಒಟ್ಟಿನಲ್ಲಿ ನಾವು ಹಾಡಬೇಕು, ಗಾಯಕ ಎಂದನಿಸಿಕೊಳ್ಳಬೇಕು ಎಂದು ಶಾರ್ಟ್​ಕಟ್ ಹಿಡಿದು, ತಾಂತ್ರಿಕವಾಗಿ ಯಶಸ್ಸು ಕಂಡಿರಬಹುದು. ಇದರಿಂದ ಒಬ್ಬ ‘ಸಂಗೀತಗಾರನಲ್ಲಿರುವ ಗಾಯಕ’ ಸತ್ತುಹೋಗುತ್ತಾನೆ. ಏಕೆಂದರೆ, ಅಲ್ಲಿ ತಂತ್ರಜ್ಞಾನ ಮುಂದಿರುತ್ತದೆಯೇ ಹೊರತು, ಸಂಗೀತ ಇರುವುದಿಲ್ಲ.

ಹಾಗಾದರೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಾರದೇ? ತಂತ್ರಜ್ಞಾನವನ್ನು, ನಿಮ್ಮಲ್ಲಿರುವ ಕೌಶಲವನ್ನು ಖಂಡಿತಾ ಬಳಸಿಕೊಳ್ಳಬೇಕು. ಆದರೆ, ಪಿಚ್ ಬದಲಾಯಿಸುವುದು, ಅಪಶ್ರುತಿಯನ್ನು ಶ್ರುತಿಗೆ ತರುವುದು ... ಹೀಗೆ ಏನೇನೋ ಗಿಮಿಕ್ಸ್ ಮಾಡಿ, ಆ ಕ್ಷಣಕ್ಕೆ ಒಂದು ಹಾಡು ತಯಾರು ಮಾಡಿ, ಲೈವ್ ಹಾಡುವ ಪ್ರಸಂಗ ಬಂದಾಗ ಅದನ್ನು ಹಾಡಲು ಸಾಧ್ಯವಾಗದೆ, ರೀ-ರೆಕಾರ್ಡ್ ಮಾಡಿ ಲೈವ್​ಗೆ ಬೇಕಾಗುವ ಹಾಗೆ ಭ್ರಮೆ ಹುಟ್ಟಿಸುವ ಪರಿಪಾಠ ಹೆಚ್ಚಾಗುತ್ತಿದೆ. ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಇದು ಬಹಳ ಸಹಜ ಎನ್ನುವಂತಾಗಿಬಿಟ್ಟಿದೆ. ಆ ಸಂದರ್ಭದಲ್ಲಿ ಏನೋ ತಾಂತ್ರಿಕ ಸಮಸ್ಯೆಗಳು ಎದುರಾದರೆ, ಡಾನ್ಸ್ ಮಾಡಿ ಅಥವಾ ಇನ್ನೇನೋ ಗಿಮಿಕ್ ಮಾಡಿ ಅದನ್ನು ಮರೆಮಾಚುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ತಂತ್ರಜ್ಞಾನ ಬಳಸಿಕೊಂಡು ಲೈವ್​ನಲ್ಲಿ ಮೈಮ್ ಮಾಡುತ್ತಾರೆ. ಇದು ಜನರಿಗೆ ಮಾಡುವ ಮೋಸವಲ್ಲವೆ? ನಾವು ಕಲಾವಿದರು ಹೆಸರು ಮಾಡಿರುವುದೇ ಜನರ ಅಭಿಮಾನದಿಂದ. ಅವರ ಪ್ರೀತಿಯಿಂದ. ಅವರು ಒಂದು ಕಾರ್ಯಕ್ರಮವನ್ನು ಸಾವಿರಾರು ರೂ. ಕೊಟ್ಟು ಲೈವ್ ಆಗಿ ವೀಕ್ಷಣೆ ಮಾಡುತ್ತಾರೆ.

ಹಾಗಾಗಿ, ವಿವೇಕ, ಸಂಸ್ಕಾರ, ಪ್ರಾಮಾಣಿಕತೆ, ಸಾಧನೆ, ಅದೃಷ್ಟ ಬಹಳ ಮುಖ್ಯ. ವಜ್ರವನ್ನು ತೋರಿಸಿ ಇದು ಕಲ್ಲು ಕಲ್ಲು ಎಂದು ಫೀಡ್ ಮಾಡಿದರೆ, ಹಾಗೇ ನಂಬುವ ಸಾಧ್ಯತೆ ಇದೆ.. ದರ್ಬಾರಿ ರಾಗವನ್ನು ಇದು ತೋಡಿ, ತೋಡಿ ಎಂದು ಹೇಳಿದರೆ, ತೋಡಿ ರಾಗ ಎಂದರೆ ಇದೇ ಇರಬೇಕು ಎಂದು ಲಕ್ಷಾಂತರ ಜನ ಭಾವಿಸುವ ಸಾಧ್ಯತೆ ಇದೆ. ಇವೆಲ್ಲ ನಿಲ್ಲಬೇಕೆಂದರೆ, ನಿಮ್ಮಲ್ಲಿರುವ ಕಲೆಯಿಂದ ನಿಮ್ಮನ್ನು ಗುರುತಿಸಿಕೊಂಡು ಪೋಷಿಸಿ. ಆತ್ಮವಿಶ್ವಾಸ ಮತ್ತು ದೈವೀ ಅನುಗ್ರಹವಿದ್ದರೆ ದೊಡ್ಡ ಮಟ್ಟದಲ್ಲಿ ಬೆಳೆಯಬಹುದು. ಇಲ್ಲಿ ಶ್ರಮವೊಂದೇ ಅಲ್ಲ, ಅದೃಷ್ಟ ಸಹ ಮುಖ್ಯವಾಗುತ್ತದೆ. ಅದೇ ಕಾರಣಕ್ಕೆ ಈಗ ಐಕಾನ್​ಗಳು ಹುಟ್ಟಿಕೊಳ್ಳುವುದು ಕಡಿಮೆಯಾಗುತ್ತಿದೆ. ತುಂಬಾ ಜನ ಹಾಗೆ ಬಂದು, ಹೀಗೆ ಮರೆಯಾಗುತ್ತಿದ್ದಾರೆ.

ಶಾಸ್ತ್ರೀಯ ಸಂಗೀತ ಕಲಿತರೆ ಸಾಕಾಗುವುದಿಲ್ಲ. ನಿರಂತರವಾಗಿ ಕಲಿಯುತ್ತಿರಬೇಕು ಮತ್ತು ಹಾಡುತ್ತಿರಬೇಕು. ಕಚೇರಿ, ರೆಕಾರ್ಡಿಂಗ್ ಎನ್ನುವುದೆಲ್ಲ ವೃತ್ತಿಯ ವಿಷಯ. ವೃತ್ತಿಯಾಗಿ ತೆಗೆದುಕೊಳ್ಳುವುದಕ್ಕೆ ಆಗಲಿಲ್ಲ, ಯಾವುದೋ ಪ್ರಶಸ್ತಿ ಬರಲಿಲ್ಲ ... ಹಾಗಾಗಿ, ಕಲಿತಿದ್ದು ವ್ಯರ್ಥ ಎಂದು ಅರ್ಧಕ್ಕೆ ನಿಲ್ಲಿಸಬಾರದು.

ಸಂಗೀತವೆನ್ನುವ ಗಂಧರ್ವವಿದ್ಯೆ ಸುಮ್ಮನೆ ಒಲಿಯುವುದಿಲ್ಲ. ಅದು ಪೂರ್ವಜನ್ಮದ ಸುಕೃತ. ಇಂದು ಜನ ನಮ್ಮನ್ನು ಗಾಯಕ ಅಥವಾ ಗಾಯಕಿ ಎಂದು ಗುರುತಿಸುತ್ತಿದ್ದಾರೆ ಎಂದರೆ ಅದೆಂತಹ ವರವಾಗಿರಬಹುದು ಯೋಚಿಸಿ. ಹಾಗಿರುವಾಗ, ನಾವು ನ್ಯಾಯ ಒದಗಿಸುವುದು ಬೇಡವೇ. ನಮ್ಮಲ್ಲಿರುವ ಪ್ರತಿಭೆಯನ್ನು ಎತ್ತರಕ್ಕೆ ಕೊಂಡೊಯ್ಯುವ ತಂತ್ರಜ್ಞಾನವಿದೆ. ಪೋಷಿಸುವ ಅಭಿಮಾನಿಗಳಿದ್ದಾರೆ. ಇದರ ಜತೆಗೆ ಸ್ವಲ್ಪ ನಮ್ಮ ಕಡೆಯಿಂದ ಪ್ರಾಮಾಣಿಕ ಪ್ರಯತ್ನವಿದ್ದರೆ ಅದು ಪುಟಕ್ಕಿಟ್ಟ ಚಿನ್ನ, ಅಲ್ಲವೇ? ಸಂಗೀತವನ್ನು ಕಲಿಯುವ, ಹಾಡುವ ಮತ್ತು ಸಂಯೋಜಿಸುವ ಪ್ರಾಮಾಣಿಕ ಯತ್ನ ಮಾಡೋಣ. ಈ ಮೂಲಕ ದೈವತ್ವಕ್ಕೆ ನೇರಸೇತುವೆಯಾಗಿರುವ ಶ್ರೋತೃಗಳ ಮನಸ್ಸು ಸಂತುಷ್ಟಪಡಿಸುವುದಕ್ಕೆ ಮುಂದಾಗೋಣ.

(ಲೇಖಕರು ಖ್ಯಾತ ಗಾಯಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net