ಇಂದು ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮದಿನ: ಕಾಮೋಡ ಸರಿಸಲು ಮತ್ತೆ ಅವತರಿಸಿ ಬನ್ನಿ

Siddaganga shree
Published on

(‘ನಡೆದಾಡುವ ದೇವರು’ ಎಂದೇ ಪ್ರಸಿದ್ಧರಾಗಿದ್ದ ಸಿದ್ಧಗಂಗಾ ಕ್ಷೇತ್ರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ, ಜಾತಿ-ಧರ್ಮ-ವರ್ಗ ತಾರತಮ್ಯ ಎಣಿಸದೆ ಎಲ್ಲರನ್ನೂ ‘ಇವ ನಮ್ಮವ ಇವ ನಮ್ಮವ’ ಎಂದೇ ಪರಿಗಣಿಸಿ ಮುನ್ನಡೆಸಿದ ಅವತಾರ ಪುರುಷರು. ತ್ರಿವಿಧ ದಾಸೋಹದ ಮಹಿಮೆಯನ್ನು ಇಡೀ ಜಗತ್ತಿಗೆ ಅರುಹಿದವರು. ಶ್ರೀಗಳ ಸರಳ ನಡೆ-ನುಡಿ, ಭಕ್ತರಿಗೆ ನೀಡಿದ ಮಾರ್ಗದರ್ಶನ ಸದಾ ಸ್ಮರಣೀಯ. ಇಂದು ಅವರ 114ನೇ ಜನ್ಮದಿನ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬರೆದಿರುವ ನುಡಿನಮನ ಇಲ್ಲಿದೆ.)

ಬೆಂಗಳೂರು: ಸಿದ್ಧಗಂಗೆಯ ಅವತಾರ ಪುರುಷರಾಗಿ, ನಡೆದಾಡುವ ದೇವರೆನಿಸಿಕೊಂಡ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಯುಗದ ಸಂತನಾಗಿ ಹೊರಹೊಮ್ಮಲು ಕಾರಣವಾಗಿದ್ದು ಅವರ ಅತ್ಯಂತ ಸರಳ ನಡೆ, ನುಡಿ; ವರ್ಗ ತಾರತಮ್ಯ ಎಣಿಸದೆ ಹಸಿದ ಹೊಟ್ಟೆ ಮತ್ತು ಮನಸ್ಸುಗಳಿಗೆ ಮಾತೃಪ್ರೇಮ ಉಣಬಡಿಸಿ ಮಹಾಜಗದ್ಗುರುಗಳಾಗಿ ತ್ರಿವಿಧ ದಾಸೋಹದ ಮಹಿಮೆಯನ್ನು ಜಗತ್ತಿಗೇ ತಿಳಿಸಿಕೊಟ್ಟ ರೀತಿಯಿಂದಾಗಿ.

ಒಬ್ಬ ಉತ್ತಮ ಮಾನವನ ನಿರ್ವಣವೇ ದೈವದ ನಿಜ ಸಂಕಲ್ಪವೆಂದು ಸಾರಲು ಅರಿವಿನ ಗುರುವಾಗಿದ್ದವರು ಸಿದ್ಧಗಂಗಾ ಶ್ರೀಗಳು. ಮನುಷ್ಯನ ಶಾರೀರಿಕ, ಮಾನಸಿಕ ಆರೋಗ್ಯ ಹಾಗೂ ನಿರಂತರ ಜೀವನೋತ್ಸಾಹ ಅವನ ವಯಸ್ಸಿನ ಮೇಲೆ ನಿಂತಿರುವುದಿಲ್ಲ, ಅದು ಅವಲಂಬಿತವಾಗಿರುವುದು ಅವನ ನಿಷ್ಕಲ್ಮಶ ನಡೆ, ನುಡಿ, ಸರಳತೆ ಹಾಗೂ ಮಾನವೀಯ ಮಿಡಿತಗಳ ಮೇಲೆ ಎಂಬುದನ್ನು ಮಾನವ ಜಗತ್ತಿಗೆ ತೋರಿಸಿಕೊಟ್ಟವರು ಅವರು. ಇದಕ್ಕೆ ಸಂಬಂಧಿಸಿದಂತೆ ಘಟನೆಯೊಂದು ಸದಾ ನನ್ನ ಮನದಲ್ಲಿ ಅಚ್ಚಳಿಯದೇ ನಿಂತಿದೆ.

ಇಳಿವಯಸ್ಸಿನಲ್ಲೂ ನವಯುವಕ: 2006ರಲ್ಲಿ ಶಿವಮೊಗ್ಗೆಯ ಕಾಲೇಜು ಕಟ್ಟಡವೊಂದರ ಭೂಮಿ ಪೂಜೆಗೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ನಿವಾಸಕ್ಕೆ ಅವರು ಪಾದ ಬೆಳೆಸಿದ್ದು ನಮ್ಮ ಕುಟುಂಬದ ಸೌಭಾಗ್ಯವೇ ಸರಿ. ಈ ಸಂದರ್ಭದಲ್ಲಿ ಮನೆಯ ಮಹಡಿಯ ಮೆಟ್ಟಿಲು ಹತ್ತಲು ಯುವಕರಾಗಿದ್ದ ನಾವು ಸಹ ‘ಮೆಟ್ಟಿಲ ಕೈಹಿಡಿ’ ಆಶ್ರಯಿಸುತ್ತಿದ್ದುದು ಸಹಜವೇ ಆಗಿಹೋಗಿತ್ತು. ಶತಕ ಪೂರೈಸುವ ಅಂಚಿನಲ್ಲಿದ್ದ ಶ್ರೀಗಳು ಕೈಹಿಡಿಯನ್ನು ಆಶ್ರಯಿಸದೆ ನವಯುವಕರಂತೆ ಲವಲವಿಕೆಯಿಂದ ಮೆಟ್ಟಿಲು ಹತ್ತಿದ ಆ ಕ್ಷಣಗಳು ನಮ್ಮನ್ನು ಚಿಕಿತಗೊಳಿಸಿದ್ದಲ್ಲದೇ ಮನದೊಳಗೇ ನಾವು ನಾಚುವಂತಾಯಿತು.

ಶ್ರೀಗಳು ತಮ್ಮನ್ನು ತಾವು ಮಹಾ ಜ್ಞಾನಿಯಂತೆ, ಕ್ರಾಂತಿ ಪುರುಷರಂತೆ, ಮೇರು ತಪಸ್ವಿಯಂತೆ ಎಂದೂ ತೋರಿಸಿಕೊಳ್ಳಲಿಲ್ಲ. ಆದರೆ ಮನುಷ್ಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ನಡೆದರೆ ದೈವದ ಅಂಶ ಅವನಲ್ಲಿ ಸಹಜವಾಗಿಯೇ ಪಡಿಮೂಡಬಲ್ಲದು ಎಂಬುದನ್ನು ಸಮಾಜಕ್ಕೆ ಸಾರಿ ಹೇಳಿದರು. ತ್ರಿವಿಧ ದಾಸೋಹದಲ್ಲಿ ನಿಜ ದೇವರಿದ್ದಾನೆ ಎಂಬುದನ್ನು ಜಗತ್ತೇ ನಿಬ್ಬೆರಗಾಗುವಂತೆ ತೋರಿಸಿಕೊಟ್ಟರು. ಆ ಕಾರಣಕ್ಕಾಗಿಯೇ ಅವರು ನಡೆದಾಡುವ ದೇವರಾದರು. ಶತ ಶತಮಾನಗಳೇ ಕಳೆದರೂ ಅಚ್ಚಳಿಯದೇ ನಿಲ್ಲಬಲ್ಲ ಯುಗದ ದಿವ್ಯ ದೀಪವಾದರು.

ಅವರು ಬದುಕಿದ ರೀತಿಯೇ ನಮಗೆ ಜ್ಞಾನದ ಸಾರ, ಕ್ರಾಂತಿಯ ಮಹಿಮೆ, ತಪಸ್ಸಿನ ಶಕ್ತಿಯನ್ನು ಪರಿಚಯಿಸಿಕೊಟ್ಟಿದೆ. ಶ್ರೀಗಳ ಇಡೀ ಜೀವನ ಈ ಯುಗದ ಮಹಾನ್ ಸಂದೇಶ ಜ್ಯೋತಿಯಾಗಿ ಶಾಶ್ವತವಾಗಿ ಬೆಳಗುತ್ತಿದೆ. ಮುಂದೆಯೂ ಬೆಳಗಲಿದೆ.

ಯಾವುದೇ ದಾರ್ಶನಿಕರು, ಸಂತರು, ಸಾಧಕರು ಜಾತೀಯ ಕಾರಣಕ್ಕಾಗಿ ಜನ್ಮವೆತ್ತಿ ಬರುವುದಿಲ್ಲ. ಆದರೆ ಅವರ ಜನ್ಮ ಮೂಲದ ಕಾರಣಕ್ಕಾಗಿ ಅವರ ಕಾಲಾನಂತರ ಅವರನ್ನು ಜಾತೀಯ ನೆಲೆಯಲ್ಲಿ ಗುರುತಿಸುವ ಪರಿಪಾಠ ಬೆಳೆದುಬರುತ್ತಿರುವುದು ನಿಜಕ್ಕೂ ವಿಪರ್ಯಾಸ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಇಡೀ ಮನುಕುಲಕ್ಕೆ ಬೆಳಕಾಗುವುದಕ್ಕಾಗಿ ಅಸ್ತಿತ್ವ ಕಂಡುಕೊಂಡಿರುವ ಮಠ ಮಾನ್ಯಗಳು ದಿನೇದಿನೆ ನಿರ್ದಿಷ್ಟ ಸಮುದಾಯಗಳ ಪ್ರತಿನಿಧಿಗಳಂತೆ ರೂಪಾಂತರಗೊಳ್ಳುತ್ತಿವೆ. ಆದರೆ ಇಂಥ ಹಣೆಪಟ್ಟಿಯಿಂದ ಬಲು ದೊಡ್ಡ ಅಂತರ ಕಾಯ್ದುಕೊಂಡ ಸಿದ್ಧಗಂಗಾ ಕ್ಷೇತ್ರ ಗಂಗೆಯಷ್ಟೇ ಪಾವಿತ್ರ್ಯವನ್ನು ಕಾಯ್ದುಕೊಂಡು ವಿಶ್ವಗುರು ಬಸವಣ್ಣನವರ ಕಾಯಕತತ್ವ ಪ್ರತಿಪಾದಿಸುತ್ತಾ, ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎನ್ನುವ ಸಂದೇಶವನ್ನು ಅಕ್ಷರಶಃ ಕಾರ್ಯರೂಪಕ್ಕಿಳಿಸಿ ಮಠದ ಆಶ್ರಯ ಬಯಸಿ ಬರುವವರನ್ನೆಲ್ಲಾ ಬಿಗಿದಪ್ಪಿಕೊಂಡು ತಾಯಿಮಡಿಲಿನ ಸ್ಪರ್ಶಾನುಭವ ನೀಡುತ್ತಿದೆ. ಇದರ ಪ್ರತಿಫಲದ ಲಕ್ಷಾಂತರ ಪ್ರತಿಭೆಗಳು ಶ್ರೀಗಳ ನಿರ್ವಣದ ಸಿದ್ಧಗಂಗೆಯ ಸಮೃದ್ಧ ತೋಟದ ಫಲಪುಷ್ಪಗಳಂತೆ ಜಗತ್ತಿನಾದ್ಯಂತ ಹರಡಿಕೊಂಡು ಆ ಕ್ಷೇತ್ರದ ಮಹಿಮೆಯ ಸಂಕೇತಗಳಂತೆ ಕಂಗೊಳಿಸುತ್ತಿದ್ದಾರೆ.

ಸರ್ವಜನಾಂಗದ ಶಾಂತಿಯ ತೋಟ: ರಾಷ್ಟ›ಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ಪರಿಪೂರ್ಣ ನಿರ್ವಣದ ಕಲ್ಪನೆಯ ನೆಲ ಯಾವುದಾದರೂ ಇದ್ದಲ್ಲಿ ಅದು ಸಿದ್ಧಗಂಗಾ ಕ್ಷೇತ್ರ ಎಂದು ಪ್ರತಿಯೊಬ್ಬ ಭಕ್ತನೂ ಎದೆತಟ್ಟಿ ಹೇಳಿಕೊಳ್ಳಬಹುದಾಗಿದೆ. ಶ್ರೀಗಳು ಈ ಭೂಮಿಗೆ ಅವತರಿಸಿ ಬಂದದ್ದು ಕೇವಲ ನಿರ್ದಿಷ್ಟ ಉದ್ದೇಶಕ್ಕಾಗಿ ಅಲ್ಲ, ಊರೂರು ಅಲೆದು ಸಿದ್ಧಗಂಗೆಯ ಮಠವನ್ನು ಅಭಿವೃದ್ಧಿಪಡಿಸಿದ್ದು ಹೆಗ್ಗಳಿಕೆಗಾಗಿಯೂ ಅಲ್ಲ. ಒಬ್ಬ ಸಂತ ಇಡೀ ಮನುಕುಲದ ಹಾಗೂ ಇತರ ಜೀವಸಂಕುಲದ ಉದ್ಧಾರಕ್ಕಾಗಿ ಬದುಕು ಸಮರ್ಪಿಸಿಕೊಳ್ಳಬೇಕು, ಕೇವಲ ಸಂದೇಶ ನೀಡುವುದಷ್ಟೇ ಸಂತನ ಕರ್ತವ್ಯವಾಗಬಾರದು. ಆಧ್ಯಾತ್ಮವನ್ನು ಬಿತ್ತುವುದಷ್ಟೇ ಮಠ, ಮಂದಿರಗಳ ಕಾರ್ಯಕ್ರಮವಾಗಬಾರದು, ಸಂತನು ಕಾಯಕಯೋಗಿಯಾಗಬೇಕು. ಮಠ, ಮಂದಿರಗಳು ಮನುಕುಲದ ಉದ್ಧಾರಕ್ಕಾಗಿರಬೇಕು, ಅವಶ್ಯ ಕೊರತೆಗಳ ನೀಗಿಸುವ ಕಾಮಧೇನುಗಳಾಗಬೇಕು ಎಂಬ ಸಂದೇಶ ನೀಡುವುದಕ್ಕಾಗಿ ಶ್ರೀಗಳು ಜನ್ಮವೆತ್ತಿ ಬಂದದ್ದು, ಸಿದ್ಧಗಂಗೆಯಲ್ಲಿ ನೆಲೆಸಿದ್ದು, ಆ ಮೂಲಕ ತ್ರಿವಿಧ ದಾಸೋಹದ ಮಹಿಮೆಗೆ ಕಾರಣರಾದದ್ದು.

ಸತ್ಪುರುಷರು, ತ್ಯಾಗಿಗಳು, ಸಂತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ದಾರ್ಶನಿಕರ ಮಾರ್ಗದರ್ಶನದ ಕೊರತೆಯಿಂದ ಸಮಾಜ ನಲುಗುತ್ತಿದೆ. ಸಂಸ್ಕೃತಿ- ಸಂಪ್ರದಾಯ, ಆಚಾರ- ವಿಚಾರಗಳನ್ನು ಧಿಕ್ಕರಿಸುವ ಶಕ್ತಿಗಳು ಮೇಲುಗೈ ಸಾಧಿಸಲು ಯತ್ನಿಸುತ್ತಿವೆ. ರಂಜನೆ ಹಾಗೂ ತಂತ್ರಜ್ಞಾನದ ಹೆಸರಲ್ಲಿ ಯುವ ಜನರನ್ನು ದಿಕ್ಕುತಪ್ಪಿಸುವ ದುರ್ವರ್ಗಗಳ ಚಟುವಟಿಕೆಗಳು ಅಟ್ಟಹಾಸ ಮೆರೆಯಲು ಹಾತೊರೆಯುತ್ತಿವೆ. ಜೀವಸಂಕುಲ ಹಾಗೂ ಪ್ರಕೃತಿಯ ರಕ್ಷಕನಾಗಬೇಕಾದ ಮನುಷ್ಯ, ಅದರ ಭಕ್ಷಕನಾಗುತ್ತಿದ್ದಾನೆ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ. ಇದರ ಪರಿಣಾಮವೋ ಎಂಬಂತೆ ಅತಿವೃಷ್ಟಿ ಅನಾವೃಷ್ಟಿಗಳು ತಾಂಡವವಾಡುತ್ತಿವೆ. ಒಂದು ಕಡೆ ಭೂತಾಪಮಾನ ನರಕದ ದರ್ಶನ ಮಾಡಿಸುತ್ತಿದೆ. ಮತ್ತೊಂದು ಕಡೆ ನೆರೆ ಹಾವಳಿ ಮನುಷ್ಯ ಅಸ್ತಿತ್ವದ ಗಂಡಾಂತರವನ್ನು ಮುನ್ನೆಚ್ಚರಿಸುತ್ತಿದೆ.

ಮತ್ತೊಂದು ಮಹಾಪರ್ವ: ಕರೊನಾ ಹಾವಳಿಯು ಮನುಕುಲದ ಜಂಘಾಬಲವನ್ನೇ ಉಡುಗಿಸಿ ವರ್ಷವಿಡೀ ಕಾರ್ಗತ್ತಲಲ್ಲಿ ಜಗತ್ತನ್ನು ಮುಳುಗಿಸಿತು. ಈಗಲೂ ಆ ಭಯದ ಕರಿನೆರಳಿನಿಂದ ನಾವು ಹೊರಬರಲಾಗುತ್ತಿಲ್ಲ. ಇಂಥ ಅನಾಹುತಕಾರಿ ಪರಿಸ್ಥಿತಿಗಳ ಉದ್ಭವಕ್ಕೆ ಮನುಕುಲದ ಸ್ವೇಚ್ಛೆಯ ನಡವಳಿಕೆಗಳೇ ಕಾರಣವೆಂದು ವ್ಯಾಖ್ಯಾನಿಸಲಾಗುತ್ತಿದೆ.

ನಾವು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗಳಿಂದ ಹೊರಬರಲು ಮನುಷ್ಯ, ಮನುಷ್ಯನಾಗಿ ಬಾಳಬೇಕಿದೆ. ಮಾನವ ಕುಲದ ಉದ್ದಾರಕ್ಕಾಗಿ ಆಧ್ಯಾತ್ಮದ ಜ್ಯೋತಿಯ ಪ್ರಖರತೆಯು ನಮ್ಮ ಭವಿಷ್ಯದ ದಾರಿಯನ್ನು ಬೆಳಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಉದ್ಧರಿಸಲು ಪಾವನಕ್ಷೇತ್ರ ಸಿದ್ಧಗಂಗೆಯಲ್ಲೇ ಮತ್ತೊಮ್ಮೆ ಡಾ. ಶಿವಕುಮಾರ ಮಹಾಸ್ವಾಮೀಜಿಗಳು ಅವತರಿಸಿ ಬರಲಿ, ನಮ್ಮನ್ನೆಲ್ಲ ಕೈ ಹಿಡಿದು ಮುನ್ನಡೆಸಲಿ ಎಂದು ಭಕ್ತಗಣವೆಲ್ಲಾ ಭಗವಂತನಲ್ಲಿ ಪ್ರಾರ್ಥಿಸುತ್ತಿದೆ. ಕವಿದಿರುವ ಕಾಮೋಡದ ಕತ್ತಲನ್ನು ದೂರವಾಗಿಸಲು ಮತ್ತೊಮ್ಮೆ ಜನ್ಮವೆತ್ತಿ ಬನ್ನಿ, ನಿಮ್ಮ ಮರು ಅವತಾರ ಮತ್ತೊಂದು ಮಹಾಪರ್ವಕ್ಕೆ ಕಾರಣವಾಗಲಿ ಎಂದು ನಾವೆಲ್ಲ ಶ್ರೀಗಳ ಆತ್ಮವನ್ನು ಪ್ರಾರ್ಥಿಸೋಣ.

ಮುಖ್ಯಮಂತ್ರಿಗೆ ಮಾತೃಸಾಂತ್ವನದ ಮಾತುಗಳು...

ಸಿದ್ಧಗಂಗೆಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೂ ನಮ್ಮ ತಂದೆಯವರಾದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಅವಿನಾಭಾವ ಸಂಬಂಧವಿತ್ತು. ಆ ಸಂಬಂಧದ ಬೇರುಗಳು ನಮ್ಮ ಇಡೀ ಕುಟುಂಬದ ವೃಕ್ಷವನ್ನು ಆವರಿಸಿ ಪುನೀತಗೊಳಿಸಿವೆ. ‘ಕಷ್ಟ ಬಂದಾಗ ವೆಂಕಟರಮಣ’ ಎನ್ನುವುದು ಚಾಲ್ತಿಯಲ್ಲಿರುವ ಮಾತು. ಆದರೆ ಸಂಕಟ, ಸವಾಲುಗಳು ಎದುರಾದಾಗಲೆಲ್ಲಾ ಯಡಿಯೂರಪ್ಪನವರು ನೆಮ್ಮದಿ ಹಾಗೂ ಪರಿಹಾರಕ್ಕಾಗಿ ಧಾವಿಸುತ್ತಿದ್ದುದು ಸಿದ್ಧಗಂಗೆಯ ಕಡೆಗೆ. ‘ಶ್ರೀಗಳ ಪಾದಾರವಿಂದಗಳಲ್ಲಿ ಶಿರವಿಟ್ಟು ನಮಸ್ಕರಿಸಿದಾಗಲೇ ನನಗೆ ನೆಮ್ಮದಿ ಪ್ರಾಪ್ತಿಯಾಗುತ್ತಿದ್ದುದು, ಶ್ರೀಗಳ ಸಾನಿಧ್ಯದಲ್ಲಿ ದೊರೆಯುತ್ತಿದ್ದ ಮಾತೃ ಸಾಂತ್ವನದ ಮಾತುಗಳು ಸಮಸ್ಯೆಯ ಬೆಟ್ಟವನ್ನೇ ಮಂಜಿನಂತೆ ಕರಗಿಸಿಬಿಡುತ್ತಿತ್ತು. ಸವಾಲು ಎದುರಿಸುವ ಚೈತನ್ಯ ತುಂಬುತ್ತಿತ್ತು’ ಎಂದು ನಮ್ಮ ಬಳಿ ತಂದೆಯವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗುವ ಸಂದರ್ಭ ಬಂದಾಗ ಶ್ರೀಗಳ ಭೌತಿಕ ಶೂನ್ಯ ಅವರನ್ನು ಬಹುವಾಗಿ ಬಾಧಿಸಿತು. ಶ್ರೀಗಳ ಆಶೀರ್ವಾದದ ಕೊರತೆಯ ಕಾರಣಕ್ಕಾಗಿ ಹಲವಾರು ಬಾರಿ ಪೇಚಾಡಿಕೊಂಡಿದ್ದೂ ಇದೆ. ಆದರೆ ಶ್ರೀಗಳ ಆತ್ಮಜ್ಯೋತಿ ಸದಾ ತಮ್ಮ ರಕ್ಷಣೆಗಿದೆ ಎಂಬ ಭಾವದಲ್ಲೇ ಅವರು ನಿತ್ಯ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ.

ಸಮರ್ಥ ಉತ್ತರಾಧಿಕಾರಿ ಶ್ರೀ ಸಿದ್ಧಲಿಂಗ ಸ್ವಾಮೀಜಿ

ಪೂಜ್ಯ ಡಾ. ಶಿವಕುಮಾರ ಶ್ರೀಗಳೇ, ನೀವು ತೋರಿದ ದಾರಿ, ನಡೆ, ನುಡಿ ನಮಗೆಂದೆಂದೂ ಪರಮಾದರ್ಶದ ಬೆಳಕಾಗಿದೆ. ನಿಮ್ಮ ಆತ್ಮಜ್ಯೋತಿಯ ಪ್ರಜ್ವಲತೆ ನೀವು ಸದಾ ನಮ್ಮೊಂದಿಗಿರುವ ಆತ್ಮವಿಶ್ವಾಸ ಮೂಡಿಸಿದೆ. ಭೌತಿಕವಾಗಿ ನೀವಿಲ್ಲದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ನೀವು ತೋರಿದ ಸನ್ಮಾರ್ಗದಲ್ಲೇ ಮುನ್ನಡೆದಿರುವ ನಿಮ್ಮ ಅಂತರಂಗದ ಉತ್ತರಾಧಿಕಾರಿ ಇಂದಿನ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ, ಮಠದ ತ್ರಿವಿಧ ದಾಸೋಹದ ಮಹಾತೇರನ್ನು ಸಮರ್ಥವಾಗಿ ಎಳೆಯುತ್ತಿದ್ದಾರೆ. ನಿಮ್ಮ ಪ್ರಸಾದವೆಂದು ಸ್ವೀಕರಿಸುವ ಮಹಾನ್ ಸಂದೇಶಗಳನ್ನು ಭಕ್ತ ಸಮೂಹಕ್ಕೆ ಯಶಸ್ವಿಯಾಗಿ ಧಾರೆ ಎರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net