ಮೌನವೆಂದರೆ ಸೋಲಲ್ಲ, ಸಹನೆ: ಮನೋಲ್ಲಾಸ

Manollasa
Published on
| ಡಾ. ಗಣಪತಿ ಆರ್. ಭಟ್

ಆಗಷ್ಟೇ ಉದ್ಯಮ ಆರಂಭಿಸಿದ್ದ ಯುವಕ ಹತಾಶನಾಗಿ ತಾನು ನಂಬಿದ ಗುರುಗಳ ಬಳಿ ಬಂದ. ‘ನನ್ನದೇ ಪ್ರತಿಭೆ ಹಾಗೂ ಬಂಡವಾಳದಿಂದ ಆರಂಭಿಸಿರುವ ಉದ್ಯಮ ಜನಮನ್ನಣೆ ಪಡೆದುಕೊಳ್ಳುತ್ತಿರುವ ವೇಳೆಯೇ ನನ್ನ ಏಳಿಗೆ ಸಹಿಸದ ಜನ ಟೀಕಿಸುತ್ತಿದ್ದಾರೆ. ನಮ್ಮ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಾಕಷ್ಟು ಸಲ ಸಮಜಾಯಿಶಿ ನೀಡಿದೆ. ಮಾತಿನ ಬಿಸಿ ಮುಟ್ಟಿಸಿದೆ. ಟೀಕೆಗಳು ನಿಲ್ಲುತ್ತಲೇ ಇಲ್ಲ. ಅವರನ್ನು ಹೇಗೆ ಎದುರಿಸಬೇಕೋ ತಿಳಿಯದಾಗಿದೆ’ ಎಂದು ಗುರುಗಳ ಬಳಿ ದಯನೀಯನಾಗಿ ಹೇಳಿಕೊಂಡ. ಗುರುಗಳು ಸಮೀಪದಲ್ಲಿದ್ದ ಪ್ರಶಾಂತವಾದ ಕೊಳವನ್ನು ತೋರಿಸುತ್ತ, ಕಲ್ಲನ್ನು ಆತನ ಕೈಯಲ್ಲಿರಿಸಿ ‘ಇದನ್ನು ಜೋರಾಗಿ ನೀರಿಗೆ ಎಸೆ’ ಎಂದರು. ಆತ ಹಾಗೇ ಮಾಡಲಾಗಿ ಕ್ಷಣಾರ್ಧದಲ್ಲಿ ತಳಭಾಗದ ಕೆಸರು ಮೇಲಕ್ಕೆ ಬಂದು ನೀರು ಮಲಿನವಾಯಿತು. ‘ಈ ನೀರು ಮತ್ತೆ ತಿಳಿಯಾಗಲು ಏನು ಮಾಡಬೇಕಪ್ಪ?’ ಎಂದು ಗುರುಗಳು ಕೇಳಿದಾಗ ‘ಸ್ವಲ್ಪ ಹೊತ್ತು ಏನೂ ಮಾಡದಿದ್ದರಾಯಿತು. ತಾನಾಗೇ ಸರಿಹೋಗುವುದು’ ಎಂದನಾತ. ‘ಅದೇ ರೀತಿ ವಾದ-ವಿವಾದಗಳ ವಿಷಯದಲ್ಲಿ ಕೂಡ ಪ್ರತಿವಾದ ಬೆಳೆಸದೆ ಸುಮ್ಮನಿದ್ದರೆ ಪರಿಸ್ಥಿತಿ ತಾನಾಗಿಯೇ ಸರಿಹೋಗುವುದು. ಅವರ ಟೀಕೆಗಳಿಗೆ ಉತ್ತರಿಸಿ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು, ಇನ್ನಷ್ಟು ಕ್ರಿಯಾತ್ಮಕವಾಗಿ ಕೆಲಸದಲ್ಲಿ ತೊಡಗಿಸಿಕೊ, ಮುಂದೆ ಸರಿಹೋಗುವುದು’ ಎಂದು ಹೇಳಿ ಕಳುಹಿಸಿದರು. ಖಾಸಗಿ ಸಂಸ್ಥೆಯೊಂದು ಉದ್ಯೋಗಕ್ಕಾಗಿ ಮೌಖಿಕ ಸಂದರ್ಶನ ನಡೆಸಿತು. ನಾಲ್ಕೇ ಜನ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಪ್ರಶ್ನೆಗಳು ಕಠಿಣವಾಗಿದ್ದರಿಂದ ಆ ನಾಲ್ವರ ಪೈಕಿ ಮೂವರು ಕೆಲ ಪ್ರಶ್ನೆಗಳಿಗೆ ಉತ್ತರಿಸದೆ ತಲೆತಗ್ಗಿಸಿ ಕುಳಿತರು. ಓರ್ವ ಮಾತ್ರ ತನಗೆ ಎಲ್ಲವೂ ಗೊತ್ತೆಂಬಂತೆ ಉತ್ತರಿಸಿದ. ಆಶ್ಚರ್ಯವೆಂದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗದ ಮೂವರು ಉದ್ಯೋಗಕ್ಕೆ ಆಯ್ಕೆಯಾಗಿದ್ದರು. ಪ್ರಶ್ನೆಗಳಿಗೆ ಉತ್ತರಿಸಿದಾತ ತನಗೆ ಗೊತ್ತಿಲ್ಲದ ವಿಷಯವನ್ನೂ ಮಾತನಾಡಿ ತನ್ನ ಮೂರ್ಖತನ ಪ್ರದರ್ಶಿಸಿಬಿಟ್ಟಿದ್ದ. ಹಾಗಾಗಿ ‘ಸರ್ವವಿದಾಂ ಸಮಾಜೇ ವಿಭೂಷಣಂ ಮೌನಮಪಂಡಿತಾನಾಮ್ ಎಂಬುದಾಗಿ ತಿಳಿದವರ ನಡುವೆ ಇರುವಾಗ ಅಲ್ಪಮತಿಯಾದವನು ಸುಮ್ಮನಿರುವುದೇ ವಾಸಿ ಎಂದಿದ್ದಾರೆ ಹಿರಿಯರು.

ಎಲ್ಲವನ್ನೂ ಮಾತಿನಿಂದಲೇ ಎದುರಿಸಲಾಗದು. ಆದರೆ ಮೌನದಿಂದ ಗೆಲ್ಲಬಹುದು. ಮಾತು ಆಯುಧವಾದರೆ ಮೌನವು ಔಷಧವಿದ್ದಂತೆ. ಕೈಕೇಯಿಯ ಮಾತು ನಿಷ್ಠುರವಾಗಿದ್ದರೂ ರಾಮನು ಮರುಮಾತನಾಡದೇ ಕಾಡಿಗೆ ನಡೆದ. ಮಿತಭಾಷಿಯಾಗಿದ್ದ ರಾಮ ಎಲ್ಲರನ್ನೂ ಗೆದ್ದು ಪುರುಷೋತ್ತಮನೆನಿಸಿದ. ವ್ಯಾಮೋಹಕ್ಕೆ ಒಳಗಾಗಿ ಇಂದ್ರನು ತಪ್ಪೆಸಗಿದಾಗ ಅದರಲ್ಲಿ ತನ್ನದೂ ಪಾಲಿದೆಯೆಂದರಿತ ಅಹಲ್ಯೆ ಪತಿ ಗೌತಮ ಋಷಿ ನೀಡಿದ ಶಾಪವನ್ನು ಮೌನವಾಗಿ ಎದುರಿಸಿದಳು. ಸಾವಿರಾರು ವರ್ಷಗಳ ಮೌನ ಅವಳನ್ನು ಪಾವನಳನ್ನಾಗಿ ಮಾಡಿತು. ಮೌನವೆಂದರೆ ಸೋಲಲ್ಲ, ಹತಾಶೆಯಲ್ಲ, ಸಹನೆಯಿಂದ ಸಮಸ್ಯೆಯನ್ನು ಎದುರಿಸುವ ಪರಿ. ಮಾತಿಗೆ ಮನ್ನಣೆ ಕೊಡದ, ಮೊಂಡುವಾದ ಮಾಡುವ ಮೂರ್ಖರ ಮುಂದಂತೂ ಮೌನಕ್ಕೆ ಶರಣಾಗುವುದೇ ಬುದ್ಧಿವಂತನ ಲಕ್ಷಣ. ಅದನ್ನೇ ಕವಿ ಪರಮೇಶ್ವರ ಭಟ್ಟರು ‘ಕಪ್ಪೆಗಳೊಟಗುಟ್ಟುವೆಡೆಯೊಳು ಮೌನವೇ ಲೇಸೆಂದು ಹೇಳಿತು ಪಿಕವು’ ಎಂಬುದಾಗಿ ‘ಮಳೆಗಾಲದಲ್ಲಿ ಕಪ್ಪೆಗಳು ವಿಪರೀತ ಸದ್ದು ಮಾಡುವದರಿಂದ ಕೋಗಿಲೆ, ತಾನೇ ಹಾಡುವುದನ್ನು ನಿಲ್ಲಿಸುವುದು’ ಎಂದು ಮೂರ್ಖರ ಜೊತೆಯಿದ್ದಾಗ ಮೌನವೇ ಒಳ್ಳೆಯದೆಂದಿದ್ದಾರೆ.

(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net