ವೇದಾಂತದ ಸರಳ ಬೋಧಕ ಡಾ.ಕೆ.ಜಿ.ಸುಬ್ರಾಯ ಶರ್ಮ

vedantha
Published on

ಭಿನವ ಶಂಕರರೆಂದೇ ಖ್ಯಾತರಾದವರು ಹೊಳೇನರಸೀಪುರದ ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಮಹಾಸ್ವಾಮಿಗಳು. ಅವರ ಬಳಿ ಎಂಟನೇ ವಯಸ್ಸಿನಿಂದಲೇ ಗುರುಕುಲ ಪದ್ಧತಿಯಲ್ಲಿ 17 ವರ್ಷ ವೇದಾಂತ ಶಿಕ್ಷಣ ಪಡೆದವರು ಹಿರಿಯ ವಿದ್ವಾಂಸ ಡಾ. ಕೆ.ಜಿ. ಸುಬ್ರಾಯ ಶರ್ಮ. ವೇದಾಂತ ಉಪನ್ಯಾಸವನ್ನೇ ಜೀವನದ ಪರಮ ಉದ್ದೇಶವನ್ನಾಗಿ ಮಾಡಿಕೊಂಡಿರುವ ಅವರ ಅಸ್ಖಲಿತ ವೇದಾಂತವಾಣಿ ಸಾಮಾನ್ಯರಿಗೂ ಅರ್ಥವಾಗುವಂತೆ ಮೊಳಗುತ್ತದೆ.

ಸುಬ್ರಾಯ ಶರ್ಮರು ಕಿಕ್ಕೇರಿ ಗುಂಡಪ್ಪ-ಸೀತಾಲಕ್ಷ್ಮಮ್ಮರ ಪುತ್ರ. ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನವನ್ನು ಸಮರ್ಥವಾಗಿ ನಿಭಾಯಿಸಲು ವೇದಾಂತ ಅತ್ಯಂತ ಸಹಕಾರಿ ಎಂದು ನಿಶ್ಚಯಿಸಿ ಗುರುಗಳು ನೀಡಿದ ಜ್ಞಾನವನ್ನು ಸಾಮಾನ್ಯರಿಗೆ ಹಂಚುವ ವೇದಾಂತ ಪರಿಚಾರಕ. ರಜಾದಿನ, ಹಬ್ಬ, ಮಳೆ, ಚಳಿ ಯಾವ ಸಂದರ್ಭದಲ್ಲೂ ಶರ್ಮರ ಪ್ರವಚನ ಮಾಲಿಕೆಗೆ ರಜೆಯಿಲ್ಲ. 1959ರಿಂದ ದಿನಕ್ಕೆ ಐದು ಕಡೆ ಪ್ರವಚನ. ಲಕ್ಷಕ್ಕೂ ಮೀರಿ ಪ್ರವಚನ ನೀಡಿದ್ದರೂ ದಣಿವರಿಯದ ಚೇತನ. ಬೆಂಗಳೂರಿನ ವಿಶ್ವೇಶ್ವರಪುರದ ಅಧ್ಯಾತ್ಮ ಮಂದಿರ, ಬಸವನಗುಡಿಯ ವೇದಾಂತ ನಿಲಯ, ಜಯನಗರದ ಶಂಕರಕೃಪಾ ಸಭಾಂಗಣ ಇವರ ನಿತ್ಯ ಪ್ರವಚನದ ವೇದಿಕೆಗಳಾಗಿವೆ.

ವೇದಾಂತ ಕೃತಿಕಾರ: ಮೂವತ್ತು ವರ್ಷ ವೇದಾಂತ ಭಾಸ್ಕರ- ಧಾರ್ವಿುಕ ಪತ್ರಿಕೆ ಸಂಪಾದಕತ್ವ ವಹಿಸಿದ್ದ ಶರ್ಮರು ಸ್ವತಃ ಲೇಖಕರೂ ಹೌದು. ಆನಂದ ಗ್ರಂಥಮಾಲೆ ಸರಣಿಯಲ್ಲಿ ಈವರೆಗೆ 112 ವೇದಾಂತ ಕೃತಿ ರಚನೆ ಮಾಡಿದ್ದಾರೆ. ನೀತಿ ಕಥೆಗಳನ್ನು ಆಧರಿಸಿದ ‘ಪ್ರಭೇದ ಚಿಂತಾಮಣಿ’ ಮೊದಲ ಕೃತಿ. ಇದು ಸಂಸ್ಕೃತ, ಹಿಂದಿ, ಮರಾಠಿ, ಒರಿಯಾ, ತಮಿಳು, ಸೇರಿ ಹತ್ತು ಭಾಷೆಗಳಿಗೆ ಅನುವಾದವಾಗಿದೆ. ‘ವೇದಾಂತ ಸಂವತ್ಸರ’ (ಉಪನಿಷತ್ತುಗಳ ಸರಳ ಸಂದೇಶ) ನಾಲ್ಕು ಭಾಷೆಗೆ ಅನುವಾದಗೊಂಡಿದೆ. 1998ರಲ್ಲಿ ಐವತ್ತನೇ ಜನ್ಮದಿನಕ್ಕೆ ಅಭಿಮಾನಿಗಳು ‘ವಿವೇಕ ಭಾಸ್ಕರ’ ಗ್ರಂಥ ಸಮರ್ಪಿಸಿದ್ದಾರೆ.

ಅದ್ವೈತ ವೇದಾಂತಕ್ಕೆ ಇವರು ನೀಡಿದ ಅನನ್ಯ ಕೊಡುಗೆ ಪರಿಗಣಿಸಿ ಈವರೆಗೆ ನೂರಾರು ಸಂಸ್ಥೆಗಳು, ಮಠಗಳು ಅನೇಕ ಸನ್ಮಾನ ನೀಡಿವೆ. ಅಯೋಧ್ಯೆಯಲ್ಲಿ ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಮಹಾಮಹೋಪಾಧ್ಯಾಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಲಭಿಸಿವೆ.

ಸರಳತೆಯೇ ಭೂಷಣ: ಮನೆ-ಪ್ರವಚನ ಸ್ಥಳ ಮಾತ್ರವಲ್ಲ, ಅಮೆರಿಕದ ವೈಟ್​ಹೌಸ್​ನಿಂದ ಜರ್ಮನಿ ವಿಶ್ವವಿದ್ಯಾಲಯದವರೆಗೂ ಸಾಗಿದ್ದು ಬಿಳಿ ಪಂಚೆ, ಶಲ್ಯದಲ್ಲೇ. ಫ್ಲೋರಿಡಾ ವಿಶ್ವವಿದ್ಯಾಲಯ, ಅಮೆರಿಕನ್ ಎಂಬೆಸಿಗಳಲ್ಲಿ ವೇದಾಂತ ಬೋಧಿಸಿದ ಹಿರಿಮೆ ಇವರಿಗಿದೆ.

ಶರ್ಮರಿಗೆ ಈಗ 72ನೇ ವಸಂತ. ಉಪನ್ಯಾಸಸರಣಿ ಆರಂಭಿಸಿ ಅರವತ್ತು ವರ್ಷ ಪೂರ್ಣಗೊಂಡ (1959-2020) ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳು ಇದೇ ಜ. 5ರಂದು ಶರ್ಮರಿಗೆ ‘ಸುವರ್ಣ ಕರ್ನಾಟಕ ವಜ್ರ ವೇದಾಂತಿ’ ಬಿರುದು ನೀಡಿ ಗೌರವಿಸಲು ಅಭಿನಂದನಾ ಸಮಾರಂಭವನ್ನು ಆಯೋಜಿಸಿವೆ. ಹೃಷಿಕೇಶದ ಶ್ರೀ ದಯಾನಂದಾಶ್ರಮದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಅಧ್ಯಾತ್ಮಮಂದಿರದ ಶ್ರೀ ಸದಾನಂದಗಿರಿ ಸ್ವಾಮೀಜಿ, ಮಹಾಮಹೋಪಾಧ್ಯಾಯ ಡಾ.ಎಸ್. ರಂಗನಾಥ್ ಮತ್ತಿತರ ಗಣ್ಯರು ಸಾಕ್ಷಿ ಆಗಲಿದ್ದಾರೆ.

ವೇದಾಂತಜ್ಞಾನ ತಿಳಿಯುತ್ತಾ ಹೋದಂತೆ ನಾವು ಸರಳವಾಗಬೇಕು, ಎಲ್ಲರಿಗೂ ಎಟುಕುವ ಮನುಷ್ಯನಾಗಬೇಕು. ಸನಾತನ ಧರ್ಮ, ವೇದಾಂತಕ್ಕೆ ಸಂಬಂಧಿಸಿ ಏನೇ ಮಾಡಿದರೂ ಅದು ನನ್ನ ಕರ್ತವ್ಯ. ಮಾಡಿ ಮುಗಿಸಿದ ಮೇಲೆ ಕೃತಕೃತ್ಯತೆ. ಇದೇ ನನ್ನ ಧನ್ಯತೆಯ ಗುಟ್ಟು. | ಸುಬ್ರಾಯ ಶರ್ಮ ವೇದಾಂತ ವಿದ್ವಾಂಸ

ಎ.ಆರ್. ರಘುರಾಮ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net