ಸರಳತೆಯ, ಉನ್ನತ ವ್ಯಕ್ತಿತ್ವದ ಚಿದಾನಂದ ಮೂರ್ತಿ

Chimu 11 jan 10
Published on

ಅದು 1985ನೇ ಇಸ್ವಿ. ಬೆಳಗಿನ 9 ಗಂಟೆ ಸಮಯದಲ್ಲಿ ನನ್ನೂರು ಅಂದಿನ ತರೀಕೆರೆ ತಾಲೂಕಿನ ಬುಕ್ಕಾಂಬುಧಿ ಗ್ರಾಮದ ಪ್ರೌಢಶಾಲೆಯ ಶಿಕ್ಷಕರೊಂದಿಗೆ ನನ್ನ ಮನೆಗೆ ಓರ್ವ ಅಪೂರ್ವ ವ್ಯಕ್ತಿ ಬಂದರು. ಅವರೇ ಡಾ.ಎಂ.ಚಿದಾನಂದ ಮೂರ್ತಿ. ಪತ್ರಿಕೆಯಲ್ಲಿ ಅವರ ಫೋಟೋವನ್ನು ನೋಡಿದ್ದೆನಾದ್ದರಿಂದ ನಾನು ತಕ್ಷಣ ಗುರುತು ಹಿಡಿದು ನಮಸ್ಕರಿಸಿ, ಒಳ ಕರೆದುಕೊಂಡು ಬಂದೆ. ಜತೆಗೆ ಬಂದಿದ್ದ ಅಧ್ಯಾಪಕರು, ‘ಅಧ್ಯಕ್ಷರೇ (ಆಗ ನಾನು ಅಲ್ಲಿನ ಕನ್ನಡ ಯುವಕ ಸಂಘದ ಅಧ್ಯಕ್ಷ) ಇವರು, ಇಂದು ನಿಮ್ಮ ಅತಿಥಿ’ ಎಂದು ಹೇಳಿ ಹೋದರು. ಸೀದಾ ನಡುಮನೆಗೆ ಬಂದು ಚಾಪೆಯ ಮೇಲೆ ಕುಳಿತವರೇ ನನ್ನವ್ವನನ್ನು ನೋಡಿ ‘ಅವ್ವಾ ನಾನು ಇವತ್ತು ನಿಮ್ಮ ಮನೆಯಲ್ಲಿ ಉಳಿಯುತ್ತೇನೆ, ನನಗೆ ಪಾಯಸ ಬೇಕು’ ಎಂದರು. ನನ್ನವ್ವ ಸಂತೋಷದಿಂದ ‘ಹಾಗೇ ಆಗಲಿ’ ಎಂದರು.

ನನ್ನೆಡೆಗೆ ತಿರುಗಿದವರೇ-‘ನೋಡಿ, ಸಮಯ ವ್ಯರ್ಥ ಮಾಡುವುದು ಬೇಡ. ನನ್ನ ತಿಂಡಿಯಾಗಿದೆ. ನಿಮ್ಮದೂ ಆಗಿದ್ದರೆ ನನ್ನ ಜತೆಯಲ್ಲಿ ಬನ್ನಿ-ನಾನು ಬೆಂಗಳೂರಿನಿಂದ ಹಂಪಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದೇನೆ, ಈ ದಿನ ಇಲ್ಲಿನ ಮತ್ತು ಸುತ್ತಮುತ್ತಲ ಗ್ರಾಮಗಳ ಶಿಲಾಶಾಸನಗಳನ್ನು ನೋಡಬೇಕು’ ಎಂದರು.

ಅವರ ಜತೆಯಲ್ಲಿನ ನನ್ನ ಅಂದಿನ ಅನುಭವ ಜೀವನದ ಅಮೂಲ್ಯ ಕ್ಷಣವಾಗಿತ್ತು. ಶಿಲಾಶಾಸನಗಳ ಪ್ರತಿಗಳನ್ನು ಪೇಪರಿನಲ್ಲಿ ಹೇಗೆ ತೆಗೆಯಬೇಕು ಎಂದು ತೋರಿಸಿಕೊಟ್ಟರು. ಒಂದು ಬಿಳಿ ಕಾಗದವನ್ನು ಗುಡಿಯ ಶಿಲೆಗೆ ಬಳಿದು, ನಯವಾಗಿ ಸವರಿ ಶಾಸನದ ಮೇಲಿಟ್ಟು ಬಡಿದು ತೋರಿಸಿದರು. ಶಾಸನದ ಮೇಲಿದ್ದ ಸೂರ್ಯ, ಚಂದ್ರರನ್ನು ತೋರಿಸಿ ಎಲ್ಲ ಶಾಸನಗಳ ಮೇಲೂ ಇವರಿರುತ್ತಾರೆ, ಇದರರ್ಥ ಸೂರ್ಯಚಂದ್ರರಿರುವವರೆಗೂ ಇವು ಶಾಶ್ವತವಾಗಿರಲಿ ಎಂದು ಮೇಲಿನ ಎರಡು ಸಾಲು ಬಿಡಿಸಿ ಹೇಳಿದರು. ನಂತರ ವೀರಗಲ್ಲುಗಳ ಬಗ್ಗೆ ವಿವರಿಸಿ ಹೇಳಿದರು. ಸುತ್ತಮುತ್ತಲ ಹಳ್ಳಿಗಳನ್ನೆಲ್ಲ ಕಾಲ್ನಡಿಗೆಯಲ್ಲೇ ಸುತ್ತಿ ಬಂದೇವು.

ರಾತ್ರಿ ಊಟದ ನಂತರ ಮಕ್ಕಳು-ಮನೆಮಂದಿಯನ್ನೆಲ್ಲ ಕೂರಿಸಿಕೊಂಡು ಕಥೆ ಹೇಳಿದರು. ಶಿಲಾಶಾಸನಗಳನ್ನು ಸಾಧ್ಯವಾದಷ್ಟು ಬಿಸಿಲು, ಮಳೆಗೆ ಹಾಳಾಗಲು ಬಿಡದೆ ರಕ್ಷಿಸುವ ಬಗ್ಗೆ ತಿಳಿಸಿದರು. (ಅಂತೆಯೇ ಕೆಲವು ಶಾಸನಗಳನ್ನು ನಮ್ಮೂರ ದೇವಸ್ಥಾನದಲ್ಲಿ ರಕ್ಷಿಸಿ ಇಟ್ಟಿದ್ದೇವೆ). ನಂತರ ಪುಟ್ಟ ಮಗುವಿನ ರೀತಿ ನಿದ್ರೆ ಹೋದರು. ಬೆಳಗ್ಗೆ ಅವರ ಜತೆಯಲ್ಲೇ ನಾನು ನಡೆಯುತ್ತ ನಮ್ಮೂರ ಕೆರೆಯವರೆಗೆ ಹೋದೆ. ಅಲ್ಲಿ ನಿಂತ ಅವರು, ‘ಸಾಕು-ನೀವಿನ್ನು ಹಿಂತಿರುಗಿ, ನಾನೊಬ್ಬನೇ ಹೋಗುತ್ತೇನೆ’ ಎಂದು ಹೇಳಿಹೊರಟರು. ಕಣ್ಣಿಂದ ಸ್ವಲ್ಪಸ್ವಲ್ಪವೇ ಮರೆಯಾದ ಅವರನ್ನು ನನ್ನ ಕಣ್ಣಾಲಿಗಳಲ್ಲಿ ತುಂಬಿಕೊಂಡು ಮನೆಗೆ ಹಿಂತಿರುಗಿದೆ. ಇಂಥ ಸರಳ, ಉನ್ನತ ವ್ಯಕ್ತಿತ್ವದ ಚಿದಾನಂದ ಮೂರ್ತಿ ಅವರು ನಮಗೆ ಹಲವು ಆದರ್ಶ, ಮೌಲ್ಯಗಳನ್ನು ಕೊಟ್ಟು ಹೋಗಿದ್ದಾರೆ.

| ಟಿ.ಜಿ.ಮಲ್ಲೇಗೌಡ, ದಾವಣಗೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net